logo
ಕನ್ನಡ ಸುದ್ದಿ  /  ಕರ್ನಾಟಕ  /  Traffic Advisory: ಬೆಂಗಳೂರಿನ ಆವಲಹಳ್ಳಿಯಲ್ಲಿ ಸೇತುವೆ ನಿರ್ಮಾಣ, ಈ ರಸ್ತೆಗಳಲ್ಲಿ ಇರಲಿದೆ ಸಂಚಾರ ದಟ್ಟಣೆ

Traffic Advisory: ಬೆಂಗಳೂರಿನ ಆವಲಹಳ್ಳಿಯಲ್ಲಿ ಸೇತುವೆ ನಿರ್ಮಾಣ, ಈ ರಸ್ತೆಗಳಲ್ಲಿ ಇರಲಿದೆ ಸಂಚಾರ ದಟ್ಟಣೆ

Umesh Kumar S HT Kannada

Mar 17, 2024 03:14 PM IST

google News

ಬೆಂಗಳೂರಿನ ಆವಲಹಳ್ಳಿಯ ಸೇತುವೆ ನಿರ್ಮಾಣವಾಗುತ್ತಿದ್ದು ಸಂಚಾರ ದಟ್ಟಣೆ ಇದೆ.

  • ಬೆಂಗಳೂರು ಸಂಚಾರ ಸಲಹೆ: ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಆವಲಹಳ್ಳಿಯಿಂದ ಹೆಣ್ಣೂರು ರಸ್ತೆ, ಬೈರತಿ ರಸ್ತೆ, ರಾಮಮೂರ್ತಿನಗರ ಮಾರ್ಗದಲ್ಲಿ ಸಂಚಾರ ದಟ್ಟಣೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ. (ವರದಿ - ಪ್ರಿಯಾಂಕಾ, ಬೆಂಗಳೂರು)

ಬೆಂಗಳೂರಿನ ಆವಲಹಳ್ಳಿಯ ಸೇತುವೆ ನಿರ್ಮಾಣವಾಗುತ್ತಿದ್ದು ಸಂಚಾರ ದಟ್ಟಣೆ ಇದೆ.
ಬೆಂಗಳೂರಿನ ಆವಲಹಳ್ಳಿಯ ಸೇತುವೆ ನಿರ್ಮಾಣವಾಗುತ್ತಿದ್ದು ಸಂಚಾರ ದಟ್ಟಣೆ ಇದೆ. (BTP)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ದೇಶದ ಐಟಿ ಸಿಟಿ ಅಂತಾನೇ ಖ್ಯಾತಿ ಪಡೆದಿರುವ ಬೆಂಗಳೂರು, ತನ್ನ ವಿಪರೀತ ಟ್ರಾಫಿಕ್ ಜಾಮ್ ನಿಂದ ಕುಖ್ಯಾತಿಗೂ ಪಾತ್ರವಾಗಿದೆ. ಇದೀಗ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಆವಲಹಳ್ಳಿಯಿಂದ ಹೆಣ್ಣೂರು ರಸ್ತೆ, ಬೈರತಿ ರಸ್ತೆ, ರಾಮಮೂರ್ತಿನಗರ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಲಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಮಳೆ ಬಂದರಂತೂ ಬೆಂಗಳೂರು ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ. ಮಳೆ ಸುರಿಯುತ್ತಿದ್ದಂತೆ ಜನ ಬೇಗನೆ ಮನೆ ಸೇರಲು ಮುಂದಾಗುತ್ತಾರೆ. ಸಿಲ್ಕ್ ಬೋರ್ಡ್ ಟ್ರಾಫಿಕ್, ಹೆಬ್ಬಾಳ ಟ್ರಾಫಿಕ್ ಸಾಮಾಜಿಕ ಜಾಲತಾಣದಲ್ಲಿ ಮೆಮೆಗಳಿಗೆ ಕಾರಣವಾಗಿದೆ. ಈ ರಸ್ತೆ ಕಡೆ ಹೋಗುವುದೆಂದರೆ ಚಾಲಕರಿಗೆ ತಲೆನೋವೇ ಹೌದು. ಅದರಲ್ಲೂ ಕಾಮಗಾರಿ ಏನಾದರೂ ಇದ್ದರೆ ಮುಗೀತು. ಟ್ರಾಫಿಕ್ ಜಾಮ್ ಸಾಮಾನ್ಯ.

ಈ ಪ್ರದೇಶಗಳಲ್ಲಿ ಇರಲಿದೆ ಸಂಚಾರ ದಟ್ಟಣೆ

ಸೇತುವೆ ಕಾಮಗಾರಿ ಇರುವುದರಿಂದ ಆವಲಹಳ್ಳಿಯಿಂದ ಹೆಣ್ಣೂರು ರಸ್ತೆ, ಬೈರತಿ ರಸ್ತೆ, ರಾಮಮೂರ್ತಿನಗರ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಟೈಮ್ಸ್ ನೌ ವರದಿ ತಿಳಿಸಿದೆ.

ಈ ಮಧ್ಯೆ, ಹೆಬ್ಬಾಳ ಕಡೆಗೆ ಬೆತೆಲ್ ಎಜಿ ಚರ್ಚ್ ಬಳಿ ಸರಕು ವಾಹನಗಳು ಕೆಟ್ಟುಹೋದ ಕಾರಣ ಟ್ರಾಫಿಕ್ ಅಲರ್ಟ್ ಕೂಡ ನೀಡಲಾಗಿದೆ. ಸಂಚಾರಿ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುತ್ತದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ವಿನಂತಿಸಲಾಗಿದೆ.

ಇನ್ನು ನಗರದ ಹೊರಮಾವು ಬಳಿ ರಾಮಮೂರ್ತಿನಗರದ ಕಡೆಗೆ ಲಾರಿಯೊಂದು ಕೆಟ್ಟು ನಿಂತಿದೆ. ಇದರಿಂದ ನಿಧಾನಗತಿಯ ಸಂಚಾರ ಇರಲಿದೆ. ಲಾರಿ ಕೆಟ್ಟು ನಿಂತಿರುವ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಹಾಗೂ ಬಸವೇಶ್ವರ ವೃತ್ತದ ಬಳಿ ಹಳೆಯ ಹೈ ಗ್ರೌಂಡ್ ಜಂಕ್ಷನ್ ಹತ್ತಿರ ಬಿಎಂಟಿಸಿ ಬಸ್ ಒಂದು ಕೆಟ್ಟು ನಿಂತಿತ್ತು. ಅದನ್ನು ತೆರವುಗೊಳಿಸಿದ್ದು, ಸಂಚಾರ ದಟ್ಟಣೆ ಕಡಿಮೆಯಾಗಿದೆ.

ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ, ಕೆಲವು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 11 ರಂದು ವಿಸ್ತರಣೆ ಮಾಡಲಾಗಿದ್ದ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯನ್ನು ಉದ್ಘಾಟಿಸಿದ್ದರು. ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯು 288 ಕಿಲೋ ಮೀಟರ್ ವ್ಯಾಪಿಸಿದ್ದು, ನಗರದ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಯ ಮೊದಲ ಹಂತವು ದಾಬಸ್‌ಪೇಟೆಯಿಂದ ದೊಡ್ಡಬಳ್ಳಾಪುರದ ಮೂಲಕ ಹೊಸಕೋಟೆಯವರೆಗೆ ವಿಸ್ತರಿಸುತ್ತದೆ. ಇದು ಮಾರ್ಚ್ 2024 ರಲ್ಲಿ ಸಂಚಾರ ಬಳಕೆಗೆ ಮುಕ್ತವಾಗಲಿದೆ. ಈ ಮೂಲಕ ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಗೆ ಪರಿಹಾರ ಸಿಗಲಿದೆ. ಅಲ್ಲದೆ ಇದು, ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಪರಸ್ಪರ ಸಂಪರ್ಕಿಸುತ್ತದೆ. ಅವು ಯಾವ್ಯಾವು ಎಂದರೆ, ಎನ್ಎಚ್ 48 (ತುಮಕೂರು ರಸ್ತೆ), ಎನ್ಎಚ್ 44 (ಬಳ್ಳಾರಿ ರಸ್ತೆ) ಮತ್ತು ಎನ್ಎಚ್ 75 (ಬೆಂಗಳೂರು-ಕೋಲಾರ ರಸ್ತೆ). ಈ ಪ್ರದೇಶದಲ್ಲಿ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ನಗರದಲ್ಲಿ ಸಂಚಾರ ಸುಗಮಗೊಳಿಸಲು ಬೆಂಗಳೂರು ರಿಂಗ್ ರೋಡ್ ಯೋಜನೆ, 114 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 17,000 ಕೋಟಿ ರೂ. ಹೂಡಿಕೆಯೊಂದಿಗೆ ಕಾರ್ಯಗತಗೊಳಿಸಲಾಗಿದೆ. ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯು ಸರಕುಗಳ ಸಂಚಾರಕ್ಕೆ ಬೈಪಾಸ್ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ನಗರವನ್ನು ಪ್ರವೇಶಿಸದೆ ಬೈಪಾಸ್ ರಸ್ತೆಯಲ್ಲಿ ಸಂಚರಿಸಬಹುದು. ಹೀಗಾಗಿ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ.

(ವರದಿ- ಪ್ರಿಯಾಂಕಾ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ