Bengaluru News: ಉಪನಗರ ರೈಲು ಯೋಜನೆಗೆ ಗ್ರಹಣ; ಕಾರಿಡಾರ್–4 ಹಸ್ತಾಂತರವಾಗದ ಜಮೀನು, ಆರಂಭವಾಗದ ಕಾಮಗಾರಿ
Feb 08, 2024 07:21 AM IST
ಉಪನಗರ ರೈಲು ಯೋಜನೆ ಮತ್ತಷ್ಟು ವಿಳಂಬವಾಗುತ್ತಿದ್ದು, ಕಾರಿಡಾರ್–4 ಕ್ಕೆ ಜಮೀನು ಇನ್ನೂ ಕೂಡ ಹಸ್ತಾಂತರವಾಗಿಲ್ಲ. ಹೀಗಾಗಿ ಕಾಮಗಾರಿ ಆರಂಭವಾಗಿಲ್ಲ.
Suburban Rail Project: ಉಪನಗರ ರೈಲು ಯೋಜನೆ ಮತ್ತಷ್ಟು ವಿಳಂಬವಾಗುತ್ತಿದ್ದು, ಕಾರಿಡಾರ್–4 ಕ್ಕೆ ಜಮೀನು ಇನ್ನೂ ಕೂಡ ಹಸ್ತಾಂತರವಾಗಿಲ್ಲ. ಹೀಗಾಗಿ ಕಾಮಗಾರಿ ಇನ್ನೂ ಆರಂಭವಾಗುತ್ತಿಲ್ಲ.
Suburban Rail Project in Bengaluru: ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್–4ಕ್ಕೆ ಟೆಂಡರ್ ಆಗಿದ್ದು 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದೆ. ಆದರೆ, ಜಮೀನು ಹಸ್ತಾಂತರವಾಗಿಲ್ಲದಿರುವುದು ಯೋಜನೆ ವಿಳಂಬಕ್ಕೆ ಕಾರಣವಾಗಿದೆ.
ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕಿಸುವ ಈ ಕಾರಿಡಾರ್ 9 ಕಿ.ಮೀ. ಎತ್ತರಿಸಿದ ಮಾರ್ಗ ಮತ್ತು 38 ಕಿ.ಮೀ. ನೆಲಮಟ್ಟದ ಮಾರ್ಗ ಒಳಗೊಂಡಿದೆ. ನೈರುತ್ಯ ರೈಲ್ವೆಯಿಂದ ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿಗೆ (ಕೆ–ರೈಡ್) 193 ಎಕರೆ ಭೂಮಿ ಹಸ್ತಾಂತರವಾಗಬೇಕಿದೆ. 2023ರ ಡಿಸೆಂಬರ್ ನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಮೂರು ವಾರ ಕಳೆದರೂ ಭೂಮಿ ಹಸ್ತಾಂತರವಾಗಿಲ್ಲ.
ಈ ಮಾರ್ಗದಲ್ಲಿ ರಾಜಾನಕುಂಟೆ, ಮುದ್ದನಹಳ್ಳಿ, ಯಲಹಂಕ (ಎಲಿವೇಟೆಡ್ ಇಂಟರ್‌ಚೇಂಜ್), ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ (ಇಂಟರ್‌ಚೇಂಜ್), ಕಗ್ಗದಾಸಪುರ, ಮಾರತ್ತಹಳ್ಳಿ (ಎಲಿವೇಟೆಡ್), ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಅಂಬೇಡ್ಕರ್ ನಗರ, ಹುಸ್ಕೂರು, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ ಮತ್ತು ಹೀಲಲಿಗೆಯಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.
ಎಲ್ ಆ್ಯಂಡ್ ಟಿ ಕಂಪನಿ1040.51 ಕೋಟಿ ರೂಪಾಯಿಗೆ ಗುತ್ತಿಗೆ ಪಡೆದಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಆದರೆ, ಕಾಮಗಾರಿಗೆ ಬೇಕಿರುವ ಶೇ. 85ರಷ್ಟು ಜಮೀನು ರೈಲ್ವೆ ಹಳಿಗಳಿಗೆ ಹೊಂದಿಕೊಂಡಿದೆ. ಈ ಭೂಮಿಯನ್ನು ನೈರುತ್ಯ ರೈಲ್ವೆ ಭೂಮಿ ಹಸ್ತಾಂತರಿಸಬೇಕು. ಉಳಿದ ಶೇ 15ರಷ್ಟು (34 ಎಕರೆ) ಜಮೀನು ಖಾಸಗಿಯಾಗಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕೆ–ರೈಡ್ ಸ್ವಾಧೀನಪಡಿಸಿಕೊಳ್ಳಬೇಕಿದೆ.
4 ಕಾರಿಡಾರ್‌ಗಳಲ್ಲಿ ಚಿಕ್ಕಬಾಣಾವರ–ಬೈಯಪ್ಪನಹಳ್ಳಿವರೆಗಿನ 2ನೇ ಕಾರಿಡಾರ್ ಕಾಮಗಾರಿ ಮಾತ್ರ ನಡೆಯುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ತಿಂಗಳಿಗೆ ಶೇ 5ರಷ್ಟು ಕಾಮಗಾರಿಯಾದರೂ ಪೂರ್ಣಗೊಳಿಸಬೇಕು. ಕಾರಿಡಾರ್–2 ಟೆಂಡರ್ ಪಡೆದಿರುವ ಎಲ್ ಆ್ಯಂಡ್ ಟಿ ಕಂಪನಿಯೇ ಕಾರಿಡಾರ್–4 ಅನ್ನೂ ಪಡೆದಿದೆ. 2026ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಆ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.
ಯಲಹಂಕ–ಬಂಗಾರಪೇಟೆ ಮಧ್ಯೆ ದ್ವಿಪಥಗೊಳಿಸುವ ರೈಲ್ವೆ ಯೋಜನೆಗೆ ಸಮೀಕ್ಷೆ ಆರಂಭ: ರೂ. 8 ಕೋಟಿ ಬಿಡುಗಡೆ
ಯಲಹಂಕ–ಬಂಗಾರಪೇಟೆ ಮಧ್ಯೆ ರೈಲ್ವೆಹಳಿಯನ್ನು ದ್ವಿಪಥಗೊಳಿಸುವ ಯೋಜನೆಗೆ ಕಾರ್ಯ ಸಾಧ್ಯತಾ ಸಮೀಕ್ಷೆಯ ಮೊದಲ ಹಂತವನ್ನು ನೈರುತ್ಯ ರೈಲ್ವೆ ಕೊನೆಗೂ ಆರಂಭಿಸಿದೆ. ಮೊದಲ ಹಂತದಲ್ಲಿ ಈ ಮಾರ್ಗದ ಯಲಹಂಕ–ದೇವನಹಳ್ಳಿ ನಡುವಿನ 23 ಕಿಮೀ ಸಮೀಕ್ಷೆಗೆ ರೂ. 8 ಕೋಟಿ ಬಿಡುಗಡೆಯಾಗಿದ್ದು, ಸಮೀಕ್ಷೆ ಆರಂಭಗೊಂಡಿದೆ. ಕಾರ್ಯಸಾಧ್ಯತಾ ವರದಿ ಸಲ್ಲಿಕೆಯಾಗಿ ಕಾಮಗಾರಿಗೆ ಅನುಮೋದನೆ ದೊರೆತರೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕದ ಈ ಮಾರ್ಗ ದ್ವಿಪಥಗೊಳ್ಳಲಿದೆ.
ದೇವನಹಳ್ಳಿಯಿಂದ ಕೋಲಾರ ಮೂಲಕ ಬಂಗಾರಪೇಟೆ ರೈಲು ನಿಲ್ದಾಣದವರೆಗೆ 125 ಕಿ.ಮೀ. ಸಮೀಕ್ಷೆ ಎರಡನೇ ಹಂತದಲ್ಲಿ ನಡೆಯಲಿದ್ದು, ಈ ಸಮೀಕ್ಷೆಗೆ ರೂ. 2.5 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿದು ಬಂದಿದೆ. ಏಕಪಥ ಹಳಿಯನ್ನು ಮೇಲ್ದರ್ಜೆಗೇರಿಸಿ ದ್ವಿಪಥಗೊಳಿಸುವ ಯೋಜನೆ ಅನುಷ್ಠಾನಗೊಂಡರೆ ಎಲೆಕ್ಟ್ರಿಕ್ ಮೆಮು ರೈಲುಗಳ ಸಂಖ್ಯೆ ಏರಿಕೆಯಾಗಲಿದೆ. ಇದರಿಂದ ನಿತ್ಯ ಸಂಚರಿಸುವವರಿಗೆ ಅನುಕೂಲವಾಗಲಿದೆ.
ಸದ್ಯ ಬೆಂಗಳೂರು-ಕೋಲಾರ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ರೈಲು ಸಂಚರಿಸುತ್ತಿದೆ. ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ರೈಲುಗಳ ಓಡಾಟ ಕಡಿಮೆ ಇರುವುದರಿಂದ ಹೆಚ್ಚಿನ ಪ್ರಯಾಣಿಕರು ಬಸ್, ಖಾಸಗಿ ವಾಹನಗಳನ್ನು ಆಶ್ರಯಿಸುತ್ತಿದ್ದಾರೆ. ಹಳಿ ದ್ವಿಪಥಗೊಂಡು ರೈಲುಗಳ ಸಂಖ್ಯೆ ಹೆಚ್ಚಳವಾದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.
ಪ್ರಸ್ತುತ ಯಲಹಂಕದಿಂದ ದೇವನಹಳ್ಳಿ ಕಡೆಗೆ ರೈಲು ಹೊರಟರೆ, ಮರಳಲು ಯಾವುದೇ ರೈಲು ಇಲ್ಲ. ದೇವನಹಳ್ಳಿ ತಲುಪಿದ ಮೇಲೆಯೇ ಬೇರೆ ರೈಲು ಯಲಹಂಕ ಕಡೆಗೆ ಬರಬೇಕು. ಇದರಿಂದ ಹೆಚ್ಚಿನ ಸಮಯ ಕಾಯಬೇಕಾಗುತ್ತದೆ. ಆದ್ದರಿಂದ ಜನರು ಈ ಮಾರ್ಗದಲ್ಲಿ ರೈಲಿನ ಬದಲು ಬಸ್‌ಗಳನ್ನು ಅವಲಂಬಿಸಿದ್ದಾರೆ. ದ್ವಿಪಥಗೊಂಡರೆ ಈ ಸಮಸ್ಯೆ ತಪ್ಪಲಿದೆ. ದ್ವಿಪಥಗೊಂಡಾಗ ರೈಲುಗಳ ಸಂಖ್ಯೆ ಹೆಚ್ಚಲಿದೆ. ಕೋಲಾರ ಸುತ್ತಮುತ್ತಲಿನ ರೈತರು ತಾವು ಬೆಳೆದ ಬೆಳೆಗಳನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಲು ಸಹಾಯವಾಗಲಿದೆ. (This copy first appeared in Hindustan Times Kannada website. To read more like this please logon to kannada.hindustantime.com).