ಕನ್ನಡ ನಾಮಫಲಕ ಅಳವಡಿಕೆ ಡೆಡ್‌ಲೈನ್‌ಗೂ ಮುನ್ನವೇ ಹೋರಾಟಗಾರರ ಕೆಂಡ; ಬೆಂಗಳೂರಿನಲ್ಲಿ ಇಂಗ್ಲಿಷ್ ಬೋರ್ಡ್ ಕಿತ್ತು ಆಕ್ರೋಶ
Feb 15, 2024 02:54 PM IST
ಈ ಹಿಂದೆ ಬೆಂಗಳೂರಿನಲ್ಲಿ ಕರವೇ ನಡೆಸಿದ್ದ ಪ್ರತಿಭಟನೆ ವೇಳೆ ಇಂಗ್ಲಿಷ್ ನಾಮಫಲಕ ಮತ್ತು ಬೋರ್ಡ್‌ಗಳನ್ನು ತರೆವುಗೊಳಿಸಿ ಕನ್ನಡ ನಾಮಫಲಕಗಳ ಅಳವಡಿಕೆಗೆ ಒತ್ತಾಯಿಸಿದ್ದಾರೆ.
ಬಿಬಿಎಂಪಿ ನೀಡಿರುವ ಡೆಡ್‌ಲೈನ್‌ಗೂ ಮುನ್ನವೇ ಕನ್ನಡ ಪರ ಹೋರಾಟಗಾರರು ಬೆಂಗಳೂರಿನಲ್ಲಿ ಇಂಗ್ಲಿಷ್ ನಾಮಫಲಕಗಳನ್ನು ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-ಬಿಬಿಎಂಪಿ ನಗರದಲ್ಲಿ ಇಂಗ್ಲಿಷ್ ನಾಮಫಲಕಗಳ ತೆರವಿಗೆ ಡೆಡ್‌ಲೈನ್ ನೀಡಿದೆ. ಆದರೆ ಈ ಡೆಡ್‌ಲೈನ್‌ಗೂ ಮುನ್ನವೇ ಕನ್ನಡ ಪರ ಹೋರಾಟಗಾರರು ಅಂಗಡಿಗಳಲ್ಲಿ ಅವಳಡಿಸಿದ್ದ ಇಂಗ್ಲಿಷ್ ನಾಮಫಲಕಗಳನ್ನು ಕಿತ್ತು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಯನಗರದ 3ನೇ ಹಂತದಲ್ಲಿ ನಡೆದಿದೆ.
ಏಕಾಏಕಿ ಕನ್ನಡ ಪರ ಕಾರ್ಯಕರ್ತರ ಈ ನಡೆಗೆ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ನಿಯಮಾನುಸಾರ ನಾಮಫಲಕಗಳಲ್ಲಿ ಕನ್ನಡ ಅಳವಡಿಕೆಗೆ ಒಂದಷ್ಟು ಸಮಯಾವಕಾಶವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಜಯನಗರದ 3ನೇ ಹಂತದ 10ನೇ ಮುಖ್ಯ ರಸ್ತೆಯಲ್ಲಿರುವ ಎಲ್ಲಾ ಅಂಗಡಿ ಮಾಲೀಕರು ಸದ್ಯ ಕನ್ನಡ ಪರ ಹೋರಾಟಗಾರರ ಬಿಸಿಯನ್ನು ಎದುರಿಸುವಂತಾಗಿದೆ. ಆದರೆ ಡೆಡ್‌ಲೈನ್‌ಗೂ ಮುನ್ನವೇ ಈ ರೀತಿಯ ಕನ್ನಡದ ಹೆಸರಿನಲ್ಲಿ ದಾಳಿ ಮಾಡಿರುವ ಹೋರಾಟಗಾರರು ಯಾವ ಸಂಘಟನೆಯಲ್ಲಿ ಗುರುತಿಸಿಕೊಂಡಿರುವವರು ಎಂಬುದು ತಿಳಿದು ಬಂದಿಲ್ಲ.
ಎರಡು ವಾರಗಳ ನಂತರ ಮತ್ತೆ ಬರುತ್ತೇವೆ. ಅಷ್ಟರಲ್ಲಿ ಕನ್ನಡ ನಾಮಫಲಕಗಳು ಅಳವಡಿಸಿರಬೇಕೆಂದು ನೀಡಿದ್ದಾರೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಕನ್ನಡದ ರೆಡೊ ನಾಮಫಲಕ್ಕೆ ಮಾಡಿಸಲು 50 ಸಾವಿರ ರೂಪಾಯಿ ವೆಚ್ಚ ಮಾಡಿದ್ದೇನೆ. ಕಳೆದ 50 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಆದರೆ ಇಂತಹ ಅಮಾನವೀಯತೆಯನ್ನು ಎಂದೂ ನೋಡಿರಲಿಲ್ಲ. ಬಿಬಿಎಂಪಿ ಮತ್ತು ಸರ್ಕಾರ ಇಂಥ ಸೋ ಕಾಲ್ಡ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಯೊಬ್ಬರು ಆಗ್ರಹಿಸಿದ್ದಾರೆ.
ಬಿಬಿಎಂಪಿ ನಿಯಮಗಳನ್ನು ಪಾಲಿಸದೆ ಫೆಬ್ರವರಿ ಅಂತ್ಯದ ಗಡುವು ನೀಡಬಾರದು. ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡ ಜಾರಿ ಬಗ್ಗೆ ಯಾವುದೇ ಕಾಯಿದೆ ಜಾರಿಯಲ್ಲಿ ಇಲ್ಲ. ಬಿಬಿಎಂಪಿ ತಮಗೆ ಬೇಕಾದರೆ ನಿಯಮಗಳನ್ನು ಬದಲಾಯಿಸುವಂತಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಸಮಾನವಾದ ಅವಕಾಶ ಕಲ್ಪಿಸಬೇಕೆಂದು ಮತ್ತೊಬ್ಬ ವ್ಯಾಪಾರಿ ಒತ್ತಾಯಿಸಿದ್ದಾರೆ.
ಅಂಗಡಿ, ಮಾಲ್ ಸೇರಿದಂತೆ ಯಾವುದೇ ಕಚೇರಿ, ಸಂಸ್ಥೆಗಳಲ್ಲಿ ಅಳವಡಿಸುವ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಕಡ್ಡಾಯವಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಕನ್ನಡ ನಾಮಫಲಕ ಕಡ್ಡಾಯಗೊಳಿಸಿ ಹೊರಡಿಸಲಾಗಿದ್ದ ಆದೇಶಕ್ಕೆ ಸಹಿ ಮಾಡದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗಷ್ಟೇ ಹೇಳಿದ್ದರು. ಕನ್ನಡ ಭಾವನಾತ್ಮಕ ವಿಚಾರವಾಗಿದ್ದು, ರಾಜ್ಯಪಾಲರು ಮತ್ತೊಮ್ಮೆ ಪರಿಗಣಿಸಬೇಕೆಂದು ಒತ್ತಾಯಿಸಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com).