ಕರ್ನಾಟಕ ಬಜೆಟ್ 2024; ಬಡ್ಡಿ ಮನ್ನಾ, ಪ್ರಾಧಿಕಾರ ರಚನೆ ಸೇರಿ ಕೃಷಿ ಕ್ಷೇತ್ರಕ್ಕೆ ಈ ಬಾರಿ ಏನೆಲ್ಲಾ ಸಿಕ್ತು? ಇಲ್ಲಿದೆ 10 ಅಂಶಗಳು
Feb 16, 2024 01:00 PM IST
ಕರ್ನಾಟಕ ಬಜೆಟ್ 2024: ಬಡ್ಡಿ ಮನ್ನಾ, ಪ್ರಾಧಿಕಾರ ರಚನೆ ಸೇರಿ ಕೃಷಿ ಕ್ಷೇತ್ರಕ್ಕೆ ಈ ಬಾರಿ ಏನೆಲ್ಲಾ ಸಿಕ್ತು? ಇಲ್ಲಿದೆ ಸಮಗ್ರ ಮಾಹಿತಿ
ಕರ್ನಾಟಕ ಬಜೆಟ್ 2024: ಬಡ್ಡಿ ಮನ್ನಾ, ಪ್ರಾಧಿಕಾರ ರಚನೆ ಸೇರಿ ಕೃಷಿ ಕ್ಷೇತ್ರಕ್ಕೆ ಈ ಬಾರಿ ಹಲವು ಕೊಡುಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಫೆ.16) ಘೋಷಿಸಿದರು. ಅತ್ಯಂತ ಜನಪ್ರಿಯವಾಗಿದ್ದ ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿಗೊಳಿಸುವುದಾಗಿಯೂ ಅವರು ಪ್ರಕಟಿಸಿದರು. ಇಲ್ಲಿದೆ 10 ಅಂಶಗಳ ವಿವರಣೆ.
ಬೆಂಗಳೂರು: ನಿರೀಕ್ಷೆಯಂತೆ ಕೃಷಿಗೆ ಹೆಚ್ಚಿನ ಮಹತ್ವ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಾಲದ ಬಡ್ಡಿಮನ್ನಾ, ಸ್ಪೈಸ್ ಪಾರ್ಕ್ ಸೇರಿ ಹಲವು ಯೋಜನೆಗಳನ್ನು ಈ ಸಲದ ರಾಜ್ಯ ಬಜೆಟ್ (ಕರ್ನಾಟಕ ಬಜೆಟ್ 2024)ನಲ್ಲಿ ಘೋಷಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಫೆ.16) ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದು, ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ 50,000 ರೂ. ವರೆಗಿನ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ 21 ಲಕ್ಷ ರೈತರಿಗೆ 7,631 ಕೋಟಿ ರೂ. ಬೆಳೆ ಸಾಲ ಮನ್ನಾ ಮಾಡಲಾಗಿತ್ತು. ಇದೇ ರೀತಿ ಈ ಬಾರಿ ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕುಗಳ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿದ್ದು, ಇದರಿಂದ ಸುಮಾರು 57,000 ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಕೃಷಿ ಭಾಗ್ಯ ಮರುಜಾರಿ ಘೋಷಣೆ, 200 ಕೋಟಿ ರೂಪಾಯಿ ಅನುದಾನ
ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿಗೊಳಿಸಲಾಗಿರುತ್ತದೆ. 2023-24ನೇ ಸಾಲಿನಲ್ಲಿ 200 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿಯೂ ಈ ಯೋಜನೆಯನ್ನು ಮುಂದುವರೆಸಲಾಗುವುದು.
ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳ ತಳಿಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಅನ್ನು ಸ್ಥಾಪಿಸಲಾಗುವುದು.
ಮಣ್ಣಿನ ಗುಣ ಹಾಗೂ ಮಾರುಕಟ್ಟೆ ಬೇಡಿಕೆಯನ್ನು ಆಧರಿಸಿ ಯಾವ ಬೆಳೆ ಬೆಳೆಯಬೇಕೆಂಬ ಕುರಿತು ರೈತರಿಗೆ ಮಾರ್ಗದರ್ಶನ ನೀಡುವುದು. ಮಣ್ಣು ಪರೀಕ್ಷೆ ಮತ್ತು ಗುಣಮಟ್ಟ ಕುರಿತು ಮಾಹಿತಿ ನೀಡುವುದು. ಹೊಸ ಕೃಷಿ ಪದ್ಧತಿ ಹಾಗೂ ತಂತ್ರಜ್ಞಾನಗಳ ಕುರಿತು ರೈತರಿಗೆ ಅರಿವು ಮೂಡಿಸಿ, ಬೆಂಬಲ ನೀಡುವುದು. ರೈತರಿಗೆ ಸಂಗ್ರಹಣೆ ಮತ್ತು ಮೌಲ್ಯವರ್ಧನೆಯ ಕುರಿತು ಅರಿವು ಮೂಡಿಸುವುದು. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಪಡೆಯಲು ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು.
ಕೃಷಿ ಕ್ಷೇತ್ರಕ್ಕೆ ಬೇರೇನಿದೆ ಕೊಡುಗೆ
1) ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ: ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಅನುವಾಗುವಂತೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುವುದು.
2) ನಮ್ಮ ಮಿಲ್ಲೆಟ್: ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಅಗ್ರಿ-ಟೆಕ್ ಕಂಪನಿಗಳು ಮತ್ತು ರಿಟೇಲ್ ಚೈನ್‌ಗಳ ಸಹಭಾಗಿತ್ವದೊಂದಿಗೆ ಕೈಗೆಟುಕುವ ದರದಲ್ಲಿ ದೊರಕಿಸಲು ನಮ್ಮ ಮಿಲ್ಲೆಟ್ ಎಂಬ ಹೊಸ ಕಾರ್ಯಕ್ರಮ
3) 5000 ಸಣ್ಣ ಸರೋವರ: ಕರ್ನಾಟಕದ ಬರಪೀಡಿತ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಸುಸ್ಥಿರ ಕೃಷಿ ಮಾಡಲು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಪ್ರತಿ ವರ್ಷ 1,000 ದಂತೆ ಒಟ್ಟು 5,೦೦೦ ಸಣ್ಣ ಸರೋವರಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಲಾಗುವುದು.
4) ಆರ್.ಕೆ. ಶಾಲಾ ಕೃಷಿ ಕ್ಷೇತ್ರ ಜ್ಞಾನ ಕೇಂದ್ರ: ಬೆಂಗಳೂರಿನಲ್ಲಿರುವ ಕೃಷಿ ಇಲಾಖೆಯ ಆರ್.ಕೆ. ಶಾಲಾ ಕೃಷಿ ಕ್ಷೇತ್ರವನ್ನು ಕೃಷಿಗೆ ಸಂಬಂಧಿಸಿದ ತಾಂತ್ರಿಕತೆಗಳನ್ನು ಪಸರಿಸುವ ಜ್ಞಾನ ಕೇಂದ್ರವನ್ನಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು.
5) ಇ-ಸ್ಯಾಪ್ ತಂತ್ರಾಂಶ ಬಳಕೆ: ರೈತರಿಗೆ ಕೀಟ, ರೋಗ ಮತ್ತು ಪೋಷಕಾಂಶ ನಿರ್ವಹಣೆಯ ಸಲಹೆ ನೀಡಲು ರಾಯಚೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸಿರುವ e-SAP ತಂತ್ರಾಂಶದ ಸೌಲಭ್ಯವನ್ನು ಎಲ್ಲಾ ರೈತರಿಗೆ ಪರಿಚಯಿಸಲು ಕ್ರಮ ವಹಿಸಲಾಗುವುದು.
6) ಕೆಪೆಕ್ ಬಲವೃದ್ಧಿ: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಂಸ್ಥೆಯನ್ನು ಬಲಪಡಿಸಲು ಕ್ರಮವಹಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಉದ್ದೇಶಕ್ಕಾಗಿ PMFME ಯೋಜನೆಯಡಿಯಲ್ಲಿ 80 ಕೋಟಿ ರೂ.ಗಳನ್ನು ಒದಗಿಸಲಾಗುವುದು.
7) ಆಹಾರ ಪಾರ್ಕ್ ಸ್ಥಾಪನೆ: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತನ್ನು ಉತ್ತೇಜಿಸಲು ರಾಜ್ಯದಲ್ಲಿರುವ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಪಾರ್ಕ್ಗಳನ್ನು ಸ್ಥಾಪಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಶಿವಮೊಗ್ಗದ ಸೋಗಾನೆ, ವಿಜಯಪುರದ ಇಟ್ಟಂಗಿಹಾಳ ಮತ್ತು ಬೆಂಗಳೂರು ಗ್ರಾಮಾಂತರದ ಪೂಜೇನಹಳ್ಳಿಯಲ್ಲಿ ಸ್ಥಾಪಿಸಲಾಗುವುದು.
8) ಮಷಿನ್ ಲರ್ನಿಂಗ್ ಬಳಕೆ: ಕೃಷಿ ನಾವೀನ್ಯತೆಯ ಯುಗದಲ್ಲಿ ಪಾರಂಪರಿಕ ಕೃಷಿ ಪದ್ಧತಿಯಲ್ಲಿ ಗಣನೀಯ ಬದಲಾವಣೆಗಳಾಗಿದ್ದು, ಉಪಗ್ರಹ ಚಿತ್ರ, ಸೆನ್ಸರ್‌ಗಳ ಬಳಕೆ ಮತ್ತು ಮಷಿನ್ ಲರ್ನಿಂಗ್ ನಂತಹ (Machine Learning) ಅತ್ಯಾಧುನಿಕ ತಂತ್ರಜ್ಞಾನಗಳನ್ನು ಆಧರಿಸಿ ಬೆಳೆಯ ಉತ್ಪಾದಕತೆ ಮುನ್ಸೂಚನೆಯನ್ನು ಮಾಡಲು ಒಂದು ದತ್ತಾಂಶವನ್ನು ಅಭಿವೃದ್ಧಿಪಡಿಸಲಾಗುವುದು.
9) ಕೃಷಿ ನವೋದ್ಯಮ: ರೈತ ಉತ್ಪಾದಕ ಸಂಸ್ಥೆಗಳನ್ನು (FPO) ಇನ್ನಷ್ಟು ಸದೃಢ ಮತ್ತು ಸುಸ್ಥಿರವಾಗಿ ಕಾರ್ಯನಿರ್ವಹಿಸಲು ಪೂರಕವಾದ ತರಬೇತಿ, ಮಾರ್ಗದರ್ಶನ ಹಾಗೂ ಬೆಂಬಲ ನೀಡುವ Agri Accelerator Platform ಮೂಲಕ ಕೃಷಿ ವಲಯದ Start-up ಗಳನ್ನು ಉತ್ತೇಜಿಸಲಾಗುವುದು.
10) ಕೃಷಿ ವಿವಿ ಸ್ಥಾಪನೆ: ಮಂಡ್ಯ ಜಿಲ್ಲೆಯ ವಿ.ಸಿ. ಫಾರಂ ನಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು.
(This copy first appeared in Hindustan Times Kannada website. To read more like this please logon to kannada.hindustantimes.com)