ಅವಧಿ ಮೀರಿ ತೆರೆದಿದ್ದ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು; ದಂಡ ವಿಧಿಸುವ ಎಚ್ಚರಿಕೆ ನೀಡಿದ ಡಿಸಿಪಿ
Jul 22, 2024 11:27 AM IST
ಅವಧಿ ಮೀರಿ ತೆರೆದಿದ್ದ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು.
- Bengaluru News: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಅವಧಿ ಮೀರಿ ತೆರೆದಿದ್ದ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. (ವರದಿ: ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಅವಧಿ ಮೀರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಬಾರ್, ಪಬ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಿಢೀರ್ ದಾಳಿ ನಡೆಸಿ ಪೊಲೀಸರು ಶಾಕ್ ನೀಡಿದ್ದಾರೆ. ಅವಧಿ ಮೀರಿ ವಹಿವಾಟು ನಡೆಸುತ್ತಿದ್ದಕ್ಕೆ ತಪಾಸಣೆ ನಡೆಸಿ ಬಾಗಿಲು ಮುಚ್ಚಿಸಿದ್ದಾರೆ.
ಸಾಮಾನ್ಯವಾಗಿ ವಾರಾಂತ್ಯದ ದಿನಗಳಲ್ಲಿ ನಿಗದಿತ ಅವಧಿಯನ್ನು ಮೀರಿ ಹೆಚ್ಚಿನ ಅವಧಿಯವರೆಗೆ ಗ್ರಾಹಕರಿಗೆ ಮದ್ಯ ಮತ್ತು ಊಟವನ್ನು ಪೂರೈಕೆ ಮಾಡಲಾಗುತ್ತಿತ್ತು. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿತ್ತು. ಈ ರೀತಿ ತೊಂದರೆ ಅನುಭವಿಸುತ್ತಿದ್ದ ನಿವಾಸಿಗಳು ಹಲವಾರು ಬಾರಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಕೇಂದ್ರ ವಿಭಾಗದ ಡಿಸಿಪಿ ಎಚ್.ಟಿ. ಶೇಖರ್ ಅವರ ನೇತೃತ್ವದ ತಂಡ ಶನಿವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ದಿಢೀರ್ ತಪಾಸಣೆ ನಡೆಸಿದರು. ಸರ್ಕಾರ ನಿಗದಿಪಡಿಸಿದ್ದ ಅವಧಿಯನ್ನು ಮೀರಿ ತಡರಾತ್ರಿವರೆಗೂ ವ್ಯಾಪಾರ ನಡೆಸುತ್ತಿದ್ದ ಎಲ್ಲಾ ಬಾರ್, ಪಬ್ ಮತ್ತು ರೆಸ್ಟೋರೆಂಟ್ ಗಳನ್ನು ಮುಚ್ಚಿಸಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಡರಾತ್ರಿವರೆಗೂ ಅವಧಿ ಮೀರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳ ವಿರುದ್ಧ ಕಳೆದ ಎರಡು ವಾರಗಳಿಂದ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ. ನಿಗದಿತ ಸಮಯಕ್ಕೆ ಬಾರ್, ಪಬ್ ಮತ್ತು ರೆಸ್ಟೋರೆಂಟ್ ಗಳನ್ನು ಮುಚ್ಚಲಾಗುತ್ತಿದೆಯೇ ಎಂದು ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಗಸ್ತು ಪೊಲೀಸರು ಸರಿಯಾದ ಸಮಯಕ್ಕೆ ಮುಚ್ಚಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಕಳೆದ ವಾರವೂ ಅವದಿ ಮೀರಿ ವಹಿವಾಟು ನಡೆಸುತ್ತಿದ್ದ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಡಿಸಿಪಿ ಶೇಖರ್ ತಿಳಿಸಿದ್ದಾರೆ.
ಅವಧಿ ಮೀರಿ ವಾಣಿಜ್ಯ ವಹಿವಾಟು ನಡೆಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಅವಧಿ ಮೀರಿ ಪಬ್ ತೆರೆದು ವಹಿವಾಟು ನಡೆಸುತ್ತಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಒಡೆತನದ ಒನ್-8 ಪಬ್ ವಿರುದ್ಧ ಜುಲೈ 9ರಂದೇ ದೂರು ದಾಖಲಿಸಲಾಗಿದೆ.
ದುರುಗುಟ್ಟಿ ನೋಡಿದ್ದಕ್ಕೆ ಕೊಲೆ; ಇಬ್ಬರ ಬಂಧನ
ತಮ್ಮ ಗುಂಪಿನ ಒಬ್ಬರನ್ನು ದುರುಗುಟ್ಟಿಕೊಂಡು ನೋಡಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಅಪರಿಚಿತ ಗುಂಪೊಂದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ
ರಾಮಮೂರ್ತಿ ನಗರದಲ್ಲಿ ನಡೆದಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಯ್ಸಳ ನಗರ ನಿವಾಸಿ ಮನೋಜ್ ಮೃತ ದುರ್ದೈವಿ. 22 ವರ್ಷದ ಈತ ಖಾಸಗಿ ಕಂಪನಿಯ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಬೆಳಗ್ಗೆ ಮನೋಜ್ ತನ್ನ ಸ್ನೇಹಿತ ಆಂಥೋನಿಯ ಜತೆ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ರಾಮಮೂರ್ತಿ ನಗರ ಮುಖ್ಯ ರಸ್ತೆಯಲ್ಲಿ ಜಗಳವೊಂದು ನಡೆಯುತ್ತಿತ್ತು. ಅಲ್ಲಿಗೆ ಮನೋಜ್ ಕೂಡಾ ತೆರಳಿ ಜಗಳವನ್ನು ನೋಡುತ್ತಾ ನಿಂತಿದ್ದರು. ಆಗ ಮನೋಜ್ ತಮ್ಮನ್ನು ಗುರಾಯಿಸಿದರು ಎಂದು ಅಕ್ಷೇಪಿಸಿ ಅಪರಿಚಿತರ ಗುಂಪೊಂದು ಜಗಳ ತೆಗೆದಿದೆ. ಎರಡೂ ಕಡೆಯವರು ಕೈ ಕೈ ಮಿಲಾಯಿಸಿದ್ದಾರೆ. ಎದುರಾಳಿ ಗುಂಪಿನ ಕೆಲವರು ಮನೋಜ್ ಮತ್ತು ಆಂಥೋಣಿಗೆ ಚಾಕುವಿನಿಂದ ಚುಚ್ಚಿದ್ದಾರೆ. ಮನೋಜ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಆಂಥೋಣಿ ಅಪಾಯದಿಂಧ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
(ವರದಿ: ಎಚ್.ಮಾರುತಿ, ಬೆಂಗಳೂರು)