Metro Mitra: ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಆಟೋ ಚಾಲಕರೇ ಶುರುಮಾಡಿದ ಮೆಟ್ರೋ ಮಿತ್ರಾ, ಈ ನವೋದ್ಯಮ ಹುಟ್ಟಿದ್ದು ಹೀಗೆ…
Dec 07, 2023 06:24 PM IST
ಮೆಟ್ರೋ ನಿಲ್ದಾಣದಲ್ಲಿರುವ ಮೆಟ್ರೋ ಮಿತ್ರಾ ಅಪ್ಲಿಕೇಶನ್‌ನ ಸ್ಟ್ಯಾಂಡಿ ಜತೆಗೆ ಅದರ ಪ್ರತಿನಿಧಿಗಳು.
ಮೆಟ್ರೋ ಪ್ರಯಾಣಿಕರ ನೆರವಿಗಾಗಿ ಪ್ರಾಯೋಗಿಕ ಸೇವೆ ಶುರುಮಾಡಿದೆ ಮೆಟ್ರೋ ಮಿತ್ರಾ ಎಂಬ ನವೋದ್ಯಮ. ರಿಕ್ಷಾ ಚಾಲಕರ ತಂಡವೇ ಶುರುಮಾಡಿದ ಉಪಕ್ರಮ ಇದಾಗಿದ್ದು, ದುಪ್ಪಟ್ಟು ಶುಲ್ಕ ಪಾವತಿಯ ಕಿರಿಕಿರಿ ಇಲ್ಲ. ಮೀಟರ್ ದರಕ್ಕಿಂತ 10 ರೂಪಾಯಿ ಹೆಚ್ಚು ಪಾವತಿಸಿದರೆ ಆಯಿತು ಎನ್ನುತ್ತಾರೆ ಮೆಟ್ರೋ ಮಿತ್ರಾ ಚಾಲಕರು.
ಬೆಂಗಳೂರಿನ ಜಯನಗರ ಮತ್ತು ಆರ್‌ವಿ ರೋಡ್ ಮೆಟ್ರೋ ಸ್ಟೇಶನ್ ಬಳಿ ಆಟೋಗಾಗಿ ಹುಡುಕಾಡಿದರೆ ಗಮನಸೆಳೆಯೋದು ಮೆಟ್ರೋ ಮಿತ್ರಾ ಸ್ಟ್ಯಾಂಡಿಗಳು. ಮೆಟ್ರೋ ಮಿತ್ರಾ ಕುರಿತು ವಿವರ ಮಾಹಿತಿ ಹೊಂದಿರುವ ಸ್ಟ್ಯಾಂಡಿಯಲ್ಲಿ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದಕ್ಕೆ ಕ್ಯೂಆರ್ ಕೋಡ್ ಕೂಡ ಒದಗಿಸಲಾಗಿದೆ.
ಆಟೋ ಚಾಲಕರೇ ಸೇರಿಕೊಂಡು ಆರಂಭಿಸಿದ ಉಪಕ್ರಮ ಈ ಮೆಟ್ರೋ ಮಿತ್ರಾ. ಸೆಪ್ಟೆಂಬರ್‌ನಲ್ಲಿ ಜಯನಗರ ಮತ್ತು ಆರ್ ವಿ ರೋಡ್ ಮೆಟ್ರೋ ಸ್ಟೇಶನ್ ಬಳಿ ಈ ಆಟೋ ಸೇವೆಗೆ ಚಾಲನೆ ನೀಡಲಾಗಿದೆ. ಮೆಟ್ರೋ ಮಿತ್ರಾ ಆಪ್ ಬಳಸಿಕೊಂಡು ಮೆಟ್ರೋ ಪ್ರಯಾಣಿಕರು ಆಟೋ ರಿಕ್ಷಾ ಸೇವೆ ಪಡೆಯಬಹುದು.
ಮೆಟ್ರೋ ಮಿತ್ರಾ ಎಂಬ ನವೋದ್ಯಮದ ಹುಟ್ಟಿನ ಕಥೆ…
ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ಎಆರ್‌ಡಿಯು)ನ ಆಟೋ ಚಾಲಕರು ಸೇರಿ ಮೆಟ್ರೋ ಮಿತ್ರಾ ಎಂಬ ನವೋದ್ಯಮವನ್ನು ಶುರುಮಾಡಿದರು. ಸೆಪ್ಟೆಂಬರ್‌ನಲ್ಲಿ ಇದರ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ. ಎಆರ್‌ಡಿಯು ಎಂಬುದು ಸಿಐಟಿಯುನ ಅಧೀನ ಸಂಘಟನೆಯಾಗಿದ್ದು, ಅದರ ಜನರಲ್ ಸೆಕ್ರಟರಿ ರುದ್ರಮೂರ್ತಿ ಮತ್ತು ತಂಡ ಭಿನ್ನಮತದ ಕಾರಣ ಸಂಘಟನೆಯಿಂದ ಹೊರಬಂದಿದ್ದರು. ಎಆರ್‌ಡಿಯು ಹೆಸರು ಬಳಸದಂತೆ ಆಕ್ಷೇಪ ವ್ಯಕ್ತವಾದ ಕಾರಣ ಬಳಿಕ, ಪ್ರೊಪೆಷನಲ್ ಡ್ರೈವರ್ಸ್ ಅಸೋಸಿಯೇಷನ್ ಎಂಬ ಲಾಭೋದ್ಧೇಶ ರಹಿತ ಕಂಪನಿಯನ್ನು ಸ್ಥಾಪಿಸಿದರು. ಇದೇ ಕಂಪನಿ ಹೆಸರಲ್ಲಿ ಈಗ ಮೆಟ್ರೋ ಮಿತ್ರಾ (metromitra.co.in) ಉಪಕ್ರಮ ಕಾರ್ಯಾಚರಿಸುತ್ತಿದೆ.
ಇದೇ ಆಟೋ ಚಾಲಕರ ತಂಡ ನಮ್ಮ ಯಾತ್ರಿ ಎಂಬ ಇನ್ನೊಂದು ಆಟೋ ಬುಕ್ಕಿಂಗ್ ಮೊಬಲ್ ಅಪ್ಲಿಕೇಶನ್ ಅನ್ನು ನಡೆಸುತ್ತಿದೆ. ಮೆಟ್ರೋ ಮಿತ್ರ ಎಂಬುವುದು ನಿಖರವಾಗಿ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿರುವ ಅಪ್ಲಿಕೇಶನ್ ಎಂದು ರುದ್ರಮೂರ್ತಿ ಈ ಹಿಂದೆ ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದರು.
ಮೆಟ್ರೋ ಮಿತ್ರಾ ಆಟೋ ಬುಕ್ ಮಾಡುವುದು ಹೇಗೆ
ಮೆಟ್ರೋ ಮಿತ್ರಾ ಸೇವೆಗಳನ್ನು ಪಡೆಯಲು ನಿಶ್ಚಿತ ಮೆಟ್ರೋ ನಿಲ್ದಾಣದಲ್ಲಿ ಇರಿಸಲಾಗಿರುವ ಸ್ಟ್ಯಾಂಡಿಗಳಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಮೆಟ್ರೋ ಮಿತ್ರ ಸೇವೆ ಲಭ್ಯ ವಲಯದಲ್ಲಿ ಆಟೋ ಸೇವೆಗಳನ್ನು ಪ್ರಯಾಣಿಕರು ಪಡೆಯಬಹುದು. ಮೆಟ್ರೋ ಮಿತ್ರಾ ಚಾಲಕರು ವೃತ್ತಿಪರರಾಗಿದ್ದು, ಪ್ರಯಾಣಿಕರಿಗೆ ತೊಂದರೆ ಉಂಟುಮಾಡದೆ ಸೇವೆಯನ್ನು ಒದಗಿಸಬಲ್ಲವರು ಎಂದು ಕಂಪನಿ ತಿಳಿಸಿದೆ
ಮೆಟ್ರೋ ಮಿತ್ರಾ ಆಟೋ ದರ ಎಷ್ಟು
ಮೆಟ್ರೋ ಮಿತ್ರಾದಲ್ಲಿ ಆಟೋ ಸೇವೆ ಪಡೆಯುವಾಗ ವಿಧಿಸುವ ಶುಲ್ಕವು ಮೀಟರ್ ದರದಲ್ಲೇ ಇರಲಿದೆ. ಇದರ ಮೇಲೆ 10 ರೂಪಾಯಿ ಶುಲ್ಕವನ್ನು ತಂತ್ರಜ್ಞಾನ, ಚಾಲಕರ ತರಬೇತಿ ಮತ್ತು ನಿರ್ವಹಣಾ ವೆಚ್ಚ ಭರಿಸುವುದಕ್ಕೆ ಪ್ರಯಾಣಿಕರಿಂದ ಪಡೆಯಲಾಗುತ್ತದೆ ಎಂದು ಕಂಪನಿ ಪ್ರತಿನಿಧಿಗಳು ತಿಳಿಸಿದ್ದಾಗಿ ಬೆಂಗಳೂರು ಮಿರರ್ ವರದಿ ಮಾಡಿದೆ.
ನಮ್ಮ ಮೆಟ್ರೋ ಜತೆಗೆ ಮೆಟ್ರೋ ಮಿತ್ರಾ ಒಡಂಬಡಿಕೆ
ಮೆಟ್ರೋ ನಿಲ್ದಾಣದಲ್ಲಿ ಆಟೋ ರಿಕ್ಷಾ ಸೇವೆ ಒದಗಿಸುವುದಕ್ಕಾಗಿ ಬಿಎಂಆರ್‌ಸಿಎಲ್ ಜತೆಗೆ ಮೆಟ್ರೋ ಮಿತ್ರಾ ನವೋದ್ಯಮ ಒಡಂಬಡಿಕೆ ಮಾಡಿಕೊಂಡಿದೆ. ಈ ಒಡಂಬಡಿಕೆ ಪ್ರಕಾರ, ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಮಿತ್ರಾದ ಸ್ಟ್ಯಾಂಡಿಗಳು ಮತ್ತು ಸೇವೆಯ ವಿವರವನ್ನು ಪ್ರದರ್ಶಿಸಲಾಗಿದೆ. ವಾಟ್ಸ್ಆಪ್ ಮೂಲಕವೂ ಮೆಟ್ರೋ ಮಿತ್ರಾ ಸೇವೆಗಳು ಲಭ್ಯ ಇವೆ.
ಸದ್ಯ ಮೆಟ್ರೋ ಮಿತ್ರಾದ ಜತೆಗೆ 160ಕ್ಕೂ ಹೆಚ್ಚು ಆಟೋ ಚಾಲಕರು ನೋಂದಾಯಿಸಿಕೊಂಡಿದ್ದಾರೆ. 1000 ಆಟೋ ಚಾಲಕರನ್ನು ನೋಂದಾಯಿಸಿಕೊಂಡು ಉತ್ತಮ ಸೇವೆ ಒದಗಿಸಲು ಮೆಟ್ರೋ ಮಿತ್ರಾ ಚಾಲಕರ ತಂಡ ಪ್ರಯತ್ನಿಸುತ್ತಿದೆ. ಆಟೋ ಚಾಲಕರಿಂದ ಮೆಟ್ರೋ ಮಿತ್ರಾ ನವೋದ್ಯಮ ಪ್ರತಿ ಸವಾರಿಗೆ ಎರಡೂವರೆ ರೂಪಾಯಿ ಸಂಗ್ರಹ ಮಾಡುತ್ತದೆ. ಈ ರೀತಿ ಸಂಗ್ರಹವಾದ ಹಣದಲ್ಲಿ 25 ರೂಪಾಯಿಯನ್ನು ತಿಂಗಳ ನಿರ್ವಹಣಾ ವೆಚ್ಚಕ್ಕೆ ಮತ್ತು ಉಳಿದ ಹಣವನ್ನು ಚಾಲಕರ ಯೋಗಕ್ಷೇಮಕ್ಕಾಗಿ ಬಳಸುವುದಾಗಿ ಪ್ರೊಪೆಷನಲ್ ಡ್ರೈವರ್ಸ್ ಅಸೋಸಿಯೇಷನ್ ಈ ಹಿಂದೆಯೇ ಘೋಷಿಸಿದೆ.