logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆಯ ವಿಪಿಎನ್‌ ಮೇಲ್‌ನಲ್ಲಿ ಏನಿದೆ; ಸಚಿವರು, ಅಧಿಕಾರಿಗಳು ಏನು ಹೇಳಿದ್ರು

ಬೆಂಗಳೂರು ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆಯ ವಿಪಿಎನ್‌ ಮೇಲ್‌ನಲ್ಲಿ ಏನಿದೆ; ಸಚಿವರು, ಅಧಿಕಾರಿಗಳು ಏನು ಹೇಳಿದ್ರು

HT Kannada Desk HT Kannada

Dec 01, 2023 02:07 PM IST

google News

ಬೆಂಗಳೂರು ಶಾಲೆಗಳಿಗೆ ಕಳುಹಿಸಿರುವ ಬಾಂಬ್ ಬೆದರಿಕೆ ಪತ್ರದಲ್ಲಿ ಮತ್ತೇನಿದೆ ಅನ್ನೋದು ನೋಡಿ.

  • ಬೆಂಗಳೂರಿನ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದೆ. ಬಾಂಬ್ ಬೆದರಿಕೆ ಸಂದೇಶದಲ್ಲಿ ಮತ್ತೇನಿದೆ ಅನ್ನೋದನ್ನ ಓದಿ.

ಬೆಂಗಳೂರು ಶಾಲೆಗಳಿಗೆ ಕಳುಹಿಸಿರುವ ಬಾಂಬ್ ಬೆದರಿಕೆ ಪತ್ರದಲ್ಲಿ ಮತ್ತೇನಿದೆ ಅನ್ನೋದು ನೋಡಿ.
ಬೆಂಗಳೂರು ಶಾಲೆಗಳಿಗೆ ಕಳುಹಿಸಿರುವ ಬಾಂಬ್ ಬೆದರಿಕೆ ಪತ್ರದಲ್ಲಿ ಮತ್ತೇನಿದೆ ಅನ್ನೋದು ನೋಡಿ.

ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕು ಸೇರಿ ಸರ್ಕಾರಿ ಹಾಗೂ ಖಾಸಗಿಯ 60ಕ್ಕೂ ಹೆಚ್ಚು ಶಾಲೆಗಳಿಗೆ ಈ ಮೇಲ್‌ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಮುಜಾಹಿದ್ದೀನ್ ಹೆಸರಿನಲ್ಲಿ ಈ ಬೆದರಿಕೆ ಕರೆಗಳು ಬಂದಿವೆ.

ಬಸವೇಶ್ವರ ನಗರದ ನ್ಯಾಫಲ್ ಶಾಲೆ, ಚಿತ್ರಕೂಟ ಶಾಲೆ, ಚಿತ್ರಕೂಟ, ಕೌಶಲ್ಯ, ವಿದ್ಯಾಶಿಲ್ಪಿ ಶಾಲೆ, ಸದಾಶಿವನಗರದ ನೀವ್ ಶಾಲೆ, ಚಾಮರಾಜಪೇಟೆ ಭವನ್ ಪ್ರೆಸ್ ಸ್ಕೂಲ್, ಇನ್ವೆಂಚರ್ ಶಾಲೆ, ಯಲಹಂಕದ ಒಂದು ಶಾಲೆ, ಆನೇಕಲ್ ಗ್ರೀನ್ ಹುಡ್ ಹೈ ಶಾಲೆ, ಬನ್ನೇರುಘಟ್ಟದ ಗ್ಲೋಬಲ್ ಇಂಟರ್ ನ್ಯಾಷನಲ್ ಶಾಲೆ ಸೇರಿದಂತೆ 35 ಶಾಲೆಗಳಿಗೆ ಬೆದರಿಕೆ ಮೇಲ್‌ ಗಳು ಬಂದಿವೆ. ಈ ಬೆದರಿಕೆ ಕರೆಗಳನ್ನು ಪೊಲೀಸರು ಖಚಿತಪಡಿಸಿದ್ದಾರೆ.

ಈ ಮೇಲ್‌ನಲ್ಲಿ ಕೆಲವು ಅಂತಾರಾಷ್ಟ್ರೀಯ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಈ-ಮೇಲ್ ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬೆದರಿಕೆ ಕರೆ ಬಂದಿರುವ ಎಲ್ಲ ಶಾಲೆಗಳಿಗೆ ಆಯಾ ಠಾಣೆ ವ್ಯಾಪ್ತಿಯ ಪೊಲೀಸರನ್ನು ನಿಯೋಜಿಸಲಾಗಿದೆ ಮತ್ತು ಪರಿಶೀಲನೆ ನಡೆಸುವಂತೆ ಡಿಸಿಪಿಗಳು ಸೂಚನೆ ನೀಡಿದ್ದಾರೆ.

ಶಾಲಾ ಆವರಣಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಬಾಂಬ್ ಪತ್ತೆ ದಳ ಶಾಲಾ ಆವರಣಕ್ಕೆ ಆಗಮಿಸಿದ್ದು, ಶಾಲಾ ಕೊಠಡಿ ಹಾಗೂ ಶೌಚಾಲಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಹುಸಿ ಬಾಂಬ್ ಬೆದರಿಕೆ ಎಂದು‌‌ ಕಂಡುಬಂದಿದೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಈ ರೀತಿ ಹುಸಿ ಬಾಂಬ್ ಕರೆಗಳು ಬರುತ್ತಿರುವುದು ಇದೇ ಮೊದಲಲ್ಲ. ಆಗಾಗ್ಗೆ ಇಂತಹ ಕರೆಗಳು ಬರುತ್ತಿದ್ದವು. ಈ ರೀತಿ ಡಿಕೆ ಶಿವಕುಮಾರ್ ಒಡೆತನದ ಶಾಲೆಗೂ ಬಾಂಬ್ ಬೆದರಿಕೆ ಬಂದಿತ್ತು. ಬಾಂಬ್ ಬೆದರಿಕೆ ಬಾರದ ಶಾಲೆಗಳ ಆಡಳಿತ ಮಂಡಳಿಗಳು ಆತಂಕಕ್ಕೆ ಒಳಗಾಗದಂತೆ ಮೆಸೇಜ್ ಕಳುಹಿಸುತ್ತಿದ್ದಾರೆ.

ವಿಪಿಎನ್ ಇ-ಮೇಲ್‌ನಲ್ಲಿ ಏನಿದೆ?

ಬೆಂಗಳೂರಿನ ಶಾಲೆಗಳಿಗೆ ಬಂದಿರುವ ಇ-ಮೇಲ್‌ ಮೇಲ್ನೋಟಕ್ಕೆ ಉಗ್ರರು ಗುಂಪು ಬರೆದಿರುವಂತೆ ಕಾಣಿಸುತ್ತಿದೆ. ಯಾಕೆಂದರೆ ಮುಜಾಹಿದ್ದಿನ್ ಹೆಸರಿನಲ್ಲಿರುವ ಮೇಲ್‌ನಲ್ಲಿ ಕೆಲವೊಂದು ಉಗ್ರ ಪದಗಳನ್ನ ಬಳಸಲಾಗಿದೆ.

ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್‌ನ ಮೇಲ್‌ನಲ್ಲಿ ಶಾಲಾ ಮೈದಾನದಲ್ಲಿ ಸ್ಫೋಟಕಗಳನ್ನು ಇರಿಸಿದ್ದೇವೆ. ನವೆಂಬರ್ 26 ರಂದು ಅಲ್ಲಾಹನ ಮಾರ್ಗದಲ್ಲಿ ನಮ್ಮ ಹುತಾತ್ಮರು ನೂರಾರು ಮೂರ್ತಿ ಪೂಜಕರನ್ನು ಹತ್ಯೆ ಮಾಡಿದ್ದಾರೆ. ಲಕ್ಷಾಂತರ ಕಾಫಿರರ ಕುತ್ತಿಗೆಗೆ ಕತ್ತಿ ಹಿಡಿಯೋದರಲ್ಲಿ ಅವರು ಶಕ್ತಿಶಾಲಿಗಳಾಗಿದ್ದಾರೆ. ನೂರಾರು ಮುಜಾಹಿದ್‌ಗಳು ಅಲ್ಲಾಹನ ಮಾರ್ಗದಲ್ಲಿ ಹೋರಾಟಲು ಸಜ್ಜಾಗಿದ್ದೇವೆ.

ಎಲ್ಲರೂ ಇಸ್ಲಾಂಗೆ ಮತಾಂತರಗೊಳ್ಳಲು ತಯಾರಿಗಬೇಕು. ಇಲ್ಲವೇ ಎಲ್ಲರೂ ಸಾಯಲು ಸಿದ್ಧರಾಗಿರಿ. ನಿಮ್ಮನ್ನು ಹಾಗೂ ನಿಮ್ಮ ಮಕ್ಕಳನ್ನು ಸಾಯಿಸುತ್ತೇವೆ. ನೀವೆಲ್ಲರೂ ಅಲ್ಲಾಹುವಿನ ವಿರೋಧಿಗಳು ಎಂದು ಬರೆಯಲಾಗಿದೆ.

ಯಾರು ಏನು ಹೇಳಿದ್ದಾರೆ?

ಸದಾಶಿವನಗರದ ನೀವ್ ಶಾಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸದ ಎದುರಿಗೆ ಇದೆ. ಅವರು ಈ ಶಾಲೆಗೆ ಭೇಟಿ ನೀಡಿ ಪೊಲೀಸರಿಂದ ಮಾಹಿತಿ ಪಡೆದು ಕೊಂಡಿದ್ದಾರೆ.

ಬಸವೇಶ್ವರ ನಗರದ ಶಾಲೆಗೆ ಭೇಟಿ ನೀಡಿದ್ದ ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಶಾಸಕ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಶೋಕ್ ಪ್ರತಿಕ್ರಿಯೆ ನೀಡಿ, ಈ ಘಟನೆ ಮೇಲ್ನೋಟಕ್ಕೆ ಟೆರೆರಿಸ್ಟ್ ಕೆಲಸ ಎಂದು ಕಂಡು ಬರುತ್ತಿದೆ ಎಂದರು. ಅಲ್ಲಾಗೆ ಮೋಸ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಬಾಂಬ್ ಬೆದರಿಕೆ ಹಿಂದೆ ದೊಡ್ಡ ಜಾಲ ಇರುವ ಶಂಕೆ ಇದೆ ಎಂದು ಹೇಳಿದ್ದಾರೆ.

ಬಾಂಬ್ ಪತ್ತೆ ದಳದಿಂದ ಪರಿಶೀಲನೆ:

ಬೆದರಿಕೆ ಬಂದಿರುವ ಎಲ್ಲ ಶಾಲೆಗಳಿಗೆ ಬಾಂಬ್ ಪತ್ತೆ ದಳ‌ ಕಳುಹಿಸಲಾಗಿದೆ. ಈ ಮೇಲ್ ಪರಿಶೀಲನೆ ನಡೆಸಲಾಗುತ್ತಿದೆ. ಪೋಷಕರು, ಆಡಳಿತ ಮಂಡಳಿ, ಸಾರ್ವಜನಿಕರು ಆತಂಕ ವ್ಯಕ್ತಪಡಿಸುವ ಅಗತ್ಯ ಇಲ್ಲ.‌ ಇದು ಹುಸಿ ಬಾಂಬ್ ಬೆದರಿಕೆಯಂತೆ ಕಂಡುಬಂದಿದೆ. ಆದರೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಯಾರೇ ತಪ್ಪು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಪೋಷಕರು ಮತ್ತು ಮಕ್ಕಳು ಆತಂಕ ಪಡುವ ಅಗತ್ಯವಿಲ್ಲ. ಇ-ಮೇಲ್ ಬೆದರಿಕೆ ಪ್ರಕರಣವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಈ ರೀತಿ ಬೆದರಿಕೆ ಹಾಕುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ವರದಿ: ಎಚ್ ಮಾರುತಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ