ಬೆಂಗಳೂರಿನಲ್ಲಿ ಅತ್ಯಾಚಾರ, ಹತ್ಯೆ ಪ್ರಕರಣ; 11 ವರ್ಷಗಳ ಬಳಿಕ ಕೆನರಾ ಬ್ಯಾಂಕ್ ಮ್ಯಾನೇಜರ್ ಸೇರಿ ಆರೋಪಿಗಳನ್ನ ಪತ್ತೆ ಹಚ್ಚಿದ ಸಿಐಡಿ
May 24, 2024 07:59 PM IST
ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳನ್ನು 11 ವರ್ಷಗಳ ಬಳಿಕ ಪತ್ತೆ ಹಚ್ಚುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಲ್ಲಿ ಒಬ್ಬ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ.
- ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಆರೋಪಿಗಳನ್ನು 11 ವರ್ಷಗಳ ಪತ್ತೆ ಹಚ್ಚುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಪೈಕಿ ಓರ್ವ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದಾನೆ. (ಮಾರುತಿ: ಎಚ್ ಮಾರುತಿ)
ಬೆಂಗಳೂರು: ಕೊಲೆ ಪ್ರಕರಣದಲ್ಲಿ (Murder Case) ಆರೋಪಿಗಳು ಪತ್ತೆಯಾಗಿಲ್ಲವೆಂದು ಕೈಚೆಲ್ಲಿ ಎರಡು ಬಾರಿ ಸಿ ಅಂತಿಮ ವರದಿ ಸಲ್ಲಿಸಿದ್ದರೂ ಕೃತ್ಯ ಸಂಭವಿಸಿ 11 ವರ್ಷಗಳ ನಂತರ ಸಿಐಡಿ ಪೊಲೀಸರು (CID Police) ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿಐಡಿ ಪೊಲೀಸರ ಜಾಣ್ಮೆ ಮತ್ತು ತನಿಖಾ ಸಾಮರ್ಥ್ಯಕ್ಕೆ ಈ ಪ್ರಕರಣ ಸ್ಪಷ್ಟ ನಿದರ್ಶನವಾಗಿದೆ. ತಮ್ಮ ಪತ್ನಿ ವಿಜಯಾ ಪೈ ಕರ್ತವ್ಯದಿಂದ ಮನೆಗೆ ಹಿಂತಿರುಗಿಲ್ಲವೆಂದು ಬಾಲಕೃಷ್ಣ ಪೈ ಅವರು ಸಂಜಯನಗರ ಪೊಲೀಸ್ ಠಾಣೆಯಲ್ಲಿ 2013ರ ಫೆಬ್ರವರಿ 15 ರಂದು ದೂರು ದಾಖಲಿಸಿದ್ದರು. ಅಂದೇ ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣಾ (Chikkajala Police Station) ವ್ಯಾಪ್ತಿಯ ಮುತ್ತುಕದಹಳ್ಳಿಯ ನೀಲಗಿರಿ ತೋಪಿನಲ್ಲಿ ವಿಜಯಾ ಮೃತ ದೇಹ ಪತ್ತೆಯಾಗಿತ್ತು.
ಈ ಪ್ರಕರಣದ ತನಿಖೆಯನ್ನು ಕೈಗೊಂಡ ಸ್ಥಳೀಯ ಪೊಲೀಸರು ಪ್ರಕರಣದಲ್ಲಿ ಪತಿ ಬಾಲಕೃಷ್ಣ ಪೈ ರವರನ್ನು ಶಂಕಿಸಿ, ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಕೆಲವು ದಿನಗಳ ನಂತರ ಈ ಪ್ರಕರಣದಲ್ಲಿ ಪತಿ ಬಾಲಕೃಷ್ಣ ಪೈ ರವರ ಕೈವಾಡವಿಲ್ಲವೆಂದು ಮತ್ತು ಪ್ರಕರಣದ ಆರೋಪಿಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ಸಿ ಅಂತಿಮ ವರದಿಯನ್ನು ಸಲ್ಲಿಸಿದ್ದರು.
ಆದರೆ, ಪೊಲೀಸರ ಈ ಸಿ ವರದಿ ವಿರುದ್ಧ ಬಾಲಕೃಷ್ಣ ಪೈ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಸ್ತೃತ ಹಾಗೂ ಆಳವಾದ ತನಿಖೆಯನ್ನು ನಡೆಸುವಂತೆ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಐಡಿ ಘಟಕಕ್ಕೆ ವಹಿಸಿತ್ತು. ಪ್ರಕರಣವನ್ನು ವಿಸ್ಮತವಾಗಿ ತನಿಖೆ ನಡೆಸಿದ ಸಿಐಡಿ ತನಿಖಾಧಿಕಾರಿಗಳು ಈ ಮಹಿಳೆಯು ಕಾಣೆಯಾದ ದಿನದಂದು ದೊರೆತ ಕೆಲವು ಸಾಕ್ಷ್ಯಾಧಾರಗಳನ್ನು ಆಳವಾಗಿ ವಿಶ್ಲೇಷಣೆ ಮಾಡಿದಾಗ ಈ ಮಹಿಳೆಯ ಹತ್ಯೆಯಲ್ಲಿ ದೀಪಕ್.ಸಿ ಎಂಬಾತನ ಕೈವಾಡವಿರುವ ಸುಳಿವು ಲಭ್ಯವಾಗುತ್ತದೆ.
ಈ ಸುಳಿವನ್ನು ಆಧರಿಸಿ ಆಳಕ್ಕಿಳಿದು ತನಿಖೆ ನಡೆಸಿದಾದ ಕೊಲೆಯಾದ ಮಹಿಳೆಯನ್ನು ಮಹಾಲಕ್ಷ್ಮೀ ಲೇಔಟ್ ಶಾಖೆ ಕೆನರಾ ಬ್ಯಾಂಕ್‌ನ ಮ್ಯಾನೇಜರ್ ನರಸಿಂಹಮೂರ್ತಿ ಹಾಗೂ ಈತನ ಸಹಚರ ಹರಿಪ್ರಸಾದ್. ಎನ್ ಇವರು ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿ, ಶವವನ್ನು ನೀಲಗಿರಿ ತೋಪಿನಲ್ಲಿ ಎಸೆದು ಹೋಗಿದ್ದಾರೆ. ಮೃತ ಮಹಿಳೆಯ ಪತಿಯೂ ಇದೇ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸಿರುತ್ತಾನೆ.
ಈ ಹತ್ಯೆ ಅತ್ಯಂತ ಕ್ಲಿಷ್ಟಕರ ಪ್ರಕರಣವಾಗಿತ್ತು. ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆ ಮಾಡಿ, ಶವವನ್ನು ಅಜ್ಞಾತ ಸ್ಥಳದಲ್ಲಿ ಬಿಸಾಡಿದ್ದ ಈ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸ್ಥಳೀಯ ಪೊಲೀಸರು ಎರಡು ಬಾರಿ ಸಿ ಅಂತಿಮ ವರದಿಯನ್ನು ಸಲ್ಲಿಸಿದ್ದ ಪ್ರಕರಣವಾಗಿತ್ತು. ಆದರೂ ಕೃತ್ಯ ಸಂಭವಿಸಿ 11 ವರ್ಷಗಳು ಕಳೆದಿದ್ದರೂ ಸಹ ಸಿಐಡಿ ಘಟಕದ ತನಿಖಾಧಿಕಾರಿಗಳು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. (ಮಾರುತಿ: ಎಚ್ ಮಾರುತಿ)