ಬೆಂಗಳೂರು ಸಹಕಾರ ಸಂಘದಲ್ಲಿ 50 ಲಕ್ಷ ರೂ ಸಾಲದ ಪಡೆದು 3 ಕೋಟಿ ರೂ ಆಸ್ತಿ ಕಳಕೊಂಡ ಮುಸ್ಲಿಂ ದಂಪತಿ; ವಿಧಾನಸೌಧದ ಎದುರು ಆತ್ಮಹತ್ಯೆ ಯತ್ನ
Jan 10, 2024 01:55 PM IST
ಶಾಯಿಸ್ತಾ ಸುದ್ದಿಗಾರರ ಜತೆಗೆ ಮಾತನಾಡಿದ್ದು, ತಮಗಾಗಿರುವ ಸಾಲದ ವಂಚನೆ ವಿವರ ಬಹಿರಂಗಪಡಿಸಿದರು. ವಿಧಾನಸೌಧದ ಎದುರು ಶಾಯಿಸ್ತಾ ಕುಟುಂಬ ಪ್ರತಿಭಟನೆ ನಡೆಸಿತು.
ಬೆಂಗಳೂರಿನ ಸಹಕಾರ ಸಂಘ ಒಂದರಲ್ಲಿ 50 ಲಕ್ಷ ರೂಪಾಯಿ ಸಾಲ ಮಾಡಿದ ಮುಸ್ಲಿಂ ದಂಪತಿ ಈಗ 3 ಕೋಟಿ ರೂಪಾಯಿ ಆಸ್ತಿ ಕಳೆದುಕೊಂಡಿರುವುದಾಗಿ ಆರೋಪಿಸಿ ಪ್ರತಿಭಟನೆ ನಡೆಸಿದರು. ವಿಧಾನಸೌಧದ ಎದುರು ಬಂದ ಈ ದಂಪತಿ ಮೈಮೇಲೆ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದರು.
ಬೆಂಗಳೂರು: ಮುಸ್ಲಿಂ ಮಹಿಳೆ ಮತ್ತು ಆಕೆಯ ಪತಿ ವಿಧಾನಸೌಧದ ಎದುರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ (ಜ.10) ನಡೆಯಿತು. ಸ್ಥಳದಲ್ಲಿ ಮುಸ್ಲಿಂ ಮಹಿಳೆಯ ಕುಟುಂಬಸ್ಥರೂ ಜತೆಗಿದ್ದು, ಸ್ವಲ್ಪ ಹೊತ್ತು ಅಲ್ಲಿ ಗೊಂದಲ ಮತ್ತು ನಾಟಕೀಯ ವಿದ್ಯಮಾನಗಳು ನಡೆದವು.
ಜೆಜೆಆರ್ ನಗರದ ನಿವಾಸಿ ಶಾಯಿಸ್ತಾ ಬಾನು (48) ಮತ್ತು ಆಕೆಯ ಪತಿ ಮೊಹಮ್ಮದ್ ಮುನಾಯಿದ್ ಉಲ್ಲಾ ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ವಿಧಾನಸೌಧದ ಎದುರು ಬಂದ ಈ ಕುಟುಂಬ ದಿಢೀರ್ ಪ್ರತಿಭಟನೆ ಶುರುಮಾಡಿತು. ಕೈಯಲ್ಲಿ ಕೆಲವು ಫೋಟೋ ಕಾಪಿಗಳನ್ನು ಹಿಡಿದು ನ್ಯಾಯ ಬೇಕು ಎಂದು ಘೋಷಣೆ ಕೂಗಿತು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಕುಟುಂಬವನ್ನು ಅಲ್ಲಿಂದ ಸ್ಥಳಾಂತರಿಸುವ ಪ್ರಯತ್ನಕ್ಕೆ ಮುಂದಾಯಿತು. ಆಗ, ಮುಖ್ಯಮಂತ್ರಿಯವರನ್ನು ಭೇಟಿ ಮಾಡಬೇಕು. ಅವರು ನಮಗೆ ನ್ಯಾಯಕೊಡಿಸಬೇಕು. ನಮಗೆ ಅನ್ಯಾಯ ಆಗಿದೆ. ಸಚಿವ ಜಮೀರ್ ಅಹ್ಮದ್ ಅವರಿಂದಲೂ ಮೋಸ ಆಗಿದೆ ಎಂದು ಮೈ ಮೇಲೆ ಸೀಮೆ ಎಣ್ಣೆ ಸುರಿದುಕೊಂಡ ಮಹಿಳೆಯನ್ನು ತಡೆಯಲು ಪೊಲೀಸರು ಹರಸಾಹಸ ಮಾಡಿದರು. ಈ ಎಲ್ಲ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಶಾಯಿಸ್ತಾ, ಚಾಮರಾಜಪೇಟೆಯ ಬೆಂಗಳೂರು ಕೋ ಆಪರೇಟಿವ್ ಸೊಸೈಟಿಯಲ್ಲಿ ಕೃಷಿ ಸಾಲ ಎಂದು 50 ಲಕ್ಷ ರೂಪಾಯಿ ಪಡೆದಿದ್ದರು. ಶುಂಠಿ ಬೆಳೆಯುವ ಉದ್ದೇಶದಿಂದ ಸಾಲಮಾಡಲಾಗಿತ್ತು. ಆದರೆ ಮೂರು ವರ್ಷದ ಅವಧಿಯಲ್ಲಿ 97 ಲಕ್ಷ ರೂಪಾಯಿ ಹಣ ಮರುಪಾವತಿ ಮಾಡಿದ್ದೇವೆ. ಆದರೂ, ಸುಸ್ತಿ ಸಾಲದ ನೆಪದಲ್ಲಿ 3 ಕೋಟಿ ರೂಪಾಯಿ ಆಸ್ತಿಯನ್ನು ಸೊಸೈಟಿಯವರು 1.41 ಕೋಟಿ ರೂಪಾಯಿಗೆ ಹರಾಜು ಹಾಕಿದ್ದಾರೆ. ಈ ವಿಚಾರವಾಗಿ ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಖಾನ್ ಬಳಿ ಹೋಗಿ ಮನವಿ ಸಲ್ಲಿಸಿ ನೆರವಾಗುವಂತೆ ಕೋರಿದ್ದೆವು. ಆದರೆ ಅವರು ಆರಂಭದಲ್ಲಿ ನೆರವಾಗುವುದಾಗಿ ಹೇಳಿ, ಕೊನೆಗೆ ದೂರ ಸರಿದು ವಂಚಿಸಿದರು ಎಂದು ಆರೋಪಿಸಿದರು.
ಈಗ ಎಲ್ಲವನ್ನೂ ಕಳೆದುಕೊಂಡು ಮಕ್ಕಳೊಂದಿಗೆ ಬೀದಿಗೆ ಬಂದಿದ್ದೇವೆ. ನಮಗೆ ದಿಕ್ಕಿಲ್ಲದಂತಾಗಿದೆ. ನ್ಯಾಯ ಸಿಗುವವರೆಗೂ, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನ್ಯಾಯ ಕೇಳುವ ತನಕ ಇಲ್ಲಿಂದ ಹೋಗಲ್ಲ ಎಂದು ಹಟ ಹಿಡಿದಂತೆ ಹೇಳಿದ್ದರು. ಆದರೆ, ಪೊಲೀಸರು ಬಳಿಕ ಈ ಕುಟುಂಬದ ಮನವೊಲಿಸಿ ಅಲ್ಲಿಂದ ಸ್ಥಳಾಂತರ ಮಾಡಿದ್ದರು.