logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ: ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ -ಇಲ್ಲಿದೆ ವೈರಲ್ ವಿಡಿಯೊ

ಬೆಂಗಳೂರಿನಲ್ಲಿ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ: ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ -ಇಲ್ಲಿದೆ ವೈರಲ್ ವಿಡಿಯೊ

Umesh Kumar S HT Kannada

Oct 15, 2024 02:43 PM IST

google News

ಬೆಂಗಳೂರಲ್ಲಿ ಧಾರಾಕಾರ ಮಳೆಗೆ ಜಲಾವೃತವಾಗಿವೆ ರಸ್ತೆಗಳು; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ, ವೈರಲ್ ವಿಡಿಯೋಗಳು ಇಲ್ಲಿವೆ, ವಿಡಿಯೋದಿಂದ ತೆಗೆದ ಚಿತ್ರ ಇದು.

  • ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದಲೆ ಮಳೆ ಸುರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿದೆ. ಧಾರಾಕಾರ ಮಳೆಯ ಕಾರಣ ವಿವಿಧೆಡೆ ವಾಹನ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಕಡೆಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿದೆ ವೈರಲ್ ವಿಡಿಯೋ ವಿವರ.

ಬೆಂಗಳೂರಲ್ಲಿ ಧಾರಾಕಾರ ಮಳೆಗೆ ಜಲಾವೃತವಾಗಿವೆ ರಸ್ತೆಗಳು; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ, ವೈರಲ್ ವಿಡಿಯೋಗಳು ಇಲ್ಲಿವೆ, ವಿಡಿಯೋದಿಂದ ತೆಗೆದ ಚಿತ್ರ ಇದು.
ಬೆಂಗಳೂರಲ್ಲಿ ಧಾರಾಕಾರ ಮಳೆಗೆ ಜಲಾವೃತವಾಗಿವೆ ರಸ್ತೆಗಳು; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ, ವೈರಲ್ ವಿಡಿಯೋಗಳು ಇಲ್ಲಿವೆ, ವಿಡಿಯೋದಿಂದ ತೆಗೆದ ಚಿತ್ರ ಇದು. (@east_bengaluru)

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಅಕ್ಟೋಬರ್ 15) ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಕರ್ನಾಟಕ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಮಹಾನಗರದ ಹಲವೆಡೆ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಕಡೆ ರಸ್ತೆಗಳು ಜಲಾವೃತವಾಗಿದ್ದು ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತವಾಗಿದೆ. ಕೆಆರ್ ಮಾರುಕಟ್ಟೆ, ಓಕಳಿಪುರಂ, ಮೆಜೆಸ್ಟಿಕ್​, ಕಾರ್ಪೊರೇಷನ್​ ಸರ್ಕಲ್​, ಶಾಂತಿನಗರ, ಲಾಲ್ ಬಾಗ್, ಜಯನಗರ, ಸೌತ್ ಎಂಡ್ ಸರ್ಕಲ್, ಬಸವನಗುಡಿ, ಶ್ರೀನಗರ, ಹನುಮಂತನಗರ, ಗಿರಿನಗರ, ಚಾಮರಾಜಪೇಟೆ, ಬನಶಂಕರಿ, ಪದ್ಮನಾಭನಗರ, ತ್ಯಾಗರಾಜನಗರ, ಕೋರಮಂಗಲ, ರಿಚ್​ಮಂಡ್​ ಸರ್ಕಲ್​, ಮಲ್ಲೇಶ್ವರಂ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ಆರ್.ಆರ್.ನಗರ, ಉತ್ತರಹಳ್ಳಿ, ದಾಸರಹಳ್ಳಿ, ರಾಜಾಜಿನಗರ, ವಿಧಾನಸೌಧ, ಕಬ್ಬನ್ ಪಾರ್ಕ್, ಶಿವಾಜಿನಗರ ಸೇರಿ ಹಲವು ಕಡೆಗಳಲ್ಲಿ ರಸ್ತೆ, ಅಂಡರ್​ಪಾಸ್​ಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಕರ್ನಾಟಕದಲ್ಲಿ ಇನ್ನು ಮೂರು ದಿನಗಳ ಕಾಲ ಅಂದರೆ ಅಕ್ಟೋಬರ್ 17ರ ತನಕ ವ್ಯಾಪಕ ಮಳೆಯಾಗಲಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿ ಮಳೆಯ ಅಬ್ಬರ; ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಜನಜೀವನ ತೊಂದರೆಗೆ ಒಳಗಾಗಿದೆ. ವಿವಿಧ ರಸ್ತೆಗಳ ಚಿತ್ರಣ ಒದಗಿಸುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸರ್ಜಾಪುರ ರಸ್ತೆಯ ದೊಮ್ಮಸಂದ್ರ ಸಿಗ್ನಲ್‌ ಸಮೀಪದ ದೃಶ್ಯದ ವಿಡಿಯೋವನ್ನು ಸಿಟಿಜೆನ್ಸ್ ಮೂವ್‌ಮೆಂಟ್‌ ಈಸ್ಟ್ ಬೆಂಗಳೂರು ಎಕ್ಸ್‌ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.

ಬೆಳಗ್ಗೆಯಿಂದಲೆ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಶಾಲಾ ಮಕ್ಕಳು ಮತ್ತು ಕಚೇರಿ ಕೆಲಸಕ್ಕೆ ಹೋಗುವವರು ಸಂಕಷ್ಟ ಅನುಭವಿಸಿದರು. ಅನೇಕರು ಮಳೆಯಲ್ಲಿ ನೆನೆದುಕೊಂಡೇ ಹೋದರು. ಟ್ರಾಫಿಕ್ ಜಾಮ್ ಕಾರಣ, ಸಮಯಕ್ಕೆ ಕಚೇರಿ, ಶಾಲೆ ತಲುಪಲಾಗದೇ ಸಂಕಷ್ಟ ಅನುಭವಿಸಿದರು.

ಬೆಳ್ಳಂದೂರು ಲೇಕ್ ಸಮೀಪದ ಚಿತ್ರಣ ಹೀಗಿದೆ

ಬೆಂಗಳೂರು ಹೆಬ್ಬಾಳ ಡೌನ್ ರಾಂಪ್‌ ಹತ್ತಿರ ನೀರು ನಿಂತಿರುವುದರಿಂದ ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರ ಇದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಇನ್ನೂ ಎಲ್ಲೆಲ್ಲಿ ಸಂಚಾರ ವ್ಯತ್ಯಾಸ

1) ಯಲಹಂಕದ ಕಾಫಿ ಡೇ ಬಳಿಯಿರುವ ವಿದ್ಯಾ ಶಿಲ್ಪದ ಎರಡೂ ಬದಿಗಳಲ್ಲಿ ನೀರು ನಿಂತಿರುವುದರಿಂದ,ಏರ್‌ಪೋರ್ಟ್ ರಸ್ತೆ ಕಡೆಗೆ ನಿಧಾನಗತಿಯ ಸಂಚಾರ ಇದೆ.

2) ಐಟಿಪಿಎಲ್‌ ರಸ್ತೆಯ ರಾಜ್ಯಪಾಳ್ಯ ಗಣೇಶ ಟೆಂಪಲ್ ಹತ್ತಿರ ನೀರು ನಿಂತಿರುವುದರಿಂದ ವೈಟ್ಫೀಲ್ಡ್ ಕಡೆಗೆ ಹಾಗೂ ಹೂಡಿ ಕಡೆಗೆ ನಿಧಾನಗತಿಯ ಸಂಚಾರ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

3) ಬಿಬಿ ಮುಖ್ಯರಸ್ತೆಯ ಕಾಫಿ ಡೇ ರೈಲ್ವೇ ಅಂಡರ್ ಪಾಸ್ ಬಳಿಯಲ್ಲಿ ಮಳೆಯಿಂದಾಗಿ ವಾಟರ್ ಲಾಗಿಂಗ್ ಉಂಟಾಗಿದ್ದು, ಬೆಂಗಳೂರು ನಗರ ಹಾಗೂ ಏರ್‌ಪೋರ್ಟ್‌ ಕಡೆಗೆ ಸಂಚಾರವು ನಿಧಾನಗತಿಯಲ್ಲಿರುತ್ತದೆ. ವಾಹನ ಸವಾರರು ಪರ್ಯಾಯ ರಸ್ತೆಗಳನ್ನು ಬಳಸಲು ಕೋರಿರುವುದಾಗಿ ಯಲಹಂಕ ಪೊಲೀಸರು ತಿಳಿಸಿದ್ದಾರೆ.

4) ಐಟಿಪಿಎಲ್ ಮುಖ್ಯ ರಸ್ತೆ ಮಹದೇವಪುರ, ಬಿಎಂಟಿಸಿ ಡಿಪೋ ಎಂಎಸ್ ಪಾಳ್ಯ, ದೊಮ್ಮಸಂದ್ರ ಸಿಗ್ನಲ್, ಬಿ ಬಿ ಸರ್ವಿಸ್ ರಸ್ತೆ ಕೋಗಿಲು ಕ್ರಾಸ್‌ನಲ್ಲಿ ನೀರು ನಿಂತಿದೆ.

5) ಬಿಬಿ ಸರ್ವಿಸ್ ರಸ್ತೆಯ ಕೋಗಿಲು ಕ್ರಾಸ್ ಹತ್ತಿರ ಮಳೆಯಿಂದಾಗಿ ರಸ್ತೆ ಜಲಾವೃತವಾಗಿದೆ. ಇನ್ನೊಂದೆಡೆ, ಕುವೆಂಪು ಅಂಡರ್‌ಪಾಸ್‌ನಲ್ಲಿ ನೀರು ನಿಂತಿದೆ.

6) ಯಲಹಂಕದ ಉನ್ನಿಕೃಷ್ಣನ್ ಮುಖ್ಯ ರಸ್ತೆಯ ಎಂ.ಎಸ್ ಪಾಳ್ಯ ಬಿಎಂಟಿಸಿ ಬಸ್ ಡಿಪೋ ಮುಂಭಾಗ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.

7) ಹೈಗ್ರೌಂಡ್ಸ್ ಸಂಚಾರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿನ ವಿಂಡಸರ್ ಮನೋರ್ ರೈಲ್ವೆ ಬ್ರಿಡ್ಜ್ ಬಳಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ.

8) ಕೆ ಆರ್ ಪುರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಳೆ ಬರುತ್ತಿರುವ ಕಾರಣ ಕಸ್ತೂರಿನಗರ ರಿಂಗ್ ರಸ್ತೆ ಗ್ರಾಂಡ್ ಸೀಸನ್ ಹೋಟೆಲ್ ಹತ್ತಿರ ನೀರು ನಿಂತು ಸಮಸ್ಯೆಯಾಗಿದೆ.

9) ಹುಣಸೇಮರ ಜಂಕ್ಷನ್‌ ರಸ್ತೆಯಲ್ಲಿ ನೀರು ನಿಂತಿರುವುದರಿಂದ, ಬಿನ್ನಿ ಮಿಲ್ ಕಡೆಗೆ ನಿಧಾನಗತಿಯ ಸಂಚಾರವಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ