logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಮಾಂಸಹಾರಿ ಖಾದ್ಯ ಶವರ್ಮಾದಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ, ಗುಣಮಟ್ಟ ಕಾಪಾಡಲು ತಾಕೀತು ಮಾಡಿದ ಸರ್ಕಾರ

Bengaluru News: ಮಾಂಸಹಾರಿ ಖಾದ್ಯ ಶವರ್ಮಾದಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ, ಗುಣಮಟ್ಟ ಕಾಪಾಡಲು ತಾಕೀತು ಮಾಡಿದ ಸರ್ಕಾರ

HT Kannada Desk HT Kannada

Jun 30, 2024 10:48 PM IST

google News

ಮಾಂಸಹಾರಿ ಖಾದ್ಯ ಶವರ್ಮಾದಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ, ಗುಣಮಟ್ಟ ಕಾಪಾಡಲು ತಾಕೀತು ಮಾಡಿದ ಸರ್ಕಾರ

    • ರಾಜ್ಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಕಣ್ಣು ಮಾಂಸಹಾರಿ ಖಾದ್ಯ ಶವರ್ಮಾದ ಮೇಲೆ ಬಿದ್ದಿದೆ. ಇಲಾಖೆಯ ಅಧಿಕಾರಿಗಳು ರಾಜ್ಯಾದ್ಯಾಂತ ಶವರ್ಮಾ ಮಾರಾಟ ಮಾಡುತ್ತಿದ್ದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ.
ಮಾಂಸಹಾರಿ ಖಾದ್ಯ ಶವರ್ಮಾದಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ, ಗುಣಮಟ್ಟ ಕಾಪಾಡಲು ತಾಕೀತು ಮಾಡಿದ ಸರ್ಕಾರ
ಮಾಂಸಹಾರಿ ಖಾದ್ಯ ಶವರ್ಮಾದಲ್ಲಿ ಅಪಾಯಕಾರಿ ರಾಸಾಯನಿಕ ಪತ್ತೆ, ಗುಣಮಟ್ಟ ಕಾಪಾಡಲು ತಾಕೀತು ಮಾಡಿದ ಸರ್ಕಾರ

ಬೆಂಗಳೂರು: ಗೋಬಿ ಮಂಚೂರಿ, ಕಾಟನ್‌ ಕ್ಯಾಂಡಿ, ಮತ್ತು ಕಬಾಬ್‌ನಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ನಿಷೇಧಿಸಿದೆ. ಕೆಲವೇ ದಿನಗಳಲ್ಲಿ ಪಾನಿಪೂರಿಯಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಲು ಸಿದ್ಧತೆಗಳು ನಡೆದಿವೆ. ಇದೀಗ ರಾಜ್ಯ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಕಣ್ಣು ಮಾಂಸಹಾರಿ ಖಾದ್ಯ ಶವರ್ಮಾದ ಮೇಲೆ ಬಿದ್ದಿದೆ. ಇಲಾಖೆಯ ಅಧಿಕಾರಿಗಳು ರಾಜ್ಯಾದ್ಯಾಂತ ಶವರ್ಮಾ ಮಾರಾಟ ಮಾಡುತ್ತಿದ್ದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ಶವರ್ಮಾ ತಿಂದ ನಂತರ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿರುವ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ರಾಜ್ಯಾದ್ಯಂತ ಸಾರ್ವಜನಿಕರು ಆಹಾರ ಗುಣಮಟ್ಟ ಮತ್ತು ಇಲಾಖೆಗೆ ದೂರು ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಇಲಾಖೆಯು 10 ಜಿಲ್ಲೆಗಳಲ್ಲಿ ಶವರ್ಮಾ ಮಾದರಿಯನ್ನು ಸಂಗ್ರಹಿಸಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಮೈಸೂರು, ಬಳ್ಳಾರಿ, ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿ ಶವರ್ಮಾ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 17 ಮಾದರಿಗಳ ಪೈಕಿ 9 ಶವರ್ಮಾ ಮಾದರಿಗಳು ಮಾತ್ರ ತಿನ್ನಲು ಯೋಗ್ಯವಾಗಿದ್ದು, 8 ಮಾದರಿಗಳು ಅನರ್ಹವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಿನ್ನಲು ಯೋಗ್ಯವಲ್ಲದ 8 ಮಾದರಿಗಳಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಯೀಸ್ಟ್ ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆಯಾಗಿರುವುದು ಪತ್ತೆಯಾಗಿದೆ. ಮಾಂಸವನ್ನು ದೀರ್ಘ ಕಾಲ ಇಡುವುದು, ಅಡುಗೆ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿರುವುದರಿಂದ ಶವರ್ಮಾ ತಿನ್ನಲು ಯೋಗ್ಯವಲ್ಲ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಶವರ್ಮಾದಲ್ಲಿ ಯೀಸ್ಟ್‌, ಬ್ಯಾಕ್ಟೀರಿಯಾ ಪತ್ತೆ

ಯೀಸ್ಟ್ ಮತ್ತು ಬ್ಯಾಕ್ಟೀರಿಯಾ ಬೆಳವಣಿಗೆಯಾಗಿರುವ ಶವರ್ಮಾವನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಯೋಗಾಲಯದ ವರದಿ ಆಧರಿಸಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ- 2006 ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ -2011 ಪ್ರಕಾರ ಪ್ರಕಾರ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿರುವ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಸುರಕ್ಷತಾ ಆಯುಕ್ತ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.

ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪ್ರತಿ ದಿನವೂ ತಾಜಾ ಮಾಂಸವನ್ನು ಖರೀದಿಸಿ ಶವರ್ಮಾ ತಯಾರಿಸುವಂತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಸೂಚಿಸಲಾಗಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು ಎಫ್ಎಸ್ಎಸ್ಎಐ ಅಡಿಯಲ್ಲಿ ನೋಂದಣಿ ಮಾಡಿಸಿ ಪರವಾನಗಿ ಪಡೆದುಕೊಳ್ಳಬೇಕು ಎಂದು ಆದೇಶ ಹೊರಡಿಸಲಾಗಿದೆ.

ಪಾನಿಪೂರಿ ಮಾದರಿಗಳಲ್ಲೂ ಅಪಾಯಕಾರಿ ರಾಸಾಯನಿಕ

ರಾಜ್ಯಾದ್ಯಂತ ಸಂಗ್ರಹಿಸಿದ 260 ಪಾನಿಪೂರಿ ಮಾದರಿಗಳಲ್ಲಿ 43 ಮಾದರಿಗಳಲ್ಲಿ ಕಾರ್ಸಿನೊಗೆಜಿಕ್‌ ರಾಸಾಯನಿಕಗಳು ಪತ್ತೆಯಾಗಿದ್ದು, ಗ್ರಾಹಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ. ನಿರಂತರವಾಗಿ ಪಾನಿಪೂರಿ ಸೇವಿಸುತ್ತಿದ್ದರೆ ಕರುಳಿನ ಕ್ಯಾನ್ಸರ್‌ ಮತ್ತು ಅಲ್ಸರ್‌ ತಗುಲುತ್ತದೆ. ಈ ವರ್ಷದ ಮಾರ್ಚ್‌ನಲ್ಲಿ ಗೋಬಿ ಮಂಚೂರಿ ಮತ್ತು ಕಾಟನ್‌ ಕ್ಯಾಂಡಿಯಲ್ಲಿ ಕೃತಕ ಬಣ್ಣಗಳನ್ನು ಸೇರ್ಪಡೆ ಮಾಡುವುದನ್ನು ನಿಷೇಧಿಸಲಾಗಿತ್ತು. ಎರಡು ವಾರಗಳ ಹಿಂದಷ್ಟೇ ಚಿಕನ್‌, ಫಿಶ್‌ ಮತ್ತು ಶಾಖಾಹಾರಿ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳನ್ನು ಸೇರ್ಪಡೆ ಮಾಡುವುದನ್ನು ಸರ್ಕಾರ ನಿಷೇಧಿಸಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ