ಬೆಂಗಳೂರಿನಲ್ಲಿ ಉಸಿರಾಟ ಸೋಂಕು ಪ್ರಕರಣಗಳು ಹೆಚ್ಚಳ; ಕೆಮ್ಮು, ಗಂಟಲು ನೋವು, ಮೂಗು ಕಟ್ಟುವಿಕೆಗೆ ಜನ ಹೈರಾಣ -Respiratory Infections
Feb 24, 2024 11:02 AM IST
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಉಸಿರಾಟದ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ರೋಗಿಗಳು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವೈದ್ಯರು ಕೂಡ ಮಾಹಿತಿ ನೀಡಿದ್ದಾರೆ.
- Respiratory Infections: ಬೆಂಗಳೂರಿನಲ್ಲಿ ಉಸಿರಾಟ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದಾಗಿ ವರದಿಯಾಗಿದೆ. ಕೆಮ್ಮು, ಗಂಟಲು ನೋವು, ಮೂಗು ಕಟ್ಟುವಿಕೆಗೆ ಜನ ಹೈರಾಣವಾಗಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉಸಿರಾಟದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಸಾಮಾನ್ಯವಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳಲ್ಲಿ ದೀರ್ಘಕಾಲದ ಕೆಮ್ಮು, ಗಂಟಲು ನೋವು, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆಗಳು ಕಂಡು ಬಂದಿವೆ. ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಈ ಸಮಸ್ಯೆಗಳು ಅಧಿಕವಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಹೆಚ್1ಎನ್1 ಮತ್ತು ಕೋವಿಡ್ ಸೋಂಕಿನ ನಿದರ್ಶನಗಳ ಜೊತೆಗೆ ವಿಶಿಷ್ಟವಾದ ಜ್ವರ ಪ್ರಕರಣಗಳು ಕಂಡು ಬಂದಿವೆ. ವೃದ್ಧರಲ್ಲಿ ನ್ಯುಮೋನಿಯಾ ಪ್ರಕರಣಗಳು ಏರಿಕೆಯಾಗುತ್ತಿವೆ ಎಂದು ಖಾಸಗಿ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರಜ್ಞ ಡಾ ರವೀಂದ್ರ ಮೆಹ್ತಾ ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಬ್ಯಾಕ್ಟೀರಿಯಾ ಸೋಂಕು ಇದ್ದರೆ, ಪ್ರತಿಜೀವಕಗಳೊಂದಿಗೆ ಹೋರಾಡುವ ಸಲುವಾಗಿ ವೈದ್ಯರು ಜ್ವರಕ್ಕೆ ನೀಡುವ ಔಷಧಿಗಳನ್ನು ಶಿಫಾರಸ್ಸು ಮಾಡುತ್ತಾರಂತೆ.
ಜ್ವರದ ರೋಗಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಉಸಿರಾಟದ ಸೋಂಕಿನ ಸಮಸ್ಯೆಗಳು ನವೆಂಬರ್ ಮಧ್ಯದಿಂದ ಫೆಬ್ರವರಿ ಅಂತ್ಯದವರಗೆ ಪ್ರಚಲಿತದಲ್ಲಿರುತ್ತದೆ. ಹೀಗಾಗಿ ಶೀಘ್ರದಲ್ಲೇ ಸೋಂಕು ನಿವಾರಣೆಯಾಗಬಹುದು ಎಂದು ಮತ್ತೊಂದು ಖಾಸಗಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ ಅರವಿಂದ್ ಕಸ್ತೂರಿ ಅವರು ಹೇಳಿದ್ದಾರೆ. ಶ್ವಾಸಕೋಶದ ಸಮಸ್ಯೆ ವಯಸ್ಸಾದ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ವೃದ್ಧರೇ ತೀವ್ರವಾದ ಸೋಂಕುಗಳಿಗೆ ಒಳಗಾಗುತ್ತಾರೆ.
ಕೆಲವರು ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಸುಮಾರು 10ರಲ್ಲಿ ಒಬ್ಬರು ಉಸಿರಾಟದ ಸಮಸ್ಯೆಯಿಂದ ಪೀಡಿಯಾಟ್ರಿಕ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವರಿಯಿಂದ ಈ ರೀತಿಯ ಸೋಂಕಿನ ಪ್ರಕರಣಗಳು ಶೇಕಡಾ 20 ರಷ್ಟು ಹೆಚ್ಚಳವಾಗಿವೆ ಎಂದು ಖಾಸಗಿ ಕ್ಲಿನಿಕ್‌ನ ಶ್ವಾಸಕೋಶಶಾಸ್ತ್ರಜ್ಞ ತಿಳಿಸಿದ್ದಾರೆ.
ಕೋವಿಡ್ ಬಂದ ನಂತರ ಜನರು ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ನಗರದಲ್ಲಿ ಸುಡು ಬಿಸಿಲು ಜನರನ್ನು ಹೈರಾಣವಾಗಿಸುತ್ತಿದೆ. ಇದರ ಜೊತೆಗೆ ಇದೀಗ ಉಸಿರಾಟದ ಸೋಂಕು ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೂಳ್ಳಬೇಕಿದೆ.
(This copy first appeared in Hindustan Times Kannada website. To read more like this please logon to kannada.hindustantimes.com )