ಬೆಂಗಳೂರಿನ ಹೆಬ್ಬಾಳದಲ್ಲಿ ಟ್ರಾಫಿಕ್ ಜಾಮ್; ಒಂದೇ ದಿನ 374 ಜನರಿಗೆ ತಪ್ಪಿದ ವಿಮಾನ ಪ್ರಯಾಣ; ಕೇರಳ ಕಾಂಗ್ರೆಸ್ ಟ್ವೀಟ್
Apr 15, 2024 03:35 PM IST
ಹೆಬ್ಬಾಳದಲ್ಲಿ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಿಂದ ಒಂದೇ ದಿನ 374 ಜನರು ವಿಮಾನ ಪ್ರಯಾಣ ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
- ಏಪ್ರಿಲ್ 14 ರಂದು ಬೆಂಗಳೂರು ವಿಮಾನ ರಸ್ತೆಯ ಹೆಬ್ಬಾಳದಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯಿಂದ 374 ಜನರು ವಿಮಾನ ಪ್ರಯಾಣವನ್ನು ತಪ್ಪಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ (Bengaluru Traffic Jam) ಯಾವ ಮಟ್ಟಕ್ಕೆ ಜನರಿಗೆ ಸಮಸ್ಯೆ ನೀಡಿದೆ ಎಂದರೆ ಒಂದೇ ದಿನ ಬರೋಬ್ಬರಿ 374 ಜನರು ವಿಮಾನ ಪ್ರಯಾಣವನ್ನು ತಪ್ಪಿಸಿಕೊಂಡಿದ್ದಾರೆ. ಎಂಜಿ ರಸ್ತೆಯಿಂದ ಕೆಂಪೇಗೌಡ ಏರ್ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಮಾರ್ಗವಾಗಿರುವ ಹೆಬ್ಬಾಳ ತಲುಪಲು ಸಾಮಾನ್ಯವಾಗಿ ಕೆಲವು ನಿಮಿಷ ಸಮಯ ಹಿಡಿಯುತ್ತದೆ. ಆದರೆ ಎಂಜಿ ರಸ್ತೆಯಿಂದ ಹೆಬ್ಬಾಳ, ಹೆಬ್ಬಾಳ ಜಂಕ್ಷನ್‌ನಿಂದ ಏರ್ಪೋರ್ಟ್ ರಸ್ತೆಯ 7 ಕಿಲೋಮೀಟರ್ ಸಾಗಲು ಬರೋಬ್ಬರಿ 45 ರಿಂದ 1 ಗಂಟೆ ಸಮಯ ತೆಗೆದುಕೊಂಡಿದೆ. ಹಲವರು ಟ್ರಾಫಿಕ್‌ನಿಂದ ಬೇಸತ್ತು ನಡೆದುಕೊಂಡು ಹೋಗಿದ್ದಾರೆ ಎಂದು ಕೇರಳ ಕಾಂಗ್ರೆಸ್ (Kerala Congress) ರೂಟ್ ಮ್ಯಾಪ್ (City Route Map) ಫೋಟೊ ಸಹಿತಿ ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಪ್ರಶ್ನೆ ಮಾಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಕೇರಳ ಕಾಂಗ್ರೆಸ್, ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 374 ಜನರು ತಮ್ಮ ವಿಮಾನವನ್ನು ತಪ್ಪಿಸಿಕೊಂಡಿದ್ದಾರೆ. ಅನೇಕರು ರಸ್ತೆಯಲ್ಲಿ ನಡೆದುಕೊಂಡು ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿತ್ತು ಎಂಬುದನ್ನು ನೀವು ಕೇಳಿದ್ದೀರಾ ಎಂದು ಪ್ರಶ್ನಿಸಿದೆ. ಟ್ರಾಫಿಕ್‌ನಲ್ಲಿ ಸಿಲುಕಿದ್ದ ಅನೇಕರು ತಮ್ಮ ವಿಮಾನ ಪ್ರಯಾಣವನ್ನು ಮಿಸ್ ಮಾಡಿಕೊಂಡಿದ್ದಾರೆ. ಕೆಲವರು ಆಂಬುಲೆನ್ಸ್‌ನಲ್ಲಿ ಸಾವನ್ನಪ್ಪಿದ್ದಾರೆ. ಇದಕ್ಕೆ ಹೊಣೆ ಯಾರು, ತಿಳಿದುಕೊಳ್ಳೋಣ ಎಂದಿದೆ.
ಕೇರಳ ಕಾಂಗ್ರೆಸ್‌ನ ಎಕ್ಸ್ ಖಾತೆಯಲ್ಲಿ ಏಪ್ರಿಲ್ 14 ರ ಬೆಳಗ್ಗೆ 8.47ಕ್ಕೆ ಟ್ರಾಫಿಕ್ ಜಾಮ್ ಆಗಿರುವ ಫೋಟೊ ಸಹಿತ ಮಾಹಿತಿಯನ್ನು ಹಂಚಿಕೊಂಡಿದ್ದು, ಈವರೆಗೆ 10 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ. 7200 ಲೈಕ್ಸ್, ಸುಮಾರು 2 ಸಾವಿರ ಮಂದಿ ರಿಟ್ವೀಟ್ ಮಾಡಿದ್ದಾರೆ.
ಟ್ರಾಫಿಕ್ ಜಾಮ್ ಹಿಂದಿನ ಯಡಿಯೂರಪ್ಪ ಸರ್ಕಾರ ಕಾರಣ ಎಂದ ಕಾಂಗ್ರೆಸ್
ಮತ್ತೊಂದು ಟ್ವೀಟ್‌ನಲ್ಲಿ ಕೇರಳ ಕಾಂಗ್ರೆಸ್ ಈ ಹಿಂದೆ ಅಧಿಕಾರ ನಡೆಸಿದ್ದ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. 2008 ರಲ್ಲಿ ಬೆಂಗಳೂರಿನ ಹೊಸ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದಾಗ ಬಿಎಸ್ ಯಡಿಯೂರಪ್ಪ ಸರ್ಕಾರ ಬಂದಿದೆ. ಎಂಜಿ ರಸ್ತೆಯಿಂದ ಹೆಬ್ಬಾಳದವರೆಗೆ ಸಿಗ್ನಲ್ ರಹಿತ ಕಾರಿಡಾರ್ ನಿರ್ಮಿಸಲು ಬಿಜೆಪಿ ಸರ್ಕಾರ ಕಿರಿದಾದ ಅಂಡರ್‌ಪಾಸ್‌ಗಳಂತರ ಮೂರ್ಖತನದ ಪರಿಹಾರಗಳನ್ನು ಕೈಗೊಂಡಿತ್ತು. ಇದು ಇಡೀ ಸಮಸ್ಯೆಗೆ ಕಾರಣವಾಗಿದೆ ಎಂದಿದೆ.
ಕೆಂಪೇಗೌಡ ಏರ್ಪೋರ್ಟ್ ನಿರ್ಮಾಣವಾದ ಬಳಿಕ ಭಾರಿ ಟ್ರಾಫಿಕ್ ಸಮಸ್ಯೆಗಳ ನಡುವೆ 2013 ರಲ್ಲಿ ಸಿದ್ದರಾಮಯ್ಯ ಸರ್ಕಾರ ವಿಮಾನ ನಿಲ್ದಾಣಕ್ಕೆ ತಲುಪುವ ಸಮಯವನ್ನು ಕಡಿಮೆ ಮಾಡಲು 1,350 ಕೋಟಿ ರೂಪಾಯಿಗಳ ವೆಚ್ಚದಲ್ಲಿ 6.7 ಕಿಲೋ ಮೀಟರ್ 6 ಲೇನ್ ಸ್ಟೀಲ್ ಫ್ಲೈಓವರ್ ಪ್ರಾರಂಭಿಸಿತ್ತು ಎಂದು ಕೇರಳ ಕಾಂಗ್ರೆಸ್ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಬೆಂಗಳೂರು ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.