PM Modi: ಜ 19 ರಂದು ಪ್ರಧಾನಿ ಮೋದಿ ಬೆಂಗಳೂರು ಭೇಟಿ, ರೋಡ್ ಶೋ ಆಯೋಜನೆಗೆ ಕರ್ನಾಟಕ ಬಿಜೆಪಿ ಸಿದ್ಧತೆ
Jan 17, 2024 10:32 AM IST
ಬೆಂಗಳೂರಿಗೆ ಜನವರಿ 19ರಂದು ಪ್ರಧಾನಿ ಮೋದಿ ಆಗಮಿಸಲಿದ್ದು, ಅದೇ ದಿನ ರೋಡ್ ಶೋ ಆಯೋಜಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದಾರೆ. (ಸಾಂಕೇತಿಕ ಚಿತ್ರ)
PM Modi Road Show: ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ (ಜ.22) ಗೆ ಮುಂಚಿತವಾಗಿ ಎರಡು ನಿಗದಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಜ.19ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲೇ ರೋಡ್ ಶೋ ಆಯೋಜಿಸಲು ಬಿಜೆಪಿ ನಾಯಕರು ಶ್ರಮಿಸುತ್ತಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನಾಡಿದ್ದು ಶುಕ್ರವಾರ (ಜ.19) ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರ ಈ ಭೇಟಿಯ ಹಿನ್ನೆಲೆಯಲ್ಲಿ, ಅದೇ ದಿನ ನಿಗದಿಯಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಬಿಜೆಪಿ ನಾಯಕರು ಮುಂದೂಡಿದ್ದಾರೆ. ಪ್ರಧಾನಿ ಮೋದಿ ಅವರ ರೋಡ್ ಶೋ ನಡೆಸುವುದಕ್ಕೆ ಮನವಿ ಮಾಡಿ, ಮಾರ್ಗದ ನೀಲ ನಕ್ಷೆಯನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಅವರು ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಪ್ರಮುಖ ಬೋಯಿಂಗ್‌ನ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ. ಮೋದಿ ಅವರು ಉದ್ಘಾಟಿಸಲಿರುವ ಹೊಸ ಕ್ಯಾಂಪಸ್ ಹೈಟೆಕ್ ಏರೋಸ್ಪೇಸ್ ಪಾರ್ಕ್ ಆಗಿದ್ದು, ಅಮೆರಿಕ ಬಿಟ್ಟು ಹೊರಗೆ ಆ ರೀತಿ ಅತ್ಯಾಧುನಿಕ ಸೌಕರ್ಯ ಹೊಂದಿದ ಅತಿ ದೊಡ್ಡ ಬೋಯಿಂಗ್ ಸೌಲಭ್ಯ ಎಂದು ಮೂಲಗಳು ಹೇಳಿವೆ.
ಬಿಜೆಪಿಯ ಮೂಲಗಳ ಪ್ರಕಾರ, ಪ್ರಧಾನಿಯವರ ಭೇಟಿಯು ಅಧಿಕೃತ ಕಾರ್ಯಕ್ರಮಕ್ಕೆ ಸೀಮಿತವಾಗಿದೆ. ಅವರು ಯಾವುದೇ ಪಕ್ಷಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ.
ಈ ಮಧ್ಯೆ, ಜನವರಿ 19 ರಂದು ನಿಗದಿಯಾಗಿದ್ದ ತನ್ನ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಬಿಜೆಪಿ ಮುಂದೂಡಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು, ಪ್ರಧಾನಿಯವರು ಜ.19ರಂದು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಕಾರ್ಯಕಾರಿಣಿಯನ್ನು ಮುಂದೂಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ನವದೆಹಲಿಯಿಂದ ಜ.19 ರಂದು ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಬರುವ ಪ್ರಧಾನಿ ಮೋದಿ, ಇಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ, ಕಲಬುರಗಿ ತೆರಳಲಿದ್ದಾರೆ. ಅಲ್ಲಿ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಮನೆಗಳ ಹಕ್ಕುಪತ್ರ ವಿತರಿಸಲಿದ್ದಾರೆ. ಇದರ ನಡುವೆ, ಬೆಂಗಳೂರಿನಿಂದ ಮೈಸೂರಿಗೂ ತೆರಳಿ ಅಲ್ಲೂ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಲಬುರಗಿಯಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.
ಬಿಗಿ ವೇಳಾಪಟ್ಟಿಯ ನಡುವೆ ಪ್ರಧಾನಿ ಮೋದಿಯವರು ಬೆಂಗಳೂರಿನಲ್ಲಿ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ಸ್ಥಳದ ತನಕ 5 ಕಿ.ಮೀ. ರೋಡ್ ಷೋ ನಡೆಸುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಪ್ರಯತ್ನ ಮುಂದುವರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರೋಡ್ ಶೋಗೆ ತಾತ್ವಿಕ ಒಪ್ಪಿಗೆ ಲಭಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ನೇತೃತ್ವದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರು, ಪ್ರಮುಖ ಕಾರ್ಯಕರ್ತರು ಹಾಗೂ ಕೆಲ ಶಾಸಕರನ್ನು ಒಳಗೊಂಡಂತೆ ಸಭೆ ನಡೆಸಿದರು.