Bengaluru Crime: 20 ಕೋಟಿ ರೂ ಮೌಲ್ಯದ 99 ಕೊಕೇನ್ ಕ್ಯಾಪ್ಸೂಲ್‌ಗಳನ್ನು ಹೊಟ್ಟೆಯಲ್ಲಿಟ್ಟು ಬೆಂಗಳೂರಲ್ಲಿ ಇಳಿದ ನೈಜೀರಿಯನ್ ಪ್ರಜೆಯ ಬಂಧನ
Dec 21, 2023 03:38 PM IST
ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದ ನೈಜೀರಿಯನ್ ಪ್ರಜೆಯ ಹೊಟ್ಟೆಯೊಳಗೆ ಇದ್ದ ಕೊಕೇನ್ ಕ್ಯಾಪ್ಸೂಲ್‌ಗಳು.
ಹೊಸ ವರ್ಷವನ್ನು ಬರಮಾಡಿಕೊಳ್ಳುವ ಹೊತ್ತಿನಲ್ಲಿ, ಹೊಟ್ಟೆಯೊಳಗೆ ತುಂಬಿಕೊಂಡು ಸಾಗಿಸುತ್ತಿದ್ದ 20 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ಕೊಕೇನ್ ಕ್ಯಾಪ್ಸೂಲ್‌ಗಳನ್ನು ಬೆಂಗಳೂರಲ್ಲಿ ವಶಪಡಿಸಿಕೊಳ್ಳಲಾಗಿದೆ. ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದ ನೈಜೀರಿಯನ್ ಪ್ರಜೆಯ ಹೊಟ್ಟೆಯಲ್ಲಿ 99 ಕೊಕೇನ್ ಕ್ಯಾಪ್ಸೂಲ್‌ಗಳಿದ್ದವು.
ಬೆಂಗಳೂರು: ಹೊಟ್ಟೆಯೊಳಗೆ 20 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ತೂಕದ ಮಾದಕ ವಸ್ತು ಕೊಕೇನ್ ತುಂಬಿಕೊಂಡು ಬೆಂಗಳೂರಿಗೆ ಆಗಮಿಸಿದ ನೈಜೀರಿಯಾ ಪ್ರಜೆಯೊಬ್ಬನನ್ನು ಕಂದಾಯ ವಿಚಕ್ಷಣಾ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದಾರೆ.
ಈ ವರ್ಷ ಅಂದರೆ 2023ರಲ್ಲಿ ಪತ್ತೆ ಹಚ್ಚಲಾದ ಅತಿ ದೊಡ್ಡ ಮಾದಕ ವಸ್ತು ವಶ ಪಡಿಸಿಕೊಂಡ ಪ್ರಕರಣ ಇದಾಗಿದೆ. ಖಚಿತ ಮಾಹಿತಿ ಮೇರೆಗೆ ಡಿಆರ್‌ಐ ಅಧಿಕಾರಿಗಳು ಡಿಸೆಂಬರ್ 11 ರಂದು ಆರೋಪಿಯು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಂಧಿಸಲಾಗಿದೆ.
ಈತನನ್ನು ನೈಜೀರಿಯಾ ಪ್ರಜೆ ಎಂದು ಗುರುತಿಸಲಾಗಿದೆ. ಈತ ಇಥಿಯೋಪಿಯಾದ ಅದ್ದಿಸ್ ಅಬಾಬಾದಿಂದ ಆಗಮಿಸಿದ್ದ. 40 ವರ್ಷದ ಆರೋಪಿಯು ವೈದ್ಯಕೀಯ ವೀಸಾ ಪಡೆದುಕೊಂಡು ಭಾರತಕ್ಕೆ ಆಗಮಿಸಿದ್ದ.
ಈತ ಅದ್ದೀಸ್ ಅಬಾದಾದಲ್ಲಿ ಪ್ರಯಾಣ ಆರಂಭಿಸುವ ಮುನ್ನ 99 ಕ್ಯಾಪ್ಯೂಲ್‌ಗಳನ್ನು ನುಂಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ನ್ಯಾಯಾಲಯದ ಆದೇಶ ಪಡೆದು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಈತನಿಗೆ ಚಿಕಿತ್ಸೆ ಕೊಡಿಸಿ 5 ದಿನಗಳ ಅವಧಿಯಲ್ಲಿ ಎಲ್ಲಾ 99 ಕ್ಯಾಪ್ಸೂಲ್‌ಗಳನ್ನು ಹಂತ ಹಂತವಾಗಿ ಹೊರ ತೆಗೆಯಲಾಗಿದೆ.
ಆರೋಪಿ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಆರೋಪಿಯು ಬೆಂಗಳೂರಿನಲ್ಲಿ ಇಳಿದ ನಂತರ ದೇಶೀಯ ವಿಮಾನದಲ್ಲಿ ದೆಹಲಿಗೆ ತೆರಳಲು ನಿರ್ಧರಿಸಿದ್ದ. ರಾಜಧಾನಿ ದೆಹಲಿಯಲ್ಲಿ ಕಳ್ಳ ಸಾಗಣೆ ಮಾಡಿದ ಮಾದಕ ವಸ್ತು ವನ್ನು ವಿತರಿಸಲು ಸಂಚು ರೂಪಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪ್ರಕರಣದ ಕುರಿತಾಗಿ ಹೆಚ್ಚಿನ ತನಿಖೆ ನಡೆಸುತ್ತಿರುವ ತನಿಖಾ ತಂಡಗಳು, ಮಾದಕ ವಸ್ತುಗಳನ್ನು ಎಲ್ಲೆಲ್ಲಿ ಯಾರಿಗೆ ವಿತರಿಸಲು ರೂಪಿಸಿದ್ದ ಯೋಜನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕಳ್ಳ ಸಾಗಣೆದಾರರು ಮಾದಕ ವಸ್ತುಗಳನ್ನು ದೇಶದೊಳಗೆ ತರಲು ನಾನಾ ಮಾರ್ಗಗಳನ್ನು ಅನುಸರಿಸುತ್ತಾರೆ. ಕೆಲವೊಮ್ಮೆ ಇಂತಹ ಪ್ರಯತ್ನಗಳು ಮಾರಣಾಂತಿಕವೂ ಆಗಬಹುದು.ಹೊಟ್ಟೆಯೊಳಗೆ ಈ ರೀತಿಯ ಬೃಹತ್ ಪ್ರಮಾಣದಲ್ಲಿ ಮಾದಕವಸ್ತು ಸಾಗಾಣೆಯಿಂದ ಆತನ ಜೀವಕ್ಕೆ ಅಪಾಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ- ಎಚ್. ಮಾರುತಿ)