ಕೊನೆಗೂ ಪಂಚೆಗೆ ಸಂದ ಗೌರವ; ಮಾಲ್‌ಗಳಲ್ಲಿ ರೈತ ಸೇರಿದಂತೆ ಯಾರನ್ನೂ ಅವಮಾನಿಸದಂತೆ ಮಾರ್ಗಸೂಚಿ ಹೊರಡಿಸಲು ಸರ್ಕಾರ ನಿರ್ಧಾರ
Jul 23, 2024 04:15 PM IST
ಬೆಂಗಳೂರು ಜಿಟಿ ಮಾಲ್‌ನಲ್ಲಿ ಪಂಚೆ ಉಟ್ಟು ಬಂದಿದ್ದ ಕಾರಣಕ್ಕೆ ರೈತರೊಬ್ಬರಿಗೆ ಪ್ರವೇಶ ನಿರಾಕರಿಸಲಾಗಿತ್ತು.
- ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ರೈತರೊಬ್ಬರಿಗೆ ಅವಮಾನಿಸದ ಪ್ರಕರಣ ನಡೆದ ನಂತರ, ಮಾಲ್‌ಗಳಲ್ಲಿ ರೈತ ಸೇರಿದಂತೆ ಯಾರನ್ನೂ ಅವಮಾನಿಸದಂತೆ ಮಾರ್ಗಸೂಚಿ ಹೊರಡಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಈಗ ಮಾಲ್‌ನವರು ಈ ಪ್ರಕರಣಕ್ಕೆ ಲಿಖಿತ ವಿವರಣೆ, ಕ್ಷಮಾಪಣೆ ಮತ್ತು ಬಾಕಿ ಇರುವ ತೆರಿಗೆ ಪಾವತಿಗಾಗಿ ಚೆಕ್ ನೀಡಿದ್ದಾರೆ. (ವರದಿ: ಎಚ್.ಮಾರುತಿ)
ಬೆಂಗಳೂರು: ಜಿಟಿ ಮಾಲ್ ನಲ್ಲಿ ರೈತರೊಬ್ಬರಿಗೆ ಅವಮಾನಿಸಿದ ಪ್ರಕರಣ ನಡೆದ ನಂತರ ಮಾಲ್ ಮತ್ತಿತರ ಸ್ಥಳಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಜುಲೈ 18ರಂದು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಬಂದ್ ಮಾಡಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಜುಲೈ 16ರಂದು ರೈತರೊಬ್ಬರಿಗೆ ಮಾಲ್ ನಲ್ಲಿ ಪ್ರವೇಶ ನಿರಾಕರಿಸಿದ ಪ್ರಕರಣ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆದಿತ್ತು. ಪಕ್ಷಭೇದ ಮರೆತು ಬಹುತೇಕ ಶಾಸಕರು ಮಾಲ್‌ಗೆ ಬೀಗ ಜಡಿಯುವಂತೆ ಸಲಹೆ ನೀಡಿದ್ದರು. ಸೋಮವಾರ ಈ ವಿಷಯ ಕುರಿತು ವಿಧಾನಸಭೆಯಲ್ಲಿ ವಿವರಣೆ ನೀಡಿದ ಬೆಂಗಳೂರು ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಂಚೆಯುಟ್ಟು ಬಂದ ರೈತರೊಬ್ಬರಿಗೆ ಮಾಲ್ ನಲ್ಲಿ ಅವಮಾನ ಮಾಡಲಾಗಿದ್ದು, ಸದನದಲ್ಲಿ ಚರ್ಚೆ ನಡೆದಿತ್ತು. ಅಂದು ನಾನು ಸದನದಲ್ಲಿ ಇಲ್ಲದ ಕಾರಣ ವಿವರಣೆ ನೀಡುತ್ತಿರುವುದಾಗಿ ಹೇಳಿದ ಅವರು ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸುವುದಾಗಿ ಸದನದ ಗಮನಕ್ಕೆ ತಂದರು. ಚರ್ಚೆಯ ಫಲಶ್ರುತಿಯಾಗಿ ಮಾಲ್ ಬಂದ್ ಮಾಡಲಾಗಿದೆ. ಮಾಲ್ ಸೇರಿದಂತೆ ಸಣ್ಣ ಅಥವಾ ಯಾವುದೇ ದೊಡ್ಡ ಸ್ಥಳವೇ ಆಗಿರಲಿ, ಪಂಚೆಗೂ ಗೌರವ ಸಲ್ಲಿಸಬೇಕು ಎಂದರು.
ರೈತರನ್ನು ಅಪಮಾನಿಸಿದ್ದಕ್ಕೆ ಮತ್ತು ತೆರಿಗೆ ಬಾಕಿ ಇರುವುದಕ್ಕೆ ಮಾಲ್ ಗೆ ನೋಟಿಸ್ ನೀಡಲಾಗಿತ್ತು. ಈಗ ಮಾಲ್‌ನವರು ಲಿಖಿತ ವಿವರಣೆ, ಕ್ಷಮಾಪಣೆ ಮತ್ತು ಬಾಕಿ ಇರುವ ತೆರಿಗೆ ಪಾವತಿಗಾಗಿ ಚೆಕ್ ನೀಡಿದ್ದಾರೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ರಾಜ್ಯದ ಯಾವುದೇ ಭಾಗದಲ್ಲಿ ಮರುಕಳಿಸದ ಹಾಗೆ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಲಿದೆ ಎಂದು ಮಾಹಿತಿ ನೀಡಿದರು. ಜಿಟಿ ಮಾಲ್ ಕುರಿತು ಪ್ರಸ್ತಾಪಿಸಿದ ಡಿಕೆಶಿ ಅವರು, ಮಾಲ್ ಸುಮಾರು 2 ಕೋಟಿ ರೂ. ಬಾಕಿ ಉಳಿಸಿಕೊಂಡಿತ್ತು. ಅವರು ಆಗಾಗ್ಗೆ ಪಾವತಿ ಮಾಡುತ್ತಿದ್ದರು. ಜುಲೈ 31 ತೆರಿಗೆ ಪಾವತಿಗೆ ಅಂತಿಮ ದಿನವಾಗಿದ್ದು, ಚೆಕ್ ನೀಡಿದ್ದಾರೆ. ಹಾಗಾಗಿ ಮಾಲ್ ತೆರೆಯಲು ಅನುಮತಿ ನೀಡಲಾಗಿದೆ ಎಂದೂ ತಿಳಿಸಿದರು.
ಜೆಡಿಎಸ್ ಸಭಾನಾಯಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಈ ಮಾರ್ಗಸೂಚಿಗಳನ್ನು ಸಾಂಪ್ರದಾಯಿಕ ಉಡುಗೆ ತೊಟ್ಟವರಿಗೆ ಪ್ರವೇಶ ನಿರಾಕರಿಸುವ ಖಾಸಗಿ ಕ್ಲಬ್ ಗಳಿಗೂ ವಿಸ್ತರಿಸಬೇಕು ಎಂದು ಸಲಹೆ ನೀಡಿದರು. ಕಾನೂನು ಸಚಿವ ಎಚ್.ಕೆ.ಪಾಟೀಲ್ ಉತ್ತರಿಸಿ ಕ್ಲಬ್ ಮತ್ತು ಬಾರ್ ಗಳನ್ನು ಈ ಮಾರ್ಗಸೂಚಿಗಳ ವ್ಯಾಪ್ತಿಗೆ ಸೇರಿಸುವುದು ಸರಿಯಲ್ಲ. ಈ ವಿಷಯ ರೈತರು ಮತ್ತು ಗ್ರಾಮೀಣ ಪ್ರದೇಶದ ಜನರ ಆತ್ಮ ಗೌರವಕ್ಕೆ ಸಂಬಂಧಪಟ್ಟಿದ್ದಾಗಿದ್ದು, ಪರಸ್ಪರ ಬೆರಕೆ ಮಾಡುವುದು ಬೇಡ ಎಂದರು. ವಿಪಕ್ಷ ನಾಯಕ ಆರ್. ಅಶೋಕ ಅವರೂ ಸಹ ಮಾಗಸೂಚಿಗಳನ್ನು ಹೊರಡಿಸುವ ನಿರ್ಧಾರಕ್ಕೆ ಬೆಂಬಲ ಸೂಚಿಸಿ, 6 ತಿಂಗಳ ನಂತರ ನಾವೆಲ್ಲರೂ ಮಾರ್ಗಸೂಚಿಗಳನ್ನು ನಾವೆಲ್ಲರೂ ಮರೆತುಬಿಡುತ್ತೇವೆ. ಆದ್ದರಿಂದ ಭೂಮಿ ಮತ್ತಿತರ ಸವಲತ್ತುಗಳನ್ನು ಪಡೆದುಕೊಂಡಿರುವ ಕ್ಲಬ್ ಗಳಿಗೂ ಈ ಮಾರ್ಗಸೂಚಿಗಳನ್ನು ಅನ್ವಯಿಸಬೇಕು. ಆದರೆ ಬಾರ್ ಮತ್ತು ವೈನ್ ಶಾಪ್ ಗಳಿಗೆ ಈ ನಾವು ಬೇಡಿಕೆ ಸಲ್ಲಿಸುತ್ತಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಶಾಸಕ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿ ಬೆಂಗಳೂರಿನ ಕೆಲವು ಕ್ಲಬ್ ಗಳು ಹಾಕಿಕೊಂಡಿವೆ. ಮಾರ್ಗಸೂಚಿಗಳು ಇಂತಹ ಕ್ಲಬ್ ಗಳಿಗೂ ಅನ್ವಯಿಸಬೇಕು ಎಂದು ಸಲಹೆ ನೀಡಿದರು. ಒಟ್ಟಿನಲ್ಲಿ ಪಂಚೆ ಸೇರಿದಂತೆ ಗ್ರಾಮೀಣ ಪ್ರದೇಶದ ಉಡುಗೆ ತೊಡುಗೆಗೂ ಈಗ ಕಾಲ ಬಂದಿದೆ.