logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಬೊನ್ಸಾಯ್‌ ಗಿಡಗಳ ವೀಕ್ಷಣೆಗೆ ಜೂನ್‌ನಿಂದ ಮತ್ತೆ ಅವಕಾಶ; 150 ಹೊಸ ತಳಿಗಳ ಸೇರ್ಪಡೆ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಬೊನ್ಸಾಯ್‌ ಗಿಡಗಳ ವೀಕ್ಷಣೆಗೆ ಜೂನ್‌ನಿಂದ ಮತ್ತೆ ಅವಕಾಶ; 150 ಹೊಸ ತಳಿಗಳ ಸೇರ್ಪಡೆ

HT Kannada Desk HT Kannada

Feb 18, 2024 02:29 PM IST

google News

ಲಾಲ್‌ಬಾಗ್‌

    • ಕಳೆದೆರಡು ವರ್ಷಗಳಿಂದ ಲಾಲ್‌ಬಾಗ್‌ನಲ್ಲಿ ಬೊನ್ಸಾಯ್ ಗಾರ್ಡನ್ ವೀಕ್ಷಿಸುವ ಅವಕಾಶ ಇರಲಿಲ್ಲ. ಬೊನ್ಸಾಯ್ ತೋಟವನ್ನು ವಿಸ್ತರಿಸುವ ಮತ್ತು ಮತ್ತಷ್ಟು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ 2022ರ ಜೂನ್‌ನಿಂದ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಇದೀಗ ಈ ಗಾರ್ಡನ್ ಅನ್ನು ಸಿದ್ದಪಡಿಸಲಾಗಿದ್ದು, ಜೂನ್‌ನಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಲಿದೆ. (ವರದಿ: ಎಚ್‌. ಮಾರುತಿ)
ಲಾಲ್‌ಬಾಗ್‌
ಲಾಲ್‌ಬಾಗ್‌ (Wikipedia)

ಬೆಂಗಳೂರು: ಬೊನ್ಸಾಯ್‌ ಗಿಡಗಳು ನೋಡಲು ಕುಬ್ಜವಾಗಿದ್ದರೂ, ಮನೆಯ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಜಪಾನ್ ಮೂಲದ ಈ ತೋಟಗಾರಿಕಾ ಕಲೆ ಈಗ ವಿಶ್ವದಾದ್ಯಂತ ವಿಸ್ತರಿಸಿದೆ. ಬೆಂಗಳೂರಿನಲ್ಲೂ ಅನೇಕ ಹವ್ಯಾಸಿಗಳು ಈ ಕಲೆಯಲ್ಲಿ ಪರಿಣಿತಿ ಪಡೆದಿದ್ದಾರೆ ಮತ್ತು ಕಲಿಸಿಕೊಡುತ್ತಿದ್ದಾರೆ. ನಗರದಲ್ಲಿ ಅತಿ ಹೆಚ್ಚು ಬೊನ್ಸಾಯ್ ಗಿಡಗಳಿರುವ ಸ್ಥಳ ಎಂದರೆ ಲಾಲ್‌ಬಾಗ್. ಇಲ್ಲಿಗೆ ಭೇಟಿ ನೀಡುವವರು ನೈಸರ್ಗಿಕ ಮರ ಗಿಡಗಳನ್ನು ನೋಡುವುದರ ಜೊತೆಗೆ ಈ ಬೊನ್ಸಾಯ್ ಗಿಡಗಳ ಅಂದವನ್ನೂ ಕಣ್ತುಂಬಿಕೊಳ್ಳಬಹುದು.

ಕಳೆದ ಎರಡು ವರ್ಷಗಳಿಂದ ಲಾಲ್‌ಬಾಗ್‌ಗೆ ಭೇಟಿ ನೀಡಿದವರಿಗೆ ಬೊನ್ಸಾಯ್ ಗಾರ್ಡನ್ ವೀಕ್ಷಿಸುವ ಅವಕಾಶ ಇರಲಿಲ್ಲ. ಬೊನ್ಸಾಯ್ ತೋಟವನ್ನು ವಿಸ್ತರಿಸುವ ಮತ್ತು ಮತ್ತಷ್ಟು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ 2022ರ ಜೂನ್‌ನಿಂದ ಸಾರ್ವಜನಿಕರಿಗೆ ಪ್ರವೇಶ ಇರಲಿಲ್ಲ. ಇದೀಗ ಈ ಗಾರ್ಡನ್ ಅನ್ನು ಸಿದ್ದಪಡಿಸಲಾಗಿದ್ದು, ಕೆಲವೇ ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

ಹಾಲಿ ಇರುವ 120ಕ್ಕೂ ಹೆಚ್ಚು ಬೊನ್ಸಾಯ್ ಗಿಡಗಳ ಈ ತೋಟಕ್ಕೆ ಹೊಸದಾಗಿ ಮತ್ತಷ್ಟು ಬೊನ್ಸಾಯ್ ಗಿಡ ಮರಗಳನ್ನು ಸೇರ್ಪಡೆ ಮಾಡಲಾಗುತ್ತಿದೆ.

ಲಾಲ್‌ಬಾಗ್ ತೋಟಗಾರಿಕಾ ವಿಭಾಗದ ಉಪ ನಿರ್ದೇಶಕಿ ಜಿ. ಕುಸುಮಾ ʼಬೊನ್ಸಾಯ್ ತೋಟವನ್ನು ವೈಜ್ಞಾನಿಕವಾಗಿ ಆಧುನೀಕರಣಗೊಳಿಸಲಾಗಿದೆ. ಅನೇಕ ಬೊನ್ಸಾಯ್ ಗಿಡಗಳನ್ನು ಕೊಲ್ಕತ್ತಾದಿಂದ ತರಿಸಲಾಗಿದ್ದರೆ ಕುಂಡಗಳನ್ನು ಮುಂಬೈನಿಂದ ತರಿಸಲಾಗಿದೆ. ಇಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸುವುದರ ಜೊತೆಗೆ ಗಿಡಗಳನ್ನು ಬೆಳಸುವುದು, ಅವುಗಳನ್ನು ಹೊಸ ಪಾಟ್‌ಗೆ ಸ್ಥಳಾಂತರಿಸುವುದು ಮೊದಲಾದ ಕಾರ್ಯಗಳು ಪೂರ್ಣಗೊಂಡಿವೆʼ ಎಂದು ತಿಳಿಸಿದ್ದಾರೆ.

ಬೊನ್ಸಾಯ್ ಗಿಡಗಳನ್ನು ಬೆಳಸಲೆಂದೇ ಪ್ರತ್ಯೇಕ ಸ್ಟುಡಿಯೊ ಸ್ಥಾಪಿಸಿದ್ದು, ನಿರಂತರವಾಗಿ ಗಿಡಗಳನ್ನು ಬೆಳೆಸಲು ಮತ್ತು ಬೊನ್ಸಾಯ್ ವೃತ್ತಿಯನ್ನು ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಆಗಸ್ಟ್ 2023 ರಿಂದ ಈ ತೋಟಕ್ಕೆ ಸುಮಾರು 40 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಇದರ ಜೊತೆಗೆ ಮತ್ತೆ 30 ಲಕ್ಷ ರೂ ಗಳ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಸ್ತುತ ಇಲ್ಲಿ 120 ವಿವಿಧ ಬೊನ್ಸಾಯ್ ಗಿಡಗಳಿದ್ದು, ಹೆಚ್ಚುವರಿಯಾಗಿ 150 ಗಿಡಗಳನ್ನು ಬೆಳೆಸುವ ಉದ್ದೇಶವಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಕೇವಲ ಮನರಂಜನೆ ಅಥವಾ ಉಲ್ಲಾಸ ಈ ತೋಟದ ವಿಸ್ತರಣೆಯ ಉದ್ದೇಶ ಅಲ್ಲ. ಶಿಕ್ಷಣ ನೀಡುವುದೂ ಆಗಿದೆ. ವೈಜ್ಞಾನಿಕ ಮಾಹಿತಿಯ ಜೊತೆಗೆ ಸೌಂದರ್ಯವನ್ನು ಹರಡುವುದೂ ಆಗಿದೆ. ಜೂನ್‌ನಿಂದ ಮತ್ತೊಮ್ಮೆ ಬೊನ್ಸಾಯ್ ತೋಟ ವೀಕ್ಷರಿಗೆ ಮುಕ್ತವಾಗಲಿದೆ.

ಬೋನ್ಸಾಯ್ ಎಂದರೆ...

ಕುಬ್ಜವಾಗಿ ಮರಗಳನ್ನು ಬೆಳೆಸುವುದೇ ಬೋನ್ಸಾಯ್ ಕಲೆ. ಭೂಮಿಯ ಎಕರೆಗಟ್ಟಲೆ ಜಾಗ ಆಕ್ರಮಿಸುವ ಆಲ, ಅರಳಿ ಮರಗಳು ಬೋನ್ಸಾಯ್ ಮೂಲಕ ಅತೀ ಕುಬ್ಜವಾಗಿ ಹೆಚ್ಚೆಂದರೆ ಒಂದೂವರೆ ಮೊಳದಷ್ಟು ಉದ್ದ ಬೆಳೆಯುತ್ತವೆ. ಚೀನಿಯರ ಜಗತ್ಪ್ರಸಿದ್ಧ ಕಲೆ ಬೋನ್ಸಾಯ್ ಕಲೆಯ ಫಲಶ್ರುತಿ. ಬೋನ್ಸಾಯ್ ಎನ್ನುವುದು ಸಸ್ಯಶಾಸ್ತ್ರದ ಅದ್ಭುತ ವಿಭಾಗ. ಅಚ್ಚರಿ ಮತ್ತು ಬೆರಗು ಮೂಡಿಸುವ ಕೌತುಕ. ಇಂತಹ ಬೋನ್ಸಾಯ್ ಗಿಡಗಳ ಬಗೆಗಿನ ಅಚ್ಚರಿಯ ಸಂಗತಿಯೆಂದರೆ ಇವು ಒಂದು ಶತಮಾನ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಬದುಕಬಲ್ಲವು.

ಬೋನ್ಸಾಯ್ ಕುರಿತು ಜಪಾನಿನಲ್ಲಿ ಸಂಶೋಧನೆ ನಡೆದಿದ್ದು ಉಪ ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ಬೆಳೆಯುವ ಮರಗಳು ಬೋನ್ಸಾಯ್‌ಗೆ ಸರಿ ಹೊಂದುತ್ತವೆ ಎಂದು ತಿಳಿದು ಬಂದಿದೆ. ಮಾವು, ಪೇರಲೆ, ದಾಳಿಂಬೆ, ಮೂಸಂಬಿ, ರಬ್ಬರ್, ಹುಣಸೆ, ಕಿತ್ತಳೆ, ದೇವದಾರು ಆಲ, ಬೇವು, ಮುತ್ತುಗದ ಮರ, ಕದಂಬ, ಬೂರುಗ, ಬೇವು ಬೋನ್ಸಾಯ್ ಕಲೆಗೆ ಹೊಂದಿಕೊಳ್ಳುತ್ತವೆ. ಈ ಮರಗಳನ್ನು ಮಲಗುವ ಕೋಣೆಯಲ್ಲೂ ಇಡಬಹುದಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ