logo
ಕನ್ನಡ ಸುದ್ದಿ  /  ಕರ್ನಾಟಕ  /  ವಾಲ್ಮೀಕಿ ಅಭಿವೃದ್ಧಿ ನಿಗಮದ 180 ಕೋಟಿ ರೂಪಾಯಿ ಭ್ರಷ್ಟಾಚಾರ; ಬಿ ನಾಗೇಂದ್ರಗೆ ಸಚಿವ ಸ್ಥಾನ ನಷ್ಟ ಖಚಿತ, ರಾಜೀನಾಮೆ ನೀಡಲು ಸಿಎಂ ಸೂಚನೆ

ವಾಲ್ಮೀಕಿ ಅಭಿವೃದ್ಧಿ ನಿಗಮದ 180 ಕೋಟಿ ರೂಪಾಯಿ ಭ್ರಷ್ಟಾಚಾರ; ಬಿ ನಾಗೇಂದ್ರಗೆ ಸಚಿವ ಸ್ಥಾನ ನಷ್ಟ ಖಚಿತ, ರಾಜೀನಾಮೆ ನೀಡಲು ಸಿಎಂ ಸೂಚನೆ

Umesh Kumar S HT Kannada

Jun 06, 2024 10:13 AM IST

google News

ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ (ಎಡಬದಿ ಚಿತ್ರ) ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿ ನಾಗೇಂದ್ರ (ಮಧ್ಯ ಚಿತ್ರ) ಗೆ ಸಿಎಂ ಸಿದ್ದರಾಮಯ್ಯ (ಬಲಬದಿಯ ಚಿತ್ರ) ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

  • ವಾಲ್ಮೀಕಿ ಅಭಿವೃದ್ಧಿ ನಿಗಮದ 180 ಕೋಟಿ ರೂ. ಭ್ರಷ್ಟಾಚಾರ ಪ್ರಕರಣದಲ್ಲಿ ಬಿ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನಷ್ಟವಾಗುವುದು ಖಚಿತವಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿಎಂ ಸೂಚನೆ ನೀಡಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು) 

ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ (ಎಡಬದಿ ಚಿತ್ರ) ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿ ನಾಗೇಂದ್ರ (ಮಧ್ಯ ಚಿತ್ರ) ಗೆ ಸಿಎಂ ಸಿದ್ದರಾಮಯ್ಯ (ಬಲಬದಿಯ ಚಿತ್ರ) ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.
ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ (ಎಡಬದಿ ಚಿತ್ರ) ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಬಿ ನಾಗೇಂದ್ರ (ಮಧ್ಯ ಚಿತ್ರ) ಗೆ ಸಿಎಂ ಸಿದ್ದರಾಮಯ್ಯ (ಬಲಬದಿಯ ಚಿತ್ರ) ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರಗಳು ಮತ್ತು ಅಧಿಕಾರಿಯೊಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರಿಗೆ ಸೂಚನೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಪ್ರಕರಣದ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಹದ್ಯೋಗಿಗಳಿಂದಿಗೆ ಚರ್ಚಿಸಿ ಸಿಎಂ ಈ ತೀರ್ಮಾನ ಕೈಗೊಂಡಿದ್ದಾರೆ. ಒಂದು ಕಡೆ ಈ ಪ್ರಕರಣದಲ್ಲಿ ಸಿಬಿಐ ಪ್ರವೇಶ ಪಡೆದಿದೆ. ಎರಡನೆಯದಾಗಿ ಸಚಿವ ನಾಗೇಂದ್ರ ಅವರ ಆಪ್ತರ ಬಂಧನವಾಗಿದೆ. ಮೂರನೆಯದಾಗಿ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲಾಗುವ ಮುಜುಗರವನ್ನು ತಪ್ಪಿಸಲು ಇಂದೇ ರಾಜೀನಾಮೆ ಸಲ್ಲಿಸಲು ಹೇಳಲಾಗಿದೆ.

ಕಳೆದ ರಾತ್ರಿ ಸಿದ್ದರಾಮಯ್ಯ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಈ ಹಗರಣ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವಾರು ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದರು.

ಇಂದು ಮಧ್ಯಾಹ್ನದೊಳಗೆ ಸಚಿವ ನಾಗೇಂದ್ರ ರಾಜೀನಾಮೆ ಸಾಧ್ಯತೆ

ಇಂದು ಮಧ್ಯಾಹ್ನದೊಳಗೆ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾಗಿದೆ. ತನಿಖೆಯಲ್ಲಿ ಒಂದು ವೇಳೆ ನಿರ್ದೋಷಿ ಎನ್ನುವುದು ಸಾಬೀತಾದರೆ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ವಾರವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿರಿಯ ಸಚಿವರೊಂದಿಗೆ ಸುಧೀರ್ಘ ಮಾತುಕತೆ ನಡೆಸಿದ್ದರು. ಆಗ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಸಚಿವರ ಪಾತ್ರದ ಬಗ್ಗೆ ಸ್ಪಷ್ಟತೆ ಕಂಡು ಬಂದಿರಲಿಲ್ಲ. ಹಾಗಾಗಿ ರಾಜೀನಾಮೆ ಪಡೆಯಲು ನಿರ್ಧಾರ ಮಾಡಿರಲಿಲ್ಲ. ಯಾವುದೇ ಕಾರಣಕ್ಕೂ ಭ್ರಷ್ಟರನ್ನು ರಕ್ಷಿಸುತ್ತಿದ್ದೇನೆ ಎಂಬ ಸಂದೇಶ ಹೋಗಬಾರದು ಎಂದು ಸಿಎಂ ಬಯಸಿದ್ದರು ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿಗೆ ಅಸ್ತ್ರ

ಬಿಜೆಪಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ಮೊದಲ ವಿಕೆಟ್ ಪಡೆದು ತೀರಿಯೇ ಸಿದ್ಧ ಎಂದು ಹೋರಾಟ ನಡೆಸುತ್ತಿದೆ.

ಈ ಹಗರಣದಲ್ಲಿ ಈಗಾಗಲೇ ಸಿಬಿಐ ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮೂವರು ಉದ್ಯೋಗಿಗಳು ಮತ್ತು ಸಚಿವ ನಾಗೇಂದ್ರ ಅವರ ಆಪ್ತರಾದ ನಾಗರಾಜು ನೆಕ್ಕುಂಟಿ ಮತ್ತು ನಾಗೇಶ್ವರ ರಾವ್ ಅವರನ್ನು ಬಂಧಿಸಲಾಗಿದೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಶಾಸಕರು ಹಾಗೂ ಪ್ರಮುಖ ಮುಖಂಡರ ನಿಯೋಗ ಇಂದು ಬೆಳಗ್ಗೆ ವಿಧಾನಸೌಧದಿಂದ ರಾಜಭವನಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಮಧ್ಯಾಹ್ನ 12 ಗಂಟೆಗೆ ರಾಜ್ಯಪಾಲರಿಗೆ ದೂರು ಸಲ್ಲಿಸಿ ಮಧ್ಯ ಪ್ರವೇಶಿಸುವಂತೆ ಅಗ್ರಹಪಡಿಸುವ ಕಾರ್ಯಕ್ರಮ ಹಾಕಿಕೊಂಡಿದೆ.

ಬಿಜೆಪಿ ಪ್ರತಿಭಟನೆಗೂ ಮುನ್ನವೇ ಸಚಿವ ನಾಗೇಂದ್ರ ರಾಜೀನಾಮೆ ನೀಡಲಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ. ಇವರ ರಾಜೀನಾಮೆ ಮೂಲಕ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸರಕಾರದ ಮೊದಲ ವಿಕೆಟ್ ಪತನವಾಗಲಿದೆ. ದಲಿತ ಸಮುದಾಯಗಳಿಗೆ ಮೀಸಲಾದ 187 ಕೋಟಿ ರೂ. ಹಣ ಗುಳುಂ ಆಗಿದ್ದು ಸಚಿವರು ರಾಜೀನಾಮೆ ನೀಡಲೇಬೇಕೆಂದು ಆರಂಭದಿಂದಲೂ ಬಿಜೆಪಿ ಹೋರಾಟ ನಡೆಸುತ್ತಾ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದು ಓರ್ವ ಸಚಿವರ ತಲೆದಂಡ ವಾಗುತ್ತಿರುವುದು ವಿಪರ್ಯಾಸವೇ ಸರಿ.

(ವರದಿ- ಎಚ್.ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ