ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಪ್ರಕರಣ; ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್, ಯಾರ ವಾದ ಏನಿತ್ತು
Aug 13, 2024 06:15 AM IST
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಪ್ರಕರಣ; ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್, ಯಾರ ವಾದ ಏನಿತ್ತು ಎಂಬುದರ ವಿವರ ವರದಿ.
ಡಿಸಿಎಂ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಹಿಂದಿನ ಬಿಜೆಪಿ ಸರ್ಕಾರ ತನಿಖೆಗೆ ಅನುಮತಿ ನೀಡಿದ್ದರೆ, ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಹಿಂಪಡೆದಿದೆ. ಇದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಇದಾಗಿದ್ದು, ಯಾರ ವಾದ ಏನಿತ್ತು ಎಂಬ ವಿವರ ಇಲ್ಲಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿರುವ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ದಾಖಲಾಗಿದ್ದ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.
28 ನವಂಬರ್ 2023ರಲ್ಲಿ ರಾಜ್ಯ ಸರ್ಕಾರ ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿತ್ತು. ಈ ಪ್ರಕರಣಗಳ ವಿಚಾರಣೆ ನಡೆಸಿದ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಸಿಬಿಐ ಮತ್ತು ಯತ್ನಾಳ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ವರ್ಗಾಯಿಸಿತ್ತು. ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅನಮತಿಯನ್ನು ವಾಪಸ್ ಪಡೆದಿತ್ತು.
ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ
ಈ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸಿಬಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪ್ರಸನ್ನ ಕುಮಾರ್ ರಾಜ್ಯ ಸರ್ಕಾರ ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದರೂ ಸಿಬಿಐ ದಾಖಲಿಸಿರುವ ಎಫ್‌ಐಆರ್ ಗಮನಾರ್ಹ ಸಂಗತಿಯಾಗಿದೆ ಎಂದು ವಾದಿಸಿದರು.
ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಸುಪ್ರೀಂ ಕೋರ್ಟ್ ವಕೀಲ ಕಪಿಲ್ ಸಿಬಲ್ ಸಿಬಿಐ ತನಿಖೆಗೆ ಸಮ್ಮತಿ ನೀಡುವ ವಿಚಾರದಲ್ಲಿ ನ್ಯಾಯಾಲಯಕ್ಕೆ ಸರ್ಕಾರ ವಂಚಿಸಿದೆ. ಇಲ್ಲಿ ಒಪ್ಪಿಗೆ ಪಡೆದಿರುವುದು ಮುಖ್ಯವಲ್ಲ. ಒಪ್ಪಿಗೆಯನ್ನು ಕಾನೂನು ಬಾಹಿರವಾಗಿ ನೀಡಲಾಗಿದೆ ಎನ್ನವುದು ಮುಖ್ಯ. ನಾವು ಒಕ್ಕೂಟ ವ್ಯವಸ್ತೆಯನ್ನು ಒಪ್ಪಿಕೊಂಡಿದ್ದೇವೆ. ಹಾಗಾಗಿ ಸರ್ಕಾರ ಕಾನೂನನ್ನು ತನಗಿಷ್ಟ ಬಂದ ಹಾಗೆ ಬಳಕೆ ಮಾಡುವುದನ್ನು ಒಪ್ಪಲಾಗದು. ಶಿವಕುಮಾರ್ ವಿರುದ್ಧ ದಾಖಲಾಗಿದ್ದ ಆದಾಯ ತೆರಿಗೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಈಗಾಗಲೇ ವಜಾಗೊಳಿಸಿದೆ ಎಂದರು.
ಇಷ್ಟಕ್ಕೂ ಸಿಬಿಐ ಸ್ವತಂತ್ರ ಸಂಸ್ಥೆ ಎಂದು ಹೇಳುವಂತಿಲ್ಲ. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಡಿಯಲ್ಲಿ ಬರುತ್ತದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸಿಬಿಐಗೆ ಮೌಖಿಕ ನಿರ್ದೇಶನ ನೀಡಿತ್ತು. ಈಗ ಸರ್ಕಾರ ಬದಲಾಗಿದೆ ಎಂದೂ ತಿಳಿಸಿದರು.
ಡಿಕೆ ಶಿವಕುಮಾರ್ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ಯತ್ನಾಳ್ ಪರ ವಕೀಲರ ವಾದ ವೇನು- ಏನಿದು ಪ್ರಕರಣ
ಯತ್ನಾಳ ಪರವಾಗಿ ವಾದ ಮಂಡಿಸಿದ ವೆಂಕಟೇಶ ಪಿ.ದಳವಾಯಿ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ಅಪರಾಧದ ತನಿಖೆ ನಡೆಸಲು ಸಿಬಿಐ ಸಂಪೂರ್ಣವಾಗಿ ಸ್ವಾತಂತ್ರ್ಯ ಹೊಂದಿರುತ್ತದೆ. ಇಲ್ಲಿ ಸಂವಿಧಾನದ 131ನೇ ವಿಧಿ ಅನ್ವಯ ಊರ್ಜಿತವಾಗಿರುವುದಿಲ್ಲ. ಒಮ್ಮೆ ಸಿಬಿಐ ಪ್ರಕರಣ ದಾಖಲಸಿದ ನಂತರ ಅದು ತಾರ್ಕಿಕ ಅಂತ್ಯ ಕಾಣಬೇಕು. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಪಾತ್ರ ಇರುವುದಿಲ್ಲ ಎಂದರು.
ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ ನಂತರ ನ್ಯಾಯಪೀಠ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದು ತೀರ್ಪನ್ನು ಕಾಯ್ದಿರಿಸಿದೆ. ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯ ಮೇರೆಗೆ ಸಿಬಿಐ 3,ಅಕ್ಟೋಬರ್ 2020ರಲ್ಲಿ ಪ್ರಕರಣ ದಾಖಲಿಸಿತ್ತು. 2013-2018ರ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಶಿವಕುಮಾರ್ ಅವರು ಆದಾಯಕ್ಕೂ ಮೀರಿ 74.93 ಕೋಟಿ ರೂ. ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ ಪ್ರಕರಣ ದಾಖಲಿಸಿತ್ತು. ಆದಾಯ ತೆರಿಗೆ ಇಲಾಖೆ ಸೆಪ್ಟಂಬರ್ 2019ರಲ್ಲಿ ಶಿವಕುಮಾರ್ ಅವರನ್ನು ಬಂಧಿಸಿತ್ತು.
(ವರದಿ- ಎಚ್.ಮಾರುತಿ, ಬೆಂಗಳೂರು)