Bengaluru Crime: ಲ್ಯಾಪ್ಸ್ ಪಾಲಿಸಿಗಳಿಗೆ ಹಣ ಕಟ್ಟಿಸಿಕೊಂಡು ಹಿರಿಯ ನಾಗರಿಕರಿಗೆ ವಂಚನೆ, ಆರೋಪಿಗಳ ಬಂಧನ
Dec 13, 2023 08:10 AM IST
ವಂಚನೆ , ಮಹಿಳಾ ಸಹೋದ್ಯೋಗಿಗಳ ಮಾರ್ಪಿಂಗ್ ಪ್ರಕರಣದಲ್ಲಿ 6 ಮಂದಿ ಬಂಧನ
Bengaluru News: ಪಾಲಿಸಿ ಹೆಸರಿನಲ್ಲಿ ಹಿರಿಯ ನಾಗರಿಕರಿಗೆ ವಂಚನೆ ಹಾಗೂ ಮಹಿಳಾ ಸಹೋದ್ಯೋಗಿಗಳ ಮಾರ್ಪಿಂಗ್ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ವಿವಿಧ ಇನ್ಶ್ಯೂರೆನ್ಸ್ ಕಂಪನಿಗಳ ಹೆಸರು ಬಳಸಿಕೊಂಡು ಹಿರಿಯ ನಾಗರಿಕರನ್ನು ವಂಚಿಸಿ ಸುಮಾರು 2 ಕೋಟಿ ರೂಪಾಯಿ ಕಬಳಿಸಿದ್ದ ನಕಲಿ ಕಂಪನಿಯ ಐವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಮೋಸ
ಆರೋಪಿಗಳು ಬಜಾಜ್ ಅಲಯನ್ಸ್ ಇನ್‌ಶೂರೆನ್ಸ್, ಹೆಚ್‌ಡಿಎಫ್‌ಸಿ, ರಿಲಯನ್ಸ್, ಭಾರತಿ ಅಕ್ಸಾ, ಕೋಟಕ್ ಮಹೀಂದ್ರ, ಇಂಡಿಯಾ ಫಸ್ಟ್ ರಿಲಯನ್ಸ್ ನಿಪ್ಪೋನ್ ಕಂಪನಿಗಳ ಹೆಸರನ್ನು ಬಳಸಿಕೊಂಡು ಶ್ರೀನಿಧಿ ಇನ್ಫೋಸೋರ್ಸ್ ಎಂಬ ಕಛೇರಿ ನಡೆಸುತ್ತಿದ್ದರು. ಈ ಕಛೇರಿಯಲ್ಲಿ ಐವರು ಟೆಲಿಕಾಲ್ ಸೆಂಟರ್ ಕೆಲಸ ಮಾಡುತ್ತಿದ್ದರು. ಇವರು ಲ್ಯಾಪ್ಸ್ ಆಗಿರುವ ಪಾಲಿಸಿದಾರಿಗೆ ಕರೆ ಮಾಡಿ, ಪಾಲಿಸಿ ಹಣ ಕಟ್ಟಿದರೆ ಇನ್‌ಶೂರೆನ್ಸ್ ಹಣ ದೊರೆಯುತ್ತದೆ ಅಥವಾ ಈಗಾಗಲೇ ಕಟ್ಟಲಾಗಿರುವ ಕಂತಿನ ಹಣಕ್ಕೆ ಬಡ್ಡಿ ಸಮೇತ ಹಣವನ್ನು ವಾಪಸ್ ನೀಡಲಾಗುವುದು ಎಂದು ನಂಬಿಸುತ್ತಿದ್ದರು. ಅಲ್ಲದೆ ಹಿರಿಯ ನಾಗರಿಕರಿಗೆ ಒಂದು ವರ್ಷಕ್ಕೆ 1 ಕೋಟಿಯ ಪಾಲಿಸಿ ಮಾಡಿಸಿದ್ದಲ್ಲಿ 5 ಕೋಟಿ ರೂಪಾಯಿ ಸಿಗಲಿದೆ ಎಂದು ನಂಬಿಸಿ, ಅವರ ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿ ಹೆಚ್ಚಿನ ಪಾಲಿಸಿಗಳನ್ನು ಮಾಡಿಸುವಂತೆ ಆಮಿಷ ಒಡ್ಡುತ್ತಿದ್ದರು.
ಈ ರೀತಿ ಅಮಾಯಕ ಜನರಿಂದ ಹಣ ಕಟ್ಟಿಸಿಕೊಂಡು ತಮ್ಮ ಸ್ವಂತ ಅಕೌಂಟ್ ಹಾಗೂ ಹೆಸರಿನಲ್ಲಿ ಪಾಲಿಸಿಗಳನ್ನು ಮಾಡಿಸಿಕೊಳ್ಳುತ್ತಿದ್ದರು.ಪಾಲಿಸಿ ಹಣವನ್ನು ಪಡೆಯಲು ಮುಂಗಡ ಹಣವನ್ನು ಕಟ್ಟುವಂತೆ ಆಮಿಷವೊಡ್ಡಿ, ಅಮಾಯಕ ಜನರಿಂದ ಸುಮಾರು 1,80,00,000 ರೂಪಾಯಿ ಸಂಗ್ರಹಿಸಿದ್ದರು. ಇದರಲ್ಲಿ 40 ಲಕ್ಷ ರೂ. ಹಣವನ್ನು ತಮ್ಮ ಸ್ವಂತ ಖಾತೆಗೆ ಜಮಾ ಮಾಡಿಕೊಂಡು ಹಿರಿಯ ನಾಗರಿಕರಿಗೆ ವಂಚನೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಇದೇ ರೀತಿ ಸೈಬರ್ ವಂಚನೆಯ ಹಲವು ಪ್ರಕರಣಗಳು ತನಿಖೆಯಿಂದ ಪತ್ತೆಯಾಗಿದೆ. ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಹಿಳಾ ಸಹದ್ಯೋಗಿಗಳ ಪೋಟೋ ಮಾರ್ಪ್ ಮಾಡುತ್ತಿದ್ದವನ ಬಂಧನ
ಮಹಿಳಾ ಸಹದ್ಯೋಗಿಗಳು ಮತ್ತು ಇತರರ ಸುಮಾರು 12,000 ಭಾವಚಿತ್ರಗಳನ್ನು ಮಾರ್ಪಿಂಗ್ ಮಾಡಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈತನ ವಿರುದ್ಧ ಕ್ರಮ ಜರುಗಿಸುವಂತೆ ಖಾಸಗಿ ಕಂಪನಿಯ ಕಾನೂನು ವಿಭಾಗದ ಮುಖ್ಯಸ್ಥರು ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದರು.
ಏನಿದು ಪ್ರಕರಣ?
ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮಹಿಳಾ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಆಕೆಯ ಜೊತೆಗಿದ್ದ ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಈ ಸಂಬಂಧ ಸೈಬರ್ ಕೈಂ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆಯುತ್ತಾರೆ. ತನಿಖೆ ವೇಳೆ ಆರೋಪಿಯ ಮೊಬೈಲ್‌ನಲ್ಲಿ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 11 ಮಹಿಳಾ ಸಹೋದ್ಯೋಗಿಗಳ ಫೋಟೋಗಳನ್ನು ಮಾರ್ಪ್ ಮಾಡಿರುವುದು ಬೆಳಕಿಗೆ ಬಂದಿದೆ.
ಅರೋಪಿಯನ್ನು ಮತ್ತಷ್ಟು ಸುದೀರ್ಘ ವಿಚಾರಣೆಗೊಳಪಡಿಸಿದಾಗ, ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಇನ್‌ಸ್ಟಾಗ್ರಾಂ, ಸ್ನಾಪ್‌ಚಾಟ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ಅವರ ಡಿಪಿಯಿಂದ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು, ಟೆಲಿಗ್ರಾಂನಲ್ಲಿರುವ ಒಂದು ಆಪ್ ಮುಖಾಂತರ, ಹುಡುಗಿಯರ ಫೋಟೋಗಳನ್ನು ಕಳುಹಿಸುತ್ತಾನೆ. ಅದೇ ಅಪ್ ಮುಖಾಂತರ ಹುಡುಗಿಯರ ಮಾರ್ಪ್ ಮಾಡಿರುವ ಚಿತ್ರಗಳು ಆತನ ಮೊಬೈಲ್‌ನಲ್ಲಿ ಶೇಖರಣೆಗೊಳ್ಳುತ್ತದೆ. ಮಾರ್ಪ್ ಮಾಡಲಾದ ಪೋಟೋಗಳನ್ನು ಬಳಸಿಕೊಂಡು ಆ ಹುಡುಗಿಯರನ್ನು ಬ್ಲ್ಯಾಕ್‌ಮೇಲ್ ಮಾಡುವ ಉದ್ದೇಶ ಹೊಂದಿದ್ದಾಗಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸುವಲ್ಲಿ ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ.