ಮುಂಗಾರು ಹಂಗಾಮು; ಬಿತ್ತನೆ ಬೀಜ ದರ ಏರಿಕೆಗೆ ಕಂಗಾಲಾದ ಕೃಷಿಕರು, 2023- 2024ರ ಬೆಲೆಗಳ ಹೋಲಿಕೆ ವಿವರ ಹೀಗಿದೆ
May 29, 2024 06:10 PM IST
ಮುಂಗಾರು ಹಂಗಾಮು; ಬಿತ್ತನೆ ಬೀಜ ದುಬಾರಿ ಆಗಿರುವುದು ನೋಡಿ ಕಂಗಾಲಾದ ಕೃಷಿಕರು 2023- 2024ರ ಬೆಲೆಗಳ ಹೋಲಿಕೆ ವಿವರ ಮುಂದಿಟ್ಟಿದ್ದಾರೆ. (ಸಾಂಕೇತಿಕ ಚಿತ್ರ)
ಮುಂಗಾರು ಪೂರ್ವ ಮಳೆ ಕೃಷಿಕರ ಮುಖದಲ್ಲಿ ಮಂದಹಾಸ ಮಿನುಗುವಂತೆ ಮಾಡಿದೆ. ಆದರೆ ಪ್ರಸಕ್ತ ಮುಂಗಾರು ಹಂಗಾಮು ಅವಧಿಯ ಬಿತ್ತನೆ ಬೀಜ ದುಬಾರಿಯಾಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. 2023- 2024ರ ಬೆಲೆಗಳ ಹೋಲಿಕೆ ಮಾಡಿರುವ ವಿವರ ವರದಿ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಉತ್ತಮ ಪ್ರಮಾಣದಲ್ಲಿ ಆಗಿದ್ದು, ರೈತರ ಮುಖದಲ್ಲಿ ಮಂದಹಾಸ ಮಿನುಗಿದೆ. ಆದರೆ ಬಿತ್ತನೆ ಬೀಜಗಳ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 30 ರಿಂದ ಶೇಕಡ 60 ಹೆಚ್ಚಳವಾಗಿರುವುದು ಕೃಷಿಕರ ಕಳವಳವನ್ನು ಹೆಚ್ಚಿಸಿದೆ. ಆದಾಗ್ಯೂ, ರೈತರು ಎಂದಿನ ರೂಢಿಯಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮುಂಗಾರು ಮಳೆ ಮುನ್ಸೂಚನೆ, ಕೃಷಿಗೆ ಪೂರಕ ಹವಾಮಾನದ ಸುಳಿವು ಒಂದು ತಿಂಗಳು ಮುಂಚಿತವಾಗಿಯೆ ಸಿಕ್ಕಿದೆ. ಹೀಗಾಗಿ, ರೈತರು ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.
ಮಳೆಯ ಕೊರತೆ ಆದ ಕಾರಣ ಕಳೆದ ವರ್ಷ ಬೀಜೋತ್ಪನ್ನ ಪ್ರಮಾಣ ತೀವ್ರ ಕುಸಿತ ಕಂಡಿತ್ತು. ಹೀಗಾಗಿ ಈ ವರ್ಷ ಬಿತ್ತನೆ ಬೀಜಗಳು ದುಬಾರಿಯಾಗಿದೆ. ಇದಲ್ಲದೆ, ಬಿತ್ತನೆ ಬೀಜಕ್ಕೆ ಸರ್ಕಾರ ನಿಗದಿ ಮಾಡಿರುವ ಸಹಾಯಧನದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ ರೈತರಿಗೆ ಕೈಗೆಟಕುವ ದರದಲ್ಲಿ ಬಿತ್ತನೆ ಬೀಜ ಸಿಗುವುದು ಕಷ್ಟ. ಕರ್ನಾಟಕದ ವಿವಿಧ ಭಾಗಗಳಲ್ಲಿ ಭತ್ತ, ಹೆಸರು, ಸೋಯಾಬೀನ್, ತೊಗರಿ, ಎಳ್ಳು, ಮಕ್ಕೆಜೋಳ, ಹತ್ತಿ ಸೇರಿದಂತೆ ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ.
ರೈತ ಸಂಪರ್ಕ ಕೇಂದ್ರ, ಕೃಷಿ ಸಂಪರ್ಕ ಕೇಂದ್ರಗಳಲ್ಲೂ ಬಿತ್ತನೆ ಬೀಜದ ದರದಲ್ಲಿ ಭಾರಿ ಹೆಚ್ಚಳ
ಕರ್ನಾಟಕ ರಾಜ್ಯ ಬೀಜ ನಿಗಮ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಪ್ರತಿ ವರ್ಷ ರೈತರಿಂದ ಬಿತ್ತನೆ ಬೀಜ ಖರೀದಿ ಒಪ್ಪಂದಮಾಡಿಕೊಳ್ಳುತ್ತದೆ. ಅದರಂತೆ ಕಳೆದ ವರ್ಷ ಒಪ್ಪಂದ ಮಾಡುವಾಗ ಹಳೆಯ ದರದಂತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ನಂತರದ ದಿನಗಳಲ್ಲಿ ಭತ್ತ ಸೇರಿ ಎಲ್ಲ ಬಿತ್ತನೆ ಬೀಜಗಳ ಉತ್ಪಾದನೆ ಪ್ರಮಾಣ ಕುಸಿತ ಕಂಡ ಕಾರಣ ಮಾರುಕಟ್ಟೆ ದರ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಹೀಗಾಗಿ ಬೀಜ ನಿಗಮ ರೈತರ ಜೊತೆಗಿನ ಒಪ್ಪಂದ ಪರಿಷ್ಕರಿಸಿ, ದರ ಏರಿಸಿತ್ತು. ಇಲ್ಲದೇ ಇದ್ದರೆ ಬಿತ್ತನೆ ಬೀಜವನ್ನು ಅವರು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೀಜ ನಿಗಮವು ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರ, ಕೃಷಿ ಸಂಪರ್ಕ ಕೇಂದ್ರಗಳಿಗೆ ಕಳುಹಿಸಿ ಅಲ್ಲಿಂದ ರೈತರಿಗ ತಲುಪುತ್ತದೆ. ಮುಂಗಾರು ಮಳೆಗೆ ಮುನ್ನವೇ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ತಲುಪುವುದು ವಾಡಿಕೆ. ಈ ಬಾರಿ ರೈತರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಹೆಸರು ಬೀಜ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೆ.ಜಿ.ಗೆ 100 ರೂಪಾಯಿ ಹೆಚ್ಚಳವಾಗಿದೆ. ರೈತ ಸಂಪರ್ಕ ಕೇಂದ್ರದಲ್ಲಿ 5 ಕೆ.ಜಿ.ಪ್ಯಾಕೇಟ್ ಹೆಸರು 2023ರಲ್ಲಿ 500 ರೂ. ಇತ್ತು. ಈ ವರ್ಷ 850 ರೂ. ಏರಿಕೆಯಾಗಿದೆ.
ಇದೇ ರೀತಿ, ವಿವಿಧ ಭತ್ತದ ತಳಿಗಳ ಬಿತ್ತನೆ ಬೀಜದ ದರ ಕ್ವಿಂಟಾಲ್‌ಗೆ 675 ರೂಪಾಯಿಯಿಂದ 1,875 ರೂಪಾಯಿವರೆಗೂ ಏರಿಕೆಯಾಗಿದೆ. ಹೆಸರು (5 ಕೆಜಿ) 501 ರೂಪಾಯಿಯಿಂದ 785 ರೂಪಾಯಿವರೆಗೆ, ತೊಗರಿ (5 ಕೆಜಿ) 525 ರೂಪಾಯಿಯಿಂದ 770 ರೂಪಾಯಿವರೆಗೆ ಏರಿಕೆಯಾಗಿದೆ. ಬಿತ್ತನೆ ಬೀಜದ ದಾಸ್ತಾನು ಸಾಕಷ್ಟಿದ್ದರೂ, ದರ ಏರಿಕೆಯಾಗಿರುವುದು ಮಾತ್ರ ಬಡ ರೈತರಿಗೆ ಹೊರೆಯಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯ ಸರ್ಕಾರವು ಭತ್ತದ ಬಿತ್ತನೆ ಬೀಜಕ್ಕೆ ಕ್ವಿಂಟಾಲ್‌ಗೆ 800 ರೂಪಾಯಿ ಸಬ್ಸಿಡಿ ನೀಡಿದೆ. ಆದರೆ, ಭತ್ತದ ಮಾರುಕಟ್ಟೆ ದರ ಭಾರೀ ಏರಿಕೆಯಾಗಿರುವುದರಿಂದ ಬಿತ್ತನೆ ಬೀಜಕ್ಕೂ ಅದರ ಬಿಸಿ ತಟ್ಟಿದೆ.
ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ದೊರೆಯಬೇಕಾದ ಬಿತ್ತನೆ ಬೀಜದ ದರಲ್ಲಿ ಹೆಚ್ಚಳವಾಗಿದೆ. ಇದರ ಪರಿಣಾಮ, ಮುಕ್ತ ಮಾರುಕಟ್ಟೆಯಲ್ಲಿ ಕೂಡ ರಿಟೇಲ್ ದರವನ್ನು ಶೇಕಡ 100 ರಷ್ಟು ಹೆಚ್ಚಿಸಿದ್ದಾರೆ. ವಿವಿಧ ಕಂಪನಿಗಳ ಬೀಜದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಬಹುತೇಕ ರೈತರು ಕೃಷಿ ರೈತ ಸಂರ್ಪಕ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಸರ್ಕಾರದ ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ತಳಿಯ ಬೀಜಗಳ ಬೆಲೆ ದುಪ್ಪಟ್ಟಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.