Bengaluru News: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಚೇತರಿಕೆ, ಹೀಗಿದೆ ವ್ಯಾಪಾರ ವಹಿವಾಟು
Oct 10, 2023 11:28 PM IST
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಚೇತರಿಕೆ (ಸಾಂಕೇತಿಕ ಚಿತ್ರ)
- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ತಾಲ್ಲೂಕುಗಳಲ್ಲಿ ಕಳೆಗಟ್ಟಿದ ರಿಯಲ್ ಎಸ್ಟೇಟ್ ವ್ಯವಹಾರ. ಹೂಡಿಕೆದಾರರು ಮತ್ತು ಖರೀದಿದಾರರ ಆಸಕ್ತಿ ಕೂಡ ಹೆಚ್ಚಾಗಿದೆ. ದುಪ್ಪಟ್ಟಾದ ಬೆಲೆ, ಆದರೂ ನಿಲ್ಲದ ಬೆಳವಣಿಗೆ ಕುರಿತು ವಿಶೇಷ ವರದಿ ನೀಡಿದ್ದಾರೆ ಎಚ್.ಮಾರುತಿ.
ಬೆಂಗಳೂರಿನಲ್ಲಿ ಕೋವಿಡ್ ನಂತರ ಕಳೆಗುಂದಿದ್ದ ರಿಯಲ್ ಎಸ್ಟೇಟ್ ವ್ಯವಹಾರ ಮತ್ತೆ ಚಿಗುರಿದೆ. ನಗರದ ಹೃದಯಭಾಗಕ್ಕಿಂತ ಹೊರ ವಲಯದ ಪ್ರದೇಶಗಳಲ್ಲಿ ಸುಧಾರಣೆ ಕಂಡಿರುವ ರಿಯಲ್ ಎಸ್ಟೇಟ್ ವ್ಯವಹಾರ ಶರವೇಗದಲ್ಲಿ ದಾಪುಗಾಲು ಹಾಕುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮತ್ತು ದೇವನಹಳ್ಳಿ ತಾಲ್ಲೂಕುಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದ್ದು, ನಿವೇಶನ, ವಿಲ್ಲಾ ಮತ್ತು ಅಪಾರ್ಟ್ ಮೆಂಟ್‌ಗಳಿಗೆ ಬೇಡಿಕೆ ಕುದುರಿದೆ.
ರಿಯಲ್ ಎಸ್ಟೇಟ್ ವ್ಯವಹಾರ ಚೇತರಿಕೆ ಕಾರಣಗಳೇನು
ಹೊಸಕೋಟೆ ತಾಲ್ಲೂಕು ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳಿಗೆ ತುಸು ಸಮೀಪವಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಐಟಿ ಕಂಪನಿಗಳು ವರ್ಕ್ ಫ್ರಂ ಹೋಮ್ ಆಯ್ಕೆ ನೀಡಿರುವುದು, ಮೆಟ್ರೋ ಸಂಪರ್ಕ ಮತ್ತು ಚೆನ್ನೈ ಎಕ್ಸ್ ಪ್ರೆಸ್ ವೇ ಹೊಸಕೋಟೆ ಮೂಲಕವೇ ಹಾದು ಹೋಗುವುದೂ ಕಾರಣ ಎಂದು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಉದ್ದಿಮೆದಾರರು ಅಭಿಪ್ರಾಯಪಡುತ್ತಾರೆ.
ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲೂ ಹೂಡಿಕೆದಾರರು ಮತ್ತು ಖರೀದಿದಾರರು ಆಸಕ್ತಿ ತೋರದೆ ಇಲ್ಲ. ಇಡೀ ಉತ್ತರ ಕರ್ನಾಟಕದ ಜನತೆ ನೆಲಮಂಗಲ ಮೂಲಕವೇ ಹಾದು ಹೋಗಬೇಕು. ಸಹಜವಾಗಿಯೇ ಇವರೆಲ್ಲರೂ ಈ ಬಾಗದಲ್ಲಿಯೇ ನೆಲೆಸಲು ಆಸಕ್ತಿ ತೋರುತ್ತಿದ್ದಾರೆ.
ಗ್ರಾಮಾಂತರ ಜಿಲ್ಲೆಯ ಎಲ್ಲ ನಾಲ್ಕೂ ತಾಲ್ಲೂಕುಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಗರಿಷ್ಠ ಪ್ರಮಾಣ ತಲುಪಿದೆ. ಯಾವುದೇ ತಾಲ್ಲೂಕಿನಲ್ಲಿ ನೋಡಿದರೂ ಹೆಸರಾಂತ ಕಂಪನಿಗಳ ಲೇ ಔಟ್ ಮತ್ತು ವಸತಿ ಸಮುಚ್ಚಯಗಳನ್ನು ಕಾಣಬಹುದಾಗಿದೆ.
ಹಾಗೆಂದು ಅಲ್ಲಿ ಯಾವುದೇ ಸೌಲಭ್ಯ ಮತು ಮನರಂಜನೆಗೆ ಅವಕಾಶಗಳಿರುವುದಿಲ್ಲ ಎಂದು ಭಾವಿಸಬೇಕಿಲ್ಲ. ವಸತಿ ಪ್ರದೇಶಗಳು ತಲೆ ಎತ್ತುತ್ತಿದ್ದಂತೆ ಅಲ್ಲಿ ಮಾಲ್, ಆಸ್ಪತ್ರೆ, ಸಿನಿಮಾ ಥಿಯೇಟರ್, ಸ್ಕೂಲ್ ಸೂಪರ್ ಮಾರುಕಟ್ಟೆಗಳು ಎಲ್ಲವೂ ತಲೆ ಎತ್ತುತ್ತವೆ. ನಗರದೊಳಗೆ ಬರುವ ಪ್ರಮೇಯವೇ ಉದ್ಭವಿಸುವುದಿಲ್ಲ.
ಬೆಂಗಳೂರಿನ ಹೃದಯ ಭಾಗದಲ್ಲಿ ನಿವೇಶನ, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿಸುವುದು ದುಬಾರಿ. ಇದೇ ಮೊತ್ತಕ್ಕೆ ಹೊರ ವಲಯದಲ್ಲಿ ಉತ್ತಮ ಆಸ್ತಿ ಲಭ್ಯವಾಗುತ್ತದೆ ಎಂದು ಖರೀದಿದಾರರು ಅಭಿಪ್ರಾಯಪಡುತ್ತಾರೆ.
ಕಂದಾಯ ಇಲಾಖೆಗೆ ಹೆಚ್ಚಿದ ಆದಾಯ
ಹೂಡಿಕೆದಾರರು ಮುಂದಾಗುತ್ತಿದ್ದಂತೆ ಹೊಸಕೋಟೆ ಮತ್ತು ದೇವನಹಳ್ಳಿ ತಾಲ್ಲೂಕುಗಳಲ್ಲಿ ಭೂಮಿ ಬೆಲೆ ದುಪ್ಪಟ್ಟಾಗಿದೆ. ಕೋವಿಡ್ ನಂತರ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ.ಆಸ್ತಿ ಖರೀದಿಗೆ ಮುಂದಾಗುತ್ತಿದ್ದಾರೆ. 3000-4000 ಇದ್ದ ಚದುರ ಅಡಿ ಬೆಲೆ ಇಂದು 8000 ಸಾವಿರ ಗಡಿ ತಲುಪಿದೆ ಎಂದು ಭೂ ಅಭಿವೃದ್ಧಿದಾರರು ಹೇಳುತ್ತಾರೆ.
ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2019-20 ರಿಂದ 2022-23ರ ಅವಧಿಯಲ್ಲಿ ಆಸ್ತಿಗಳ ನೋಂದಣಿ ಶೇ.128,0ರಷ್ಟು ಹೆಚ್ಚಳವಾಗಿದೆ. ಈ ಜಿಲ್ಲೆಯಲ್ಲಿ 2019-20ರಲ್ಲಿ 439.15 ಕೋಟಿ ರೂಪಾಯಿ ಸ್ಟಾಂಪ್ ಶುಲ್ಕ ಮತ್ತು ನೋಂದಣಿ ಶುಲ್ಕ ಸಂಗ್ರಹವಾಗಿದ್ದರೆ 2023-24ರ ಅವಧಿಯ ಮೊದಲ ಆರು ತಿಂಗಳಲ್ಲಿ 1003.89 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಬೆಳವಣಿಗೆಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಹೆಚ್ಚಾಗಿರುವುದನ್ನು ತೋರಿಸುತ್ತದೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಮಸ್ಯೆಗಳೂ ಹೆಚ್ಚು
ಯಾವುದೇ ವಸತಿ ಪ್ರದೇಶ ಬೆಳೆಯುತ್ತಿದ್ದ ಹಾಗೆ ಸಮಸ್ಯೆಗಳೂ ಹೆಚ್ಚಾಗುತ್ತವೆ. ಒಳ ಚರಂಡಿ, ಕುಡಿಯುವ ನೀರು, ರಸ್ತೆ ಮೊದಲಾದ ಮೂಲಭೂತ ಸಮಸ್ಯೆಗಳು ಎದುರಾಗುತ್ತವೆ. ಹೊಸ ಬೆಳವಣಿಗೆಗಳೆಲ್ಲವೂ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಗೆ ಒಳಪಡುತ್ತವೆ. ಉದಾಹರಣೆಗೆ ಹೊಸ ವಸತಿ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಸೌಲಭ್ಯಗಳಿರುವುದಿಲ್ಲ. ಹಾಗಾಗಿ ಖಾಲಿ ಪ್ರದೇಶ ಮತ್ತು ರಸ್ತೆಗಳ ತುಂಬೆಲ್ಲಾ ಕಸದ ರಾಶಿಯನ್ನೇ ಕಾಣಬಹುದಾಗಿದೆ. ಕಸದ ನಿರ್ವಹಣೆಗೆ ತುಂಬಾ ಕಷ್ಟವಾಗುತ್ತಿದೆ ಎಂದು ಸ್ಥಳೀಯ ಆಡಳಿತಾಧಿಕಾರಿಗಳು ಅಳಲು ತೋಡಿಕೊಳ್ಳುತ್ತಾರೆ. ಕೆಲವು ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಸರ್ಕಾರೇತರ ಸಂಘ ಸಂಸ್ಥೆಗಳು ಕೈ ಜೋಡಿಸಿವೆ.
ಆದರೂ ಸರಕಾರ ಬೆಂಗಳೂರಿನ ಬೆಳವಣಿಗೆಗೆ ಕಡಿವಾಣ ಹಾಕುವುದು ಕ್ಷೇಮ. ಮುಂದಿನ ಕೆಲವೇ ವರ್ಷಗಳಲ್ಲಿ ಕುಡಿಯುವ ನೀರಿಗೆ ಕ್ಷಾಮ ತಲೆದೋರುವುದರಲ್ಲಿ ಎರಡು ಮಾತಿಲ್ಲ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದೂ ದುಬಾರಿಯಾಗುತ್ತದೆ. ಆದ್ದರಿಂದ ಎರಡು ಮತ್ತು ಮೂರನೇ ಹಂತದ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವುದು ಉತ್ತಮ. ನಾಲ್ಕೈದು ಜಿಲ್ಲೆಗಳಿಗೆ ಒಂದರಂತೆ ವಿಮಾನ ನಿಲ್ದಾಣಗಳಿವೆ. ಐಟಿ, ಬಿಟಿ ಸೇರಿದಂತೆ ಎಲ್ಲ ರೀತಿಯ.ಕೈಗಾರಿಕೆಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಲು ಸರಕಾರ ಚಿಂತನೆ ನಡೆಸುವುದು ಉತ್ತಮ.