logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬುಕ್ಕಿಂಗ್ ರದ್ದಾಗದ ಆಟೋ ಪ್ಲಸ್ ಎಂಬ ಹೊಸ ಸೇವೆ ಆರಂಭಿಸಿದ ರ‍್ಯಾಪಿಡೋ; ಪ್ರಯಾಣ ದರ ಮಾತ್ರ ದುಪ್ಪಟ್ಟು

Bengaluru News: ಬುಕ್ಕಿಂಗ್ ರದ್ದಾಗದ ಆಟೋ ಪ್ಲಸ್ ಎಂಬ ಹೊಸ ಸೇವೆ ಆರಂಭಿಸಿದ ರ‍್ಯಾಪಿಡೋ; ಪ್ರಯಾಣ ದರ ಮಾತ್ರ ದುಪ್ಪಟ್ಟು

HT Kannada Desk HT Kannada

Oct 28, 2023 11:45 AM IST

google News

Bengaluru News: ಬುಕ್ಕಿಂಗ್ ರದ್ದಾಗದ ಆಟೋ ಪ್ಲಸ್ ಎಂಬ ಹೊಸ ಸೇವೆ ಆರಂಭಿಸಿದ ರ‍್ಯಾಪಿಡೋ; ಪ್ರಯಾಣ ದರ ಮಾತ್ರ ದುಪ್ಪಟ್ಟು.

    • ಬುಕ್ಕಿಂಗ್ ರದ್ದಾಗದ ಆಟೋ ಪ್ಲಸ್ ಎಂಬ ಹೊಸ ಸೇವೆಯನ್ನು ರ‍್ಯಾಪಿಡೋ ಆರಂಭಿಸಿದೆ. ಆದರೆ ಇದಕ್ಕೆ ಸಾಮಾನ್ಯ ಆಟೋ ಪ್ರಯಾಣ ದರಕ್ಕಿಂತ ಎರಡು ಪಟ್ಟು ತೆರಬೇಕು. ಈ ದುಬಾರಿ ಸೇವೆಗೆ ಬೆಂಗಳೂರಿನ ನಾಗರಿಕರು ಒಗ್ಗಿಕೊಳ್ಳುವರೇ?
Bengaluru News: ಬುಕ್ಕಿಂಗ್ ರದ್ದಾಗದ ಆಟೋ ಪ್ಲಸ್ ಎಂಬ ಹೊಸ ಸೇವೆ ಆರಂಭಿಸಿದ ರ‍್ಯಾಪಿಡೋ; ಪ್ರಯಾಣ ದರ ಮಾತ್ರ ದುಪ್ಪಟ್ಟು.
Bengaluru News: ಬುಕ್ಕಿಂಗ್ ರದ್ದಾಗದ ಆಟೋ ಪ್ಲಸ್ ಎಂಬ ಹೊಸ ಸೇವೆ ಆರಂಭಿಸಿದ ರ‍್ಯಾಪಿಡೋ; ಪ್ರಯಾಣ ದರ ಮಾತ್ರ ದುಪ್ಪಟ್ಟು.

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬುಕ್ ಮಾಡಿದ ರೈಡ್ ರದ್ದಾಗದ ಆಟೋ ಪ್ಲಸ್ ಎಂಬ ಹೊಸ ಸೇವೆಯನ್ನು ರ‍್ಯಾಪಿಡೋ ಆರಂಭಿಸಿದೆ. ಸಾಮಾನ್ಯವಾಗಿ ಬೆಂಗಳೂರಿನ ಜನತೆ ಸದಾ ದಾವಂತದಲ್ಲಿರುತ್ತಾರೆ. ಕಾಯುವ ತಾಳ್ಮೆಯನ್ನು ಕಳೆದುಕೊಂಡು ದಶಕವೇ ಉರುಳಿದೆ ಎನ್ನಬಹುದು. ತುರ್ತಾಗಿ ಹೋಗಬೇಕಾಗಿ ಬಂದ ಸಂದರ್ಭದಲ್ಲಿ ಆ್ಯಪ್ ಆಧಾರಿತ ಆಟೋ ಅಥವಾ ಕ್ಯಾಬ್‌ಗೆ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಕರೆದಲ್ಲಿಗೆ ಹೋಗಲು ಇಷ್ಟವಿಲ್ಲವಾದರೆ ಚಾಲಕರು ಬುಕ್ಕಿಂಗ್ ರದ್ದು ಮಾಡುತ್ತಾರೆ. ಇದರಿಂದ ಪ್ರಯಾಣಿಕರ ಆತಂಕ ಮತ್ತಷ್ಟು ಹೆಚ್ಚಾಗುತ್ತದೆ. ಇನ್ನು ಆಟೋ ಚಾಲಕರು ಗ್ರಾಹಕರು ಕರೆದ ಕಡೆ ಬರುವುದಿಲ್ಲ. ಬಂದರೂ ಮೀಟರ್ ಮೇಲೆ ಹೆಚ್ಚು ಹಣ ಕೇಳುತ್ತಾರೆ. ಪ್ರಯಾಣಿಕರ ಈ ಸಮಸ್ಯೆಗಳನ್ನು ನಿವಾರಿಸುವ ಭರವಸೆಯನ್ನು ರ‍್ಯಾಪಿಡೋ ನೀಡಿದೆ.

ಅದಕ್ಕಾಗಿಯೇ ಬುಕ್ ಮಾಡಿದ ಪ್ರಯಾಣ ರದ್ದಾಗುವುದಿಲ್ಲ ಎಂಬ ಭರವಸೆಯೊಂದಿಗೆ ಆಟೋ ಪ್ಲಸ್ ಎಂಬ ವಿನೂತನ ಸೇವೆಯನ್ನು ಆರಂಭಿಸಿದೆ. ಆದರೆ ಸಾಮಾನ್ಯ ಆಟೋ ದರಕ್ಕಿಂತ ಆಟೋ ಪ್ಲಸ್ ಸೇವೆ ಶೇಕಡಾ 25 ರಿಂದ 30 ರಷ್ಟು ದುಬಾರಿಯಾಗಲಿದೆ. ಇದರಲ್ಲಿ ರೈಡ್ ಬುಕ್ ಮಾಡಿದ ತಕ್ಷಣ ಆಟೋ ಚಾಲಕರಿಂದ ರೈಡ್ ರದ್ದಾಗುವುದಿಲ್ಲ ಎನ್ನುವುದನ್ನು ಖಾತರಿಪಡಿಸುತ್ತದೆ.

ಆಟೋ ಪ್ಲಸ್ ಸೇವೆ ಸೆಪ್ಟೆಂಬರ್ ನಲ್ಲಿ ಹೈದರಾಬಾದ್‌ನಲ್ಲಿ ಪ್ರಾರಂಭವಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿಯೂ ಸೇವೆ ಆರಂಭಿಸಿದೆ.

ಪ್ರಸ್ತುತ ಆಟೋ ಪ್ಲಸ್‌ನಲ್ಲಿ 10,000 ಆಟೋ ಚಾಲಕರು ನೋಂದಣಿಯಾಗಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ 50,000 ಚಾಲಕರನ್ನು ಸೇವೆಗೆ ಸೇರಿಸಲು ಕಂಪನಿ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.

ಆಟೋ ಪ್ಲಸ್ ಸೇವೆ ರದ್ದಾಗದ ಕಾರಣ ಗ್ರಾಹಕರಿಗೆ ಉತ್ತಮ ಸೇವೆ ಒದಗುತ್ತದೆ. ಹಾಗೆಯೇ ನಮ್ಮ ಆಟೋ ಕ್ಯಾಪ್ಟನ್ (ಆಟೋ ಚಾಲಕರು)ಗಳಿಗೆ ಸಂಪಾದನೆಯೂ ಹೆಚ್ಚುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸಾಮಾನ್ಯ ಆಟೋ ಪ್ರಯಾಣ ದರ ರೂ. 46 ಕ್ಕೆ ನಿಗದಿ ಪಡಿಸಲಾಗಿದೆ. ಇದರಲ್ಲಿ ರೂಪಾಯಿ 36 ಪ್ರಯಾಣ ದರವಾಗಿದ್ದರೆ, 10ರೂಪಾಯಿಗಳನ್ನು ಪಿಕ್ ಅಪ್ ದರ ಎಂದು ನಿಗಧಿಪಡಿಸಿದೆ. ಆಟೋ ಪ್ಲಸ್ ಸೇವೆಗೆ ರೂಪಾಯಿ 71 ಎಂದು ಕಂಪನಿ ಹೇಳಿಕೊಂಡಿದೆ. ಯಾವುದಕ್ಕೆ ಎಷ್ಟು ದರ ಎಂಬ ವಿಂಗಡನೆ ಮಾಹಿತಿ ನೀಡಿಲ್ಲ.

ರ‍್ಯಾಪಿಡೋ ಆಟೋ ಪ್ರಯಾಣ ದರವು ಹೈಕೋರ್ಟ್ ನಿಗದಿಪಡಿಸಿದ ದರಕ್ಕಿಂತ ಹೆಚ್ಚಾಗಿದೆ. ಓಲಾ ಮತ್ತು ಉಬರ್ ಎರಡು ಕಿಮೀಗೆ ರೂ. 100 ಸಂಗ್ರಹಿಸುತ್ತಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದರ ಪರಿಣಾಮವಾಗಿ ಸಾರಿಗೆ ಇಲಾಖೆಯು ಓಲಾ, ಉಬರ್‌ ಕಂಪನಿಗಳ ಆಟೋ ಸೇವೆ ಸ್ಥಗಿತಕ್ಕೆ ಆದೇಶಿಸಿತ್ತು. ಈ ಪ್ರಕರಣವು ಹೈಕೋರ್ಟ್‌ ಮೆಟ್ಟಿಲೇರಿತ್ತು. ಸೇವಾ ಕಂಪನಿಗಳೊಂದಿಗೆ ಚರ್ಚಿಸಿ ದರ ನಿಗದಿ ಮಾಡುವಂತೆ ನ್ಯಾಯಾಲಯ ಸೂಚಿಸಿತ್ತು. ಅದರಂತೆ, ಆ್ಯಪ್‌ ಆಧಾರಿತ ಸೇವೆ ಒದಗಿಸುತ್ತಿರುವ ಓಲಾ, ಉಬರ್‌ ಕಂಪನಿಗಳ ಆಟೋ ಪ್ರಯಾಣ ದರವನ್ನು ರಾಜ್ಯ ಸರಕಾರ 2 ಕಿ.ಮೀಗೆ ರೂ. 30 ಎಂದು ನಿಗದಿಪಡಿಸಿತ್ತು. ಜತೆಗೆ ಶೇ. 5ರಷ್ಟು ಸೇವಾ ಶುಲ್ಕ ಹಾಗೂ ಶೇ.5 ರಷ್ಟು ಜಿಎಸ್‌ಟಿ ಶುಲ್ಕವನ್ನಷ್ಟೇ ಪ್ರಯಾಣಿಕರಿಂದ ಸಂಗ್ರಹಿಸಬೇಕು ಎಂಬ ಕರಾರು ವಿಧಿಸಿತ್ತು. ನಂತರದ ಪ್ರತಿ ಕಿ.ಮೀಗೆ ರು. 15 ಜತೆಗೆ ಶೇ.10 ರಷ್ಟು ಹೆಚ್ಚುವರಿ ದರವನ್ನು ಸಂಗ್ರಹಿಸಬೇಕು ಎಂದು ಸರ್ಕಾರ ಈ ಹಿಂದೆ ಆಟೋ ದರ ನಿಗದಿ ಮಾಡಿ ಸೂಚನೆ ನೀಡಿತ್ತು.

ಹೈದರಾಬಾದ್ ನಲ್ಲಿ ಯಶಸ್ವಿ ಆದ ಮಾತ್ರಕ್ಕೆ ಬೆಂಗಳೂರಿನಲ್ಲಿಯೂ ಸಕ್ಸಸ್ ಆಗಬೇಕು ಎಂದೇನೂ ಇಲ್ಲ. ಪ್ರತಿ ಎರಡು ಕಿಮೀಗೆ 71 ರೂಪಾಯಿ ಕೊಟ್ಟು ಪ್ರಯಾಣಿಸುವರೆ ಎಂದು ಕಾದು ನೋಡಬೇಕಿದೆ.

(ವರದಿ: ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ