ಒಂದು ಮನೆಗೆ ಒಂದು ನಾಯಿ, ಬಿಬಿಎಂಪಿಯ ಹೊಸ ನಿಯಮದಿಂದ ಬೆಂಗಳೂರಿನ ಸಾಕುಪ್ರಾಣಿ ಪ್ರಿಯರಲ್ಲಿ ಗೊಂದಲ
Sep 20, 2023 07:15 PM IST
ರಕ್ಷಣೆ ಮಾಡಿದ ಬೀದಿ ನಾಯಿ ಜತೆಗೆ ನಟಿ ಐಂದ್ರಿತಾ ರೇ (ಸಾಂದರ್ಭಿಕ ಚಿತ್ರ)
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕು ನಾಯಿಗೆ ಪರವಾನಗಿ ಪಡೆಯುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಎರಡು ವರ್ಷಗಳಿಂದ ಈ ವಿಚಾರ ಚರ್ಚೆಯಲ್ಲಿದೆ. ನಿಯಮ ಪರಿಷ್ಕರಣೆ ಆಗುತ್ತಿದ್ದು, ಇಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಇತ್ತೀಚೆಗೆ ಸಾಕುಪ್ರಾಣಿಗಳ ಪರವಾನಗಿಯ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದೆ. ಅದರ ಪ್ರಕಾರ, ವಿಶೇಷವಾಗಿ ನಾಯಿಗಳ ಅಕ್ರಮ ಸಂತಾನೋತ್ಪತ್ತಿಯನ್ನು ತಡೆಯುವ ಉದ್ದೇಶದಿಂದ ಪ್ರತಿ ಮನೆಗೆ ಒಂದು ನಾಯಿ ನೀತಿಯ (one-dog-per-home policy) ಸಾಧ್ಯತೆಯ ಮೇಲೆ ಬೆಳಕು ಚೆಲ್ಲಿದೆ. ಇದು ಸಾಕು ಪ್ರಾಣಿ ಪೋಷಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ.
ನಾಟ್ ವಿತೌಟ್ ಮೈ ಡಾಗ್ ಹ್ಯಾಷ್ ಟ್ಯಾಗ್ ಜತೆಗೆ ಬಿಬಿಎಂಪಿ ನೂತನ ನಿಯಮಗಳ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ, ಅಭಿಪ್ರಾಯ ಹಂಚಿಕೆ ನಡೆಯುತ್ತಿದೆ. ಈ ಅಭಿಯಾನದಲ್ಲಿ ಶುರುಮಾಡಿದ ಸಿಜೆ ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪಕಿ ಪ್ರಿಯಾ ಚೆಟ್ಟಿ, ಬಿಬಿಎಂಪಿಯ ಈ ನಿಯಮ ಹೊಸದಲ್ಲ. ಎರಡು ವರ್ಷ ಹಿಂದೆ ಇದರ ಕರಡನ್ನು ಪ್ರಕಟಿಸಿತ್ತು. ಅದಾದ ಬಳಿಕ ನಿಯಮಗಳ ಬಗ್ಗೆ ನಿರಂತರವಾಗಿ ಚರ್ಚೆ, ಅಭಿಪ್ರಾಯ ವ್ಯಕ್ತಪಡಿಸುವ ಕೆಲಸಗಳು ನಡೆಯುತ್ತಲೇ ಇವೆ. ಬಿಬಿಎಂಪಿಯೂ ಜನಾಭಿಪ್ರಾಯ ಪಡೆದುಕೊಂಡು ನಿಯಮಗಳ ಪರಿಷ್ಕರಣೆ ಮಾಡುತ್ತ ಇದೆ. ಆದಾಗ್ಯೂ ಒಂದು ಮನೆಗೆ ಒಂದು ನಾಯಿ ನೀತಿ ಬಿಬಿಎಂಪಿ ಚಿಂತನೆಯ ಕೂಸಾಗಿರಬಹುದು. ಇದನ್ನು ಇಡೀ ನಗರಕ್ಕೆ ಅನ್ವಯಿಸಿ ಜಾರಿಗೊಳಿಸುವುದು ಪ್ರಾಯೋಗಿಕ ವಿಚಾರ ಅಲ್ಲ ಎಂದು ಹೇಳಿರುವುದಾಗಿ HT ಕನ್ನಡದ ಮಾತೃತಾಣ ಹಿಂದೂಸ್ತಾನ್ ಟೈಮ್ಸ್ ವರದಿ ವಿವರಿಸಿದೆ.
ಸಾಕುಪ್ರಾಣಿಗಳ ಪರವಾನಗಿ ವಿಚಾರದಲ್ಲಿ ಗಮನಿಸಬೇಕಾದ 3 ಅಂಶಗಳು
ಮೆಮೋರಿಯಲ್ ಟ್ರಸ್ಟ್ ಸಂಸ್ಥಾಪಕಿ ಪ್ರಿಯಾ ಚೆಟ್ಟಿ ಅವರು ಸಾಕುಪ್ರಾಣಿಗಳ ಪರವಾನಗಿ ವಿಚಾರದಲ್ಲಿ ಗಮನಿಸಬೇಕಾದ 3 ಅಂಶಗಳ ಕಡೆಗೆ ಬೆಳಕು ಚೆಲ್ಲಿದ್ದಾರೆ.
- ಇದು ಸ್ಥಳೀಯ ತಳಿಯ ಅಥವಾ ರಕ್ಷಣೆ ಮಾಡಲ್ಪಟ್ಟ ನಾಯಿ ಸಾಕಣಿಕೆಯನ್ನು ಪ್ರೋತ್ಸಾಹಿಸುವಂತೆ ಪರವಾನಗಿ ಶುಲ್ಕ ಮನಾಗೊಳಿಸಬೇಕು.
- ಇದು ನಿರೀಕ್ಷಿತ ಪರವಾನಗಿ ಆಗಿರಬೇಕು. ಹಾನಿ ಮಾಡುವಂಥ ಪರವಾನಗಿ ಅಲ್ಲ. ಅಂದರೆ ಪ್ರತಿ ಮನೆಯಲ್ಲಿ ಈಗಾಗಲೇ ಇರುವ ನಾಯಿಗಳನ್ನು ಬಿಬಿಎಂಪಿ ಹೊತ್ತೊಯ್ಯುವುದು ಸಾಧ್ಯವಿಲ್ಲ. ಆದ್ದರಿಂದ ಪರವಾನಗಿ ಕೊಡುವ ವಿಚಾರದಲ್ಲಿ ಇದನ್ನೂ ಗಮನಿಸಬೇಕು.
- ಲೋಕಲ್ ನಾಯಿಗಳನ್ನು ದತ್ತು ತೆಗೆದುಕೊಂಡು ಸಾಕುವುದನ್ನು ಬಿಬಿಎಂಪಿ ಉತ್ತೇಜಿಸಬೇಕು. ಅಲ್ಲದೆ ಈ ಲೋಕಲ್ ತಳಿಯ ನಾಯಿಗಳಿಗೆ ಸಂತಾನಹರಣ ಮತ್ತು ಲಸಿಕೆಯನ್ನು ಉಚಿತವಾಗಿ ನೀಡಬೇಕು. ಇದನ್ನು ಬಿಬಿಎಂಪಿ ಗಮನಿಸಿದೆ.
ಒಂದು ಮನೆಗೆ ಒಂದು ನಾಯಿ ಚಿಂತನೆ ಅಸಮಂಜಸ
ಪ್ರಿಯಾ ಚೆಟ್ಟಿ ಅವರ ಪ್ರಕಾರ, ಒಂದು ಮನೆಗೆ ಒಂದು ನಾಯಿ ನಿಯಮದ ಚಿಂತನೆ ಅಸಮಂಜಸವಾದುದು.
“ಪ್ರತಿ ಮನೆಗೆ ಒಂದು ನಾಯಿ ಎಂಬ ಈ ಅನಿಯಂತ್ರಿತ ಕಲ್ಪನೆಯನ್ನು ನಾನು ಬೆಂಬಲಿಸುವುದಿಲ್ಲ. ಆದರೆ, ಈ ಕ್ರಮವು ನಿಮ್ಮ ಸಾಕುಪ್ರಾಣಿಗಳಿಗೆ ಲಸಿಕೆಯನ್ನು ನೀಡುವುದರ ಮೇಲೆ ಕೇಂದ್ರೀಕರಿಸುವುದು, ಸ್ಥಳೀಯ ನಾಯಿಗಳನ್ನು ರಕ್ಷಿಸುವುದು, ಸಾಕುಪ್ರಾಣಿಗಳು ಈಗ ಪರವಾನಗಿ ಪಡೆದಿರುವುದರಿಂದ ಅವುಗಳ ಶೋಷಣೆ ಮತ್ತು ಪರಿತ್ಯಜಿಸುವುದು ಕಡಿಮೆ ಮಾಡುವುದು. ಈ ಕ್ರಮವು ನಗರದಲ್ಲಿ ಅಕ್ರಮ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ” ಎಂದು ಪ್ರಿಯಾ ಚೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ದತ್ತು ತೆಗೆದುಕೊಂಡ ಬೀದಿ ನಾಯಿಗಳಿಗೆ ಈ ನಿಯಮ ಬೇಡ ಎಂದ ಐಂದ್ರಿತಾ ರೇ
ನಟಿ ಐಂದ್ರಿತಾ ರೇ ಅವರು ಪ್ರಾಣಿ ಪ್ರೇಮಿ ಮತ್ತು ಪ್ರಾಣಿಗಳ ರಕ್ಷಣಾ ಕಾರ್ಯಕರ್ತೆಯೂ ಆಗಿದ್ದು, “ಅಕ್ರಮ ಸಂತಾನೋತ್ಪತ್ತಿಯನ್ನು ಕೊನೆಗೊಳಿಸಲು ಈ ರೀತಿಯ ಕ್ರಮವು ಪ್ರಯೋಜನಕಾರಿ” ಎಂದು ಹೇಳಿದ್ದಾರೆ.
"ರಕ್ಷಿಸಲ್ಪಟ್ಟ ನಾಯಿಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಬೇಕು. ಏಕೆಂದರೆ ಇದು ಹೆಚ್ಚಿನ ನಾಯಿಗಳನ್ನು ರಕ್ಷಿಸಲು ಮತ್ತು ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯ ಸಮಸ್ಯೆಯನ್ನು ತಡೆಯಲು ಇದು ನೆರವಾಗಬಹುದು" ಎಂದು ಐಂದ್ರಿತಾ ಅವರು ಹೇಳಿದ್ದಾರೆ.
ಕಠಿಣ ನಿಯಮದಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾದೀತು- ಸ್ವಯಂಭೂ ಸೋಹಂ
ಪ್ರಾಣಿ ದಯಾ ಸಂಘದ ಕಾರ್ಯಕರ್ತರಾದ ಸ್ವಯಂಭೂ ಸೋಹಂ, ಒಂದು ಮನೆಗೆ ಒಂದು ನಾಯಿ ನಿಯಮ ಕಾರ್ಯಸಾಧುವಲ್ಲ ಎಂದಿದ್ದಾರೆ. ಈ ನಿಯಮದಿಂದ ಸಾಕುಪ್ರಾಣಿ ಮಾಲೀಕರು ಸಂಕಷ್ಟಕ್ಕೆ ಒಳಗಾಗುತ್ತಾರೆ. ನಾಯಿಗಳ ಸಂತಾನೋತ್ಪತ್ತಿ ಕಾಲದಲ್ಲಿ ಅವುಗಳನ್ನು ಬೀದಿ ಬಿಟ್ಟುಬಿಡುವ ಕೆಲಸವಾದೀತು. ಆಗ ನಾಯಿಯ ಮಾಲೀಕರು ಅದಕ್ಕೆ ಹೊಣೆಗಾರರಾಗಲ್ಲ ಎಂದು ಹೇಳಿಕೊಂಡಿದ್ದಾರೆ.