logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಪರ್ಕ ಸಾಧ್ಯತೆ; ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ -Bengaluru Tumkur Namma Metro

ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಪರ್ಕ ಸಾಧ್ಯತೆ; ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಆಹ್ವಾನ -Bengaluru Tumkur Namma Metro

Raghavendra M Y HT Kannada

Mar 02, 2024 10:33 AM IST

google News

ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಕರೆಯಲಾಗಿದೆ.

    • ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಬೆಂಗಳೂರಿನಿಂದ ತುಮಕೂರಿಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋ ಯೋಜನೆಗೆ ಆಸಕ್ತಿ ವಹಿಸಿದ್ದಾರೆ. ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಆಹ್ವಾನಿಸಲಾಗಿದೆ.
ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಕರೆಯಲಾಗಿದೆ.
ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ಯೋಜನೆ ವಿಸ್ತರಣೆ ಮಾಡುವ ಸಾಧ್ಯತೆ ಇದ್ದು, ಕಾರ್ಯ ಸಾಧ್ಯತಾ ವರದಿಗೆ ಟೆಂಡರ್ ಕರೆಯಲಾಗಿದೆ.

ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಪರ್ಕ ಬಯಸುವ ಸಾವಿರಾರು ಪ್ರಯಾಣಿಕರಿಗೆ ಸಿಹಿ ಸುದ್ದಿ ಬಂದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ಬೆಂಗಳೂರಿನ ಮಾದಾವಾರದಿಂದ ತುಮಕೂರುವರೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಮುಕ್ತ ಟೆಂಡರ್ ಆಹ್ವಾನಿಸಲಾಗಿದೆ. ಮಾದಾವಾರದಿಂದ ತುಮಕೂರಿಗೆ 52.41 ಕಿ.ಮೀ ದೂರವಿದ್ದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ಸಂಪರ್ಕ ನಿರ್ಮಾಣವಾಗುವ ಸಾಧ್ಯತೆಗಳಿವೆ. ಮಾರ್ಚ್ 1ರಿಂದ ಟೆಂಡರ್ ದಾಖಲೆಗಳನ್ನು ನಿಗಮದ ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಬಿಡ್ ಸಲ್ಲಿಸಲು ಏಪ್ರಿಲ್ 2 ಅಂತಿಮ ದಿನವಾಗಿರುತ್ತದೆ. ಇತ್ತೀಚೆಗೆ ಮಂಡಿಸಿದ 2024-25ರ ತಮ್ಮ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೋ ಸಂಪರ್ಕ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದರು.

ಶೀಘ್ರವೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿಯವರೆಗೆ ಮೆಟ್ರೋ ಸಂಪರ್ಕ ಕುರಿತು ಕಾರ್ಯಸಾಧ್ಯತೆ ಕುರಿತು ಅಧ್ಯಯನ ನಡೆಸಲು ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಲಿದೆ ಎಂದು ತಿಳಿದು ಬಂದಿದೆ. ಆರಂಭದಲ್ಲಿ ನಮ್ಮ ಮೆಟ್ರೋದ ಹಸಿರು ಮಾರ್ಗವನ್ನು ಮಾದಾವಾರದಿಂದ ಕುಣಿಗಲ್ ಕ್ರಾಸ್‌ವರೆಗೆ 11 ಕಿಮೀವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ ಗೃಹ ಸಚಿವರು ಮತ್ತು ತುಮಕೂರು ಜಿಲ್ಲೆಯ ಕೊರಟಗೆರೆ ಶಾಸಕರು ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಮೆಟ್ರೋ ಜಾಲವನ್ನು ತಮ್ಮ ತವರು ಜಿಲ್ಲೆ ತುಮಕೂರಿಗೆ ವಿಸ್ತರಿಸಲು ಆಸಕ್ತಿ ತೋರಿಸಿದ್ದಾರೆ. ಈ ಯೋಜನೆಯಿಂದ ಬೆಂಗಳೂರಿನ ಮೇಲಿನ ಹೊರೆ ತಗ್ಗಲಿದೆ ಮತ್ತು ಈ ಯೋಜನೆಗೆ ಬಂಡವಾಳ ಹೂಡಲು ಖಾಸಗಿ ಕಂಪನಿಗಳು ಆಸಕ್ತಿ ಹೊಂದಿವೆ ಎಂದು ತಿಳಿಸಿದ್ದರು.

ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲೇ ಮೆಟ್ರೋ ನಿರ್ಮಾಣ ಕಲ್ಪಿಸಬಹುದು ಎನ್ನುವುದು ಪರಮೇಶ್ವರ ಅವರ ಚಿಂತನೆಯಾಗಿದೆ. ಬಂಡವಾಳ ವೆಚ್ಚ, ಸಂಚಾರ ದಟ್ಟಣೆ, ಮೆಟ್ರೋ ಹಳಿಗಳ ಮಾರ್ಗ, ವಶಪಡಿಸಿಕೊಳ್ಳಬೇಕಾದ ಆಸ್ತಿಗಳ ಸಂಖ್ಯೆ ಮತ್ತು ಭೂಮಿ ವಶಪಡಿಸಿಕೊಳ್ಳುವಲ್ಲಿ ಎದುರಾಗುವ ತೊಂದರೆಗಳನ್ನು ಕುರಿತು ಟೆಂಡರ್ ಪಡೆಯುವ ಸಂಸ್ಥೆ ಅಧ್ಯಯನ ನಡೆಸಲಿದೆ. ಈ ವರದಿಯು 3-4 ತಿಂಗಳಲ್ಲಿ ಸಿದ್ದಗೊಳ್ಳಲಿದ್ದು, ನಂತರದ ಕ್ರಮವನ್ನು ಸಕಾರ ನಿರ್ಧರಿಸುತ್ತದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.

ಈ ಮಾರ್ಗ ಎರಡು ಪ್ರಮುಖ ನಗರಗಳ ನಡುವಿನದ್ದಾಗಿದ್ದು, ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ ಅಡಿಯಲ್ಲಿ ನಿರ್ಮಾಣವಾಗಲಿದೆ. ಅಂದರೆ ದೆಹಲಿ ಮೀರತ್ ನಡುವಿನ ಸೆಮಿ ಹೈ ಸ್ಪೀಡ್ ಮೆಟ್ರೋ ಮಾರ್ಗದಂತೆ ಈ ಮಾರ್ಗವೂ ಇರಲಿದೆ. ಇದರ ಪ್ರಕಾರ ಮೆಟ್ರೋ ಸ್ಟೇಷನ್ ಗಳನ್ನು 5ರಿಂದ 10 ಕಿಮೀ ಗೆ ಒಂದರಂತೆ ನಿಲ್ದಾಣವನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಪ್ರಯಾಣದ ಸಮಯ ಉಳಿತಾಯವಾಗಲಿದೆ.

ಒಂದು ವೇಳೆ ಸೆಟಲೈಟ್ ನಗರಗಳಿಗೂ ಮೆಟ್ರೋ ಜಾಲವನ್ನು ವಿಸ್ತರಿಸಲು ಸರಕಾರ ಸಮ್ಮತಿಸಿದರೆ 317 ಕಿಮೀ ಉದ್ದದ ಮೆಟ್ರೋ ಜಾಲ 2031ರ ವೇಳೆಗೆ ನಿರ್ಮಿಸಬಹುದಾಗಿದೆ. ಬೆಂಗಳೂರಿನ ಒಳಗೆ 34 ಕಿಮೀ ಉದ್ದದ ಸುರಂಗ ಮಾರ್ಗ, ವೈಟ್ ಫೀಲ್ಡ್ ನಿಂದ ದೊಮ್ಮಲೂರುವರೆಗಿನ 16 ಕಿಮೀ, ಕಾಟಂನಲ್ಲೂರು ಗೇಟ್ ನಿಂದ ಸರ್ಜಾಪುರ ರಸ್ತೆ ಮತ್ತು ಹೆಬ್ಬಾಳವರೆಗಿನ 52 ಕಿಮೀ ಮಾರ್ಗದ ಮೆಟ್ರೋ ಜಾಲ ನಿರ್ಮಾಣವಾಗಲಿದೆ. ಸಧ್ಯಕ್ಕೆ ಈ ಜಾಲ ಕುರಿತು ಸರಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲವಾದರೂ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎಂದು ಮೆಟ್ರೋ ಮೂಲಗಳು ತಿಳಿಸಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ