logo
ಕನ್ನಡ ಸುದ್ದಿ  /  ಕರ್ನಾಟಕ  /  ಕಬ್ಬನ್ ಪಾರ್ಕ್‌ ಬಾಲ ಭವನದಲ್ಲಿ ಕ್ಯೂಆರ್ ಕೋಡ್ ಗೋಲ್‌ಮಾಲ್; ಒಟ್ಟು 3.5 ಲಕ್ಷ ರೂಪಾಯಿ ವೈಯಕ್ತಿಕ ಖಾತೆಗೆ, 4 ಉದ್ಯೋಗಿಗಳ ವಿರುದ್ಧ ಎಫ್‌ಐಆರ್‌

ಕಬ್ಬನ್ ಪಾರ್ಕ್‌ ಬಾಲ ಭವನದಲ್ಲಿ ಕ್ಯೂಆರ್ ಕೋಡ್ ಗೋಲ್‌ಮಾಲ್; ಒಟ್ಟು 3.5 ಲಕ್ಷ ರೂಪಾಯಿ ವೈಯಕ್ತಿಕ ಖಾತೆಗೆ, 4 ಉದ್ಯೋಗಿಗಳ ವಿರುದ್ಧ ಎಫ್‌ಐಆರ್‌

Umesh Kumar S HT Kannada

Jul 25, 2024 10:06 AM IST

google News

ಕಬ್ಬನ್ ಪಾರ್ಕ್‌ ಬಾಲ ಭವನದಲ್ಲಿ ಕ್ಯೂಆರ್ ಕೋಡ್ ಗೋಲ್‌ಮಾಲ್; ಒಟ್ಟು 3.5 ಲಕ್ಷ ರೂಪಾಯಿ ವೈಯಕ್ತಿಕ ಖಾತೆಗೆ, 4 ಉದ್ಯೋಗಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

  • ಸಾರ್ವಜನಿಕ ಸಂಸ್ಥೆಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ಅದು ಯಾವ ಖಾತೆಗೆ ಜಮೆಯಾಗುತ್ತಿದೆ ಎಂಬುದನ್ನು ಗಮನಿಸಿ. ಯಾಕೆಂದರೆ ಕಬ್ಬನ್ ಪಾರ್ಕ್‌ ಬಾಲ ಭವನದಲ್ಲಿ ಕ್ಯೂಆರ್ ಕೋಡ್ ಗೋಲ್‌ಮಾಲ್ ಆಗಿದ್ದು, ಒಟ್ಟು 3.5 ಲಕ್ಷ ರೂಪಾಯಿ ವೈಯಕ್ತಿಕ ಖಾತೆಗೆ ಜಮೆಯಾಗಿತ್ತು. ಈ ಸಂಬಂಧ 4 ಉದ್ಯೋಗಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಕಬ್ಬನ್ ಪಾರ್ಕ್‌ ಬಾಲ ಭವನದಲ್ಲಿ ಕ್ಯೂಆರ್ ಕೋಡ್ ಗೋಲ್‌ಮಾಲ್; ಒಟ್ಟು 3.5 ಲಕ್ಷ ರೂಪಾಯಿ ವೈಯಕ್ತಿಕ ಖಾತೆಗೆ, 4 ಉದ್ಯೋಗಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ಕಬ್ಬನ್ ಪಾರ್ಕ್‌ ಬಾಲ ಭವನದಲ್ಲಿ ಕ್ಯೂಆರ್ ಕೋಡ್ ಗೋಲ್‌ಮಾಲ್; ಒಟ್ಟು 3.5 ಲಕ್ಷ ರೂಪಾಯಿ ವೈಯಕ್ತಿಕ ಖಾತೆಗೆ, 4 ಉದ್ಯೋಗಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬೆಂಗಳೂರು: ಕಬ್ಬನ್ ಪಾರ್ಕ್‌ ಬಾಲ ಭವನದಲ್ಲಿ ಕ್ಯೂಆರ್ ಕೋಡ್ ಗೋಲ್‌ಮಾಲ್ ನಡೆದಿರುವುದು ಬೆಳಕಿಗೆ ಬಂದಿದ್ದು, ಇಬ್ಬರು ಖಾಯಂ ಮತ್ತು ಇಬ್ಬರು ಗುತ್ತಿಗೆ ಉದ್ಯೋಗಿಗಳು ಇದರಲ್ಲಿ ಭಾಗಿಯಾಗಿರುವುದನ್ನು ಪ್ರವಾಸೋದ್ಯಮದ ಸಚಿವ ಎಚ್ ಕೆ ಪಾಟೀಲ್‌ ವಿಧಾನಸಭೆ ಗಮನಕ್ಕೆ ತಂದರು.

ಬೆಂಗಳೂರು ಕಬ್ಬನ್ ಪಾರ್ಕ್‌ ಬಾಲ ಭವನದ ನಿರ್ವಹಣೆಯನ್ನು ಕೆಎಸ್‌ಟಿಡಿಸಿ ಮಾಡುತ್ತಿದ್ದು, ಈ ನಾಲ್ವರು ಉದ್ಯೋಗಿಗಳನ್ನು ಮಯೂರ ಬಾಲ ಭವನ ಕಿಯೋಸ್ಕ್‌ನಲ್ಲಿ ನಿಯೋಜಿಸಲಾಗಿತ್ತು. ಅಲ್ಲಿ ಅವರು ಕೆಎಸ್‌ಟಿಡಿಸಿ ಕ್ಯೂಆರ್ ಕೋಡ್ ಬದಲಿಗೆ ತಮ್ಮ ವೈಯಕ್ತಿಕ ಖಾತೆಯ ಕ್ಯೂಆರ್‌ ಕೋಡ್ ಬಳಸಿ ಹಣವನ್ನು ತಮ್ಮ ಖಾತೆಗೆ ಮಾಡಿಸಿಕೊಂಡಿದ್ದರು.

ವಿಧಾನಸಭೆಯಲ್ಲಿ ಮಂಗಳವಾರ (ಜುಲೈ 23) ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಪಾಟೀಲ್‌ ಅವರು, ಕರ್ನಾಟಕ ಪ್ರವಾಸೋದ್ಯಮ ರಾಜ್ಯ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ಕ್ಕೆ ಸೇರಬೇಕಾದ ದುಡ್ಡನ್ನು ನಾಲ್ವರು ಉದ್ಯೋಗಿಗಳು ಕ್ಯೂಆರ್‌ ಕೋಡ್ ಬಳಸಿ ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ. ಈ ಅವ್ಯವಹಾರ ಬಹಿರಂಗವಾದ ಕೂಡಲೇ ಇಬ್ಬರು ಖಾಯಂ ಉದ್ಯೋಗಿಗಳನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆ ಚಾಲ್ತಿಯಲ್ಲಿದೆ. ಇನ್ನಿಬ್ಬರು ಗುತ್ತಿಗೆ ಉದ್ಯೋಗಿಗಳಾಗಿದ್ದು ಅವರ ಗುತ್ತಿಗೆ ವಜಾಗೊಳಿಸಲಾಗಿದೆ. ಪೊಲೀಸ್ ಕೇಸ್ ಕೂಡ ದಾಖಲಿಸಲಾಗಿದೆ ಎಂದು ತಿಳಿಸಿದರು.

ಕಬ್ಬನ್‌ ಪಾರ್ಕ್‌ ಬಾಲ ಭವನ ಕ್ಯೂಆರ್ ಕೋಡ್ ಗೋಲ್‌ಮಾಲ್ ಪ್ರಕರಣ

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದಲ್ಲಿ ನಾಲ್ವರು ಉದ್ಯೋಗಿಗಳು ನಡೆಸಿದ ಹಣಕಾಸು ಅವ್ಯವಹಾರ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸ್ ಕೇಸ್ ದಾಖಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ರಾಜ್ಯ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದ ಖಾತೆಗೆ ಸೇರಬೇಕಾದ 3.5 ಲಕ್ಷ ರೂಪಾಯಿಯನ್ನು ಕ್ಯೂಆರ್ ಕೋಡ್ ಬಳಸಿಕೊಂಡು ಈ ಉದ್ಯೋಗಿಗಳು ತಮ್ಮ ವೈಯಕ್ತಿಕ ಖಾತೆಗೆ ಜಮೆ ಮಾಡಿಸಿಕೊಂಡಿದ್ದರು.

ಈ ವಂಚನೆ ಪ್ರಕರಣ 2022ರ ಡಿಸೆಂಬರ್‌ನಿಂದ 2024ರ ಏಪ್ರಿಲ್ ನಡುವಿನ ಅವಧಿಯಲ್ಲಿ ಆಗಿದ್ದು, ಒಟ್ಟು 3,50,964 ರೂಪಾಯಿಯನ್ನು ನಾಲ್ಕು ಸಿಬ್ಬಂದಿಗಳಾದ ಅಬ್ದುಲ್ ವಾಜಿದ್, ವೆಂಕಟೇಶ್ ಕೆ, ರಾಮಚಂದ್ರ ಕೆ ಮತ್ತು ಕೆ ಕೋದಂಡರಾಮು ಅವರ ವೈಯಕ್ತಿಕ ಖಾತೆಗಳಿಗೆ ಜಮೆಮಾಡಿಸಿಕೊಂಡಿದ್ದರು ಎಂದು ದ ಹಿಂದೂ ವರದಿ ಮಾಡಿದೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ವಾಜಿದ್‌ ಒಟ್ಟು 2,66, 215 ರೂಪಾಯಿ ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. ಇದೇ ರೀತಿ ಮತ್ತೊಬ್ಬ ಗುತ್ತಿಗೆ ಆಧಾರದಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿದ್ದ ರಾಮಚಂದ್ರ 31,917 ರೂಪಾಯಿಯನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದ. ವೆಂಕಟೇಶ್ ಮತ್ತು ಕೋದಂಡರಾಮು ಎಂಬ ಇನ್ನಿಬ್ಬರು ಕೆಎಸ್‌ಟಿಡಿಸಿಯ ಖಾಯಂ ಉದ್ಯೋಗಿಗಳಾಗಿದ್ದು ಅನುಕ್ರಮವಾಗಿ 48,642 ರೂಪಾಯಿ ಮತ್ತು 3,920 ರೂಪಾಯಿ ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ವರದಿ ವಿವರಿಸಿದೆ.

ವಿಧಾನಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹೇಳಿದ್ದು ಇಷ್ಟು

ಕಬ್ಬನ್ ಪಾರ್ಕ್‌ ಬಾಲ ಭವನದ ಕ್ಯೂಆರ್‌ ಕೋಡ್‌ ಹಗರಣದಲ್ಲಿ ಇಬ್ಬರು ಖಾಯಂ ಉದ್ಯೋಗಿಗಳನ್ನು ಅಮಾನತುಗೊಳಿಸಲಾಘಿದೆ. ಅವರು ಇಲಾಖಾ ತನಿಖೆ ಎದುರಿಸುತ್ತಿದ್ದಾರೆ. ಇನ್ನಿಬ್ಬರು ಉದ್ಯೋಗಿಗಳು ಗುತ್ತಿಗೆ ಆಧಾರದವರಾಗಿದ್ದು, ಅವರ ಗುತ್ತಿಗೆ ರದ್ದುಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಪೊಲೀಸ್ ಕೇಸ್ ದಾಖಲಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಮಂಗಳವಾರ (ಜುಲೈ 23) ವಿಧಾನಸಭೆಗೆ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ವಿವಿಧ ವಿಭಾಗಗಳ ಅನೇಕ ನೌಕರರು ಇಲಾಖೆ ಮತ್ತು ಕೆಎಸ್‌ಟಿಡಿಸಿಗೆ ಪೂರ್ಣಾವಧಿಯ ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಅನುಪಸ್ಥಿತಿಯಲ್ಲಿ ನಡೆಯುತ್ತಿರುವ ಅಕ್ರಮಗಳು, ಅವ್ಯವಹಾರಗಳ ಬಗ್ಗೆ ದೂರುತ್ತಲೇ ಇರುವುದರ ಬಗ್ಗೆ ವರದಿ ಗಮನಸೆಳೆದಿದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ