KSRTC News: ಸಂಚರಿಸಲಿವೆ ಫೋಟೋ ಟೈಪ್, ಲಗ್ಗೇಜ್ ಸಾಗಿಸುವ ಕೆಎಸ್‌ಆರ್‌ಟಿಸಿ ಹೊಸ ಬಸ್‌ಗಳು
Aug 22, 2023 05:20 PM IST
ಹೊಸ ಕೆಎಸ್‌ಆರ್‌ಟಿಸಿ ಬಸ್‌ಗಳು ಮುಂದಿನ ತಿಂಗಳು ರಸ್ತೆಗೆ ಇಳಿಯಲಿದ್ದು. ಅವುಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲಿಸಿದರು.
- Ksrtc New Buses ಕರ್ನಾಟಕ ಜನರ ನಿತ್ಯದ ಸಂಗಾತಿ ಕೆಎಸ್‌ಆರ್‌ಟಿಸಿ ಹೊಸ ಸ್ವರೂಪದ ಬಸ್‌ಗಳನ್ನು ಪರಿಚಯಿಸಲು ಮುಂದಾಗಿದೆ. ಸದ್ಯದಲ್ಲೆ ಜನರ ಸೇವೆಗೆ ಈ ಬಸ್‌ಗಳು ಲಭ್ಯವಾಗಲಿವೆ.
ಬೆಂಗಳೂರು: ಮಹಿಳೆಯರ ಶಕ್ತಿ ಯೋಜನೆ ಮೂಲಕ ಇನ್ನಷ್ಟು ಜನಪ್ರಿಯ ಹಾಗೂ ಜನಮುಖಿಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(KSRTC)ಯು ಪ್ರಯಾಣಿಕರ ಸುಖಕರ ಸಂಚಾರಕ್ಕೆ ಹೊಸ ರೂಪದ ಬಸ್‌ಗಳನ್ನು ಪರಿಚಯಿಸಲು ಮುಂದಾಗಿದೆ.
ಈಗ ಬಳಕೆಯಾಗಲಿರುವುದು ಹೊಸ ಮಾದರಿಯ ಪಾಯಿಂಟ್ ಟು ಪಾಯಿಂಟ್ ಫೋಟೋ ಟೈಪ್ ಬಸ್‌ಗಳು . ಬಕೆಟ್ ಟೈಪ್ ಮಾದರಿಯ ಪ್ರಯಾಣಿಕರ ಆಸನ, ವಿಶಾಲವಾದ ಲಗ್ಗೇಜ್ ಕ್ಯಾರಿಯರ್ ಹೊಂದಿರುವ ಬಸ್‌ಗಳಿವು. ಒಂದು ತಿಂಗಳಲ್ಲಿ ಹೊಸ ಬಸ್ ಗಳು ಪ್ರಯಾಣಿಕರ ಸೇವೆಗೆ ರಸ್ತೆಗೆ ಇಳಿಯಲಿವೆ ಎನ್ನುವುದು ಕೆಎಸ್‌ಆರ್‌ಟಿಸಿ ನೀಡಿರುವ ವಿವರಣೆ.
ಹೊಸತನದ ಸಾರಿಗೆ
ಇಡೀ ದೇಶದಲ್ಲಿ ಅತ್ತುತ್ತಮ ಸಾರಿಗೆ ಎಂಬ ಖ್ಯಾತಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ ಆರ್ ಟಿ ಸಿ ಗೆ ಸಲ್ಲಬೇಕು. ವಿವಿಧ ರಾಜ್ಯಗಳ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಸಂಚಾರ ಮಾಡಿರುವವರಿಗೆ ಅನುಭವಕ್ಕೆ ಬಂದಿರುತ್ತದೆ. ಪ್ರತಿ ವರ್ಷ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂಬ ಪ್ರಶಸ್ತಿ ರಾಜ್ಯಕ್ಕೆ ಕಟ್ಟಿಟ್ಟ ಬುತ್ತಿ. ಮೊದಲ ಬಾರಿಗೆ ವೋಲ್ವೋ ಹವಾನಿಯಂತ್ರಿತ ಬಸ್ಸುಗಳನ್ನು ಪರಿಚಯಿಸಿದ್ದು ಕೆ ಎಸ್ ಆರ್ ಟಿಸಿ. ರಾಜಹಂಸ, ಶೀತಲ್, ಮಯೂರ, ಮೇಘದೂತ, ಐರಾವತ ಮತ್ತು ಅಂಬಾರಿ ಬಸ್ ಗಳಲ್ಲಿ ಪ್ರಯಾಣಿಸುವುದು ಒಂದು ವಿಶಿಷ್ಟ ಅನುಭವ ನೀಡುತ್ತದೆ. ಎಂಟು ರಾಜ್ಯಗಳಲ್ಲಿ ಕೆಎಸ್ಆರ್‌ಟಿಸಿ ಬಸ್ ಗಳು ಸಂಚರಿಸುತ್ತವೆ.
ಪಾಯಿಂಟ್ ಟು ಪಾಯಿಂಟ್
ಇದೀಗ ನಿಗಮದ ವತಿಯಿಂದ ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ಕಾರ್ಯಾಚರಣೆಗೆ ಕರ್ನಾಟಕ ಸಾರಿಗೆ ಫೋಟೋ ಟೈಪ್ ವಾಹನ ಗಳನ್ನು ಪರಿಚಯಿಸುತ್ತಿದೆ.
ಇದರ ವೈಶಿಷ್ಠ್ಯಗಳೆಂದರೆ ವಾಹನದ ಎತ್ತರ- 3420 ಮಿ.ಮಿ. ಇರುತ್ತದೆ. 52 ಆಸನಗಳಿದ್ದು, ಬಕೆಟ್ ಟೈಪ್ ಮಾದರಿಯ ಪ್ರಯಾಣಿಕರ ಆಸನ ಇರುತ್ತದೆ. ವಾಹನದ ಮುಂದಿನ ಮತ್ತು ಹಿಂದಿನ ಗಾಜು ವಿಶಾಲವಾಗಿರುತ್ತದೆ. ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜುಗಳೂ ವಿಶಾಲವಾಗಿರುತ್ತವೆ. ಆಸನಗಳ ಮಧ್ಯೆ (leg space) ಸ್ಥಳಾವಕಾಶವನ್ನು ಹೆಚ್ಚಿಸಲಾಗಿದೆ.
ದೊಡ್ಡದಾದ ಟಿಂಟೆಡ್ ಕಿಟಕಿ ಗಾಜು ಗಳಾಗಿದ್ದು, ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ವಿನೂತನ ವಿನ್ಯಾಸ ಹೊಂದಿದೆ. ಬಸ್ ನ ಒಳಗೆ ಸತತವಾಗಿ ಉರಿಯುವ ಎಲ್.ಇ. ಡಿ. ದೀಪ ಅಳವಡಿಸಲಾಗಿದೆ. ಹಿಂದಿನ ಮುಂದಿನ ಮಾರ್ಗವನ್ನು ಸೂಚಿಸುವ ಎಲ್.ಇ.ಡಿ ಮಾರ್ಗ ಫಲಕವನ್ನು ಅಳವಡಿಸಲಾಗಿದೆ. ಇನ್ಸುಲೇಶನ್ ಮತ್ತು ರೆಕ್ಸಿನ್ ಪ್ಯಾಡಿಂಗ್ ಬಾನೆಟ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಬಾಗಿಲು ಸ್ವಯಂಚಾಲಿತ ಸೆನ್ಸಾರ್ ಮತ್ತು ತುರ್ತು ಬಟನ್ ವ್ಯವಸ್ಥೆ ಅಳವಡಿಸಲಾಗಿದೆ.
ವಾಹನದ ಮುಂಭಾಗ ವಿನೂತನ ಆರ್ಕಷಕ ವಿನ್ಯಾಸ ದೊಡ್ಡ ಗ್ಲಾಸ್ ಅಳವಡಿಸಲಾಗಿದೆ. ಲಗ್ಗೇಜ್ ಕ್ಯಾರಿಯರ್ ವಿಶಾಲವಾಗಿದ್ದು, ಒಳ ಭಾಗದಲ್ಲಿ ಹೆಚ್ಚು ಎತ್ತರವಾಗಿದ್ದು, ಹೆಚ್ಚಿನ ಸಾಮಗ್ರಿಗಳನ್ನು ಸಾಗಿಸಬಹುದಾಗಿದೆ . ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ಕಾರ್ಯಾಚರಣೆಗೆ ಈ ಬಸ್ ಗಳನ್ನು ನಿಯೋಜಿಸಲಾಗುತ್ತದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ .
ಸಚಿವರ ಪರಿಶೀಲನೆ
ಸಾರಿಗೆ ಮತ್ತು ಮುಜರಾಯಿ ಸಚಿವ ಹಾಗೂ ಕರಾರಸಾ ನಿಗಮದ ಅಧ್ಯಕ್ಷರಾದ ರಾಮಲಿಂಗಾರೆಡ್ಡಿ ಅವರು ಫೋಟೋ ಟೈಪ್ ವಾಹನ ವಿನ್ಯಾಸವನ್ನು ಪರಿಶೀಲಿಸಿದರು.
ಪ್ರಸ್ತುತ ಪರಿಶೀಲಿಸಲಾದ ಪ್ರೋಟೋ ಟೈಪ್ ವಾಹನವು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ವಾಹನವನ್ನಾಗಿ ಉಪಯೋಗಿಸಲಿದ್ದು, ಮುಂಬರುವ ಎಲ್ಲಾ ಹೊಸ ಬಸ್ಸುಗಳು ಈ ರೀತಿಯ ವಿನ್ಯಾಸವನ್ನು ಹೊಂದಲಿವೆ ಎನ್ನುವುದು ಸಚಿವರ ಅಭಿಪ್ರಾಯ.
ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ವಾಹನಗಳನ್ನು ಕಾರ್ಯಾಚರಣೆಗೊಳಿಸಿ, ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಎಲ್ಲಾ ಬದಲಾವಣೆಗಳನ್ನು ತರಲಾಗಿದೆ ಹಾಗೂ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಒಂದು ತಿಂಗಳ ಅವಧಿಯಲ್ಲಿ ಹೊಸ ಬಸ್ಸುಗಳು ಬರಲಿವೆ. ಎಲ್ಲಾ ಹೊಸ ವಾಹನಗಳು ಈ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುದು ಸಚಿವ ರಾಮಲಿಂಗಾರೆಡ್ಡಿ ಅವರ ಸ್ಪಷ್ಟನೆ.
(ವರದಿ: ಎಚ್. ಮಾರುತಿ)