Lorry Strike: ಹಿಟ್ ಆಂಡ್ ರನ್ ಕಾನೂನು ವಿರೋಧಿಸಿ ಕರ್ನಾಟಕದಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ
Jan 17, 2024 09:57 AM IST
ಕರ್ನಾಟಕದ ಟ್ರಕ್ ಚಾಲಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. (ಸಾಂಕೇತಿಕ ಚಿತ್ರ)
Lorry Strike Karnataka Latest news: ಕರ್ನಾಟಕದಲ್ಲಿ ಇಂದಿನಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಶುರುವಾಗಿದೆ. ಕೇಂದ್ರ ಸರ್ಕಾರವು ಭಾರತೀಯ ನ್ಯಾಯ ಸಂಹಿತೆಯ ಮೂಲಕ ಜಾರಿಗೊಳಿಸಲು ಉದ್ದೇಶಿಸಿದ ಹಿಟ್ ಆಂಡ್ ರನ್ ಕಾನೂನು ಅಂಶಗಳು ಲಾರಿ, ಟ್ರಕ್ ಮತ್ತು ದೊಡ್ಡ ವಾಹನಗಳ ಚಾಲಕರ ವಿರುದ್ಧ ಏಕಪಕ್ಷೀಯ ಧೋರಣೆ ಹೊಂದಿದೆ ಎಂಬುದು ಮುಷ್ಕರ ನಿರತರ ಆರೋಪ.
ಕೇಂದ್ರ ಸರ್ಕಾರದ ಹೊಸ ಹಿಟ್ ಆಂಡ್ ರನ್ ಕಾನೂನು (ಗುದ್ದೋಡು ಕಾನೂನು) ವಿರೋಧಿಸಿ ಕರ್ನಾಟಕದಲ್ಲಿ ಲಾರಿ ಚಾಲಕರು, ಮಾಲೀಕರು ಇಂದಿನಿಂದ (ಜ.17) ಅನಿರ್ದಿಷ್ಟಾವಧಿ ಮುಷ್ಕರ ಶುರುಮಾಡಿದ್ದಾರೆ.
ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಿ.ಚನಾ ರೆಡ್ಡಿ ಮತ್ತು ಅಧ್ಯಕ್ಷ ಸಿ.ನವೀನ್ ರೆಡ್ಡಿ ಈ ಹಿಂದೆ ಜನವರಿ 7ರಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು.
ಈ ಅವೈಜ್ಞಾನಿಕ ಕಾನೂನಿನ ಬಗ್ಗೆ ಕೇಂದ್ರ ಸರ್ಕಾರ ನಮ್ಮನ್ನು ಚರ್ಚೆಗೆ ಕರೆದರೂ ಅಧಿಕಾರಿಗಳು ಲಿಖಿತವಾಗಿ ಏನನ್ನೂ ನೀಡಿಲ್ಲ. ಇದು ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವಾಗಿದ್ದು, ಇಂತಹ ಆತುರದ ನಿರ್ಧಾರಕ್ಕೆ ಬರುವ ಮುನ್ನ ಅವರು ನಮ್ಮನ್ನು ಸಂಪರ್ಕಿಸಿಲ್ಲ. ಆದ್ದರಿಂದಲೇ ಜ.17ರಿಂದ ಅನಿರ್ದಿಷ್ಟಾವಧಿ ಮುಷ್ಕರ ಶುರುಮಾಡುತ್ತಿರುವುದಾಗಿ ನವೀನ್ ರೆಡ್ಡಿ ಜನವರಿ 7ರಂದು ಹೇಳಿದ್ದರು.
ಈಗಾಗಲೇ ರಾಜ್ಯದ ಎಲ್ಲ ಟ್ರಕ್ ಚಾಲಕರಿಗೆ ಮುಷ್ಕರದ ವಿಚಾರ ಮನವರಿಕೆ ಮಾಡಿಕೊಡಲಾಗಿದೆ. ಭಾರಿ ವಾಹನಗಳು ಜನವರಿ 17 ರಿಂದ ಸಂಚಾರ ಸ್ಥಗಿತಗೊಳಿಸಲಿವೆ ಎಂದು ನವೀನ್ ರೆಡ್ಡಿ ಹೇಳಿದ್ದಾಗಿ ಹಲವು ಮಾಧ್ಯಮ ವರದಿಗಳು ಹೇಳಿವೆ.
ಹಿಟ್ ಆಂಡ್ ರನ್ ಹೊಸ ಕಾನೂನನ್ನು ಲಾರಿ ಚಾಲಕರು ವಿರೋಧಿಸುವುದೇಕೆ
ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ, ಹೊಸ ಗುದ್ದೋಡು (ಹಿಟ್ ಆಂಡ್ ರನ್) ಕಾನೂನು ಬಹಳ ಕಠಿಣ. ಇದು ರಸ್ತೆಗಳಲ್ಲಿ ಸಂಚರಿಸುವ ದೊಡ್ಡ ವಾಹನಗಳ ವಿರುದ್ಧ ಪಕ್ಷಪಾತ ಧೋರಣೆ ಹೊಂದಿದೆ ಎಂಬುದು ಟ್ರಕ್ ಚಾಲಕರ, ಲಾರಿ ಚಾಲಕರ ತೀವ್ರ ಅಸಮಾಧಾನಕ್ಕೆ ಕಾರಣ.
ಹೊಸ ಗುದ್ದೋಡು ಕಾನೂನು (Hit And Run Law) ಹೇಳುವುದೇನು: ಹೊಸ ಹಿಟ್ ಆಂಡ್ ರನ್ ಕಾನೂನು ಅನ್ನು ಭಾರತೀಯ ನ್ಯಾಯ ಸಂಹಿತೆಯಲ್ಲಿ ಸೆಕ್ಷನ್ 104ರಲ್ಲಿ ಸೇರಿಸಲಾಗಿದೆ. ಇದು ನಿರ್ಲಕ್ಷ್ಯದಿಂದ ಆಗುವ ಸಾವಿನ ಕಾರಣಕರ್ತರಿಗೆ ಶಿಕ್ಷಾರ್ಹ ಅಪರಾಧ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಭಾರತೀಯ ದಂಡ ಸಂಹಿತೆಯ ಜಾಗ ತುಂಬಲು ಸಿದ್ಧವಾಗಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ, ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರ ರಸ್ತೆ ಅಪಘಾತಗಳನ್ನು ಉಂಟುಮಾಡುವ ಮತ್ತು ಅಧಿಕಾರಿಗಳಿಗೆ ತಿಳಿಸದೆ ಓಡಿಹೋದ ಚಾಲಕರಿಗೆ 10 ವರ್ಷಗಳ ಜೈಲು ಅಥವಾ 7 ಲಕ್ಷ ರೂಪಾಯಿ ದಂಡ ವಿಧಿಸುವ ಅಂಶವಿದೆ. ಇಂತಹ ಪ್ರಕರಣಗಳಲ್ಲಿ ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ (ಐಪಿಸಿ)ಯಲ್ಲಿ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು.
ಈ ತಿಂಗಳ ಆರಂಭದಲ್ಲಿ, ಹೊಸ ನಿಬಂಧನೆಗಳನ್ನು ವಿರೋಧಿಸಿ ಮಹಾರಾಷ್ಟ್ರ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಹಲವಾರು ಇತರ ರಾಜ್ಯಗಳ ಚಾಲಕರು ಮುಷ್ಕರ ನಡೆಸಿದ್ದರು. ಬ್ರಿಟಿಷ್ ಆಳ್ವಿಕೆಯ ನಿಯಮವನ್ನೇ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.
ಈ ವಿದ್ಯಮಾನದಿಂದ ವಿಚಲಿತರಾದ ಜನ ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದು, ಪೆಟ್ರೋಲ್, ಡೀಸೆಲ್ ದಾಸ್ತಾನು ಮಾಡಲು ಹೊರಟ ಘಟನೆಗಳೂ ವರದಿಯಾಗಿದ್ದವು. ಇದಲ್ಲದೇ, ಸಗಟು ಮಾರುಕಟ್ಟೆಗೆ ತರಕಾರಿ ಪೂರೈಕೆ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗಿತ್ತು. ದೆಹಲಿಯಲ್ಲಿ ಇದರಿಂದಾಗಿ ತರಕಾರಿ ಬೆಲೆ ಶೇಕಡ 10-15ರಷ್ಟು ಏರಿಕೆಯಾಗಿತ್ತು ಎಂದು ಪಿಟಿಐ ವರದಿ ಮಾಡಿತ್ತು.
ಏತನ್ಮಧ್ಯೆ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರೊಂದಿಗಿನ ಜನವರಿ 2 ರ ಸಭೆಯ ನಂತರ, ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (ಎಐಎಂಟಿಸಿ) ಹೊಸ ಹಿಟ್ ಮತ್ತು ರನ್ ಕಾನೂನಿನ ವಿರುದ್ಧ ರಾಷ್ಟ್ರವ್ಯಾಪಿ ಟ್ರಕ್ ಚಾಲಕರ ಪ್ರತಿಭಟನೆಯನ್ನು ಕೊನೆಗೊಳಿಸಲು ನಿರ್ಧರಿಸಿತು. ಹೊಸ ಕಾನೂನುಗಳು ಇನ್ನೂ ಜಾರಿಗೆ ಬಂದಿಲ್ಲ ಮತ್ತು ಎಐಎಂಟಿಸಿಯೊಂದಿಗೆ ಸಮಾಲೋಚಿಸಿದ ನಂತರವೇ ಜಾರಿಗೆ ತರಲಾಗುವುದು ಎಂದು ಸರ್ಕಾರ ಸಾರಿಗೆ ಸಂಸ್ಥೆಯ ಸದಸ್ಯರಿಗೆ ಭರವಸೆ ನೀಡಿದ ಕಾರಣ ಮುಷ್ಕರ ಹಿಂಪಡೆದಿದ್ದರು.