ಕರ್ನಾಟಕ ಹವಾಮಾನ ಮಾರ್ಚ್ 5: ಬೆಂಗಳೂರಲ್ಲಿ ನೀಲಾಕಾಶ, ಒಣಹವೆ, ಉತ್ತರ ಕರ್ನಾಟಕ ಒಳನಾಡಿಗೆ ಉಷ್ಣಮಾರುತ
Mar 05, 2024 07:29 AM IST
ಕರ್ನಾಟಕ ಹವಾಮಾನ ಮಾ.5
ಕರ್ನಾಟಕ ಹವಾಮಾನ ಮಾರ್ಚ್ 5: ಕರ್ನಾಟಕದಲ್ಲಿ ಸದ್ಯ ಒಣಹವೆ ಇದ್ದು, ಬೆಂಗಳೂರಲ್ಲಿ ನೀಲಾಕಾಶ ಮತ್ತು ಬೇಸಿಗೆ ಸಹಜ ವಾತಾವರಣ ಇರಲಿದೆ. ಉತ್ತರ ಕರ್ನಾಟಕದ ಒಳನಾಡಿನಲ್ಲಿ ಉಷ್ಣಮಾರುತ ಕಾಡಲಿದೆ ಎಂದು ಹವಾಮಾನ ಕೇಂದ್ರದ ವರದಿ ಎಚ್ಚರಿಸಿದೆ.
ಬೆಂಗಳೂರು: ನಿಧಾನವಾಗಿ ಚಳಿ ಕಳೆದು ಬೇಸಿಗೆ ವಾತಾವರಣ ರಾಜ್ಯವನ್ನಾವರಿಸುತ್ತಿದೆ. ಏಪ್ರಿಲ್ ಮೇ ತಿಂಗಳಿಗೂ ಮೊದಲೇ ಕಡುಬೇಸಿಗೆ ಕಾಡತೊಡಗಿದೆ. ನೀರಿನ ಕೊರತೆ, ಸಮಸ್ಯೆ ಜನರನ್ನು ಕಾಡತೊಡಗಿದೆ. ಸಹಜವಾಗಿಯೇ ಹವಾಮಾನ ಹೇಗಿದೆಯೋ? ನಾಳೆ ಮಳೆ ಬರುತ್ತಾ ಎಂದೆಲ್ಲ ನಿರೀಕ್ಷಿಸುತ್ತಿರುತ್ತಾರೆ. ಭಾರತೀಯ ಹವಾಮಾನ ಇಲಾಖೆ ಕೊಟ್ಟಿರುವ ಇಂದಿನ (ಮಾ.5) ಹವಮಾನ ಮುನ್ಸೂಚನೆ ಹೀಗಿದೆ.
ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದೆ. ನೈಋತ್ಯ ಮಧ್ಯ ಪ್ರದೇಶ ಭಾಗದಿಂದ ಕರ್ನಾಟಕ ಉತ್ತರ ಒಳನಾಡಿನ ಕಡೆಗೆ ಉಷ್ಣಮಾರುತ ಚಲಿಸುತ್ತಿದೆ. ಇದು ಅಲ್ಲಿಂದ ಮುಂದೆ ಉತ್ತರ ತಮಿಳುನಾಡು, ತೆಲಂಗಾಣ, ವಿದರ್ಭಾದಲ್ಲಿ ಕೂಡ ಕಾಣಸಿಲಿದೆ. ಇದು ಗಂಟೆಗೆ 0.9 ಕಿ.ಮೀ. ವೇಗದಲ್ಲಿ ಇರಲಿದೆ ಎಂದು ಹವಾಮಾನ ಕೇಂದ್ರ ಬೆಂಗಳೂರು ನಿನ್ನೆ (ಮಾ.4) ಮಧ್ಯಾಹ್ನ ಪ್ರಕಟಿಸಿರುವ ಹವಾಮಾನ ಮುನ್ಸೂಚನಾ ವರದಿ ಹೇಳಿದೆ.
ನಿನ್ನೆ (ಮಾ.4) ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 37.4 ಡಿಗ್ರಿ ಸೆಲ್ಶಿಯಸ್ ಮತ್ತು ಚಾಮರಾಜನಗರದಲ್ಲಿ ಕನಿಷ್ಠ ತಾಪಮಾನ 16.9 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ ಎಂದು ಹವಾಮಾನ ಕೇಂದ್ರದ ವರದಿ ಹೇಳಿದೆ.
"ಎಲ್‌ನಿನೊ ಪರಿಸ್ಥಿತಿಗಳು ದುರ್ಬಲಗೊಂಡಿವೆ. ಆದರೆ ಅವು ಇನ್ನೂ ಚಾಲ್ತಿಯಲ್ಲಿವೆ. ಮೇ ತಿಂಗಳವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಆದ್ದರಿಂದ, ಕಡು ಬೇಸಿಗೆಯನ್ನು ನಿರೀಕ್ಷಿಸಬಹುದು. ಆದರೆ ಸೀಸನ್‌ನ ಮೊದಲ 15 ದಿನಗಳಲ್ಲಿ, ವಾಯವ್ಯ ಭಾರತದಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಮಹಾನಿರ್ದೇಶಕ ಎಂ ಮೊಹಾಪಾತ್ರ ಮಾರ್ಚ್ 1ರಂದು ಹೇಳಿದ್ದರು.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಇಂದಿನ (ಮಾ.5) ಹವಾಮಾನ
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಬೇಸಿಗೆ ಸಹಜ ವಾತಾವರಣ ಇರಲಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ನಿರ್ಮಲ ಆಕಾಶ ಇರಲಿದೆ. ಉಷ್ಣಾಂಶ ಗರಿಷ್ಠ 33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಶಿಯಸ್ ಇರಬಹುದು. ನಿನ್ನೆ (ಮಾ.4)ಬೆಂಗಳೂರು ನಗರ ಜಿಲ್ಲೆಯ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 20.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು.
ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಉಷ್ಣಾಂಶ ಗರಿಷ್ಠ 33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ. ನಿನ್ನೆ (ಮಾ.4) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗರಿಷ್ಠ ತಾಪಮಾನ 33.9 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುನ್ಸೂಚನಾ ವರದಿ ಹೇಳಿದೆ.
ಪ್ರಮುಖ ನಗರಗಳ ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಮಾ.5 ರ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.
ಬೆಂಗಳೂರು – 25.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 66)
ಮಂಗಳೂರು – 26 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 79)
ಚಿತ್ರದುರ್ಗ – 25.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 75)
ಗದಗ – 26.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 52)
ಹೊನ್ನಾವರ – 30.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 52)
ಕಲಬುರಗಿ – 23.5 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 43)
ಬೆಳಗಾವಿ – 27 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 54)
ಕಾರವಾರ – 30.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 67)
----------------------
(This copy first appeared in Hindustan Times Kannada website. To read more like this please logon to kannada.hindustantimes.com)