ಇವರು ಅಡುಗೆ ಭಟ್ಟರಲ್ಲ, ದೋಸೆ ಮಾಸ್ಟರ್‌ಗಳು; ವಿದೇಶಗಳಲ್ಲಿ ಬೇಡಿಕೆ ಇರುವ ದೋಸೆ ಕಲಾಕಾರರ ಪಗಾರ ಲಕ್ಷ ಸನಿಹ
Sep 11, 2024 05:52 AM IST
ಬೆಂಗಳೂರಿನಲ್ಲಿ ದೋಸೆ ಮಾಸ್ಟರ್‌ಗಳ ಪಗಾರ ಲಕ್ಷ ಸನಿಹ
- ಹಲವು ಹೋಟೆಲ್‌ಗಳಲ್ಲಿ ಬಗೆಬಗೆಯ ದೋಸೆಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ದೋಸೆ ಮಾಡುವ ದೋಸಾ ಮಾಸ್ಟರ್‌ಗಳಿಗೂ ಡಿಮ್ಯಾಂಡ್ ಜಾಸ್ತಿ. ಬೆಂಗಳೂರಿನಲ್ಲಿ ನುರಿತ ಅನುಭವಿ ದೋಸೆ ಮಾಸ್ಟರ್‌ಗಳು ಪ್ರತಿ ತಿಂಗಳು ಲಕ್ಷದವರೆಗೂ ದುಡಿಯುತ್ತಾರೆ. (ವರದಿ: ಎಚ್ ಮಾರುತಿ)
ಹೋಟೆಲ್‌ಗಳಲ್ಲಿ ದೋಸೆ ಹಾಕುವುದನ್ನು ನೋಡುವುದೇ ಒಂದು ಚೆಂದ. ದೋಸೆ ಹಾಕುವ ಅಡುಗೆಯವರು ಉದ್ದನೆಯ ಪೈಪ್‌ನಿಂದ ನೀರನ್ನು ಬಿಟ್ಟು ಹೆಂಚನ್ನು ತೊಳೆಯುವುದು, ಪೊರಕೆಯಿಂದ ಒಮ್ಮೆ ಸ್ವಚ್ಛಗೊಳಿಸುವುದು, ನಂತರ ಎಣ್ಣೆ ಹಾಕುವುದು, ಅಂತಿಮವಾಗಿ ದೋಸೆ ಹಿಟ್ಟನ್ನು ಹರಡುವುದು ಒಂದು ಕಲಾತ್ಮಕ ಚಿತ್ರಣವೇ ಸರಿ. ಅದರಲ್ಲೂ ಖಾಲಿ ದೋಸೆ, ಮಸಾಲಾ ದೋಸೆ, ಈರುಳ್ಳಿ ದೋಸೆ, ಸೆಟ್ ದೋಸೆ ಹೀಗೆ ಬಗೆ ಬಗೆಯ ದೋಸೆಗಳನ್ನು ಚಿತ್ರದಂತೆ ಬಿಡಿಸುವುದು ಕಲೆಯಲ್ಲದೇ ಮತ್ತೇನು? ಅಂತಿಮವಾಗಿ ಕಂದು ಬಣ್ಣಕ್ಕೆ ತಿರುಗಿದಾಗ ದೋಸೆಯನ್ನು ವಿವಿಧ ಆಕಾರದಲ್ಲಿ ಸುತ್ತಿ ಕೊಡುವುದೂ ಕಲಾತ್ಮಕತೆ ಎಂದರೆ ತಪ್ಪಾಗಲಿಕ್ಕಿಲ್ಲ.
ದರ್ಶಿನಿ ಮತ್ತು ಹೋಟೆಲ್‌ಗಳಲ್ಲಿ ದೋಸೆಗೆ ಬೇಡಿಕೆ ಹೆಚ್ಚು. ಒಟ್ಟೊಟ್ಟಿಗೆ 20-30 ದೋಸೆಗಳಿಗೆ ಆರ್ಡರ್ ಬರುತ್ತದೆ. ವಾರಾಂತ್ಯದ ದಿನಗಳಲ್ಲಿ ದೋಸೆಗೆ ಇನ್ನಿಲ್ಲದ ಬೇಡಿಕೆ. ಅಷ್ಟೂ ದೋಸೆಗಳನ್ನು ಭಟ್ಟ ಸರಬರಾಜು ಮಾಡಲೇಬೇಕು. ದೋಸೆ ಹಾಕುವವರನ್ನು ಸುಖಾಸುಮ್ಮನೆ ಭಟ್ಟ ಅಡುಗೆಯವ (ಅಡುಗೆ ಭಟ್ಟರು) ಎಂದು ಕರೆಯುವ ಕಾಲ ಇದಲ್ಲ. ಈಗೀಗ ದೋಸೆ ಮಾಸ್ಟರ್ ಎಂದು ಕರೆಯುತ್ತಾರೆ. ಈಗ ಕೇವಲ ಉಡುಪಿ-ಮಂಗಳೂರು ಕಡೆಯವರು ಮಾತ್ರ ದೋಸೆ ಹಾಕುವುದಿಲ್ಲ. ಯಾರು ಬೇಕಾದರೂ ದೋಸೆ ಹಾಕುವ ಕೆಲಸವನ್ನು ಕಲಿಯಬಹುದು. ಇಂತಹವರೇ ದೋಸೆ ಹಾಕಬೇಕು ಎಂದೇನೂ ಇಲ್ಲ. ಒಟ್ಟಿನಲ್ಲಿ ಚೆನ್ನಾಗಿ ದೋಸೆ ಹಾಕಬೇಕು ಅಷ್ಟೇ. ಉದಾಹರಣೆಗೆ ರಾಮೇಶ್ವರಂ ಕೆಫೆಯಲ್ಲಿ ನೇಪಾಳದ ಪ್ರೇಮ್ ಬಹದೂರ್ 12 ವರ್ಷಗಳಿಂದ ದೋಸೆ ಮಾಸ್ಟರ್ ಆಗಿದ್ದಾರೆ.
ಸಾಮಾನ್ಯವಾಗಿ ಪ್ರತಿ 8 ನಿಮಿಷಗಳಿ 12 ದೋಸೆ ಹಾಕಬೇಕು. ಆ ಸಂದರ್ಭದಲ್ಲಿ ಹೆಂಚು ಒಂದು ಅಳತೆಗೆ ಕಾದಿರಬೇಕು. ಅಗ ದೋಸೆ ಹಿಟ್ಟನ್ನು ಹರಡಬೇಕು. ನಿರ್ದಿಷ್ಟ ಉರಿಯಲ್ಲಿ ದೋಸೆ ಬೇಯಬೇಕು. ಉರಿ ಹೆಚ್ಚಾಗುವಂತೆಯೂ ಇಲ್ಲ, ಕಡಿಮೆಯಾಗುವಂತೆಯೂ ಇಲ್ಲ. ಈ ಕಲೆ ಎಲ್ಲರಿಗೂ ಸಿದ್ದಿಸುವುದಿಲ್ಲ. ಸತತ ಅಭ್ಯಾಸದಿಂದ ಮಾತ್ರ ಸಾಧ್ಯ ಎನ್ನುತ್ತಾರೆ ಹೋಟೆಲ್ ಮಾಲೀಕ ಬಾಲಾಜಿ ಅವರು.
ಬೇರೆ ರಾಜ್ಯ, ನೇಪಾಳದ ದೋಸೆ ಮಾಸ್ಟರ್‌ಗಳು
ಇದುವರೆಗೂ ದಕ್ಷಿಣ ಕನ್ನಡ, ಉಡುಪಿ, ಕುಂದಾಪುರ, ಶೃಂಗೇರಿ, ಚಿಕ್ಕಮಗಳೂರು, ಸಕಲೇಶಪುರ, ಮೈಸೂರು ಮತ್ತು ಹಾಸನದ ದೋಸೆ ಮಾಸ್ಟರ್ ಗಳನ್ನು ಅವಲಂಬಿಸಿದ್ದೆವು. ಇದೀಗ ಈಶಾನ್ಯ ರಾಜ್ಯಗಳಾದ, ಒಡಿಶಾ, ಬಿಹಾರ ಮತ್ತು ನೇಪಾಳದಿಂದಲೂ ದೋಸೆ ಮಾಸ್ಟರ್‌ಗಳು ಬರುತ್ತಿದ್ದಾರೆ. ಇವರು ಆರಂಭದಲ್ಲಿ ಹೋಟೆಲ್‌ಗಳಲ್ಲಿ ಕೆಲಸಕ್ಕೆ ಸೇರಿಕೊಂಡು ನಂತರ ದೋಸೆ ಮಾಡುವುದನ್ನು ಕಲಿತುಕೊಂಡಿದ್ದಾರೆ ಎಂದು ಹೋಟೆಲ್ ಮಾಲೀಕರು ಹೇಳುತ್ತಾರೆ.
ಸಿಂಗಾಪುರ, ಮಲೇಶಿಯಾ ಮತ್ತು ಕೆಲವು ದೇಶಗಳಲ್ಲಿ ದೋಸೆ ಮಾಸ್ಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಲ್ಲಿನ ಅತ್ಯುತ್ತಮ ದೋಸೆ ಮಾಸ್ಟರ್‌ಗಳನ್ನು ಆ ದೇಶಗಳಿಗೆ ಕರೆದೊಯ್ಯಲಾಗುತ್ತಿದೆ. ಆದ್ದರಿಂದ ಇಲ್ಲಿನ ದರ್ಶಿನಿಗಳಿಗೆ ತೊಂದರೆ ಉಂಟಾಗುತ್ತಿದೆ. ತಾರಾ ಹೋಟೆಲ್‌ಗಳಿಗೆ ಈ ಭಯ ಇಲ್ಲ. ಅಂತಹ ಹೋಟೆಲ್‌ಗಳಲ್ಲಿ ದೋಸೆಗಳಿಗೆ ಬೇಡಿಕೆ ಇರುವದಿಲ್ಲ ಎಂದು ಹೇಳುತ್ತಾರೆ.
ಬೆಂಗಳೂರಿನ ಹೋಟೆಲ್‌ಗಳಲ್ಲಿ ನಾಲ್ವರು ದೋಸೆ ಮಾಸ್ಟರ್‌ಳಲ್ಲಿ ಒಬ್ಬರು ಈಶಾನ್ಯ ರಾಜ್ಯ ಅಥವಾ ನೇಪಾಳದವರೇ ಆಗಿರುತ್ತಾರೆ. ಅವರು ಕೆಲಸವನ್ನು ಚೆನ್ನಾಗಿ ಕಲಿಯುತ್ತಾರೆ. ಅವರು ಕಲಿಯುವುದಾದರೆ ಇತರೆ ಅಡುಗೆಗಳನ್ನು ಕಲಿಸಲು ಅಭ್ಯಂತರವೇನಿಲ್ಲ ಎಂದು ದರ್ಶಿನಿ ಮಾಲೀಕರೊಬ್ಬರು ಹೇಳುತ್ತಾರೆ.
ಸಂಬಳವೂ ಹೆಚ್ಚು
ನೇಪಾಳ ಮತ್ತು ಈಶಾನ್ಯ ರಾಜ್ಯಗಳ ಮಾಸ್ಟರ್‌ಗಳು ವರ್ಷವಿಡೀ ರಜಾ ಹಾಕುವುದಿಲ್ಲ. ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಲೇ ಇರುತ್ತಾರೆ. ಆದರೆ ಒಮ್ಮೆ ಅವರು ರಜಾ ಹಾಕಿದರೆ ಮತ್ತೆ ಹಿಂತಿರುಗಿ ಬರುತ್ತಾರೆ ಎಂಬ ಖಾತ್ರಿ ಇರುವುದಿಲ್ಲ. ದೋಸೆ ಮಾಡುವವರಿಗೆ ಬೇಡಿಕೆ ಇರುವುದರಿಂದ ವೇತನ ತುಸು ಹೆಚ್ಚು. ಇವರಿಗೆ ಮಾಸಿಕ 25 ಸಾವಿರದಿಂದ 50 ಸಾವಿರ ರೂಪಾಯಿವರೆಗೆ ವೇತನ ನೀಡಬೇಕಾಗುತ್ತದೆ. ಇನ್ನೂ ಹೆಚ್ಚಿನ ಪರಿಣಿತಿ ಹೊಂದಿದ್ದರೆ 1 ಲಕ್ಷ ರೂವರೆಗೆ ವೇತನ ನೀಡುವ ಹೋಟೆಲ್‌ಗಳೂ ಇವೆ ಎನ್ನುತ್ತಾರೆ ಮಾಲೀಕರು. ಒಟ್ಟಿನಲ್ಲಿ ದೋಸೆ ಮಾಸ್ಟರ್‌ಗಳಿಗೆ ಇದು ಸಕಾಲ.