Bengaluru News: ಜ 6 ಮತ್ತು 7ಕ್ಕೆ ಬೆಂಗಳೂರಲ್ಲಿ ಎಕೆಬಿಎಂಎಸ್ ಮಹಿಳಾ ಸಮಾವೇಶ ಅಭಿಜಾತೆ-2024; ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ
Jan 03, 2024 03:17 PM IST
ಬೆಂಗಳೂರಿನ ಶಂಕರಪುರದ ಶಂಕರಮಠದ ಆವರಣದಲ್ಲಿ ಶನಿವಾರ ಮತ್ತು ಭಾನುವಾರ (ಜ.6, 7) “ಅಭಿಜಾತೆ-2024” ಎಂಬ ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದೆ.
ಬೆಂಗಳೂರಿನ ಶಂಕರಪುರದ ಶಂಕರಮಠದ ಆವರಣದಲ್ಲಿ ಜ.06, 07 ರಂದು ರಾಜ್ಯ ಮಟ್ಟದ ಮಹಿಳಾ ಸಮಾವೇಶ “ಅಭಿಜಾತೆ-2024” ಅನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜ.06, 07 ರಂದು ಬೆಂಗಳೂರಿನ ಶಂಕರಪುರದ ಶಂಕರಮಠದ ಆವರಣದಲ್ಲಿ ಆಯೋಜಿಸಿರುವ “ಅಭಿಜಾತೆ-2024” ಎಂಬ ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಲಿದ್ದಾರೆ.
ಧರ್ಮ- ಸಂಸ್ಕೃತಿ ಮಹಿಳೆ, ಮಾಧ್ಯಮದಲ್ಲಿ ಮಹಿಳೆಯರ ಪಾತ್ರ, ಮಹಿಳಾ ಸಬಲೀಕರಣ ಹಾಗೂ ಕೌಶಲ್ಯಾಭಿವೃದ್ಧಿ, ಕನ್ನಡ ಸಾಹಿತ್ಯ ಮತ್ತು ಮಹಿಳೆ ಸೇರಿ ಹಲವು ವಿಚಾರ ಗೋಷ್ಠಿಗಳು ಸಮಾವೇಶದಲ್ಲಿರಲಿವೆ. ಬಹುಶ್ರುತ ವಿದ್ವಾಂಸ ಶತಾವಧಾನಿ ಆರ್ ಗಣೇಶ್, ಅಲ್ಕಾ ಸುಧೀರ್ ಇನಾಮದಾರ ಧರ್ಮ- ಸಂಸ್ಕೃತಿ ಮಹಿಳೆ ವಿಷಯವಾಗಿ ವಿಚಾರ ಮಂಡಿಸಲಿದ್ದಾರೆ.
ಈ ಸಮಾವೇಶದಲ್ಲಿ ಹಲವು ಸಾಂಸ್ಕೃತಿಕ-ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್, ಎಕೆಬಿಎಂಎಸ್ ಕಾರ್ಯಾಧ್ಯಕ್ಷೆ ಮೇದಿನಿ ಉದಯ್ ಗರುಡಾಚಾರ್, ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ್ ಜೋಷಿ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಸೇರಿ ಅನೇಕ ಗಣ್ಯರು ಅಭಿಜಾತೆ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಎಕೆಬಿಎಂಎಸ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಹಾಗೂ ಮಹಾಸಭಾದ ರಾಜ್ಯ ಮಹಿಳಾ ವಿಭಾಗದ ಸಂಚಾಲಕಿ ಶುಭಮಂಗಳ ಅವರ ನೇತೃತ್ವದಲ್ಲಿ ಅಭಿಜಾತೆ-2024 ಆಯೋಜನೆ ಆಗಿದೆ. ಇದರಲ್ಲಿ , ಮಹಿಳೆಯರು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆಗಳು ಆಕರ್ಷಣೆಯ ಕೇಂದ್ರಬಿಂದುವಾಗಿರಲಿದೆ.
ಇದೇ ಶನಿವಾರ (ಜ.6) ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ನಿರ್ದೇಶನದಲ್ಲಿ ಲಯ-ಲಾವಣ್ಯ-ತಾಳವಾದ್ಯ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀರಾಮದರ್ಶನ'ದೊಂದಿಗೆ ನೃತ್ಯರೂಪಕ-ಕಥಕ್ ಕೂಡ ಆಯೋಜನೆಯಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಆಯ್ದ ಸಾಧಕಿಯರನ್ನು ಗಣ್ಯರ ಉಪಸ್ಥಿತಿಯಲ್ಲಿ ಪುರಸ್ಕರಿಸಲಾಗುತ್ತದೆ. ರಾಜ್ಯ ಮಟ್ಟದ ಭಜನಾ ಸ್ಪರ್ಧೆಯನ್ನೂ ಇದೇ ದಿನ ನಡೆಸಲಾಗುತ್ತದೆ.
ಭಾನುವಾರ (ಜ.07 ರಂದು) ಬಸವನಗುಡಿಯ ದೊಡ್ಡಗಣಪತಿ ದೇವಾಲಯದಿಂದ ಸಮ್ಮೇಳನದ ಆವರಣದವರೆಗೆ ಜಾನಪದ ಕಲಾ ತಂಡಗಳ ಕಲಾಪ್ರದರ್ಶನದೊಂದಿಗೆ ನಡೆಯುವ ಶೋಭಾಯಾತ್ರೆಯನ್ನು, ಅದಮ್ಯಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತ್ ಕುಮಾರ್, ಎಕೆಬಿಎಂಎಸ್ ಕಾರ್ಯಾಧ್ಯಕ್ಷೆ ಮೇದಿನಿ ಉದಯ್ ಗರುಡಾಚಾರ್ ಉದ್ಘಾಟಿಸಲಿದ್ದಾರೆ. 16 ವರ್ಷಗಳ ನಂತರ ಸಮುದಾಯದ ಮಹಿಳಾ ವಿಭಾಗದ ಬೃಹತ್ ಸಮಾವೇಶ ಆಯೋಜನೆಗೊಂಡಿದೆ.