ಬೆಂಗಳೂರಲ್ಲಿ ಇನ್ನು ನಂದಿನಿ ಇಡ್ಲಿ-ದೋಸೆ ಹಿಟ್ಟು ಕೂಡ ಸಿಗಲಿದೆ; ಐಡಿ, ಎಂಟಿಆರ್‌ಗೆ ಪೈಪೋಟಿ ನೀಡಲು ಕೆಎಂಎಫ್ ಸಿದ್ಧತೆ
Jun 26, 2024 07:30 AM IST
ಬೆಂಗಳೂರಲ್ಲಿ ಇನ್ನು ನಂದಿನಿ ಇಡ್ಲಿ-ದೋಸೆ ಹಿಟ್ಟು ಕೂಡ ಸಿಗಲಿದೆ; ಐಡಿ, ಎಂಟಿಆರ್‌ಗೆ ಪೈಪೋಟಿ ನೀಡಲು ಕೆಎಂಎಫ್ ಸಿದ್ಧತೆ (ಸಾಂಕೇತಿಕ ಚಿತ್ರ)
ಬೆಂಗಳೂರು ಜನ ಜೀವನದ ಧಾವಂತದ್ದು. ಕೆಲಸಕ್ಕೆ ಹೋಗುವವರ ಸಂಖ್ಯೆ ಹೆಚ್ಚು. ರೆಡಿ ಟು ಕುಕ್ ಸಿಕ್ಕರೆ ಬಹಳ ಖುಷಿ. ಐಡಿ, ಎಂಟಿಆರ್ ದೋಸೆ-ಇಡ್ಲಿ ಹಿಟ್ಟು ಜನಪ್ರಿಯವಾಗಿವೆ. ಇವುಗಳಿಗೆ ಪೈಪೋಟಿ ನೀಡಲು, ಬೆಂಗಳೂರಿಗರಿಗೆ ಇನ್ನು ನಂದಿನಿ ಇಡ್ಲಿ-ದೋಸೆ ಹಿಟ್ಟು ಕೂಡ ಸಿಗಲಿದೆ. ಎಂಟಿಆರ್‌ಗೆ ಪೈಪೋಟಿ ನೀಡಲು ಕೆಎಂಎಫ್ ಸಿದ್ಧತೆ ನಡೆಸಿದೆ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಇನ್ನು ನಂದಿನಿ ಹಾಲಷ್ಟೇ ಅಲ್ಲ, ದೋಸೆ ಮತ್ತು ಇಡ್ಲಿ ಹಿಟ್ಟು ಕೂಡ ಸಿಗಲಿದೆ. ಹೌದು, ನಂದಿನಿ ಬ್ರಾಂಡ್‌ನ ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಪರಿಚಯಿಸಲು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಸಿದ್ಧತೆ ನಡೆಸಿದೆ.
ಬೆಂಗಳೂರಿನಲ್ಲಿ ರೆಡಿ ಟು ಕುಕ್ ಮಾದರಿ ಹೆಚ್ಚು ಜನಪ್ರಿಯವಾಗುತ್ತಿದ್ದು, ಐಡಿ, ಅಸಲ್, ಎಂಟಿಆರ್ ಮುಂತಾದ ಕಂಪನಿಗಳ ದೋಸೆ, ಇಡ್ಲಿ ಹಿಟ್ಟುಗಳು ಈಗಾಗಲೇ ಚಾಲ್ತಿಯಲ್ಲಿವೆ. ಇವುಗಳಿಗೆ ಪೈಪೋಟಿ ನೀಡಲು ಕೆಎಂಎಫ್ ನಿರ್ಧರಿಸಿದ್ದು, ಶೀಘ್ರದಲ್ಲೇ ನಂದಿನಿ ಬ್ರಾಂಡ್‌ನ ರೆಡಿ ಟು ಕುಕ್ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.
ಇನ್ನೆರಡು ತಿಂಗಳಲ್ಲಿ ಬೆಂಗಳೂರು ಮಾರುಕಟ್ಟೆಗೆ ನಂದಿನಿ ದೋಸೆ, ಇಡ್ಲಿ ಹಿಟ್ಟು
ಬೆಂಗಳೂರು ಮಾರುಕಟ್ಟೆಗೆ ದೋಸೆ, ಇಡ್ಲಿ ಹಿಟ್ಟು ಪರಿಚಯಿಸುವ ವಿಚಾರವನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮನಿ ಕಂಟ್ರೋಲ್ ವರದಿ ಪ್ರಕಾರ, ಖಾಸಗಿ ಕಂಪನಿಗಳಾದ ಐಡಿ, ಅಸಲ್, ಎಂಟಿಆರ್ ಮುಂತಾದ ಕಂಪನಿಗಳ ರೆಡಿ ಟು ಕುಕ್ ದೋಸೆ, ಇಡ್ಲಿ ಹಿಟ್ಟುಗಳಿಗೆ ಪೈಪೋಟಿ ನೀಡಲು ನಂದಿನಿಯೂ ಮುಂದಾಗಿದೆ. ಎರಡು ತಿಂಗಳೊಳಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಜಗದೀಶ್ ಹೇಳಿರುವುದಾಗಿ ವರದಿ ವಿವರಿಸಿದೆ.
"ನಾವು ಈಗಾಗಲೇ ಹಾಲು, ಬ್ರೆಡ್, ಬನ್, ತುಪ್ಪ, ಬೆಣ್ಣೆ, ಮೊಸರು, ಚೀಸ್, ಮಜ್ಜಿಗೆ ಮತ್ತು ಮೊಸರು ಮುಂತಾದ ಉತ್ಪನ್ನಗಳನ್ನು ಹೊಂದಿದ್ದೇವೆ. ಈಗ ಇಡ್ಲಿ ಮತ್ತು ದೋಸೆ ಹಿಟ್ಟಿನ ಉತ್ಪನ್ನವನ್ನು ಪ್ರಾರಂಭಿಸಲು ಬಯಸುತ್ತೇವೆ. ಹೆಚ್ಚಿನ ದುಡಿಯುವ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನಲ್ಲಿ ವಿಶೇಷವಾಗಿ ತ್ವರಿತ ಉಪಹಾರ ಆಯ್ಕೆಗಳನ್ನು ಹುಡುಕುತ್ತಿರುವ ಟೆಕ್ಕಿಗಳನ್ನು ಗಮನದಲ್ಲಿರಿಸಿಕೊಂಡು ಈ ಉತ್ಪನ್ನಗಳು ಪರಿಚಯಿಸಲಾಗುತ್ತಿದೆ" ಎಂದು ಜಗದೀಶ್ ತಿಳಿಸಿದ್ದಾಗಿ ವರದಿ ಹೇಳಿದೆ.
"ಈಗಾಗಲೇ ಮಾರುಕಟ್ಟೆಯಲ್ಲಿರುವ ಕಂಪನಿಗಳ ದೋಸೆ, ಇಡ್ಲಿ ಹಿಟ್ಟಿಗಿಂತ ಭಿನ್ನವಾಗಿ, ರುಚಿಯನ್ನು ಸುಧಾರಿಸಲು ನಂದಿನಿ ದೋಸೆ ಮತ್ತು ಇಡ್ಲಿ ಹಿಟ್ಟಿಗೆ ಹಾಲೊಡಕು ಪ್ರೋಟೀನ್ ಪುಡಿಯನ್ನೂ ಸೇರಿಸಲಾಗುತ್ತಿದೆ. ಇದು ಸ್ವಾದವನ್ನು ಹೆಚ್ಚಿಸುವುದಲ್ಲದೆ, ಪೌಷ್ಟಿಕಾಂಶದಿಂದಲೂ ಕೂಡಿರಲಿದೆ. ಈಗಾಗಲೇ ಪ್ರಯೋಗಗಳನ್ನು ನಡೆಸಿದ್ದೇವೆ ಮತ್ತು ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ ”ಎಂದು ಅವರು ಹೇಳಿದ್ಧಾರೆ.
ದೋಸೆ ಹಿಟ್ಟು, ಇಡ್ಲಿ ಹಿಟ್ಟು ತಯಾರಿಕೆಗೆ ಟೆಂಡರ್ ಕರೆದ ಕೆಎಂಎಫ್
ಹಿಟ್ಟು ತಯಾರಿಕೆ ಮತ್ತು ಪೂರೈಕೆಗಾಗಿ ಕೆಎಂಎಫ್ ಇತ್ತೀಚೆಗೆ ಟೆಂಡರ್ ಕರೆದಿತ್ತು. ಆರಂಭದಲ್ಲಿ ಕೇವಲ ಒಂದು ಬಿಡ್ ಪಡೆದಿದ್ದರೂ, ಜುಲೈ ವೇಳೆಗೆ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ನಿರೀಕ್ಷೆಯಲ್ಲಿ ಕೆಎಂಎಫ್ ಮತ್ತೊಮ್ಮೆ ಟೆಂಡರ್ ಕರೆದಿದೆ. ಟೆಂಡರ್‌ಗೆ ಅರ್ಜಿ ಸಲ್ಲಿಸುವ ಸಂಸ್ಥೆ ಬೆಂಗಳೂರು ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸಬೇಕು. ಎಫ್‌ಎಸ್‌ಎಸ್‌ಎಐ ಪರವಾನಗಿ ಹೊಂದಿದ್ದು, ಚಾಲ್ತಿಯಲ್ಲಿರುವ ದರಗಳಲ್ಲಿ ಕೆಎಂಎಫ್‌ನಿಂದ ಹಾಲೊಡಕು ಪ್ರೋಟೀನ್ ಅನ್ನು ಸಂಯೋಜಿಸಬೇಕು ಎಂಬುದು ಬಿಡ್‌ದಾರರಿಗೆ ವಿಧಿಸಲಾಗಿರುವ ಷರತ್ತುಗಳು. ಹಾಲೊಡಕು ಪುಡಿಯನ್ನು ಹೊರತುಪಡಿಸಿ ಎಲ್ಲ ಕಚ್ಚಾ ವಸ್ತುಗಳನ್ನು ಸೋರ್ಸಿಂಗ್ ಮಾಡುವುದು, ಉತ್ಪಾದನೆ ಮತ್ತು ಪ್ಯಾಕೇಜಿಂಗ್‌ನಲ್ಲಿ ಕೆಎಂಎಫ್ ಮಾನದಂಡಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿದೆ.
"ಟೆಂಡರ್‌ಗೆ ಒಂದೇ ಒಂದು ಸಂಸ್ಥೆ ಪ್ರತಿಕ್ರಿಯಿಸಿದೆ. ಹೀಗಾಗಿ ವರ್ಕ್ ಆರ್ಡರ್ ನೀಡುವುದು ಸಾಧ್ಯವಾಗಿಲ್ಲ. ಆದ್ದರಿಂದ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ. ಈ ಬಾರಿ ನಾವು ಸಂಸ್ಥೆಗೆ ಟೆಂಡರ್ ನೀಡಲಿದ್ದೇವೆ ಎಂದು ಜಗದೀಶ್ ಅವರು ತಿಳಿಸಿದ್ದಾಗಿ ವರದಿ ಹೇಳಿದೆ.
ದೋಸೆ, ಇಡ್ಲಿ ಹಿಟ್ಟು 450 ಗ್ರಾಂ ಮತ್ತು 900 ಗ್ರಾಂ ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಬರಲಿದ್ದು, ವಾರ್ಷಿಕ 109,000 ಕೆಜಿ ಉತ್ಪಾದನೆಯನ್ನು ಗುರಿಯಾಗಿರಿಸಿಕೊಂಡಿದೆ. ದೋಸೆ, ಇಡ್ಲಿ ಹಿಟ್ಟುಗಳ ದರ ಎಷ್ಟು ಎಂಬುದು ಇನ್ನೂ ನಿಗದಿಯಾಗಿಲ್ಲ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.