ಬೆಂಗಳೂರು ಸಂಚಾರ ಸಲಹೆ: ಗಣ್ಯರ ಓಡಾಟ ಕಾರಣ ಅರಮನೆ ಮೈದಾನ ಸುತ್ತ ಶುಕ್ರವಾರ, ಶನಿವಾರ, ಎಲೆಕ್ಟ್ರಾನಿಕ್ ಸಿಟಿಯಲ್ಲೂ 3 ದಿನ ಸಂಚಾರ ವ್ಯತ್ಯಯ
Oct 24, 2024 05:36 PM IST
ಬೆಂಗಳೂರು ಸಂಚಾರ ಸಲಹೆ (ಸಾಂಕೇತಿಕ ಚಿತ್ರ)
Bengaluru traffic advisory: ಅರಮನೆ ಮೈದಾನದಲ್ಲಿ ಶುಕ್ರವಾರ ಮತ್ತು ಶನಿವಾರ ಕಾರ್ಯಕ್ರಮ ಇದ್ದು, ಗಣ್ಯರ ಓಡಾಟ ಇರಲಿದೆ. ಹೀಗಾಗಿ ಈ ಎರಡೂ ದಿನಗಳಲ್ಲಿ ಅರಮನೆ ಮೈದಾನ ಸುತ್ತ ಸಂಚಾರ ವ್ಯತ್ಯಯವಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಜಲಮಂಡಳಿ ಕಾಮಗಾರಿ ಕಾರಣ ಸಂಚಾರ ವ್ಯತ್ಯಯವಿದೆ. ಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ಅರಮನೆ ಮೈದಾನದಲ್ಲಿ ಶುಕ್ರವಾರ (ಅಕ್ಟೋಬರ್ 25) ಮತ್ತು ಶನಿವಾರ (ಅಕ್ಟೋಬರ್ 26) ಕಾರ್ಯಕ್ರಮ ಇರುವ ಕಾರಣ ಗಣ್ಯರ ಆಗಮನ, ನಿರ್ಗಮನ ಇರಲಿದೆ. ಹೀಗಾಗಿ ಈ ಭಾಗದಲ್ಲಿ ಎರಡೂ ದಿನ ಸಂಚಾರ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಇಂದು (ಅಕ್ಟೋಬರ್ 24) ತಿಳಿಸಿದ್ದಾರೆ. ವಾರಾಂತ್ಯದ ಈ ಎರಡೂ ದಿನಗಳಲ್ಲಿ ಬೆಂಗಳೂರು ನಗರಕ್ಕೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಗಣ್ಯವ್ಯಕ್ತಿಗಳು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಸುಗಮ ಸಂಚಾರ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದು, ಅದರ ವಿವರ ಹೀಗಿದೆ-
ಅಕ್ಟೋಬರ್ 25, 26ರ ಸಂಚಾರ ವ್ಯತ್ಯಯ ವಿವರ
ಬೆಂಗಳೂರು ನಗರದಲ್ಲಿ ಶುಕ್ರವಾರ (ಅಕ್ಟೋಬರ್ 25) ಕೆಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯವಾಗಲಿದೆ. ಕೆಲವು ರಸ್ತೆಗಳಲ್ಲಿ ಸಂಜೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಪರ್ಯಾಯ ರಸ್ತೆ ಬಳಸುವುದಕ್ಕೂ ಸೂಚಿಸಲಾಗಿದೆ. ಅವುಗಳ ವಿವರ ಹೀಗಿದೆ.
ಶುಕ್ರವಾರ ಸಂಜೆ 04.15 ಗಂಟೆಯಿಂದ ರಾತ್ರಿ 09.00 ಗಂಟೆಯವರೆಗೆ ಎಚ್.ಎ.ಎಲ್ ಏರ್‌ಪೋರ್ಟ್ ರಸ್ತೆ, ಕಬ್ಬನ್ ರಸ್ತೆ, ಎಂ.ಜಿ. ರಸ್ತೆ (ಟ್ರಿನಿಟಿ ವೃತ್ತದಿಂದ ಮೇಯೋಹಾಲ್‌ವರೆಗೆ), ರಾಜ್ ಭವನ್ ರಸ್ತೆ, ಅಂಬೇಡ್ಕರ್ ವೀದಿ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಮತ್ತು ಸದರಿ ರಸ್ತೆಗಳನ್ನು ಬಳಸದೆ ಪರ್ಯಾಯ ರಸ್ತೆಗಳನ್ನು ಬಳಸಲು ಪೊಲೀಸರು ಮನವಿ ಮಾಡಿದ್ದಾರೆ.
ಶನಿವಾರ (ಅಕ್ಟೋಬರ್ 26) ಬೆಳಿಗ್ಗೆ 09.00 ಗಂಟೆಯಿಂದ ಮಧ್ಯಾಹ್ನ 02.00 ಗಂಟೆಯವರೆಗೆ ರಾಜ್ ಭವನ ರಸ್ತೆ, ಬಳ್ಳಾರಿ ರಸ್ತೆ, ಇನ್ ಫ್ಯಾಂಟ್ರಿ ರಸ್ತೆ ಕಬ್ಬನ್ ರಸ್ತೆ, ಎಂ.ಜಿ. ರಸ್ತೆ (ಟ್ರಿನಿಟಿ ವೃತ್ತದಿಂದ ಮೇಯೋಹಾಲ್‌ವರೆಗೆ), ಎಚ್.ಎ.ಎಲ್ ಏರ್ ಪೋರ್ಟ್ ರಸ್ತೆಗಳಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ ಮತ್ತು ಸದರಿ ರಸ್ತೆಗಳನ್ನು ಬಳಸದೆ ಪರ್ಯಾಯ ರಸ್ತೆಗಳನ್ನು ಬಳಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಅರಮನೆ ಮೈದಾನ ಕೃಷ್ಣ ವಿಹಾರ್ ಕಾರ್ಯಕ್ರಮ ಸ್ಥಳದ ಸಂಚಾರ ನಿಯಮ ವಿವರ
ಬೆಂಗಳೂರು ಅರಮನೆ ಮೈದಾನದ ಕೃಷ್ಣ ವಿಹಾರ್ ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 10.30 ಗಂಟೆಯಿಂದ 1.30 ಗಂಟೆಯವರೆಗೆ ನಡೆಯಲಿದ್ದು, ಸದರಿ ಕಾರ್ಯಕ್ರಮಕ್ಕೆ ಗಣ್ಯರು, ನಗರದ ವಿವಿಧ ಭಾಗಗಳಿಂದ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಭಾಗವಹಿಸುವವರಿದ್ದಾರೆ. ಈ ಬೃಹತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆ, ಜಯಮಹಲ್ ರಸ್ತೆ ಮತ್ತು ಅರಮನೆ ಮೈದಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು, ಈ ಕೆಳಗಿನ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
1) ಕಾರ್ಯಕ್ರಮಕ್ಕೆ ವಿವಿಧ ವಾಹನಗಳಲ್ಲಿ ಬರುವ ಸಾರ್ವಜನಿಕರು ಕೃಷ್ಣ ವಿಹಾರ್ ಅರಮನೆ ಮೈದಾನ ಪ್ರವೇಶಿಸಲು ಬಳಸಬೇಕಾದ ಮಾರ್ಗ :
- ಬಸ್ಸುಗಳಲ್ಲಿ ಮತ್ತು ಟಿಟಿ ಗಳಲ್ಲಿ ಬರುವವರು ಜಯಮಹಲ್ ರಸ್ತೆಯಲ್ಲಿ ಸಾಗಿ ಟಿವಿ ಟವರ್ ಬಳಿ ಇರುವ ಸರ್ಕಸ್ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಕಾರ್ಯಕ್ರಮದ ಸ್ಥಳ ತಲುಪಬಹುದು.
- ವಾಪಾಸ್ಸು ಹೋಗುವಾಗ ಸರ್ಕಸ್ ಮೈದಾನದಿಂದ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ನಗರದ ಹೊರಗೆ ಹೋಗಬಹುದಾಗಿದೆ.
2) ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಬರುವ ಸಾರ್ವಜನಿಕರು ಅರಮನೆ ಮೈದಾನ ಪ್ರವೇಶಿಸಲು ಬಳಸಬೇಕಾದ ಮಾರ್ಗ :
- ಗೇಟ್ ನಂ-02, ಗೇಟ್ ನಂ-03 ಮತ್ತು ಗೇಟ್ ನಂ-04 ನಿಂದ ಪ್ರವೇಶಿಸಿ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾಲ್ನಡಿಗೆಯಲ್ಲಿ ಕಾರ್ಯಕ್ರಮದ ಸ್ಥಳ ತಲುಪುವುದು.
- ಹಿಂತಿರುಗಿ ವಾಪಾಸ್ಸು ಹೋಗುವಾಗ ತ್ರಿಪುರವಾಸಿನಿ ಎಕ್ಸಿಟ್ ಗೇಟ್ (ಹುಣಸೇಮರದ ಗೇಟ್) ನಲ್ಲಿ ಹೊರಬಂದು ಜಯಮಹಲ್ ರಸ್ತೆಯಲ್ಲಿ ಸಾಗಿ ಮೇಕ್ರಿ ಸರ್ಕಲ್ ಮುಖಾಂತರ ಹೋಗಬಹುದಾಗಿರುತ್ತದೆ.
3) ಕಾರ್ಯಕ್ರಮವನ್ನು ಹೊರತುಪಡಿಸಿ ಇತರೆ ಸ್ಥಳಗಳಿಗೆ ಹೋಗುವ ರಸ್ತೆ ಬಳಕೆದಾರರು ಬಳಸಬೇಕಾದ ಬದಲಿ ಮಾರ್ಗ:
ಅರಮನೆ ರಸ್ತೆ: ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ವಸಂತನಗರ ಅಂಡರ್‌ಪಾಸ್ ವರೆಗೆ
ಎಂ.ವಿ.ಜಯರಾಮರಸ್ತೆ: ಅರಮನೆರಸ್ತೆ, ಬಿ.ಡಿ.ಎ.ಜಂಕ್ಷನ್ ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್ ಪಾಸ್ ನಿಂದ ಹಳೆ ಉದಯ ಟಿ.ವಿ. ಜಂಕ್ಷನ್ ವರೆಗೆ. (ಎರಡು ದಿಕ್ಕಿನಲ್ಲಿ)
ಬಳ್ಳಾರಿ ರಸ್ತೆ: ಎಲ್.ಆರ್.ಡಿ.ಇ. ಯಿಂದ ಹೆಬ್ಬಾಳವರೆಗೆ
ಕನ್ನಿಂಗ್ ಹ್ಯಾಂರಸ್ತೆ: ಬಾಳೇಕುಂದ್ರಿ ಸರ್ಕಲ್‌ನಿಂದ ಲಿ ಮೆರಿಡಿಯನ್ ಅಂಡರ್ ಪಾಸ್‌ವರೆಗೆ
ಮಿಲ್ಲರ್ ರಸ್ತೆ: ಹಳೆ ಉದಯ ಟಿ.ವಿ. ಜಂಕ್ಷನ್‌ನಿಂದ ಎಲ್.ಆರ್.ಡಿ.ಇ. ಜಂಕ್ಷನ್ ವರೆಗೆ
ಜಯಮಹಲ್‌ರಸ್ತೆ: ಜಯಮಹಲ್ ರಸ್ತೆ ಹಾಗೂ ಬೆಂಗಳೂರು ಅರಮನೆಯ ಸುತ್ತಮುತ್ತಲ ರಸ್ತೆಗಳು,
ಯಶವಂತಪುರ ಮತ್ತು ಮೇತ್ರಿ ಸರ್ಕಲ್ ರಸ್ತೆ: ಯಶವಂತಪುರ-ಟಾಟಾ ವಿಜ್ಞಾನ ಸಂಸ್ಥೆ-ಮೇಖ್ರಿ ಸರ್ಕಲ್‌ವರೆಗೆ
ರಮಣ ಮಹರ್ಷಿ ರಸ್ತೆ: ತರಳಬಾಳು ರಸ್ತೆ.
ಕಂಟೋನ್ ಮೆಂಟ್ ರಸ್ತೆ: ಕ್ಲೀನ್ಸ್ ರಸ್ತೆ, ತಿಮ್ಮಯ್ಯ ವೃತ್ತ, ಬಾಳೆ ಕುಂದ್ರಿ ಸರ್ಕಲ್.
ಸರ್ ಸಿ.ವಿ. ರಾಮನ್ ರಸ್ತೆ: ಬಾಷ್ಯಂ ಸರ್ಕಲ್, ಸ್ಯಾಂಕಿ ರಸ್ತೆ, ಸರ್ಕಲ್ ಮಾರಮ್ಮ, ಬಿಹೆಚ್ ಇಎಲ್ ಸರ್ಕಲ್
ಯಶವಂತಪುರ ಮೇಲು ಸೇತುವೆ: ಮಾರಪ್ಪನ ಪಾಳ್ಯ, ಪಾರಿಜಾತ ಜಂಕ್ಷನ್, ಓರಾಯನ್ ಮಾಲ್,ರಾಜಕುಮಾರ್ ರಸ್ತೆ.
4) ವಾಹನ ನಿಲುಗಡೆ ನಿಷೇಧ ಮಾಡಿರುವ ರಸ್ತೆಗಳು:
ಭಾರೀ ಸರಕು ಸಾಗಾಣಿಕಾ ವಾಹನಗಳ ಸಂಚಾರವನ್ನು ಬೆಳಿಗ್ಗೆ 08:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ವಸಂತ ನಗರ ರಸ್ತೆ. ಬಳ್ಳಾರಿ ರಸ್ತೆ. ತರಳಬಾಳು ರಸ್ತೆ. ಪ್ಯಾಲೇಸ್ ರಸ್ತೆ, ಎಂ.ವಿ. ಜಯರಾಮ್ ರಸ್ತೆ, ಜಯಮಹಲ್ ರಸ್ತೆ, ಸಿ.ವಿ. ರಾಮನ್ ರಸ್ತೆ, ರಮಣ ಮಹರ್ಷಿ ರಸ್ತೆ. ನಂದಿ ದುರ್ಗ ರಸ್ತೆ, ಮೌಂಟ್ ಕಾರ್ಮೆಲ್ ಕಾಲೇಜ್ ರಸ್ತೆ, ಮೇಖ್ರಿ ಸರ್ಕಲ್ ನಿಂದ ಯಶವಂತಪುರ ರಸ್ತೆಗಳಿಗೆ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಮಾರ್ಗದಲ್ಲಿ 28ರ ತನಕ ಸಂಚಾರ ವ್ಯತ್ಯಯ
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಯಸಂದ್ರ ರಸ್ತೆಯ ಸಾಯಿಬಾಬಾ ಲೇಔಟ್ ಕ್ರಾಸ್‌ನಿಂದ ದೊಡ್ಡಮರ ಜಂಕ್ಷನ್ ವರೆಗೆ ಶುಕ್ರವಾರದಿಂದ (ಅಕ್ಟೋಬರ್ 25) ರಾತ್ರಿಯಿಂದ ಸೋಮವಾರ (ಅಕ್ಟೋಬರ್ 28) ರ ಬೆಳಿಗ್ಗೆವರೆಗೆ ಬಿ.ಡಬ್ಲ್ಯು.ಎಸ್.ಎಸ್.ಬಿ. ವತಿಯಿಂದ ತುರ್ತು ಕಾಮಗಾರಿಯನ್ನು ಕೈಗೊಳ್ಳಲಿದೆ. ಹೀಗಾಗಿ ಈ ಭಾಗದಲ್ಲಿ ಸುಗಮ ಸಂಚಾರ ವ್ಯವಸ್ಥೆಯ ನಿರ್ವಹಣೆಯ ದೃಷ್ಠಿಯಿಂದ ಬಿಎಂಟಿಸಿ ಬಸ್‌ಗಳು ಮತ್ತು ಸರಕು ಸಾಗಾಣೆ ವಾಹನಗಳ ಸಂಚಾರಕ್ಕೆ ಈ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿರುತ್ತದೆ.
ಚೂಡಸಂದ್ರ ಜಂಕ್ಷನ್‌ನಿಂದ ರಾಯಸಂದ್ರ ಜಂಕ್ಷನ್ ಮುಖಾಂತರ ಹೊಸರೋಡ್ ಕಡೆಗೆ ಸಂಚರಿಸುವ ವಾಹನಗಳು ಚೂಡಸಂದ್ರ ಜಂಕ್ಷನ್‌ನಿಂದ ಸಿಲ್ವರ್ ಕೌಂಟ ರಸ್ತೆ, ಬಿರ್ಲಾಜಂಕ್ಷನ್ ರಾಮರೆಡ್ಡಿ ಸರ್ಕಲ್, ಚನ್ನಕೇಶವನಗರ 1ನೇ ಕ್ರಾಸ್ ರಸ್ತೆ ಮುಖಾಂತರ ಹೊಸರೋಡ್‌ಗೆ ಸಂಚರಿಸಬೇಕು.
ಹೊಸರೋಡ್‌ನಿಂದ ಚೂಡಸಂದ್ರ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಚನ್ನಕೇಶವನಗರ 1ನೇ ಕ್ರಾಸ್, ರಾಮರೆಡ್ಡಿ ಸರ್ಕಲ್, ಬಿರ್ಲಾ ಜಂಕ್ಷನ್, ಸಿಲ್ವರ್ ಕೌಂಟಿ ರಸ್ತೆ ಮುಖಾಂತರ ಚೂಡಸಂದ್ರ ಜಂಕ್ಷನ್ ಕಡೆಗೆ ಸಂಚರಿಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.