ಬೆಂಗಳೂರು ಮಳೆ; ಪ್ರತಿಷ್ಠಿತ ಎಂಜಿ ರಸ್ತೆಯನ್ನೂ ಬಿಡಲಿಲ್ಲ ಸಮಸ್ಯೆ, ರಸ್ತೆಯಲ್ಲಿ ನಿಂತ ನೀರು ಬಿಡಿಸಲು ಬೆವರು ಹರಿಸಿದ ಬಿಬಿಎಂಪಿ
Oct 21, 2024 02:10 PM IST
ಬೆಂಗಳೂರು ಮಳೆ: ಪ್ರತಿಷ್ಠಿತಿ ಎಂಜಿ ರಸ್ತೆಯನ್ನೂ ಸಮಸ್ಯೆ ಬಿಡಲಿಲ್ಲ. ರಸ್ತೆಯಲ್ಲಿ ನಿಂತ ನೀರು ಬಿಡಿಸಲು ಬಿಬಿಎಂಪಿ ಬೆವರು ಹರಿಸಿದ್ದು ಗಮನಸೆಳೆಯಿತು.
ಬೆಂಗಳೂರಿನ ಪ್ರತಿಷ್ಠಿತ ವಾಣಿಜ್ಯ ಕೇಂದ್ರವಾಗಿರುವ ಎಂಜಿ ರಸ್ತೆಯನ್ನೂ ಮಳೆ ಸಮಸ್ಯೆ ಕಾಡದೇ ಬಿಡಲಿಲ್ಲ. ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ ಕಾರಣ, ರಸ್ತೆಯಲ್ಲಿ ನಿಂತ ನೀರು ಬಿಡಿಸಲು ಬಿಬಿಎಂಪಿ ಬೆವರು ಹರಿಸಿದ್ದು ಗಮನಸೆಳೆಯಿತು.
ಬೆಂಗಳೂರು: ವಾಯಭಾರ ಕುಸಿತ, ಚಂಡಮಾರುತದ ಪ್ರಭಾವಗಳಿಂದ ಕರ್ನಾಟಕದಲ್ಲಿ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಇಂದು (ಅಕ್ಟೋಬರ್ 21) ಕೂಡ ಮಳೆ ಮುಂದುವರಿದಿದೆ. ಬಿಡದೆ ಸುರಿಯುತ್ತಿರುವ ಮಳೆಯ ಕಾರಣ ರಸ್ತೆಗಳು ಜಲಾವೃತವಾಗಿವೆ. ಇದರಿಂದ ಬೆಂಗಳೂರಿನ ಪ್ರತಿಷ್ಠಿತ ವಾಣಿಜ್ಯ ಕೇಂದ್ರವಾಗಿರುವ ಮಹಾತ್ಮ ಗಾಂಧಿ ರಸ್ತೆ (ಎಂಜಿ ರೋಡ್) ಕೂಡ ಸಮಸ್ಯೆ ಅನುಭವಿಸಿದೆ. ರಸ್ತೆಯಲ್ಲಿ ನೀರು ನಿಂತ ಕಾರಣ ವಾಹನ ಸವಾರರು ಪರದಾಡಿದ ಘಟನೆ ನಡೆಯಿತು. ರಸ್ತೆಯಲ್ಲಿ ನಿಂತ ನೀರು ಬಿಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆವರು ಹರಿಸಿದ್ದು ಕೂಡ ಗಮನಸೆಳೆಯಿತು. ಸೋಮವಾರ ಬೆಳಗ್ಗೆಯೇ ಬಿಬಿಎಂಪಿ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಎಂಜಿ ರಸ್ತೆಗೆ ಧಾವಿಸಿ, ನೀರು ಬಿಡಿಸಿಕೊಡುವ ಕೆಲಸ ಮಾಡಿದರು. ಇದೇ ರೀತಿ ಬೆಂಗಳೂರು ಪೂರ್ವ ವಲಯದ ವಿವಿಧ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಅಧಿಕಾರಿಗಳು ಪ್ರಕಟಿಸಿದ್ದಾರೆ.
ಎಂಜಿ ರಸ್ತೆಯ ನೀರು ತೆರವಿಗೆ ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ
ಎಂಜಿ ರಸ್ತೆ, ರಿಚ್‌ಮಂಡ್ ರಸ್ತೆ, ಚರ್ಚ್ ಸ್ಟ್ರೀಟ್, ಕಬ್ಬನ್ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ ಮುಂತಾದ ಪ್ರದೇಶಗಳು ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್ಟ್‌ಗೆ ಒಳಪಡುತ್ತವೆ, ಟ್ರಿನಿಟಿ ಸರ್ಕಲ್, ಎಎಸ್‌ಸಿ ಸೆಂಟರ್, ಕಂಟೋನ್ಮೆಂಟ್ ರೈಲ್ವೇ ಸೇತುವೆ ಮತ್ತು ದೀಪಾಂಜಲಿ ನಗರ ಮೆಟ್ರೋ ನಿಲ್ದಾಣ ಸೇರಿ ಪ್ರಮುಖ ಪ್ರದೇಶಗಳು ಜಲಾವೃತವಾಗಿದೆ. ಇದಲ್ಲದೆ, ಶ್ರೀನಿವಾಗಿಲು ಮುಖ್ಯರಸ್ತೆಯ 80 ಅಡಿ ರಸ್ತೆಯಲ್ಲೂ ನೀರು ಸಂಗ್ರಹವಾಗಿರುವುದರಿಂದ ಆ ರಸ್ತೆಗಳಲ್ಲಿ ನಿಧಾನಗತಿಯ ಸಂಚಾರವಿದೆ.
ಬೆಂಗಳೂರು ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್ಸ್ಟ್‌ನ ನಿವಾಸಿಗಳು ಸ್ಥಿರ ಮಳೆಯನ್ನು ಕಳೆದ ಎರಡು ಮೂರು ದಿನಗಳಿಂದ ಎದುರಿಸಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಪೂರ್ವ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕ ಇದೆ. 4 ರಿಂದ 5 ಸೆಂಟಿಮೀಟರ್ ಮಳೆ ಬೀಳುವ ಮುನ್ಸೂಚನೆ ಇದ್ದು, ಬೆಂಗಳೂರಿಗರು ತಮ್ಮ ಆತಂಕವನ್ನು ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಮೂಲಕ ಹೊರ ಹಾಕಿದ್ದಾರೆ.
ಶಾಲೆಗಳಿಗೆ ಇಂದು ರಜೆ
ಸ್ಥಿರವಾಗಿ ಮಳೆ ಬೀಳುತ್ತಿರುವ ಕಾರಣ ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಶಿಕ್ಷಣ ಸಂಸ್ಥೆಗಳಿಗೆ ವಿಶೇಷವಾಗಿ ಶಾಲೆಗಳಿಗೆ ಜಿಲ್ಲಾಡಳಿತ ರಜೆಯನ್ನು ಘೋಷಿಸಿದೆ. ಕಾಲೇಜುಗಳಿಗೆ ರಜೆ ಘೋಷಿಸಿಲ್ಲ. ಆದರೆ, ಕಾಲೇಜುಗಳಲ್ಲಿ ಉಪನ್ಯಾಸಗಳನ್ನು ನಡೆಸುವಾಗ ಕೆಲವು ಅಂಶಗಳನ್ನು ಪರಿಗಣಿಸುವಂತೆ ಕಾಲೇಜುಗಳ ಮುಖ್ಯಸ್ಥರು ಮತ್ತು ಸಂಬಂಧಪಟ್ಟವರಿಗೆ ಸಾಮಾನ್ಯ ಸೂಚನೆ ನೀಡಲಾಗಿದೆ. ದುರ್ಬಲ, ಶಿಥಿಲ ಕಟ್ಟಡಗಳಿದ್ದರೆ ಅಂತಹ ಕಟ್ಟಡಗಳನ್ನು ಉಪನ್ಯಾಸಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಕಾಲೇಜುಗಳ ಮುಖ್ಯಸ್ಥರು ಕಾಲೇಜು ಕಟ್ಟಡಗಳ ಸುಸ್ಥಿತಿಯತ್ತ ಗಮನಹರಿಸಿ ಯಾವುದೇ ಅವಘಡ ಸಂಭವಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಶನಿವಾರ ಮಧ್ಯಾಹ್ನ ಅಥವಾ ಭಾನುವಾರ ಹೆಚ್ಚುವರಿ ತರಗತಿ ನಡೆಸುವ ಮೂಲಕ ರಜೆಯ ಕಾರಣ ಕಲಿಕಾ ಸಮಯದ ಕೊರತೆಯನ್ನು ನೀಗಿಸಿಕೊಳ್ಳಬೇಕು ಎಂದೂ ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳು ನೀರು ತುಂಬಿರುವ ತಗ್ಗು ಪ್ರದೇಶಗಳಿಗೆ ಹೋಗದಂತೆ ಪಾಲಕರು, ಕಾಲೇಜು ಮುಖ್ಯಸ್ಥರು ನೋಡಿಕೊಳ್ಳಬೇಕು. ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಬಳಸುವ ವಾಹನಗಳ ಸುರಕ್ಷತೆಯನ್ನು ಅವರು ಖಚಿತಪಡಿಸಿಕೊಳ್ಳಬೇಕು. ಕಾಲೇಜುಗಳಲ್ಲಿ ಪ್ರಕೃತಿ ವಿಕೋಪ ಎದುರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಸೂಚನೆ ನೀಡಿದ್ಧಾರೆ.
ಭಾರತೀಯ ಹವಾಮಾನ ಇಲಾಖೆ ಹವಾಮಾನ ಮುನ್ಸೂಚನೆ ಪ್ರಕಾರ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಭಾನುವಾರದಂದು ನೀಡಲಾದ ಮುನ್ಸೂಚನೆಯ ಪ್ರಕಾರ, ನಗರದಲ್ಲಿ ಸಾಧಾರಣ ಮಳೆ ಮತ್ತು ಸಾಂದರ್ಭಿಕವಾಗಿ ಭಾರೀ ಗುಡುಗು ಸಹಿತ ಮಳೆಯಾಗಲಿದೆ. ಈ ಅವಧಿಯಲ್ಲಿ ತಾಪಮಾನವು ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಆಗುವ ನಿರೀಕ್ಷೆಯಿದೆ.