ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಅದ್ಧೂರಿ ಚಾಲನೆ; 3 ದಿನದಲ್ಲಿ ಆರೇಳು ಲಕ್ಷ ಜನ ಭಾಗವಹಿಸುವ ನಿರೀಕ್ಷೆ, ಕೈಚೀಲ ಮರೆಯಬೇಡಿ
Dec 11, 2023 04:40 PM IST
ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಅದ್ಧೂರಿ ಚಾಲನೆ ದೊರೆತಿದ್ದು, ಮೂರು ದಿನಗಳ ಕಾಲ ನಡೆಯಲಿದೆ.
ಇಂದಿನಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಮೂರು ದಿನಗಳಲ್ಲಿ ಆರೇಳು ಲಕ್ಷ ಜನ ಭಾಗವಹಿಸುವ ನಿರೀಕ್ಷೆ. ಕೈಚೀಲ ಕೊಂಡೊಯ್ಯುವುದನ್ನು ಮರೆಯಬೇಡಿ.
ಬೆಂಗಳೂರು: ಶತಮಾನಗಳ ಇತಿಹಾಸ ಇರುವ ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು (ಡಿಸೆಂಬರ್ 11, ಸೋಮವಾರ) ವಿದ್ಯುಕ್ತ ಚಾಲನೆ ದೊರಕಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಕಡಲೆ ಕಾಯಿ ಪರಿಷೆಗೆ ಸುಮಾರು ಆರೇಳು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ.
ಬುಲ್ ಟೆಂಪಲ್ ರಸ್ತೆಯ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಬಸವನಿಗೆ ಕಡಲೆಕಾಯಿ ಅಭಿಷೇಕ ಮಾಡುವ ಮೂಲಕ ಚಾಲನೆ ನೀಡಲಾಯಿತು. ಸಾವಿರಾರು ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಂಡರು.
ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಷೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಪ್ಲಾಸ್ಟಿಕ್ ತ್ಯಜಿಸಿ, ಕೈಚೀಲ ತನ್ನಿ ಎಂದು ಮನವಿ ಮಾಡಿಕೊಂಡರು. ಬಸವನಗುಡಿಯಲ್ಲಿ ಎತ್ತ ನೋಡಿದರೂ ಕಡಲೆಕಾಯಿ ರಾಶಿ ರಾಶಿ ಮತ್ತು ಜನವೋ ಜನ. ಕಾರ್ತಿಕ ಮಾಸದ ಕೊನೆ ಸೋಮವಾರ ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಬಸವನಿಗೆ ಕಡಲೆಕಾಯಿ ಹಾಗೂ ಹೂಗಳಿಂದ ಅಭಿಷೇಕ ಮಾಡಲಾಗುತ್ತದೆ. ರಜೆ ಇದ್ದ ಕಾರಣ ಕಡಲೆಕಾಯಿ ಪರಿಷೆಗೆ ಶನಿವಾರದಿಂದಲೇ ಕಳೆಗಟ್ಟಿತ್ತು.
ದೊಡ್ಡಬಳ್ಳಾಪುರ, ಕನಕಪುರ, ರಾಮನಗರ, ಮಾಗಡಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಡಲೆಕಾಯಿ ವ್ಯಾಪಾರಿಗಳು ಆಗಮಿಸುತ್ತಾರೆ. ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಗಳಿಂದಲೂ ವ್ಯಾಪಾರಿಗಳು ಕಡಲೆಕಾಯಿಯನ್ನು ಮಾರಾಟ ಮಾಡಲು ಸಜ್ಜಾಗಿದ್ದಾರೆ. ಮಳೆ ಕೊರತೆ ಕಾರಣ ಇಳುವರಿ ಕಡಿಮೆಯಾಗಿದ್ದು ಕಡಲೆಕಾಯಿ ಬೆಲೆ ಕೆಜಿಗೆ 120 ರೂ. ಗಡಿ ದಾಟಿದೆ. ಆದರೂ ಮಾರಾಟದ ಭರಾಟೆ ಜೋರಾಗಿದೆ.
ಕಡಲೆಕಾಯಿ ಪರಿಷೆಯಲ್ಲಿ ಬೇರೆ ಏನೆಲ್ಲಾ ಇದೆ?
ಇಲ್ಲಿ ಕೊಂಡುಕೊಳ್ಳುವ ಕಡಲೆಕಾಯಿಯನ್ನು ಭಕ್ತರು ಪ್ರಸಾದ ಎಂದು ಭಾವಿಸುತ್ತಾರೆ. ಹಾಗಾಗಿ ಎಲ್ಲರೂ ಕೊಂಡೇ ಮರಳುತ್ತಾರೆ. ಪರಿಷೆ ಅಂಗವಾಗಿ ಇಂದು (ಡಿಸೆಂಬರ್ 11, ಸೋಮವಾರ) ಸಂಜೆ 6ಕ್ಕೆ ಕೆಂಪಾಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಕಹಳೆ ಬಂಡೆ ಉದ್ಯಾನದಲ್ಲಿ ಸಂಜೆ ಮೇಖಲಾ ಅಗ್ನಿಹೋತ್ರಿ ತಂಡದಿಂದ ನಾದ–ನಿನಾದ ಕಾರ್ಯಕ್ರಮ ನಡೆದರೆ ನರಸಿಂಹಸ್ವಾಮಿ ಉದ್ಯಾನದಲ್ಲಿ ಸಿರಿಕಲಾ ಮೇಳ ತಂಡದಿಂದ ಯಕ್ಷಗಾನ ಜರುಗಲಿದೆ.
ಡಿ.12ರ ಮಂಗಳವಾರ ಸಂಜೆ ಕಹಳೆ ಬಂಡೆಯಲ್ಲಿ ನಾಟ್ಯ ಭೈರವಿ ಶಾಲೆ ತಂಡದಿಂದ ನೃತ್ಯ, ನರಸಿಂಹ ಸ್ವಾಮಿ ಉದ್ಯಾನದಲ್ಲಿ ಸೀತಾರಾಮ ಮುನಿಕೋಟಿ ಅವರಿಂದ ಹರಿಕಥೆ ನಡೆಯಲಿದೆ. ಇಲ್ಲಿ ವಿವಿಧ ರಾಜ್ಯ ಜಿಲ್ಲೆಗಳಿಂದ ಕಡಲೆಕಾಯಿ ಆಗಮಿಸಲಿದ್ದು, ಒಂದೊಂದು ಭಾಗದ ಕಡಲೆಕಾಯಿ ಒಂದೊಂದು ರುಚಿ ಹೊಂದಿರುತ್ತದೆ.
ಜಾತ್ರೆಯಲ್ಲಿ ಸಿಗುವ ಎಲ್ಲ ಆಟದ, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು ಇಲ್ಲಿ ಸಿಗುತ್ತವೆ. ದೇವಸ್ಥಾನದ ಬೀದಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಶಾಪಿಂಗ್ ಆಯ್ಕೆಗಳು, ಆಹಾರ ಮಳಿಗೆಗಳು ಯಥೇಚ್ಛವಾಗಿವೆ. ದೇವಾಲಯದ ಪಕ್ಕದ ಮೈದಾನದಲ್ಲಿ ಮಕ್ಕಳು ಆಟ ಆಡುವ ಅವಕಾಶ ಕಲ್ಪಿಸಲಾಗಿದೆ.
ಕಡಲೆಕಾಯಿ ಪರಿಷೆಯ ಕಿರು ಇತಿಹಾಸ:
ಬಸವನಗುಡಿಯ ಅಕ್ಕಪಕ್ಕದ ಹಳ್ಳಿಗಳಲ್ಲಿ ಪ್ರತಿ ವರ್ಷ ನೆಲಗಡಲೆ (ಶೇಂಗಾ) ಬೆಳೆಯುತ್ತಿದ್ದರು. ಆದರೆ ಫಸಲಿಗೆ ಬಂದ ಎಲ್ಲ ಬೆಳೆಯನ್ನು ಎತ್ತೊಂದು ಆಗಮಿಸಿ ನಾಶಪಡಿಸುತ್ತಿತ್ತು. ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಬಸವನನ್ನು ಪ್ರಾರ್ಥಿಸಲು ಆರಂಭಿಸಿದರು. ಇದೇ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿದ್ದು, ಪೂಜಿಸಲು ಆರಂಭಿಸಿದರು. ಕೆಂಪೇಗೌಡರು ನಂದಿಯ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಅಂದಿನಿಂದ ಈ ಪ್ರದೇಶವನ್ನು ಬಸವನ ಗುಡಿ ಎಂದು ಕರೆಯಲಾಗುತ್ತಿದೆ.
ಇನ್ನೇಕೆ ತಡ, ನಿಗಧಿತ ಸ್ಥಳದಲ್ಲಿ ನಿಮ್ಮ ವಾಹನವನ್ನು ನಿಲ್ಲಿಸಿ ದೊಡ್ಡ ಗಣಪತಿಗೆ ಪೂಜೆ ಸಲ್ಲಿಸಿ ಕಡಲೆಕಾಯಿ ಖರೀದಿ ಮಾಡಿ ಬನ್ನಿ. ಮಿಸ್ ಮಾಡಿಕೊಂಡರೆ ಒಂದು ವರ್ಷ ಕಾಯಬೇಕಾದೀತು. ವರದಿ: ಎಚ್. ಮಾರುತಿ.
ವಿಭಾಗ