logo
ಕನ್ನಡ ಸುದ್ದಿ  /  ಕರ್ನಾಟಕ  /  Real Estate: ಬೆಂಗಳೂರಿನಲ್ಲಿ ಮನೆ-ನಿವೇಶನ ಖರೀದಿಸುವಿರಾ, ಇನ್ಮುಂದೆ ಉದ್ಯಾನಗರಿಯಲ್ಲಿ ಪ್ರಾಪರ್ಟಿ ಬಲು ದುಬಾರಿ

Real Estate: ಬೆಂಗಳೂರಿನಲ್ಲಿ ಮನೆ-ನಿವೇಶನ ಖರೀದಿಸುವಿರಾ, ಇನ್ಮುಂದೆ ಉದ್ಯಾನಗರಿಯಲ್ಲಿ ಪ್ರಾಪರ್ಟಿ ಬಲು ದುಬಾರಿ

Praveen Chandra B HT Kannada

Dec 22, 2023 05:33 PM IST

google News

ಕರ್ನಾಟಕ ಸರಕಾರವು ಆಸ್ತಿ ಮಾರ್ಗಸೂಚಿ ದರವನ್ನು ಶೇಕಡ 25-30ರಷ್ಟು ಹೆಚ್ಚಿಸಿದೆ.

    • Property Guidance Value in Bangalore: ಈ ತಿಂಗಳ ಆರಂಭದಿಂದ ಬೆಂಗಳೂರಿನಲ್ಲಿ ಪ್ರಾಪರ್ಟಿ ದರ ದುಬಾರಿಯಾಗಿದೆ. ಕರ್ನಾಟಕ ಸರಕಾರವು ಆಸ್ತಿ ಮಾರ್ಗಸೂಚಿ ದರವನ್ನು ಶೇಕಡ 25-30ರಷ್ಟು ಹೆಚ್ಚಿಸಿರುವುದರಿಂದ ನಿವೇಶನ ಮತ್ತು ಹೊಸ ಮನೆ ದರ ದುಬಾರಿಯಾಗಿದೆ.
ಕರ್ನಾಟಕ ಸರಕಾರವು ಆಸ್ತಿ ಮಾರ್ಗಸೂಚಿ ದರವನ್ನು ಶೇಕಡ 25-30ರಷ್ಟು ಹೆಚ್ಚಿಸಿದೆ.
ಕರ್ನಾಟಕ ಸರಕಾರವು ಆಸ್ತಿ ಮಾರ್ಗಸೂಚಿ ದರವನ್ನು ಶೇಕಡ 25-30ರಷ್ಟು ಹೆಚ್ಚಿಸಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಲು, ಹೂಡಿಕೆ ಅಥವಾ ಮನೆ ನಿರ್ಮಾಣಕ್ಕಾಗಿ ನಿವೇಶನ ಖರೀದಿಸಲು ಬಯಸುವವರು ಈ ತಿಂಗಳಿನಿಂದ ಹೆಚ್ಚು ಹಣ ಪಾವತಿಸಲು ಸಿದ್ಧರಿರಬೇಕು. ಏಕೆಂದರೆ, ಕರ್ನಾಟಕ ಸರಕಾರವು ಮಾರ್ಗಸೂಚಿ ದರ ಹೆಚ್ಚಳ ಮಾಡಿದ್ದು, ಇದರ ಪರಿಣಾಮವಾಗಿ ಪ್ರಾಪರ್ಟಿಗಳು ದುಬಾರಿಯಾಗಿವೆ. ಬೆಂಗಳೂರಿನಲ್ಲಿ ಈ ಹಿಂದಿನ ಮಾರ್ಗಸೂಚಿ ದರಕ್ಕಿಂತ ಗೈಡೆನ್ಸ್‌ ವ್ಯಾಲ್ಯೂವನ್ನು ಶೇಕಡ 25-30ರಷ್ಟು ಹೆಚ್ಚಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಮಾರ್ಗಸೂಚಿ ದರ ಬದಲಾಯಿಸಿರಲಿಲ್ಲ. ಈಗ ಒಂದೇ ಬಾರಿ ದರ ಹೆಚ್ಚಳ ಮಾಡಲಾಗಿದೆ.

ಪ್ರಾಪರ್ಟಿ ಮೌಲ್ಯದ ಶೇಕಡ 5.6ರಷ್ಟು ಮುದ್ರಾಂಕ ಶುಲ್ಕ ಇರುತ್ತದೆ. ಇದರೊಂದಿಗೆ ಸೆಸ್‌ ಮತ್ತು ಸರ್‌ಚಾರ್ಜ್‌ ಜತೆಗೆ ಶೇಕಡ 1 ನೋಂದಣಿ ಶುಲ್ಕ ಇರುತ್ತದೆ. ಈ ಶುಲ್ಕವನ್ನು ಖರೀದಿದಾರರು ಪ್ರಾಪರ್ಟಿ ಖರೀದಿಸುವ ಸಂದರ್ಭದಲ್ಲಿ ಪಾವತಿಸಬೇಕು. ಇದರೊಂದಿಗೆ ಹೆಚ್ಚು ಮಾರ್ಗಸೂಚಿ ದರ ನೀಡಬೇಕು. ಇದೇ ಕಾರಣಕ್ಕೆ ಕಳೆದ ತಿಂಗಳ ಕೊನೆಯ ವಾರ ಬೆಂಗಳೂರಿನ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಅತ್ಯಧಿಕ ರಶ್‌ ಇತ್ತು. ಅಕ್ಟೋಬರ್‌ 1ರ ಮೊದಲು ಪ್ರಾಪರ್ಟಿ ನೋಂದಾಯಿಸಲು ಬಹುತೇಕರು ಪ್ರಯತ್ನಿಸಿದ್ದರು.

ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಕಾನೂನು ಪ್ರಕಾರ ಪ್ರತಿವರ್ಷ ಮಾರ್ಗಸೂಚಿ ದರವನ್ನು ಪರಿಷ್ಕರಿಸಬೇಕು. ಆದರೆ, ಕಳೆದ ಐದು ವರ್ಷಗಳಲ್ಲಿ ಗೈಡೆನ್ಸ್‌ ವ್ಯಾಲ್ಯೂನಲ್ಲಿ ಯಾವುದೇ ಬದಲಾವಣೆ ಮಾಡಲಾಗಿರಲಿಲ್ಲ. ಇದು ಕಪ್ಪು ಹಣ ವಹಿವಾಟು ಉತ್ತೇಜನಕ್ಕೂ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಅಕ್ಟೋಬರ್‌ 1ರಿಂದ ಮಾರ್ಗಸೂಚಿ ದರ ಹೆಚ್ಚಳ ಮಾಡಲಾಗಿದೆ ಎಂದು ಇತ್ತೀಚೆಗೆ ಕಂದಾಯ ಸಚಿವ ಕೃಷ್ಣ ಬೈರೇ ಗೌಡ ಹೇಳಿದ್ದರು.

2019ರಲ್ಲಿ ಕರ್ನಾಟಕ ಸರಕಾರವು ಪ್ರಾಪರ್ಟಿ ಮಾರ್ಗದರ್ಶಿ ಮೌಲ್ಯವನ್ನು ಶೇಕಡ 5 ರಿಂದ 25ರವರೆಗೆ ಹೆಚ್ಚಿಸಿತ್ತು. ಮಾಡಿತ್ತು. 2020, 2021ರಲ್ಲಿ ಕೋವಿಡ್‌ ಕಾರಣದಿಂದ ಈ ದರವನ್ನು ಹೆಚ್ಚಳ ಮಾಡಿರಲಿಲ್ಲ. ಪ್ರತಿವರ್ಷ ಮಾರ್ಗಸೂಚಿ ಪರಿಷ್ಕರಣೆಯೆಂದರೆ ದರ ಹೆಚ್ಚಳವೇ ಆಗಿರುತ್ತಿತ್ತು. ಪ್ರತಿ ವರ್ಷ ಕೇಂದ್ರ ಮೌಲ್ಯಮಾಪನ ಸಮಿತಿಯು ಉಪಸಮಿತಿಗಳಿಗೆ ಮಾರ್ಗಸೂಚಿ ದರ ಪರಿಷ್ಕರಣೆಗೆ ಸೂಚನೆ ನೀಡುತ್ತದೆ. ಉಪಸಮಿತಿಗಳು ಸಲ್ಲಿಸಿದ ದರಗಳನ್ನು ಪರಿಶೀಲಿಸಿ ಕೇಂದ್ರ ಮೌಲ್ಯಮಾಪನ ಸಮಿತಿ ಅಂತಿಮ ಮಾರ್ಗಸೂಚಿ ದರ ನಿಗದಿಪಡಿಸುತ್ತದೆ. ನಂತರ ಸಾರ್ವಜನಿಕ ಆಕ್ಷೇಪಣೆ ಸ್ವೀಕರಿಸಿ ಅಂತಿಮ ದರ ಪ್ರಕಟಿಸುವುದು ವಾಡಿಕೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಪರಿಷ್ಕೃತ ಮಾರ್ಗಸೂಚಿ ದರ ಸರಾಸರಿ ಶೇ.25 ರಿಂದ ಶೇ.30 ರಷ್ಟು ಹೆಚ್ಚಾಗಲಿದೆ. ಇದರ ನಡುವೆಯೇ ಕಂದಾಯ ಇಲಾಖೆಯಡಿ ಬರುವ ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಹೊಸ ಮಾರ್ಗ ಸೂಚಿ ದರವನ್ನು ಅಕ್ಟೋಬರ್‌ 1ರಿಂದ ಅನ್ವಯವಾಗುವಂತೆ ಜಾರಿ ಮಾಡುತ್ತಿರುವುದರಿಂದ ಸಹಜವಾಗಿಯೇ ಭೂಮಿ ದರದಲ್ಲಿ ಏರಿಕೆಯಾಗಲಿದೆ. ಇದು ವಹಿವಾಟು ಹೆಚ್ಚಳಕ್ಕೂ ದಾರಿ ಮಾಡಿಕೊಡಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳ ಜಾರಿಗೆ ತಂದಿದೆ. ಇದಕ್ಕಾಗಿಯೇ 50 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಗೈಡೆನ್ಸ್‌ ವ್ಯಾಲ್ಯೂ ಹೆಚ್ಚಿಸಿರುವುದು ಸರಕಾರಕ್ಕೆ ಹೆಚ್ಚಿನ ಆದಾಯ ಸಂಗ್ರಹಿಸಲು ದಾರಿಯಾಗಲಿದೆ.

ಗೈಡೆನ್ಸ್‌ ವ್ಯಾಲ್ಯೂ ಎಂದರೇನು?

ಆಸ್ತಿಯೊಂದನ್ನು ನೋಂದಣಿ ಮಾಡಲು ನಿಗದಿಪಡಿಸಿದ ಕನಿಷ್ಠ ಮೌಲ್ಯವನ್ನು ಮಾರ್ಗದರ್ಶಿ ಮೌಲ್ಯ ಎನ್ನಬಹುದು. ಇದಕ್ಕಿಂತ ಕಡಿಮೆ ದರಕ್ಕೆ ನೋಂದಣಿ ಮಾಡಲು ಅವಕಾಶ ಇರುವುದಿಲ್ಲ. ಆಸ್ತಿ ಮಾಲೀಕರು ಇದಕ್ಕಿಂತ ಹೆಚ್ಚು ದರಕ್ಕೆ ಮಾರಾಟ ಮಾಡಬಹುದು. ಆದರೆ, ನೋಂದಣಿ ಮಾಡಲು ಇದು ಸರಕಾರ ನಿಗದಿಪಡಿಸಿದ ಕನಿಷ್ಠ ದರ. ಬೆಂಗಳೂರಿನಲ್ಲಿ ಎಂಜಿ ರಸ್ತೆ, ಜಯನಗರ ಇತ್ಯಾದಿ ಪ್ರದೇಶಗಳಿಗೆ ಹೆಚ್ಚು ಮಾರ್ಗಸೂಚಿ ದರ ನಿಗದಿಯಾಗಿರುತ್ತದೆ. ಇದನ್ನು ಸಿದ್ಧ ಗಣಕ ಮೌಲ್ಯ ಅಥವಾ ರೆಡಿ ರೆಕಾನರ್‌ ವ್ಯಾಲ್ಯೂ ಎಂದೂ ಕರೆಯುತ್ತಾರೆ.

ಪ್ರತಿಯೊಂದು ರಾಜ್ಯದಲ್ಲಿಯೂ ಇರುವ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು ಆಸ್ತಿಯ ಮಾರ್ಗದರ್ಶಿ ಮೌಲ್ಯವನ್ನು ಪ್ರಕಟಿಸುತ್ತದೆ. ಈ ಮೌಲ್ಯವು ಸ್ಥಳದಿಂದ ಸ್ಥಳಕ್ಕೆ, ಕಟ್ಟಡದಿಂದ ಕಟ್ಟಡಕ್ಕೆ ಬೇರೆಬೇರೆ ರೀತಿಯಾಗಿ ಇರಬಹುದು. ಕೃಷಿ ಜಮೀನು, ನಿವೇಶನ ಮತ್ತು ಕಟ್ಟಡಗಳು, ಭೂಪರಿವರ್ತಿತ ಜಮೀನುಗಳು, ಅಪಾರ್ಟ್‌ಮೆಂಟ್‌ಗಳು ಮತ್ತು ಇನ್ನಿತರ ಸ್ಥಿರಾಸ್ತಿಗಳಿಗೆ ಸಂಬಂಧಪಟ್ಟ ದಸ್ತಾವೇಜುಗಳಾದ ಕ್ರಯ, ದಾನ, ಅದಲು- ಬದಲು, ವರ್ಗಾವಣೆ, ಸೆಟ್ಲ್‌ಮೆಂಟ್‌, ಸಾಮಾನ್ಯ ಅಧಿಕಾರ ಪತ್ರ, ಗುತ್ತಿಗೆ, ಸ್ವಾಧೀನಸಹಿತ ಕ್ರಯದ ಕರಾರು, ಜಂಟಿ ಅಭಿವೃದ್ಧಿ ಕರಾರು, ಸ್ವಾಧೀನಸಹಿತ ಆಧಾರ ಪತ್ರ ಇತರೆ ವ್ಯವಹಾರಕ್ಕೆ ಮಾರ್ಗಸೂಚಿ ದರವೇ ಆಧಾರವಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ