logo
ಕನ್ನಡ ಸುದ್ದಿ  /  ಕರ್ನಾಟಕ  /  Namma Metro; ಬೆಂಗಳೂರು ಮೆಟ್ರೋ 3ನೇ ಹಂತ, ಕೇಂದ್ರದ ಅನುಮೋದನೆ ಬೆನ್ನಲ್ಲೇ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಪಿಇಎಸ್‌ ಆಗ್ರಹ

Namma Metro; ಬೆಂಗಳೂರು ಮೆಟ್ರೋ 3ನೇ ಹಂತ, ಕೇಂದ್ರದ ಅನುಮೋದನೆ ಬೆನ್ನಲ್ಲೇ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಪಿಇಎಸ್‌ ಆಗ್ರಹ

Umesh Kumar S HT Kannada

Aug 20, 2024 08:53 PM IST

google News

ಬೆಂಗಳೂರು ಮೆಟ್ರೋ 3ನೇ ಹಂತಕ್ಕೆ ಕೇಂದ್ರದ ಅನುಮೋದನೆ ಸಿಕ್ಕಿದ ಬೆನ್ನಲ್ಲೇ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಪಿಇಎಸ್‌ ಆಗ್ರಹಿಸಿದೆ. (ಸಾಂಕೇತಿಕ ಚಿತ್ರ)

  • Bengaluru Metro; ಬೆಂಗಳೂರು ಮೆಟ್ರೋ 3ನೇ ಹಂತ, ಕೇಂದ್ರದ ಅನುಮೋದನೆ ಬೆನ್ನಲ್ಲೇ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಪಿಇಎಸ್‌ ವಿಶ್ವವಿದ್ಯಾಲಯ ಆಗ್ರಹಿಸಿದೆ. ಇದಕ್ಕೆ ಪೂರಕ ಕಾರಣಗಳು ಇಲ್ಲಿವೆ (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಮೆಟ್ರೋ 3ನೇ ಹಂತಕ್ಕೆ ಕೇಂದ್ರದ ಅನುಮೋದನೆ ಸಿಕ್ಕಿದ ಬೆನ್ನಲ್ಲೇ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಪಿಇಎಸ್‌ ಆಗ್ರಹಿಸಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಮೆಟ್ರೋ 3ನೇ ಹಂತಕ್ಕೆ ಕೇಂದ್ರದ ಅನುಮೋದನೆ ಸಿಕ್ಕಿದ ಬೆನ್ನಲ್ಲೇ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಸ್ಥಳಾಂತರಕ್ಕೆ ಪಿಇಎಸ್‌ ಆಗ್ರಹಿಸಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಬೆಂಗಳೂರಿನ ನಮ್ಮ ಮೆಟ್ರೋದ 3ನೇ ಹಂತದ 15,611 ಕೋಟಿ ರೂಪಾಯಿಯ ಯೋಜನೆಗೆ ಅನುಮೋದನೆ ನೀಡಿದ್ದರೂ ಮೆಟ್ರೋ ಮಾರ್ಗ ಹಾದು ಹೋಗುವ ಕೆಲವು ಕಡೆ ಅಡಚಣೆಗಳು ಗೋಚರಿಸುತ್ತಿವೆ. ಇಂತಹ ಅಡಚಣೆಗಳಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತದೆಯೇ ಹೊರತು ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ.

ಕರ್ನಾಟಕ ಸರ್ಕಾರ ಭೂಮಿ ವಶಪಡಿಸಿಕೊಳ್ಳಲು ಅನುಮತಿ ನೀಡಿದ್ದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ (ಬಿಎಂಆರ್‌ ಸಿ ಎಲ್)‌ 3ನೇ ಹಂತದ ಯೋಜನೆಗೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದೆ. ಆದರೆ ಹೊರ ವರ್ತುಲ ರಸ್ತೆಯ ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಪ್ರತಿಷ್ಠಿತ ಪಿ ಇ ಎಸ್‌ ವಿಶ್ವವಿದ್ಯಾಲಯ ಅಪಸ್ವರ ಎತ್ತಿದೆ.

ಪಿಇಎಸ್‌ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಜವಾಹರ್‌ ದೊರೆಸ್ವಾಮಿ, ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣದ ಸ್ಥಳವನ್ನು ಬದಲಾಯಿಸುವಂತೆ ಬಿಎಂಆರ್‌ ಸಿಎಲ್‌ ಮತ್ತು ಕೇಂದ್ರ ರೈಲ್ವೇ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ.

ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಯಾಕೆ ವಿರೋಧ

ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣ ಪ್ರವೇಶಿಸಲು, ಪಿಇಎಸ್‌ ವಿಶ್ವವಿದ್ಯಾಲಯಕ್ಕೆ ಸೇರಿರುವ 720 ಚ.ಅಡಿ ಭೂಮಿ ಅವಶ್ಯಕತೆ ಇದೆ. ಮೂರನೇ ಹಂತವು ಎರಡು ಎತ್ತರಿಸಿದ ಕಾರಿಡಾರ್‌ಗಳನ್ನು ಹೊಂದಿದೆ. ಹೊರ ವರ್ತುಲ ರಸ್ತೆಯಲ್ಲಿ 31.15 ಕಿಮೀ ಮತ್ತು ಮಾಗಡಿ ರಸ್ತೆಯಲ್ಲಿ 12.5 ಕಿಮೀ ಹಾದು ಹೋಗಲಿದೆ. ಹೊಸಹಳ್ಳಿ ನಮ್ಮ ಮೆಟ್ರೋ ನಿಲ್ದಾಣವು ಹೊರ ವರ್ತುಲ ರಸ್ತೆಯಲ್ಲಿ ದ್ವಾರಕಾನಗರ ಮತ್ತು ಕಾಮಾಕ್ಯ ಜಂಕ್ಷನ್‌ ನಡುವೆ ಸ್ಥಾಪನೆಯಾಗಲಿದೆ.

ಮೆಟ್ರೋ ನಿಲ್ದಾಣ ಸ್ಥಾಪನೆಯಾಗುವ ದಿಕ್ಕಿನಿಂದ ಸುಮಾರು 15 ಸಾವಿರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ಪ್ರವೇಶಿಸುತ್ತಾರೆ. ವಿವಿ ಪಕ್ಕದಲ್ಲೇ ಇರುವ, ದಶಕಗಳಿಂದ ಖಾಲಿ ಉಳಿದಿರುವ ಸರ್ಕಾರಿ ಭೂಮಿಯಲ್ಲಿ ಮೆಟ್ರೋ ನಿಲ್ದಾಣವನ್ನು ಸ್ಥಾಪಿಸಬಹುದಾಗಿದೆ. ಇದರಿಂದ ವಶಪಡಿಸಿಕೊಳ್ಳುವ ಭೂಮಿಗೆ ಯಾವುದೇ ಪರಿಹಾರ ನೀಡುವ ಪ್ರಮೇಯವೂ ಉದ್ಭವಿಸುವುದಿಲ್ಲ. ಈ ಮೂಲಕ ವಿಶ್ವವಿದ್ಯಾಲಯದ ಪಕ್ಕದ ಕೇವಲ 50 ಮೀಟರ್‌ ಮುಂದಕ್ಕೆ ಸ್ಟೇಷನ್‌ ವರ್ಗಾಯಿಸಬಹುದಾಗಿದೆ. ಇಲ್ಲವೇ ಬಲ ಬಾಗದಲ್ಲಿ 100 ಮೀಟರ್‌ ಸಾಗಿದರೆ ಅಲ್ಲಿಯೂ ಮೆಟ್ರೋ ನಿಲ್ದಾಣವನ್ನು ಸ್ಥಾಪಿಸಬಹುದಾಗಿದೆ.

ಉದ್ದೇಶಿತ ಸ್ಥಳದಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಿದರೆ ವಿಶ್ವವಿದ್ಯಾಲಯದ ಮುಖ್ಯ ದ್ವಾರವನ್ನು ಶಾಶ್ವತವಾಗಿ ಮುಚ್ಚಬೇಕಾಗುತ್ತದೆ ಮತ್ತು ಸಂಚಾರ ದಟ್ಟಣೆ ಹೆಚ್ಚುತ್ತದೆ. ಅದರಲ್ಲೂ ಕಚೇರಿಗಳು ಆರಂಭವಾಗುವ ಮತ್ತು ಮುಚ್ಚುವ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚುತ್ತದೆ ಎಂದು ತಮ್ಮ ಪತ್ರದಲ್ಲಿ ಜವಾಹರ್‌ ಅವರು ವಿವರಿಸಿದ್ದಾರೆ.

ರಿಂಗ್‌ ರಸ್ತೆ ನಿರ್ಮಿಸಲು ವಿಶ್ವವಿದ್ಯಾಲಯ ಈಗಾಗಲೇ 1.5 ಎಕರೆ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿದೆ. ಇದುವರೆಗೂ ಪರಿಹಾರ ಬಂದಿಲ್ಲ ಎನ್ನುವುದನ್ನು ನೆನಪು ಮಾಡಿಕೊಟ್ಟಿದ್ದಾರೆ.

ಮೆಟ್ರೋ ಮಾರ್ಗ ಬದಲಾಗುವುದು ಡೌಟ್‌

ಪಿಇಎಸ್‌ ಕ್ಯಾಂಪಸ್‌ ಹತ್ತಿರದಲ್ಲಿ ಗಿರಿನಗರ ಮತ್ತು ವೀಭದ್ರನಗರದ ಎರಡು ಮೇಲ್ಸೇತುವೆಗಳಿವೆ. ಈ ಮೇಲ್ಸೇತುವೆಗಳು ಉದ್ಧೇಶಿತ ಮೆಟ್ರೋ ನಿಲ್ದಾಣಕ್ಕೆ 20 ಮೀಟರ್‌ ದೂರದಲ್ಲಿವೆ. ಇದರಿಂದಲೂ ವಾಹನ ದಟ್ಟಣೆ ಹೆಚ್ಚುತ್ತದೆ ಎಂದು ವಿವರಿಸಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಈಗಾಗಲೇ ತುಂಬಾ ತಡವಾಗಿದ್ದು, ಮೆಟ್ರೋ ಮಾರ್ಗದಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಇಡೀ ಮೆಟ್ರೋ ಮಾರ್ಗ ಮತ್ತು ನಿಲ್ದಾಣದ ನೀಲನಕ್ಷೆ ರಚನೆಯಾಗಿದೆ. ಈ ಹಂತದಲ್ಲಿ ಯಾವುದೇ ಬದಲಾವಣೆ ಮಾಡಲು ಅಸಾಧ್ಯ. ಒಂದು ವೇಳೆ ಬದಲಾವಣೆ ಮಾಡುವುದಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುಮೋದನೆ ಪಡೆಯಬೇಕಾಗುತ್ತದೆ. ಇದರಿಂದ ಯೋಜನೆ ವಿಳಂಬವಾಗುತ್ತದೆ ಮತ್ತು ಅನುದಾನ ಹೆಚ್ಚಳವಾದರೂ ಅಚ್ಚರಿಯಿಲ್ಲ ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿವೆ.

(ವರದಿ- ಎಚ್.ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ