logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka News: ಶಾಸಕ ಶರತ್ ಬಚ್ಚೇಗೌಡ ಕುಟುಂಬದಿಂದ 263 ಎಕರೆ ಜಮೀನು ಕಬಳಿಕೆ; ಎಂಟಿಬಿ ನಾಗರಾಜ್ ಗಂಭೀರ ಆರೋಪ

Karnataka News: ಶಾಸಕ ಶರತ್ ಬಚ್ಚೇಗೌಡ ಕುಟುಂಬದಿಂದ 263 ಎಕರೆ ಜಮೀನು ಕಬಳಿಕೆ; ಎಂಟಿಬಿ ನಾಗರಾಜ್ ಗಂಭೀರ ಆರೋಪ

HT Kannada Desk HT Kannada

Aug 12, 2023 03:41 PM IST

google News

ಶಾಸಕ ಶರತ್ ಬಚ್ಚೇಗೌಡ - ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್

    • MTB Nagaraj: ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲ್ಲೂಕಿನಲ್ಲಿ ಅಕ್ರಮವಾಗಿ ಕಬಳಿಸಿರುವ ಜಮೀನನ್ನು ಸಕ್ರಮಗೊಳಿಸಲು ಶಾಸಕ ಶರತ್ ಬಚ್ಚೇಗೌಡ ಅವರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಶಾಸಕ ಶರತ್ ಬಚ್ಚೇಗೌಡ - ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್
ಶಾಸಕ ಶರತ್ ಬಚ್ಚೇಗೌಡ - ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್

ಬೆಂಗಳೂರು: ಹೊಸಕೋಟೆ ತಾಲ್ಲೂಕಿನಲ್ಲಿ ಅಕ್ರಮವಾಗಿ ಕಬಳಿಸಿರುವ ಜಮೀನನ್ನು ಸಕ್ರಮಗೊಳಿಸಲು ಶಾಸಕ ಶರತ್ ಬಚ್ಚೇಗೌಡ ಅವರು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಹೊಸಕೋಟೆಯ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರ ವಿರುದ್ದ ಆರೋಪಗಳ ಪಟ್ಟಿ ಮಾಡಿದರು. ಶಾಂತನಾಪುರ ಗ್ರಾಮದ ಸರ್ವೆ ನಂ.9ರಲ್ಲಿ 263 ಎಕರೆ ಜಮೀನು ಅಕ್ರಮವಾಗಿ ಕಬಳಿಸಿರುವ ಶಾಸಕರ ಕುಟುಂಬದವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಹೈಕೋರ್ಟ್, ಲೋಕಾಯುಕ್ತ, ಸಿವಿಲ್ ನ್ಯಾಯಾಲಯ, ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೂ ಸಹ ತಹಶೀಲ್ದಾರ್ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಆಸ್ತಿಗೆ ಪೋಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನೇರವಾಗಿಯೇ ಆಪಾದಿಸಿದರು.

ಶಾಸಕರು ಅಕ್ರಮವಾಗಿ ಭೂಕಬಳಿಕೆ ಮಾಡುತ್ತಿರುವ ವಿಚಾರ ನನಗೆ ಖಚಿತವಾಗಿ ತಿಳಿದು ಬಂದಿದ್ದು, ನಾನು ಈಗಾಗಲೆ ಮಾನ್ಯ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿ ಮತ್ತು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಒಂದುವೇಳೆ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಈ ಹಿಂದೆ ಉಪ ವಿಭಾಗಾಧಿಕಾರಿಗಳು ಶಾಂತನಪುರ ಗ್ರಾಮದ ಸರ್ವೆ ನಂ.9 ರಲ್ಲಿನ 263 ಎಕರೆ ಜಮೀನಿಗೆ ಸಂಬಂದಪಟ್ಟಂತೆ 24 ಎಕರೆಯನ್ನು ಸರ್ಕಾರದ ವಶಕ್ಕೆ ಪಡೆದಿದ್ದನ್ನು ಪ್ರಶ್ನಿಸಿ ಶರತ್ ಬಚ್ಚೇಗೌಡ ಕುಟುಂಬ ಹೈಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದರು. ಆದರೆ ಈಗ ಹೈಕೋರ್ಟ್‌ ತಡೆಯಾಜ್ಞೆ ತೆರವುಗೊಳಿಸಿದೆ. ಈಗ ಶಾಸಕ ಶರತ್ ಬಚ್ಚೇಗೌಡ ಹಾಗೂ ಅವರ ಕುಟುಂಬಕ್ಕೆ ನೈತಿಕತೆ ಇದ್ದರೆ ಜಮೀನನ್ನು ಸರ್ಕಾರದ ವಶಕ್ಕೆ ಬಿಟ್ಟುಕೊಡಲಿ ಎಂದು ಎಂಟಿಬಿ ಸವಾಲು ಹಾಕಿದರು.

ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ

ತಾಲ್ಲೂಕು ಕಚೇರಿಯಲ್ಲಿ ಪ್ರತಿಯೊಂದು ಕೆಲಸಕ್ಕೂ ಹಣ ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೇರವಾಗಿ ಹೋದರೆ ಯಾವುದೇ ಕೆಲಸ ಆಗುವುದಿಲ್ಲ. ಅಧಿಕಾರಿಗಳು ದಲ್ಲಾಳಿಗಳನ್ನು ಏಜೆಂಟರಂತೆ ಬಳಸಿಕೊಳ್ಳುತ್ತಿದ್ದಾರೆ. ದಲ್ಲಾಳಿಗಳ ಮೂಲಕ ಹೋದರೆ ಮಾತ್ರ ಕೆಲಸಗಳು ಆಗುತ್ತವೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್‌ ದೂರಿದರು. ಸಾರ್ವಜನಿಕರನ್ನು ಆಧಿಕಾರಿಗಳು ಶೋಷಣೆ ಮಾಡಲು ಮುಂದಾಗಿದ್ದಾರೆ ಎಂಬುದು ಬಹಿರಂಗವಾಗಿದೆ. ತಾಲ್ಲೂಕು ಕಚೇರಿಯಲ್ಲಿ ದಲ್ಲಾಳಿಗಳ ದರ್ಬಾರ್‌ಗೆ ಸಾರ್ವಜನಿಕರು ರೋಸಿ ಹೋಗಿದ್ದಾರೆ. ಒಂದು ವೇಳೆ ಸಾರ್ವಜನಿಕರ ಕೆಲಸ ಮಾಡಿಕೊಡಲು ಲಂಚ ಕೇಳಿದರೆ ಅಥವಾ ದಲ್ಲಾಳಿಗಳ ಮೂಲಕ ಲಂಚ ಪಡೆಯುವುದು ಕಂಡು ಬಂದರೆ ಅಧಿಕಾರಿಗಳ ವಿರುದ್ಧ ತಾಲ್ಲೂಕು ಕಚೇರಿಯ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಂದಾಯ ಸಚಿವರು ಗಮನ ಹರಿಸಲು ಆಗ್ರಹ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿ ಇದ್ದು, ಇದನ್ನು ಸರಕಾರ ರಕ್ಷಿಸಬೇಕಿದೆ. ಇಲ್ಲವಾದರೆ ಭೂಗಳ್ಳರ ಪಾಲಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಎಂಟಿಬಿ ನಾಗರಾಜ್, ಕಂದಾಯ ಸಚಿವರು ಪ್ರಾಮಾಣಿಕರಾಗಿದ್ದು ಈ ಬಗ್ಗೆ ಗಂಭೀರವಾಗಿ ಗಮನಹರಿಸಬೇಕು ಮತ್ತು ಸರ್ಕಾರಿ ಭೂಮಿಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ವರದಿ: ಎಚ್. ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ