ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಬೆಂಗಳೂರು ಜನರಿಗೆ ಬಿಸಿಗಾಳಿಯ ಎಚ್ಚರಿಕೆ; ಸರ್ಕಾರದಿಂದ ಆರೋಗ್ಯ ಮಾರ್ಗಸೂಚಿ ಬಿಡುಗಡೆ
Mar 04, 2024 10:08 AM IST
ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಬಿಸಿಗಾಳಿ ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಇದೆ. ಪರಿಣಾಮವಾಗಿ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಲಾಗಿದೆ.
- Bangalore News: ಬಿಸಿಗಾಳಿಯಿಂದ ಪಾರಾಗಲು ಬೆಂಗಳೂರಿನ ಜನರು ಹೆಚ್ಚಾಗಿ ನೀರು, ನಿಂಬೆ ಹಣ್ಣಿನ ಜ್ಯೂಸ್, ಮಜ್ಜಿಗೆ, ಲಸ್ಸಿ ಹಾಗೂ ಹಣ್ಣಿನ ಜ್ಯೂಸ್‌ಗಳಂತಹ ಪಾನೀಯಗಳನ್ನ ಸೇವಿಸಿ ಡಿಹೈಡ್ರೇಶನ್‌ನಿಂದ ಪಾರಾಗಬೇಕು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನತೆ ಕಳೆದ ಹಲವು ದಿನಗಳಿಂದ ನೀರಿನ ಕೊರತೆಯಿಂದ ಕಂಗಾಲಾಗಿದ್ದಾರೆ. ಇದರ ನಡುವೆ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ. ಪೂರ್ಣ ಬೇಸಿಗೆ ಆರಂಭಕ್ಕೂ ಮುನ್ನವೇ ರಣ ಬಿಸಿಲಿಗೆ ಬೆಂಗಳೂರಿಗರು ಹೈರಾಣವಾಗಿದ್ದು, ಮನೆಯಿಂದ ಹೊರಗಡೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವಾರ ನಗರದಲ್ಲಿ ಉಷ್ಣಾಂಶ 33-34 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿತ್ತು. ಹಿಂದಿನ ವರ್ಷಕ್ಕಿಂತ ಈ ಬಾರಿ ಬಿಸಿಗಾಳಿಯನ್ನು ಎದುರಿಸುವಂತಾಗಿದೆ. ಬೆಳಗ್ಗೆ ಸ್ವಲ್ಪ ಚಳಿಯಂತೆ ಕಂಡರೂ 10 ಗಂಟೆಯ ನಂತರ ಸಂಜೆಯ ವರೆಗೆ ಬಿಸಿ, ಆ ನಂತರ ಸೆಕೆಯಂತ ವಾತಾವರಣವಿದೆ. ಸದ್ಯ ಬಿಸಿಗಾಳಿಯ ಸಂಬಂಧ ಆರೋಗ್ಯ ಇಲಾಖೆ ಹಲವು ಸಲಹೆ ಸೂಚನೆಗಳನ್ನು ನೀಡಿದೆ. ವಿಶೇಷವಾಗಿ ಮಕ್ಕಳು, ಗರ್ಭಿಣಿಯರು ಹಾಗೂ ಹೊರಗಡೆ ಕೆಲಸಕ್ಕೆ ಹೋಗುವ ಕೂಲಿಕಾರ್ಮಿಕರು ಸಲಹೆಗಳನ್ನು ಪಾಲಿಸಬೇಕೆಂದು ಹೇಳಿದೆ.
ಪೆಸಿಫಿಕ್ ಸಾಗರದಲ್ಲಿ ತಾಪಮಾನ ಏರಿಕೆಯ ಪರಿಣಾಮವಾಗಿ ಕರ್ನಾಟಕದ ಹಲವು ಭಾಗಗಳಲ್ಲಿ ಬಿಸಿ ಏರಿಕೆಗೆ ಕಾರಣವಾಗಿದೆ. ಉತ್ತರ ಮತ್ತು ಮಧ್ಯ ಭಾರತದ ಕೆಲವು ಪ್ರದೇಶಗಳು ಹೆಚ್ಚಿನ ಮಳೆಯಾಗಿರುವ ಕಾರಣ ಅಷ್ಟಾಗಿ ಬಿಸಿಯ ವಾತಾವರಣವನ್ನು ಕಾಣುತ್ತಿಲ್ಲ. ಆದರೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಫೆಬ್ರವರಿಯಿಂದಲೇ ಬಿಸಿಯನ್ನು ಎದುರಿಸುತ್ತಿವೆ. ಫೆಬ್ರವರಿಯಲ್ಲಿ ಯಾವುದೇ ರೀತಿಯ ಮಳೆಯಾಗದಿರುವುದು ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ.
ನಿರ್ಜಲೀಕರಣದಿಂದ ಪಾರಾಗಲು ಈ ಪಾನೀಯಗಳನ್ನ ಸೇವಿಸಿ
ಬಿಸಿಗಾಳಿಯನ್ನು ಎದುರಿಸಲು ಜನರು ದೈಹಿಕ ಹಾಗೂ ಮಾನಸಿಕವಾಗಿ ಸಿದ್ಧವಾಗಬೇಕು. ಡಿಹೈಡ್ರೇಶನ್‌ನಿಂದ ಪಾರಾಗಲು ಸರ್ಕಾರದ ಮಾರ್ಗಸೂಚನೆಗಳನ್ನು ಪಾಲಿಸಬೇಕಿದೆ. ಹೆಚ್ಚಾಗಿ ನೀರು ಸೇವನೆ, ನಿಂಬೆ ಜ್ಯೂಸ್, ಮಜ್ಜಿಗೆ, ನಸ್ಸಿ ಹಾಗೂ ಹಣ್ಣುಗಳ ಜ್ಯೂಸ್‌ನಂತಹ ದ್ರವಗಳನ್ನು ಸೇವಿಸಬೇಕು. ಈ ಪಾನೀಯಗಳಲ್ಲಿ ಒಂದು ಚಿಟಿಕೆಯಷ್ಟು ಉಪ್ಪನ್ನು ಸೇರಿಸಿ ಸೇವಿಸಿದರೆ ನಿರ್ಜಲೀಕರಣವನ್ನು ತಡೆಯಬಹುದು. ನೀರಿನಾಂಶ ಹೆಚ್ಚಿರುವ ತರಕಾರಿಗಳನ್ನು ಸೇವಿಸಬೇಕು. ತಿಳಿ ಬಣ್ಣದ ಹಾಗೂ ಕಾಟನ್ ಬಟ್ಟೆಗಳನ್ನು ಧರಿಸಬೇಕು. ಹೊರಗಡೆ ಹೋದಾಗ ಸೂರ್ಯನ ಕಿರಣಗಳಿಂದ ಪಾರಾಗಲು ಟೋಪಿ ಧರಿಸುವುದು, ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಹೋಗುವುದನ್ನ ತಪ್ಪಿಸುವುದು, ಮನೆಯೊಳಗಡೆ ಇದ್ದಾಗ ಸೂಕ್ತ ಗಾಳಿಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಾಗ ಬಿಸಿಲ ಝಳದಿಂದ ಉಂಟಾಗುವ ಡಿಹೈಡ್ರೇಶನ್‌ನಿಂದ ಪಾರಾಗಬಹುದು.
ನೀರಿನ ಸಮಸ್ಯೆಯಿಂದ ಜನ ಹೈರಾಣ
ಬೆಂಗಳೂರಿನಲ್ಲಿ ಕಳೆದ ಹಲವು ದಿನಗಳಿಂದ ನೀರಿಗೆ ತುಂಬಾ ಸಮಸ್ಯೆಯಾಗಿದೆ. ನಗರದ ಪ್ರಮುಖ ಪ್ರದೇಶಗಳಿಗೆ ನೀರು ಒದಗಿಸುವ ಕಾವೇರಿ ಬತ್ತಿ ಹೋಗುತ್ತಿದೆ. ಇದರಿಂದ ನೀರು ಪೂರೈಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಪರದಾಡುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿದೆ. ಅಪಾರ್ಟ್‌ಮೆಂಟ್‌ಗಳು, ಕೊಳಗೇರಿಗಳು ಹಾಗೂ ವ್ಯಾಪಾರ ವಹಿವಾಟಿನ ಮೇಲೆ ನೀರಿನ ಕೊರತೆ ಭಾರಿ ಪರಿಣಾಮವನ್ನು ಬೀರಿದೆ. ಅಪಾರ್ಟ್‌ಮೆಂಟ್ ಮಾಲೀಕರು ಹಣ ಕೊಡಲು ಸಿದ್ಧರಿದ್ದರೂ ನೀರೇ ಪೂರೈಕೆಯಾಗುತ್ತಿಲ್ಲ. ಇನ್ನೂ ಇದನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ಹಣಕ್ಕೆ ಟ್ಯಾಂಕರ್ ನೀರು ಪೂರೈಸುತ್ತಿದ್ದವರಿಗೆ ಸರ್ಕಾರ ಬಿಸಿ ಮುಟ್ಟಿಸಿದ್ದು, ಹೆಚ್ಚಿನ ದರ ಪಡೆದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ.
12 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ ನೀರಿಗೆ 400 ರೂಪಾಯಿಂದ 600 ರೂಪಾಯಿ ಇತ್ತು. ಆದರೆ ನೀರಿನ ಕೊರತೆಯಾಗುತ್ತಿರುವುದರಿಂದ ಟ್ಯಾಂಕರ್ ನೀರಿನ ದರ 800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ನಗರದೊಳಗಿನ ಬೋರ್‌ವೆಲ್‌ಗಳನ್ನು ಬತ್ತಿಹೋಗುತ್ತಿರುವುದರಿಂದ ಹೊರಗಡೆಯಿಂದ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನೀರಿನ ಟ್ಯಾಂಕರ್‌ಗಳ ಮಾಲೀಕರು ಹೇಳುತ್ತಿದ್ದಾರೆ.