ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಮತ್ತು ಕೆಬಾಬ್ ನಂತರ ಪಾನಿಪೂರಿ ಮಸಾಲಾ ಫೂರಿ ಸರದಿ; ಇವುಗಳಲ್ಲಿಯೂ ಕೃತಕ ಬಣ್ಣಗಳ ಬಳಕೆ ನಿಷೇಧ ಶೀಘ್ರ
Jun 28, 2024 10:41 AM IST
ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಮತ್ತು ಕೆಬಾಬ್ ನಂತರ ಪಾನಿಪೂರಿ ಮಸಾಲಾ ಫೂರಿ ಸರದಿ; ಇವುಗಳಲ್ಲಿಯೂ ಕೃತಕ ಬಣ್ಣಗಳ ಬಳಕೆ ನಿಷೇಧ ಶೀಘ್ರ. (ಎಐ ರಚಿತ ಸಾಂಕೇತಿಕ ಚಿತ್ರ)
ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಮತ್ತು ಕೆಬಾಬ್ ನಂತರ ಪಾನಿಪೂರಿ ಮಸಾಲಾ ಫೂರಿ ಸರದಿ ಎದುರಾಗಿದೆ. ಇವುಗಳಲ್ಲಿಯೂ ಕೃತಕ ಬಣ್ಣಗಳ ಬಳಕೆ ನಿಷೇಧ ಶೀಘ್ರ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇತ್ತೀಚೆಗೆ ಇವುಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಪ್ರಯೋಗಾಲಯ ವರದಿ ಆತಂಕ ಮೂಡಿಸಿದೆ. (ವರದಿ-ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಮತ್ತು ಕೆಬಾಬ್ ನಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ನಿಷೇದಿಸಿದ ನಂತರ ಇದೀಗ ಪಾನಿಪೂರಿ ಸರದಿ. ರಾಜ್ಯ ಸರ್ಕಾರದ ಆಹಾರ ಗುಣಮಟ್ಟ ಮತ್ತು ಇಲಾಖೆ ಪಾನಿಪೂರಿ ಮತ್ತು ಮಸಾಲಾಪೂರಿಯಲ್ಲಿ ಬಳಸುವ ಸಾಸ್ ಗಳಿಗೆ ನಿರ್ಬಂಧ ಹೇರುವುದು ಬಹುತೇಕ ಖಚಿತವಾಗಿದೆ.
ಈ ವಿಷಯ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆ ಚರ್ಚಿಸಿದ ನಂತರ ಅಂತಿಮ ನಿಧಾರ ಕೈಗೊಳ್ಳುವುದಾಗಿ ಆಹಾರ ಸುರಕ್ಷತಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
260 ಪಾನಿಪೂರಿ ಮಾದರಿಗಳಲ್ಲಿ 43 ಮಾದರಿಗಳಲ್ಲಿ ಕಾರ್ಸಿನೊಗೆಜಿಕ್ ರಾಸಾಯನಿಕಗಳು ಪತ್ತೆ
ರಾಜ್ಯಾದ್ಯಂತ ಸಂಗ್ರಹಿಸಿದ 260 ಪಾನಿಪೂರಿ ಮಾದರಿಗಳಲ್ಲಿ 43 ಮಾದರಿಗಳಲ್ಲಿ ಕಾರ್ಸಿನೊಗೆಜಿಕ್ ರಾಸಾಯನಿಕಗಳು ಪತ್ತೆಯಾಗಿವೆ. ಅದರಲ್ಲೂ ಸಾಸ್ ಮತ್ತು ಸಿಹಿ(ಮೀಟಾ) ಖಾರಾ ಪೌಡರ್ ನಲ್ಲಿ ಹೆಚ್ಚಿನ ಮಟ್ಟದಲ್ಲಿ ಕಂಡು ಬಂದಿರುವುದು ಆತಂಕ ಮೂಡಿಸಿದೆ ಈ ರಾಸಾಯನಿಕಗಳನ್ನು ಬಣ್ಣದ ರೂಪದಲ್ಲಿ ಬಳಸಲಾಗುತ್ತದೆ. ಇಂತಹ ರಾಸಾಯನಿಕಗಳನ್ನು ಬಳಸುವುದು ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ.
ಬೆಂಗಳೂರಿನಲ್ಲಿಯೂ 49 ಮಾದರಿಗಳನ್ನು ಸಂಗ್ರಹಿಸಿದ್ದು ಇಲ್ಲಿಯೂ ಈ ರಾಸಾಯನಿಕ ಪತ್ತೆಯಾಗಿದ್ದು, ನಿರಂತರವಾಗಿ ಪಾನಿಪೂರಿ ಸೇವಿಸುತ್ತಿದ್ದರೆ ಕರುಳಿನ ಕ್ಯಾನ್ಸರ್ ಮತ್ತು ಅಲ್ಸರ್ ತಗುಲುತ್ತದೆ. ಈ ರಾಸಾಯನಿಕಗಳ ಬಳಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ತಗುಲುತ್ತದೆ ಎನ್ನುವುದು ಆತಂಕಕಾರಿಯಾಗಿದೆ.
ಆರೇಳು ವರ್ಷ ನಿರಂತರ ಪಾನಿಪೂರಿ ತಿಂದರೆ ಕ್ಯಾನ್ಸರ್, ಅಲ್ಸರ್ ಗ್ಯಾರೆಂಟಿ
ಈ ರಾಸಾಯನಿಕಗಳನ್ನು ಬಳಸಿರುವ ಮೀಠಾ, ಕಾರ ಸೇವನೆ ಮಾಡಿದರೆ ಅಸಿಡಿಟಿ ಮತ್ತು ಬೇಧಿ ಹೆಚ್ಚಾಗುತ್ತದೆ. ಸತತವಾಗಿ 5-7 ವರ್ಷಗಳವರೆಗೆ ಪಾನಿಪೂರಿಯನ್ನು ತಿನ್ನುತ್ತಾ ಹೋದರೆ ಕ್ಯಾನ್ಸರ್ ಮತ್ತು ಅಲ್ಸರ್ ರೋಗ ತಗುಲುತ್ತದೆ ಎಂದು ತಿಳಿದು ಬಂದಿದೆ.
ಪಾನಿಪೂರಿಯಲ್ಲಿ ರಾಸಾಯನಿಕಗಳನ್ನು ಸೇರ್ಪಡೆ ಮಾಡಲಾಗುತ್ತಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಸಾರ್ವಜಕರು ಇಲಾಖೆಗೆ ದೂರು ಸಲ್ಲಿಸಿದ್ದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ -2006 ಪ್ರಕಾರ ಇಂತಹ ರಾಸಾಯನಿಕಗಳನ್ನು ಸೇರ್ಪಡೆ ಮಾಡುವುದನ್ನು ನಿಷೇಧಿಸಲಾಗಿದೆ.
ಈ ವರ್ಷದ ಮಾರ್ಚ್‌ನಲ್ಲಿ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣಗಳನ್ನು ಸೇರ್ಪಡೆ ಮಾಡುವುದನ್ನು ಇಲಾಖೆ ನಿಷೇಧಿಸಿತ್ತು. ಕಳೆದ ವಾರವಷ್ಟೇ ಕೆಬಾಬ್ ನಲ್ಲಿ ಕೃತಕ ಬಣ್ಣಗಳನ್ನು ಸೇರ್ಪಡೆ ಮಾಡುವುದನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ಕೆಬಾಬ್ ಎಂದರೆ ಮಾಂಸಹಾರಿ ಮಾತ್ರವಲ್ಲ, ಚಿಕನ್, ಫಿಶ್ ಮತ್ತು ಶಾಖಾಹಾರಿ ಕೆಬಾಬ್ ಗಳಲ್ಲೂ ನಿಷೇಧಿಸಲಾಗಿದೆ. ರಾಜ್ಯಾದ್ಯಂತ 39 ಕೆಬಾಬ್ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಹಾನಿಕಾರಕ ರಾಸಾಯನಿಕಗಳನ್ನು ಸೇರಿಸಿರುವುದು ಬೆಳಕಿಗೆ ಬಂದಿತ್ತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.