logo
ಕನ್ನಡ ಸುದ್ದಿ  /  ಕರ್ನಾಟಕ  /  ಮೈಕ್ರೋಸಾಫ್ಟ್ ಸಮಸ್ಯೆ; ಬೆಂಗಳೂರಿನಲ್ಲಿ ಬ್ಯಾಂಕ್, ವಿಮಾನಯಾನ ಸೇವೆಗೆ ಅಡಚಣೆ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ಮೈಕ್ರೋಸಾಫ್ಟ್ ಸಮಸ್ಯೆ; ಬೆಂಗಳೂರಿನಲ್ಲಿ ಬ್ಯಾಂಕ್, ವಿಮಾನಯಾನ ಸೇವೆಗೆ ಅಡಚಣೆ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Umesh Kumar S HT Kannada

Jul 19, 2024 07:46 PM IST

google News

ಮೈಕ್ರೋಸಾಫ್ಟ್ ಸಮಸ್ಯೆ; ಬೆಂಗಳೂರಿನಲ್ಲಿ ಬ್ಯಾಂಕ್, ವಿಮಾನಯಾನ ಸೇವೆಗೆ ಅಡಚಣೆ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ಕಂಡುಬಂತು.

  • ಮೈಕ್ರೋಸಾಫ್ಟ್ ಸಮಸ್ಯೆ ಕಾರಣ ಬೆಂಗಳೂರಿನಲ್ಲಿ ಬ್ಯಾಂಕ್, ವಿಮಾನಯಾನ ಸೇವೆಗೆ ಅಡಚಣೆ ಉಂಟಾದ ಪ್ರಸಂಗ ಇಂದು (ಜುಲೈ 19) ನಡೆಯಿತು. ಕೆಂಪೇಗೌಡ ವಿಮಾನ ನಿಲ್ಧಾಣದಲ್ಲಿ ಪ್ರಯಾಣಿಕರ ಪರದಾಟ ಹೇಳತೀರದು. ಅನೇಕ ವಿಮಾನಗಳ ಹಾರಾಟ ರದ್ದುಗೊಂಡವು. (ವರದಿ- ಎಚ್.ಮಾರುತಿ, ಬೆಂಗಳೂರು)

ಮೈಕ್ರೋಸಾಫ್ಟ್ ಸಮಸ್ಯೆ; ಬೆಂಗಳೂರಿನಲ್ಲಿ ಬ್ಯಾಂಕ್, ವಿಮಾನಯಾನ ಸೇವೆಗೆ ಅಡಚಣೆ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ಕಂಡುಬಂತು.
ಮೈಕ್ರೋಸಾಫ್ಟ್ ಸಮಸ್ಯೆ; ಬೆಂಗಳೂರಿನಲ್ಲಿ ಬ್ಯಾಂಕ್, ವಿಮಾನಯಾನ ಸೇವೆಗೆ ಅಡಚಣೆ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ಕಂಡುಬಂತು.

ಬೆಂಗಳೂರು: ಮಾಹಿತಿ ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್‌ ಸೇವೆಗಳಲ್ಲಿ ಉಂಟಾದ ತಾಂತ್ರಿಕ ಅಡಚಣೆಗಳಿಂದ ಭಾರತದ ಬಹುತೇಕ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಆಂತರಿಕವಾಗಿ ಥರ್ಡ್‌ ಪಾರ್ಟಿ ಸಾಫ್ಟ್‌ ವೇರ್‌ ಗಳ ಅಪ್‌ ಡೇಟ್‌ ಸೇವೆಗಳ ಪ್ರಕ್ರಿಯೆಯಲ್ಲಿ ಆದ ಅಡಚಣೆಗಳಿಂದ ವಿಂಡೋಸ್‌ ಸಾಫ್ಟ್‌ ವೇರ್‌ ವ್ಯವಸ್ಥೆ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನುವುದು ಗಮನಕ್ಕೆ ಬಂದಿದೆ. ಈ ಸಮಸ್ಯೆಯನ್ನು ಆದಷ್ಟೂ ತ್ವರಿತವಾಗಿ ಬಗೆಹರಿಸಿಕೊಂಡು ನಮ್ಮ ತಂಡ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಸ್ಪಷ್ಟನೆ ನೀಡಿದೆ.

ವಿಶೇಷವಾಗಿ ವಿಮಾನಯಾನ ಸೇವೆಗಳ ಮೇಲೆ ಈ ಅಡಚಣೆ ತೀವ್ರ ಪರಿಣಾಮವನ್ನುಂಟು ಮಾಡಿದ್ದು, ದೇಶಾದ್ಯಂತ ವಿಮಾನಗಳ ಹಾರಾಟದಲ್ಲಿ ಕೊರತೆ ಉಂಟಾಗಿದೆ. ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಸ್ಪೈಸ್‌ ಜೆಟ್‌, ಆಕಾಶ್‌ ಏರ್‌ ಲೈನ್ಸ್‌ ಸೇರಿದಂತೆ ಹಲವಾರು ಸಂಸ್ಥೆಗಳು ಸೇವೆಯನ್ನು ನಿಲ್ಲಿಸಿವೆ ಎಂದು ತಿಳಿದು ಬಂದಿದೆ.

ಮೈಕ್ರೋಸಾಫ್ಟ್ ಸಮಸ್ಯೆ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪರದಾಟ

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸಮಸ್ಯೆ ಉಂಟಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿರುವುದು ವರದಿಯಾಗಿದೆ. ಬಹುತೇಕ ವಿಮಾನಗಳಿಗೆ ಚೆಕ್‌ ಇನ್‌ ಮಾಡಲು ಸಾದ್ಯವಾಗುತ್ತಿಲ್ಲ. ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಸ್ಪೈಸ್‌ ಜೆಟ್‌, ಆಕಾಶ್‌ ಏರ್‌ ಲೈನ್ಸ್‌ ಸೇರಿದಂತೆ ಹಲವಾರು ಸಂಸ್ಥೆಗಳು ಸೇವೆಯನ್ನು ನಿಲ್ಲಿಸಿವೆ ಎಂದು ತಿಳಿದು ಬಂದಿದೆ.

ನೇವಿಟೈರ್‌ ಡಿಪಾರ್ಚರ್‌ ಕಂಟ್ರೋಲ್‌ ಸಿಸ್ಟಂ (ಎನ್‌ಡಿಸಿಸಿ) ಸೇವೆಯಲ್ಲಿ ಅಡಚಣೆ ಉಂಟಾಗಿದ್ದು, ಇಂಡಿಗೋ, ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌, ಸ್ಪೈಸ್‌ ಜೆಟ್‌ ಮತ್ತು ಆಕಾಶ್‌ ಪ್ರಯಾಣಿಕರನ್ನು ಭೌತಿಕವಾಗಿ ಪರೀಕ್ಷೆಗೊಳಪಡಿಸಿ ಒಳಬಿಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

ಎನ್‌ ಡಿಸಿಎಸ್‌ ವ್ಯವಸ್ಥೆಯಲ್ಲಿ ಶುಕ್ರವಾರ ಬೆಳಗ್ಗೆ 10.30 ರಿಂದ ಅಡಚಣೆ ಉಂಟಾಗಿದ್ದು, ಅನೇಕ ವಿಮಾನಯಾನ ಸಂಸ್ಥೆಗಳ ಸೇವೆಯಲ್ಲಿ ತಡವಾಗುತ್ತಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೈಬರಹದ ಬೋರ್ಡಿಂಗ್ ಪಾಸ್ ವಿತರಿಸಿದ ಇಂಡಿಗೋ

ಟರ್ಮಿನಲ್‌ -1ರಲ್ಲಿ ಇಂಡಿಗೋ, ಆಕಾಶ್‌ ಮತ್ತು ಸ್ಪೈಸ್‌ ಜೆಟ್‌ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಇಲ್ಲಿ ಶೇ.90ರಷ್ಟು ಸೇವೆಗಳಿಗೆ ತೊಂದರೆ ಎದುರಾಗಿದೆ. ಟರ್ಮಿನಲ್-2ರಲ್ಲಿ ಏರ್‌ ಇಂಡಿಯಾ ಎಕ್ಸ್‌ ಪ್ರೆಸ್‌ ಸೇವೆಯಲ್ಲಿ ಅಡಚಣೆ ಉಂಟಾಗಿದೆ. 26 ಇಂಡಿಗೋ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಇಂಡಿಗೋ ಕೌಂಟರ್‌ ಗಳ ಬಳಿ ಸರತಿ ಸಾಲು ಹೆಚ್ಚುತ್ತಿದ್ದು, ಕೊಯಮತ್ತೂರು, ಲಕ್ನೋ, ಜೈಪುರ, ದೆಹಲಿ, ಮುಂಬೈ ಮತ್ತು ಪುಣೆಗೆ ತೆರಳುವ ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.

ನಿಗದಿತ ಸಮಯಕ್ಕೆ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಭೌತಿಕವಾಗಿ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಇದರಿಂದ ಜನಜಂಗುಳಿ ಹೆಚ್ಚಾಗುತ್ತಿದೆ. ಜತೆಗೆ ಕೈನಿಂದ ಬರೆದು ಬೋರ್ಡಿಂಗ್‌ ಪಾಸ್‌ ಗಳನ್ನು ನೀಡಲಾಗುತ್ತಿದೆ. ಆದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಮಧ್ಯರಾತ್ರಿಯ ವೇಳೆಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಮೈಕ್ರೋಸಾಫ್ಟ್‌ ಭರವಸೆಯನ್ನು ನೀಡಿದೆ. ಕೇವಲ ಬೆಂಗಳೂರು ಮಾತ್ರವಲ್ಲದೆ ದೇಶದ ಬಹುತೇಕ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ