logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: 4 ವರ್ಷದ ಮಗನನ್ನು ಕೊಂದ ಎಐ ಸ್ಟಾರ್ಟಪ್ ಸಿಇಒ ಸುಚನಾ ಸೇಠ್‌ ಯಾರು; ಪೊಲೀಸ್ ತನಿಖೆಯಲ್ಲಿ ಬಹಿರಂಗವಾದ ವಿಚಾರ ಇದು

Bengaluru News: 4 ವರ್ಷದ ಮಗನನ್ನು ಕೊಂದ ಎಐ ಸ್ಟಾರ್ಟಪ್ ಸಿಇಒ ಸುಚನಾ ಸೇಠ್‌ ಯಾರು; ಪೊಲೀಸ್ ತನಿಖೆಯಲ್ಲಿ ಬಹಿರಂಗವಾದ ವಿಚಾರ ಇದು

HT Kannada Desk HT Kannada

Jan 10, 2024 10:32 AM IST

google News

ತನ್ನ ಮಗನನ್ನೇ ಕೊಂದ ಆರೋಪ ಹೊತ್ತಿರುವ ಬೆಂಗಳೂರು ಮೂಲದ ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ ಸೇಠ್ ಅವರನ್ನು ಉತ್ತರ ಗೋವಾದ ಮಪುಸಾ ನ್ಯಾಯಾಲಯಕ್ಕೆ ಕರೆತಂದ ಸಂದರ್ಭ.

  • ಬೆಂಗಳೂರು ಮೂಲದ ಎಐ ಸ್ಟಾರ್ಟಪ್ ಕಂಪನಿ ಸಿಇಒ ಸುಚನಾ ಸೇಠ್‌ ತನ್ನ 4 ವರ್ಷದ ಮಗನನ್ನು ಕೊಂದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಅವರ ಹೇಳಿಕೆಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ಕಚೇರಿ ವಿಳಾಸಕ್ಕೆ ತೆರಳಿದರೆ ಅಲ್ಲಿ ಕಚೇರಿ ಇರಲಿಲ್ಲ. ಮನೆ ವಿಳಾಸಕ್ಕೆ ತೆರಳಿದರೆ ಅದನ್ನು ಖಾಲಿ ಮಾಡಿ 4 ತಿಂಗಳಾಗಿತ್ತು. ಹಾಗಾದರೆ ಸುಚನಾ ಸೇಠ್ ಯಾರು, ಅವರ ಹಿನ್ನೆಲೆ ಏನು… 

ತನ್ನ ಮಗನನ್ನೇ ಕೊಂದ ಆರೋಪ ಹೊತ್ತಿರುವ ಬೆಂಗಳೂರು ಮೂಲದ ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ ಸೇಠ್ ಅವರನ್ನು ಉತ್ತರ ಗೋವಾದ ಮಪುಸಾ ನ್ಯಾಯಾಲಯಕ್ಕೆ ಕರೆತಂದ ಸಂದರ್ಭ.
ತನ್ನ ಮಗನನ್ನೇ ಕೊಂದ ಆರೋಪ ಹೊತ್ತಿರುವ ಬೆಂಗಳೂರು ಮೂಲದ ದಿ ಮೈಂಡ್‌ಫುಲ್ ಎಐ ಲ್ಯಾಬ್‌ನ ಸಿಇಒ ಸುಚನಾ ಸೇಠ್ ಅವರನ್ನು ಉತ್ತರ ಗೋವಾದ ಮಪುಸಾ ನ್ಯಾಯಾಲಯಕ್ಕೆ ಕರೆತಂದ ಸಂದರ್ಭ. (PTI)

ಬೆಂಗಳೂರು: ಗೋವಾದ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ತನ್ನ 4 ವರ್ಷದ ಮಗನನ್ನು ಕೊಂದು ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಚಿತ್ರದುರ್ಗದಲ್ಲಿ ಬಂಧಿತಳಾಗಿರುವ ಪಶ್ಚಿಮ ಬಂಗಾಳ ಮೂಲದ ಸುಚನಾ ಸೇಠ್‌ ಯಾರು, ಆಕೆಯ ಹಿನ್ನೆಲೆ ಏನು ಎಂಬ ಕುರಿತು ಪೊಲೀಸ್ ತನಿಖೆ ಚುರುಕಾಗಿದೆ.

ಮಗನನ್ನು ಕೊಂದ ಆರೋಪದ ಮೇಲೆ ಬೆಂಗಳೂರು ಮೂಲದ ಕೃತಕ ಬುದ್ಧಿಮತ್ತೆ ಸ್ಟಾರ್ಟ್ಅಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಚನಾ ಸೇಠ್ ಅವರನ್ನು ಬಂಧಿಸಿದ ಒಂದು ದಿನದ ನಂತರ, ಪೊಲೀಸರು ಅವರ ಕಂಪನಿಯ ವಿಳಾಸಕ್ಕೆ ಪರಿಶೀಲನೆಗಾಗಿ ಭೇಟಿ ನೀಡಿದರು. ಆದರೆ, ಕಚೇರಿ ವಿಳಾಸವು ಕೋ- ವರ್ಕಿಂಗ್ ಸ್ಪೇಸ್ ಆಗಿತ್ತು. ನಿರ್ದಿಷ್ಟ ಕಚೇರಿ ಇಲ್ಲದೇ ಇರುವುದು ಗಮನಕ್ಕೆ ಬಂತು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕರ್ನಾಟಕದ ಚಿತ್ರದುರ್ಗದಲ್ಲಿ ಗೋವಾ ಪೊಲೀಸರಿಂದ ಬಂಧಿಸಲ್ಪಟ್ಟ ಸುಚನಾ ಸೇಠ್, ಬೆಂಗಳೂರಿನ ಥಣಿಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವುದಾಗಿ ಹೇಳಿದ್ದರು. ಆದರೆ ಪೊಲೀಸರು ಆ ಸ್ಥಳಕ್ಕೆ ತಲುಪಿದಾಗ, ಅವರು ನಾಲ್ಕು ತಿಂಗಳ ಹಿಂದೆ ಅಪಾರ್ಟ್‌ಮೆಂಟ್‌ ಖಾಲಿ ಮಾಡಿರುವ ಮಾಹಿತಿ ಲಭ್ಯವಾಗಿದೆ.

ಇನ್ನು ಸುಚನಾ ಸೇಠ್ ಅವರ ಲಿಂಕ್ಡ್ಇನ್ ಪುಟದ ಪ್ರಕಾರ, ಅವರು ಮೈಂಡ್‌ಫುಲ್‌ ಎಐ ಲ್ಯಾಬ್‌ನ ಸಿಇಒ ಮತ್ತು “ಟಾಪ್ 100 ಬ್ರಿಲಿಯಂಟ್ ವುಮೆನ್ ಇನ್ ಎಐ ಎಥಿಕ್ಸ್ ಫಾರ್ 2021”ರ ಪಟ್ಟಿಯಲ್ಲಿದ್ದ ಒಬ್ಬರು. ಸುಚನಾ ಎಐ ಎಥಿಕಲ್ ಸ್ಪೆಷಲಿಸ್ಟ್‌ ಮತ್ತು ಡೇಟಾ ವಿಜ್ಞಾನಿಯಾಗಿದ್ದು, ಡೇಟಾ ಸೈನ್ಸ್ ತಂಡಗಳಿಗೆ ಮಾರ್ಗದರ್ಶನ ನೀಡುವಲ್ಲಿ ಮತ್ತು ಸ್ಟಾರ್ಟಪ್‌ಗಳ ಮತ್ತು ಉದ್ಯಮ ಸಂಶೋಧನಾ ಪ್ರಯೋಗಾಲಯಗಳಲ್ಲಿ ಯಂತ್ರ ಕಲಿಕೆ ಪರಿಹಾರಗಳನ್ನು ಒದಗಿಸುವಲ್ಲಿ 12 ವರ್ಷಗಳ ಅನುಭವವನ್ನು ಹೊಂದಿದ್ದಾರೆ.

ಸುಚನಾ ಅವರು 2020ರ ಸೆಪ್ಟೆಂಬರ್‌ನಲ್ಲಿ ನೋಂದಾಯಿತ ಮಷಿನ್ ಇಂಟೆಲಿಜೆನ್ಸ್ ಆಧಾರಿತ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತ ಸಕ್ರಿಯರಾಗಿದ್ದರು. ಗೋವಾ ಪೊಲೀಸರು ಸಂಸ್ಥೆಯ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿ ಹೇಳಿದೆ.

ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಸೈಬರ್ಸ್ಪೇಸ್ ಸಂಶೋಧನಾ ಕೇಂದ್ರವಾದ ಬರ್‌ಕ್ಮನ್ ಕ್ಲೈನ್ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ, ಡೇಟಾ & ಸೊಸೈಟಿಯಲ್ಲಿ ಮೊಜಿಲ್ಲಾ ಫೆಲೋ ಮತ್ತು ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟಲ್ಲಿ ಸಂಶೋಧನಾ ಸಹವರ್ತಿಯೊಂದಿಗೆ ಸಂಯೋಜಿತರಾಗಿ ಕೆಲಸ ಮಾಡುತ್ತಿದ್ದರು.

ಸೈಬರ್ ಸ್ಪೇಸ್ ಸಂಶೋಧನಾ ಕೇಂದ್ರದ ಅಲ್ಯೂಮ್ನಿ ಪುಟವು ಸೇಠ್ ಅವರನ್ನು "ಎಐ ನೈತಿಕ ತಜ್ಞ ಮತ್ತು ಡೇಟಾ ವಿಜ್ಞಾನಿ" ಎಂದು ಉಲ್ಲೇಖಿಸಿದೆ.

ಸುಚನಾ ಅವರು ಸ್ಟಾರ್ಟಪ್‌ಗಳು ಮತ್ತು ಉದ್ಯಮ ಸಂಶೋಧನಾ ಪ್ರಯೋಗಾಲಯಗಳಿಗಾಗಿ ಸ್ಕೇಲೆಬಲ್ ಡೇಟಾ ಸೈನ್ಸ್ ಸಲ್ಯೂಷನ್ಸ್ ಅನ್ನು ಒದಗಿಸಿದ್ದಾರೆ. ಪಠ್ಯ ಗಣಿಗಾರಿಕೆ (ಟೆಕ್ಸ್ಟ್ ಮೈನಿಂಗ್‌) ಮತ್ತು ನೈಸರ್ಗಿಕ ಭಾಷಾ ಸಂಸ್ಕರಣೆ (ನ್ಯಾಚುರಲ್‌ ಲಾಂಗ್ವೇಜ್ ಪ್ರೊಸೆಸಿಂಗ್‌) ಯಲ್ಲಿ ಪೇಟೆಂಟ್‌ಗಳನ್ನು ಹೊಂದಿದ್ದಾರೆ. ಸಕಾರಾತ್ಮಕ ಬದಲಾವಣೆಗೆ ಚಾಲನೆ ನೀಡುವ ಡೇಟಾದ ಶಕ್ತಿಯನ್ನು ಸುಚನಾ ನಂಬುತ್ತಾರೆ. ಡೇಟಾ ವಿಜ್ಞಾನದಲ್ಲಿ ಲಿಂಗ ತಾರತಮ್ಯವನ್ನು ಕೊನೆಗೊಳಿಸುವಲ್ಲಿ ಕೂಡ ಕೆಲಸ ಮಾಡುತ್ತಿದ್ದರು. ಈ ಹಿಂದೆ, ಸುಚನಾ ಡೇಟಾ & ಸೊಸೈಟಿಯಲ್ಲಿ ಮೊಜಿಲ್ಲಾ ಓಪನ್ ವೆಬ್ ಫೆಲೋ ಆಗಿದ್ದರು ಎಂದು 2020ರ ಮಾರ್ಚ್‌ನಲ್ಲಿ ಕೊನೆಯದಾಗಿ ಅಪ್ಡೇಟ್ ಆಗಿರುವ ಅಲ್ಯೂಮ್ನಿ ಪುಟ ವಿವರಿಸಿದೆ.

ಸುಚನಾ ಸೇಠ್‌ ಮತ್ತು ಅವಳ ಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿತ್ತು. ಮಗು ಯಾರ ಜತೆಗೆ ಇರಬೇಕು ಎಂಬ ವಿಚಾರವಾಗಿ ನ್ಯಾಯಾಲಯ ನೀಡಿದ ಪ್ರತಿಕೂಲ ತೀರ್ಪಿನ ಬಗ್ಗೆಯೂ ಅಸಮಾಧಾನಗೊಂಡಿದ್ದಳು.

ಮಗುವಿನ ಕೊಲೆ ನಡೆದ ಸಮಯದಲ್ಲಿ ಕೇರಳ ಮೂಲದ ಆಕೆಯ ಪತಿ ವೆಂಕಟ್ ರಾಮನ್ ಇಂಡೋನೇಷ್ಯಾದಲ್ಲಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅವರ ಹೇಳಿಕೆಯನ್ನು ದಾಖಲಿಸುವುದಕ್ಕಾಗಿ ಗೋವಾಕ್ಕೆ ಬರುವಂತೆ ವೆಂಕಟ್‌ರಾಮನ್‌ಗೆ ತಿಳಿಸಲಾಗಿದೆ ಎಂದು ಉತ್ತರ ಗೋವಾದ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಲ್ಸನ್ ತಿಳಿಸಿದ್ದಾರೆ.

ಸುಚನಾ ಸೇಠ್ ಅವರನ್ನು ಗೋವಾದ ಮಾಪುಸಾ ನ್ಯಾಯಾಲಯವು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ