logo
ಕನ್ನಡ ಸುದ್ದಿ  /  ಕರ್ನಾಟಕ  /  Indira Canteen: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲೇ ಆರಂಭ: ಚಾಲಕರ ಸಂಘ ಸ್ವಾಗತ

Indira Canteen: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲೇ ಆರಂಭ: ಚಾಲಕರ ಸಂಘ ಸ್ವಾಗತ

HT Kannada Desk HT Kannada

Jul 28, 2023 11:04 AM IST

google News

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

    • Indira Canteen:  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಇಂದಿರಾ ಕ್ಯಾಂಟಿನ್‌ ತೆರೆಯುವ ಕುರಿತು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯುವುದಾಗಿ ಸಚಿವರು ಭರವಸೆ ನೀಡಿದ್ದರು. ಅದರಂತೆ ಸಚಿವರು ಪತ್ರ ಬರೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಾಂದರ್ಭಿಕ ಚಿತ್ರ)

ಬೆಂಗಳೂರು: ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಇಂದಿರಾ ಕ್ಯಾಂಟಿನ್ (Indira Canteen) ಆರಂಭವಾಗಲಿದೆ. ಇಲ್ಲಿ ಕ್ಯಾಂಟೀನ್ ತೆರೆಯುವ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯೋನ್ಮುಖವಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಶಕ್ತಿ ಯೋಜನೆಯಿಂದ ಆರ್ಥಿಕವಾಗಿ ತೊಂದರೆ ಉಂಟಾಗಿದೆ ಎಂದು ಆಟೋ ಮತ್ತು ಕ್ಯಾಬ್ ಚಾಲಕರು ಅಸಹಾಯಕತೆ ವ್ಯಕ್ತಪಡಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಅವರು ಜುಲೈ 27ರಂದು ಬಂದ್​ಗೆ ಕರೆ ನೀಡಿದ್ದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Transport Minister Ramalingareddy) ಅವರ ಮಧ್ಯಸ್ಥಿಕೆಯಿಂದ ಬಂದ್ ಹಿಂಪಡೆಯಲಾಗಿತ್ತು. ಜುಲೈ 24 ಸೋಮವಾರದಂದು ಚಾಲಕರ ಸಂಘಗಳ ಒಕ್ಕೂಟದೊಂದಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಭೆ ನಡೆಸಿದ್ದರು. ಸಚಿವರ ಭರವಸೆ ಮೇರೆಗೆ ಬಂದ್ ವಾಪಸ್ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಬೇಕೆಂದು ಮನವಿ ಸಲ್ಲಿಸಿದ್ದರು.

ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಕ್ಯಾಂಟೀನ್ ತೆರೆಯುವ ಭರವಸೆ ನೀಡಿದ್ದರು ಎಂದು ಕ್ಯಾಬ್ ಚಾಲಕರ ಸಂಘ ಹೇಳಿತ್ತು. ಪ್ರತಿದಿನ ಸಾವಿರಾರು ಚಾಲಕರು ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಸಾವಿರಾರು ಜನರೂ ಸಹ ಆಗಮಿಸುತ್ತಾರೆ. ಈಗ ಇರುವ ಹೋಟೆಲ್​ಗಳಲ್ಲಿ ಎಲ್ಲರೂ ಊಟ ತಿಂಡಿ ಮಾಡಲು ಸಾಧ್ಯವಿಲ್ಲ. ಬಡ ಮತ್ತು ಮಧ್ಯಮ ವರ್ಗದ ಜನರ ಹಿತದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಚಾಲಕರು ಬೇಡಿಕೆ ಇಟ್ಟಿದ್ದರು.

ವಿಮಾನ ನಿಲ್ದಾಣ ಆವರಣದಲ್ಲಿ ಇಂದಿರಾ ಕ್ಯಾಂಟಿನ್‌ ತೆರೆಯುವ ಕುರಿತು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆಯುವುದಾಗಿ ಸಚಿವರು ಭರವಸೆ ನೀಡಿದ್ದರು. ಅದರಂತೆ ಸಚಿವರು ಪತ್ರ ಬರೆಯಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ತೆರೆಯಲು ಸಚಿವರು ಪ್ರಕ್ರಿಯೆ ಆರಂಭಿಸಿದ್ದಾರೆ.

ಜಾಗ ನೀಡುವುದೇ ಪ್ರಾಧಿಕಾರ?

ಅಗತ್ಯಕ್ಕೆ ಅನುಗುಣವಾಗಿ ವಿಮಾನ ನಿಲ್ದಾಣದಲ್ಲಿ ಒಂದು ಅಥವಾ ಎರಡು ಇಂದಿರಾ ಕ್ಯಾಂಟಿನ್ ತೆರೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಲಾಗುವುದು. ಇದು ವಿಶೇಷವಾಗಿ ಕ್ಯಾಬ್‌ ಚಾಲಕರಿಗೆ ಅನುಕೂಲವಾಗುತ್ತದೆ. ಮೇಲಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಆಹಾರ ನೀಡುವ ಉದ್ದೇಶ ಹೊಂದಿರುತ್ತದೆ. ಇದಕ್ಕಾಗಿ ಸೂಕ್ತ ಸ್ಥಳಾವಕಾಶ ಒದಗಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಕೇಳಿ ಕೊಳ್ಳಲಾಗುವುದು ಎಂದು ಸಚಿವರು ಚಾಲಕರ ಸಂಘದ ನಿಯೋಗಕ್ಕೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕ್ಯಾಂಟೀನ್ ಆರಂಭಕ್ಕೆ ಬಿಬಿಎಂಪಿ ಸಿದ್ದ

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್‌ ಈವರೆಗೂ ಸಚಿವರಿಂದ ಯಾವುದೇ ಪತ್ರ ಬಂದಿಲ್ಲ. ಪತ್ರ ತಲುಪಿದ ತಕ್ಷಣ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ. ಅತಿ ಹೆಚ್ಚು ಜನರು ಭೇಟಿ ನೀಡುವ ಸ್ಥಳಗಳಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಇಂದಿರಾ ಕ್ಯಾಂಟಿನ್‌ ಪ್ರಾರಂಭಿಸಲು ಅವಕಾಶ ಇದೆ. ಈಗಾಗಲೇ ಜನ ಸಾಂದ್ರತೆ ಹೆಚ್ಚಾಗಿರುವ ಪ್ರದೇಶ ಮತ್ತು ಆಸ್ಪತ್ರೆಗಳಲ್ಲಿ ಹೊಸದಾಗಿ ಇಂದಿರಾ ಕ್ಯಾಂಟಿನ್‌ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್‌ ಸ್ಥಾಪನೆಗೆ ಸೂಚನೆ ನೀಡಿದಲ್ಲಿ ಅಲ್ಲಿಯೂ ಕ್ಯಾಂಟಿನ್‌ ತೆರೆದು ಬಿಬಿಎಂಪಿಯೇ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದ್ದಾರೆ.

ಚಾಲಕರ ಸ್ವಾಗತ

ಸರಕಾರದ ಈ ನಿರ್ಧಾರವನ್ನು ಆಟೋ ಮತ್ತು ಕ್ಯಾಬ್ ಚಾಲಕರ ಸಂಘ ಸ್ವಾಗತಿಸಿದೆ. ಈ ಸಂಬಂಧ ತಮ್ಮ ಅಭಿಪ್ರಾಯ ಹಂಚಿಕೊಂಡ ಕ್ಯಾಬ್ ಚಾಲಕ ಮಹಾದೇವ ಪ್ರತಿದಿನ ಬೆಳಗ್ಗೆಯಿಂದ ತಡರಾತ್ರಿವರೆಗೆ ವಿಮಾನ ನಿಲ್ದಾಣಕ್ಕೆ ಕ್ಯಾಬ್ ಓಡಿಸುತ್ತೇನೆ. ಅಲ್ಲಿ ಇರುವ ಹೈ ಫೈ ಹೋಟೆಲ್​ಗಳಲ್ಲಿ ಚಾಲಕರಾದ ನಾವು ಊಟ ಮಾಡುವುದು ಕಷ್ಟ. ಪ್ಯಾಸೆಂಜರ್​ಗಳು ಇರುವುದರಿಂದ ಮಾರ್ಗ ಮಧ್ಯೆ ಕಾರು ನಿಲ್ಲಿಸಲು ಆಗುವುದಿಲ್ಲ. ಅಲ್ಲಿಯೇ ಇಂದಿರಾ ಕ್ಯಾಂಟೀನ್ ಇದ್ದರೆ ವಿಮಾನ ಇಳಿದು ಬರುವ ಹೊತ್ತಿಗೆ ಊಟ ಮಾಡಿಕೊಳ್ಳಬಹುದು ಎನ್ನುತ್ತಾರೆ.

ಮತ್ತೊಬ್ಬ ಚಾಲಕ ವೆಂಕಟೇಶ್ ಶಕ್ತಿ ಯೋಜನೆಯಿಂದ ಆದಾಯ ಕಡಿಮೆಯಾಗಿದೆ. ವಿಮಾನ ನಿಲ್ದಾಣದ ಹೋಟೆಲ್​ಗಳಲ್ಲಿ ದರವೂ ಹೆಚ್ಚು. ಹೊಟ್ಟೆಯೂ ತುಂಬುವುದಿಲ್ಲ. ಖಂಡಿತವಾಗಿಯೂ ಇದರಿಂದ ಚಾಲಕರಿಗೆ ಅನುಕೂಲ. ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಊಟ ಮಾಡಬಹುದು ಮತ್ತು ಹಣವೂ ಉಳಿತಾಯವಾಗುತ್ತದೆ ಎಂದು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ