ಪುನರ್‌ವಸತಿ ಕೇಂದ್ರದ ಮದ್ಯವರ್ಜನ ಶಿಬಿರ ಸೇರಿದ 40 ವರ್ಷದ ವ್ಯಕ್ತಿಯ ಅಸಹಜ ಸಾವು; ತನಿಖೆ ಆರಂಭಿಸಿರುವ ಬೆಂಗಳೂರು ಪೊಲೀಸರು
Oct 26, 2024 09:35 AM IST
ಹರಳೂರು ಪುನರ್‌ವಸತಿ ಕೇಂದ್ರದ ಮದ್ಯವರ್ಜನ ಶಿಬಿರ ಸೇರಿದ 40 ವರ್ಷದ ವ್ಯಕ್ತಿಯ ಅಸಹಜ ಸಾವು ಸಂಭವಿಸಿದೆ. ಬೆಳ್ಳಂದೂರು ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಶುರುಮಾಡಿದ್ದಾರೆ. (ಸಾಂಕೇತಿಕ ಚಿತ್ರ)
ಹರಳೂರು ಪುನರ್‌ವರ್ಸತಿ ಕೇಂದ್ರದ ಮದ್ಯವರ್ಜನ ಶಿಬಿರ ಸೇರಿದ 40 ವರ್ಷದ ವ್ಯಕ್ತಿಯ ಅಸಹಜ ಸಾವು ಹಲವು ಸಂದೇಹಗಳಿಗೆ ಕಾರಣವಾಗಿದೆ. ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದು, ಮದ್ಯವರ್ಜನ ಶಿಬಿರಗಳ ಹೊಣೆಗಾರಿಕೆಗಳ ಕುರಿತು ನಿಯಮ ಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಬೆಂಗಳೂರು: ಬೆಳ್ಳಂದೂರು ವ್ಯಾಪ್ತಿಯ ಹರಳೂರು ಪುನರ್‌ವಸತಿ ಕೇಂದ್ರದಲ್ಲಿ ಮದ್ಯವರ್ಜನ ಶಿಬಿರದಲ್ಲಿದ್ದ 40 ವರ್ಷ ವಯಸ್ಸಿನ ಶಂಕರಪ್ಪ ಅಸಹಜ ರೀತಿಯಲ್ಲಿ ಮೃತಪಟ್ಟಿದ್ದಾರೆ. ಈ ಸಾವಿನ ಕುರಿತು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಕೂಲಂಕಷ ತನಿಖೆ ಶುರುಮಾಡಿದ್ದಾರೆ. ಮದ್ಯವರ್ಜನ ಶಿಬಿರಗಳಲ್ಲಿ ಚಿಕಿತ್ಸೆಗೆ ಸೇರಿದವರ ಮೇಲೆ ದೌರ್ಜನ್ಯ ಎಸಗುವ ಪ್ರಕರಣಗಳು ಪದೇಪದೆ ವರದಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಅಸಹಜ ಸಾವು ಪ್ರಕರಣ ಮಹತ್ವ ಪಡೆದುಕೊಂಡಿದೆ.
ಏನಿದು ಪ್ರಕರಣ
ಹರಳೂರು ಪುನರ್‌ವಸತಿ ಕೇಂದ್ರದ ಮದ್ಯವರ್ಜನ ಶಿಬಿರಕ್ಕೆ ಶಂಕರಪ್ಪ ಸೆಪ್ಟೆಂಬರ್ 28ರಂದು ಚಿಕಿತ್ಸೆಗಾಗಿ ಸೇರ್ಪಡೆಯಾಗಿದ್ದರು. ಶಂಕರಪ್ಪ ಚಿಕಿತ್ಸೆ ಮತ್ತು ವಸತಿ ಖರ್ಚಿಗೆ ಎಂದು ಅವರ ಕುಟುಂಬ 10,000 ರೂಪಾಯಿ ಪಾವತಿಸಿತ್ತು. ಶಂಕರಪ್ಪ ಹೋಟೆಲ್ ಕೆಲಸದವರಾಗಿದ್ದು, ಇತ್ತೀಚೆಗೆ ಸಹೋದರನ ಮರಣದ ಬಳಿಕ ಕುಡಿತ ಹೆಚ್ಚು ಮಾಡಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆದರೆ ಹರಳೂರು ಪುನರ್‌ವಸತಿ ಕೇಂದ್ರದಿಂದ ಕುಟುಂಬದವರಿಗೆ ಇತ್ತೀಚೆಗೆ ಫೋನ್ ಕರೆ ಬಂದಿದ್ದು, ಶಂಕರಪ್ಪ ಅನಾರೋಗ್ಯ ಪೀಡಿತರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದರು. ಕುಟುಂಬ ಸದಸ್ಯರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಶಂಕರಪ್ಪ ನಿಧನರಾಗಿದ್ದಾಗಿ ತಿಳಿಸಿದ್ದಾರೆ.
ಹರಳೂರು ಪುನರ್‌ವಸತಿ ಕೇಂದ್ರದ ಸಿಬ್ಬಂದಿ ಹಲ್ಲೆ ನಡೆಸಿರುವ ಶಂಕೆ
ಹರಳೂರು ಪುನರ್‌ವಸತಿ ಕೇಂದ್ರದ ಸಿಬ್ಬಂದಿ ಹೇಳುವ ಪ್ರಕಾರ, ಶಂಕರಪ್ಪ ಅವರು ಬೆಳಗ್ಗೆ ಉಪಾಹಾರ ಸೇವಿಸುತ್ತಿದ್ದಾಗ ಕುಸಿದು ಬಿದ್ದಿದ್ದರು. ಆದಾಗ್ಯೂ, ಶಂಕರಪ್ಪ ಮನೆಯವರು ಶರೀರದ ಮೇಲಿರುವ ಗಾಯಗಳು ಮತ್ತು ಮರ್ಮಾಂಗ ಊದಿಕೊಂಡಿರುವುದನ್ನು ಗಮನಿಸಿದ್ದು, ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿರುವುದಾಗಿ ವರದಿ ವಿವರಿಸಿದೆ.
ಹರಳೂರು ಪುನರ್‌ವಸತಿ ಕೇಂದ್ರದ ಸಿಬ್ಬಂದಿ ಶಂಕರಪ್ಪ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆ ಇದೆ. ತೀವ್ರವಾಗಿ ಹಲ್ಲೆ ನಡೆಸಿದ್ದರಿಂದಲೇ ಸಾವು ಸಂಭವಿಸಿರಬೇಕು ಎಂದು ಶಂಕರಪ್ಪ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಶಂಕರಪ್ಪ ಕುಟುಂಬ ಸದಸ್ಯರು, ಅಸಹಜ ಸಾವು ಎಂದು ದೂರಿದ್ದಾರೆ. ಹರಳೂರು ಪುನರ್‌ವಸತಿ ಕೇಂದ್ರದ ಸಿಬ್ಬಂದಿ ಶಂಕರಪ್ಪ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆ ಮತ್ತು ಅದರಿಂದಲೇ ಅವರ ಸಾವು ಸಂಭವಿಸಿರಬಹುದು ಎಂದು ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ. ಶಂಕರಪ್ಪ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶಂಕರಪ್ಪ ಕುಟುಂಬ ಬೆಳ್ಳಂದೂರಿನಲ್ಲಿ ವಾಸವಿದೆ. ಶಂಕರಪ್ಪ ಅವರ ಸಾವಿನ ಸುತ್ತ ಅನುಮಾನಗಳು ಉಂಟಾಗಿದ್ದು, ಸಹಜವಾಗಿಯೇ ಕುಟುಂಬಸ್ಥರಲ್ಲಿ ಆಕ್ರೋಶ, ಅಸಮಾಧಾನವನ್ನು ಹುಟ್ಟುಹಾಕಿದೆ. ಮದ್ಯವರ್ಜನೆ ಶಿಬಿರ ನಡೆಸುವ ಕೇಂದ್ರಗಳ ಹೊಣೆಗಾರಿಕೆಗಳ ಕುರಿತು ನಿಯಮ ರೂಪಿಸಬೇಕು ಎಂಬ ಆಗ್ರಹ ವ್ಯಕ್ತವಾಗಿರುವುದಾಗಿ ವರದಿ ವಿವರಿಸಿದೆ.
ವರ್ತೂರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕ
ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ವರ್ತೂರು ಕೆರೆಯಲ್ಲಿ ಯುವಕನೊಬ್ಬ ಮುಳುಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಇಝಾರುಲ್ ಎಸ್‌ಕೆ (19) ಮೃತ ಯುವಕ ಎಂದು ಗುರುತಿಸಲಾಗಿದೆ. ವರ್ತೂರು ಬಳಿ ಇರುವ ಶೆಡ್‌ನಲ್ಲಿ ಇಬ್ಬರು ಚಿಕ್ಕಪ್ಪಂದಿರ ಜೊತೆಗೆ ಯುವಕ ವಾಸವಿದ್ದ. ಬೆಳಗ್ಗೆ 9 ಗಂಟೆಗೆ ಪ್ಲಾಸ್ಟಿಕ್ ತ್ಯಾಜ್ಯ ಹೊಳೆಗೆ ಎಸೆಯಲು ಹೋದಾಗ ದುರಂತ ಸಂಭವಿಸಿದೆ. ಮೃತದೇಹ ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿ ಹಗಲು ಹೊತ್ತಿನಲ್ಲಿ ಶೋಧವನ್ನು ಮುಂದುವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.