ಬೆಂಗಳೂರು-ತುಮಕೂರು ಮೆಟ್ರೋ ಸಂಪರ್ಕ: ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ 8 ಕಂಪನಿಗಳಿಂದ ಬಿಡ್, ತುಮಕೂರು ಜನರಲ್ಲಿ ಚಿಗುರಿದೆ ಹೊಸ ಕನಸು
Apr 26, 2024 03:43 PM IST
ಬೆಂಗಳೂರು-ತುಮಕೂರು ಮೆಟ್ರೋ ಸಂಪರ್ಕ: ಕಾರ್ಯಸಾಧ್ಯತಾ ವರದಿ ಅಧ್ಯಯನಕ್ಕೆ 8 ಕಂಪನಿಗಳಿಂದ ಬಿಡ್
- ತುಮಕೂರು-ಬೆಂಗಳೂರು ನಡುವೆ ಮೆಟ್ರೋ ಯೋಜನೆ ಜಾರಿಯಿಂದ ಪ್ರತಿದಿನ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ತಡೆರಹಿತ ಪ್ರಯಾಣ ಮಾಡಲು ಅನುಕೂಲ ಆಗುವುದರ ಜೊತೆಗೆ ಈ ಮಾರ್ಗದಲ್ಲಿ ಬಂಡವಾಳ ಹೂಡಿಕೆಗೂ ಸಹಾಯವಾಗಲಿದೆ.
ಬೆಂಗಳೂರು: ನಗರದಿಂದ ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ವಿಸ್ತರಣೆ ಸಾಕಾರವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಯೋಜನೆಯ ಕಾರ್ಯಸಾಧ್ಯತಾ ವರದಿ (project feasibility report) ಸಲ್ಲಿಸಲು 8 ಕನ್ಸಲ್‌ಟೆನ್ಸಿ ಸಂಸ್ಥೆಗಳು ಬಿಡ್ ಸಲ್ಲಿಸಿವೆ. ಬೆಂಗಳೂರಿನಿಂದ ತುಮಕೂರು ರಸ್ತೆಯ ಮಾದಾವರದವರೆಗೆ ಈಗಾಗಲೇ 'ಗ್ರೀನ್ ಲೈನ್' ಮೆಟ್ರೋ ಸಂಪರ್ಕವಿದೆ. ಅಲ್ಲಿಂದ ಮುಂದೆ ತುಮಕೂರು ನಗರಕ್ಕೆ ಸಂಪರ್ಕ ಕಲ್ಪಿಸಲು 52.41 ಕಿಮೀ ಉದ್ದದ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತಾ ವರದಿ ಸಲ್ಲಿಕೆಗೆ ಟೆಂಡರ್ ಆಹ್ವಾನಿಸಲಾಗಿತ್ತು. ಈ ವರದಿಯು ತುಮಕೂರು ನಗರಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಬೇಕೆಂಬ ಆಶಯಕ್ಕೆ ಪೂರಕವಾಗಿದ್ದರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೆಟ್ರೋ ಸಂಪರ್ಕ ಕಲ್ಪಿಸಲು ಸರ್ಕಾರವು ಮುಂದಿನ ಹೆಜ್ಜೆ ಇಡಲಿದೆ.
ರೈಟ್ಸ್ ಲಿ. ಸಿಸ್ಟ್ರಾ ಎಂವಿಎ ಕನ್ಸಲ್ಟಿಂಗ್, ಆರ್‌ವಿ ಅಸೋಸಿಯೇಟ್ಸ್ ಸೇರಿದಂತೆ 8 ಸಂಸ್ಥೆಗಳು ಬಿಡ್ ಸಲ್ಲಿಸಿವೆ. ತಾಂತ್ರಿಕ ಮತ್ತು ಆರ್ಥಿಕ ಮೌಲ್ಯಮಾಪನ ನಡೆಸಿದ ನಂತರ ಅರ್ಹ ಸಂಸ್ಥೆಯನ್ನು ಆಯ್ಕೆ ಮಾಡಲಾಗುವುದು ಎಂದು ಮೆಟ್ರೋ ನಿಗಮ (BMRCL) ತಿಳಿಸಿದೆ. ಬಂಡವಾಳ ವೆಚ್ಚ, ಸಂಚಾರ ದಟ್ಟಣೆ, ಮೆಟ್ರೋ ಹಳಿಗಳ ಮಾರ್ಗ, ವಶಪಡಿಸಿಕೊಳ್ಳಬೇಕಾದ ಆಸ್ತಿಗಳ ಸಂಖ್ಯೆ ಮತ್ತು ಭೂಮಿ ವಶಪಡಿಸಿಕೊಳ್ಳುವಲ್ಲಿ ಎದುರಾಗುವ ತೊಂದರೆಗಳನ್ನು ಕುರಿತು ಟೆಂಡರ್ ಪಡೆಯುವ ಸಂಸ್ಥೆ ಅಧ್ಯಯನ ನಡೆಸಲಿದೆ. ಈ ವರದಿಯು 3-4 ತಿಂಗಳಲ್ಲಿ ಸಿದ್ದಗೊಳ್ಳಲಿದ್ದು, ನಂತರದ ಕ್ರಮವನ್ನು ಸರ್ಕಾರ ನಿರ್ಧರಿಸುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
2024-25ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಪರ್ಕ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಬೆಂಗಳೂರು-ತುಮಕೂರು ಮೆಟ್ರೋ ಸಂಪರ್ಕಕ್ಕೆ ಟೀಕೆಗಳು ಇಲ್ಲದಿಲ್ಲ. ಮೆಟ್ರೋ ರೈಲು ಸಂಪರ್ಕ ಕಲ್ಪಿಸುವುದು ನಗರದೊಳಗಿನ ಪ್ರಯಾಣಕ್ಕೆ ಹೊರತು ನಗರದಿಂದ ನಗರಕ್ಕೆ ಅಲ್ಲ ಎಂದು ವಾದ ಮಂಡಿಸಲಾಗುತ್ತಿದೆ.
ಆರಂಭದಲ್ಲಿ ನಮ್ಮ ಮೆಟ್ರೋದ ಹಸಿರು ಮಾರ್ಗವನ್ನು ಮಾದಾವರದಿಂದ ಕುಣಿಗಲ್ ಕ್ರಾಸ್‌ವರೆಗಿನ 11 ಕಿಮೀ ವಿಸ್ತರಿಸಲು ಚಿಂತನೆ ನಡೆದಿತ್ತು. ಆದರೆ ತುಮಕೂರು ಜಿಲ್ಲೆಯ ಕೊರಟಗೆರೆ ಶಾಸಕ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ ಮೆಟ್ರೋ ಜಾಲವನ್ನು ತಮ್ಮ ತವರು ಜಿಲ್ಲೆ ತುಮಕೂರಿಗೆ ವಿಸ್ತರಿಸಲು ಆಸಕ್ತಿ ತೋರಿಸಿದ್ದರು.
ಚಿಕ್ಕಬಾಣಾವರದಿಂದ ತುಮಕೂರಿಗೆ ಉಪ ನಗರ ರೈಲು ವಿಸ್ತರಣೆಗೂ ಚಿಂತನೆ ನಡೆದಿದೆ. ಈ ದೃಷ್ಟಿಯಿಂದ ಮೆಟ್ರೋ ಕಾರ್ಯಸಾಧ್ಯತಾ ವರದಿಯು ಯೋಜನೆಗೆ ಪೂರಕವಾಗಿರುತ್ತದೆ ಎಂದು ಭಾವಿಸುವಂತಿಲ್ಲ. ಆದರೂ ಪರಮೇಶ್ವರ ಅವರು ತುಮಕೂರಿಗೆ ಮೆಟ್ರೋ ವಿಸ್ತರಿಸುವುದಾಗಿ ಹಲವಾರು ಬಾರಿ ಪ್ರತಿಪಾದಿಸಿದ್ದರು. ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲೇ ಮೆಟ್ರೋ ನಿರ್ಮಿಸಬಹುದಾಗಿದೆ. 52.41 ಕಿ.ಮೀ. ಮಾರ್ಗದಲ್ಲಿ, 19 ಎತ್ತರಿಸಿದ ನಿಲ್ದಾಣಗಳನ್ನು ಗುರುತಿಸಲಾಗಿದೆ.
ತುಮಕೂರು ಮಾರ್ಗದ 19 ಮೆಟ್ರೋ ನಿಲ್ದಾಣಗಳು
ಮಾದಾವರ-ತುಮಕೂರು ಮಾರ್ಗದಲ್ಲಿ ಗುರುತಿಸಲಾಗಿರುವ ಎತ್ತರಿಸಿದ 19 ನಿಲ್ದಾಣಗಳ ವಿವರ ಹೀಗಿದೆ: ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ನೆಲಮಂಗಲ ಬಸ್‌ನಿಲ್ದಾಣ, ನೆಲಮಂಗಲ ಹೆದ್ದಾರಿಯ ಕೊನೆಯ ಭಾಗ, ಬೂದಿಹಾಳ, ಟಿ.ಬೇಗೂರು, ಕುಲುವನಹಳ್ಳಿ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಯ್ಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ, ಪಂಡಿತನಹಳ್ಳಿ, ಕ್ಯಾತ್ಸಂದ್ರ, ಬಟವಾಡಿ, ತುಮಕೂರು ವಿಶ್ವವಿದ್ಯಾನಿಲಯ ಮತ್ತು ತುಮಕೂರು ಬಸ್ ನಿಲ್ದಾಣ.
ಬೆಂಗಳೂರು-ತುಮಕೂರು ಮೆಟ್ರೋ ಮಾರ್ಗದಿಂದ ಏನು ಅನುಕೂಲ?
ತುಮಕೂರು-ಬೆಂಗಳೂರು ನಡುವೆ ಮೆಟ್ರೋ ಯೋಜನೆ ಜಾರಿಯಿಂದ ಪ್ರತಿದಿನಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ತಡೆರಹಿತ ಪ್ರಯಾಣ ಮಾಡಲು ಅನುಕೂಲ ಆಗುವುದರ ಜೊತೆಗೆ ಈ ಮಾರ್ಗದಲ್ಲಿ ಬಂಡವಾಳ ಹೂಡಿಕೆಗೂ ಸಹಾಯವಾಗಲಿದೆ. ಬೆಂಗಳೂರನ್ನು ಬಿಟ್ಟು ಆಚೆಯೂ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರಲಿದ್ದಾರೆ. ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಿದರೆ ಬಂಡವಾಳ ಹೂಡಿಕೆ ಆಕರ್ಷಿಸಲು ಸಾಧ್ಯವಾಗುತ್ತದೆ. ಬೆಂಗಳೂರಿನ ಮೇಲಿನ ಹೊರೆ ತಗ್ಗಲಿರುವುದರ ಜೊತೆಗೆ ವಾಹನ ದಟ್ಟಣೆ ಕಡಿಮೆಯಾಗಲಿದೆ.
ಮೆಟ್ರೋ ಯೋಜನೆ ಕಾರ್ಯರೂಪಕ್ಕೆ ಬಂದರೆ ತುಮಕೂರು ನಗರವು ಬೆಂಗಳೂರಿನ ಪ್ರಮುಖ ಉಪನಗರವಾಗಿ ಹೊರಹೊಮ್ಮಲಿದೆ. ಈ ಮಾರ್ಗ ಎರಡು ಪ್ರಮುಖ ನಗರಗಳ ನಡುವಿನದ್ದಾಗಿದೆ. ಮೆಟ್ರೋ ಮಾರ್ಗವನ್ನು 'ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ' ಅಡಿಯಲ್ಲಿ ನಿರ್ಮಿಸಬಹುದಾಗಿದೆ. ಇದರ ಪ್ರಕಾರ 5 ರಿಂದ 10 ಕಿಲೊಮೀಟರ್‌ಗೆ ಒಂದರಂತೆ ಮೆಟ್ರೋ ನಿಲ್ದಾಣವನ್ನು ಸ್ಥಾಪಿಸಲಾಗುತ್ತದೆ. ಇದರಿಂದ ಪ್ರಯಾಣದ ಸಮಯ ಉಳಿತಾಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
(ವರದಿ: ಮಾರುತಿ)