Bengaluru Traffic: ಬಿಡುವಿಲ್ಲದ ಮಾರತಹಳ್ಳಿ ಸೇತುವೆ ಮೇಲೆ 10 ಗಂಟೆಗಳ ನಿರ್ಬಂಧ; ಸಮಯ ಮತ್ತು ಪರ್ಯಾಯ ಮಾರ್ಗ ಹೀಗಿದೆ
Oct 06, 2024 03:37 PM IST
ಬಿಡುವಿಲ್ಲದ ಮಾರತಹಳ್ಳಿ ಸೇತುವೆ ಮೇಲೆ 10 ಗಂಟೆಗಳ ನಿರ್ಬಂಧ
- Bengaluru Marathahalli Bridge: ಬೆಂಗಳೂರು ನಗರದ ಮಾರತ್ತಹಳ್ಳಿ ಬ್ರಿಡ್ಜ್ ಮೇಲೆ 10 ಗಂಟೆಗಳ ನಿರ್ಬಂಧ ಹೇರಲಾಗಿದೆ. ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬೆಂಗಳೂರು ಪೊಲೀಸರು ಸೂಚಿಸಿದ್ದಾರೆ. ನಿರ್ಬಂಧದ ಸಮಯ ಮತ್ತು ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ.
ಬೆಂಗಳೂರು: ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆ (Bengaluru Traffic Alert) ಉಂಟಾಗುವ ಪ್ರದೇಶಗಳಲ್ಲಿ ಮಾರತ್ತಹಳ್ಳಿ ಬ್ರಿಡ್ಜ್ (Marathahalli Bridge) ಕೂಡ ಒಂದು. ಇಲ್ಲಿ ಬೆಂಕಿ ಪೊಟ್ಟಣದಲ್ಲಿ ಒತ್ತೊತ್ತಾಗಿ ಜೋಡಿಸಿದ ಕಡ್ಡಿಗಳಂತೆ ವಾಹನಗಳು ಸಾಲಾಗಿ ನಿಂತಿರುತ್ತವೆ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ.. ಎಲ್ಲಾ ಸಮಯದಲ್ಲಾದರೂ ವಾಹನ ದಟ್ಟಣೆ ಕಡಿಮೆಯೇ ಆಗಿರುವುದಿಲ್ಲ. ಇದು ವಾಹನ ಸವಾರರಿಗೆ ತುಂಬಾ ಕಿರಿಕಿರಿ ಉಂಟಾಗುವಂತೆ ಮಾಡಿದೆ. ಹೀಗಾಗಿ, ವರ್ತೂರು ರಸ್ತೆಯ ಮಾರತ್ತಹಳ್ಳಿ ಬ್ರಿಡ್ಜ್ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಬೆಂಗಳೂರು ಸಂಚಾರ ಪೊಲೀಸರು ಯೋಜನೆ ರೂಪಿಸಿದ್ದಾರೆ.
ಈ ಟ್ರಾಫಿಕ್ ಜಾಮ್ ಉಂಟು ಮಾಡುವ ಪ್ರದೇಶ ಎಚ್ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ವಿಪರೀತ ಸಂಚಾರ ದಟ್ಟಣೆ ಕಾರಣ ಬಿಡುವಿಲ್ಲದ ಮಾರತಹಳ್ಳಿ ಸೇತುವೆ ಮೇಲೆ 10 ಗಂಟೆಗಳ ನಿರ್ಬಂಧ ಹೇರಲಾಗಿದೆ. ಯಾವ ಸಮಯ ಸಂಚರಿಸಬಾರದು ಎಂಬುದನ್ನು ಪೊಲೀಸರು ತಿಳಿಸಿದ್ದಾರೆ. ಬೆಳಿಗ್ಗೆ ನಾಲ್ಕು ಗಂಟೆಗಳ ಕಾಲ ಮತ್ತು ಸಂಜೆ 6 ಗಂಟೆಗಳ ಕಾಲ ನಿರ್ಬಂಧವು ಜಾರಿಯಲ್ಲಿರುತ್ತದೆ. ಆದರೆ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಪೊಲೀಸರು ಅಧಿಕಾರಿಗಳು ಪರ್ಯಾಯ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸಮಯ ಮತ್ತು ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ ನೋಡಿ.
ನಿರ್ಬಂಧದ ಸಮಯ (ಪ್ರತಿದಿನ)
ಬೆಳಿಗ್ಗೆ: 7:00 ರಿಂದ 11:00 ರವರೆಗೆ
ಸಂಜೆ: 4:00 ರಿಂದ ರಾತ್ರಿ 10:00 ರವರೆಗೆ
ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ
ನಿಷೇಧಿತ ಸಮಯದಲ್ಲಿ ಹೊರವರ್ತುಲ ರಸ್ತೆಯಲ್ಲಿ ಕೆಎಲ್‌ಎಂ ಸರ್ವಿಸ್ ರಸ್ತೆಯಿಂದ ಕುಂದಲಹಳ್ಳಿ ಗೇಟ್ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು
ಲಘು ವಾಹನಗಳು ಆಕಾಶ್ ವಿಹಾರ್ ಹೌಸಿಂಗ್ ಬಳಿ ಯು-ಟರ್ನ್ ತೆಗೆದುಕೊಂಡು ಮಾರತಹಳ್ಳಿ ಸೇತುವೆಯ ಮೂಲಕ ಕುಂದಲಹಳ್ಳಿ ಗೇಟ್ ಕಡೆಗೆ ಹೋಗಬಹುದು.
ಜಂಕ್ಷನ್‌ನಲ್ಲಿ ಭಾರಿ ವಾಹನಗಳು ತುಳಸಿ ಥಿಯೇಟರ್ ಯು-ಟರ್ನ್ ತೆಗೆದುಕೊಂಡು ಮಾರತ್ತಹಳ್ಳಿ ಬ್ರಿಡ್ಜ್ ಮುಖಾಂತರ ಕುಂದಲಹಳ್ಳಿ ಗೇಟ್ ಕಡೆಗೆ ಸಂಚರಿಸಬಹುದು.
ಪಾದಚಾರಿಗಳು ನಿರ್ಬಂಧಿತ ಸಮಯದಲ್ಲಿ ವರ್ತೂರು ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯನ್ನು ದಾಟಲು ಸ್ಕೈವಾಕ್ ಅನ್ನು ಬಳಸಲು ಸೂಚಿಸಲಾಗಿದೆ.
ವಾಹನ ಸವಾರರು ಆಕ್ರೋಶ
ಮಾರತ್ತಹಳ್ಳಿ ಬ್ರಿಡ್ಜ್ ಜಂಕ್ಷನ್ ನಿರ್ಬಂಧಿಸಿ ಪರ್ಯಾಯ ಮಾರ್ಗ ರೂಪಿಸಿದ್ದರೂ ಸಹ ಟ್ರಾಫಿಕ್ ಜಾಮ್ ಕಡಿಮೆಯಾಗಿಲ್ಲ. ವಾಹನ ಸವಾರರಿಗೆ ಇದು ದುಃಸ್ವಪ್ನವಾಗಿ ಪರಿಣಮಿಸಿದೆ. ಪೀಕ್ ಅವರ್ ಆಗಿರಲಿ ಅಥವಾ ಬೆಳಗಿನ ಜಾವ 4 ಗಂಟೆಯಾದರೂ ಮಾರತ್ತಹಳ್ಳಿ ಸೇತುವೆ ಸದಾ ವಾಹನಗಳಿಂದ ತುಂಬಿರುತ್ತದೆ. ಗಮ್ಯಸ್ಥಾನವನ್ನು ತಲುಪಲು ಗಂಟೆಗಳು ಬೇಕಾಗುತ್ತದೆ. ಹೀಗಾಗಿ ಸಂಚರಿಸಲು ಅನಾನುಕೂಲವಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವರು ಹಂಚಿಕೊಂಡಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಮಳೆ ಬಂದರೆ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುತ್ತದೆ.