Bidar News: 6ನೇ ತರಗತಿಗೆ ಪ್ರವೇಶ ನೀಡಲು ಲಂಚಕ್ಕೆ ಬೇಡಿಕೆ; ಬೀದರ್‌ನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಪ್ರಿನ್ಸಿಪಾಲ್
Aug 06, 2023 11:22 AM IST
6ನೇ ತರಗತಿಗೆ ಪ್ರೇವಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸರ್ಕಾರಿ ವಸತಿ ಪ್ರಾಚಾರ್ಯ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೀದರ್‌ನಲ್ಲಿ ನಡೆದಿದೆ.
ವಸತಿ ಶಾಲೆಯಲ್ಲಿ ಸೀಟು ನೀಡಲು 40 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಿನ್ಸಿಪಾಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೀದರ್: ಸರ್ಕಾರಿ ವಸತಿ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಾಚಾರ್ಯರೊಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿರುವ ಘಟನೆ ಬೀದರ್ ಜಿಲ್ಲೆಯಲ್ಲಿ (Bidar News) ನಡೆದಿದೆ.
ಜಿಲ್ಲೆಯ ಮುಡಬಿ ಗ್ರಾಮದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಪರಿಶಿಷ್ಟ ಪಂಗಡ ಕೋಟಾದಲ್ಲಿ ವಿದ್ಯಾರ್ಥಿಯನ್ನು 6ನೇ ತರಗತಿಯಲ್ಲಿ ಪ್ರವೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಾಚಾರ್ಯ ಶಂಕರ ಜ್ಯೋತಗೊಂಡಾ ಎಂಬುವರನ್ನು ಬೀದರ್ ಲೋಕಾಯುಕ್ತರು ಬಂಧಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಯಲ್ಲದಗುಂಡಿ ಗ್ರಾಮದ ನಿವಾಸಿ ನಾಗನಾಥ ವಿಠ್ಠಲ್ ಎಂಬಾತನ ಪುತ್ರ ಸುಮೀತನ ವಸತಿ ಶಾಲೆ ಪ್ರವೇಶಕ್ಕಾಗಿ ಪರೀಕ್ಷೆ ಬರೆದಿದ್ದನು. ಅದರಲ್ಲಿ ಕಡಿಮೆ ಅಂಕ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ ಖಾಲಿ ಇರುವ ಸೀಟಿಯಲ್ಲಿ ಪ್ರವೇಶ ಒದಗಿಸಲು ಪ್ರಾಚಾರ್ಯ ಶಂಕರ ಅವರಿಗೆ ಕೇಳಿದಾಗ ಅವರು, 40 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಆದರೆ, ಇಷ್ಟೊಂದು ಹಣ ನೀಡಲು ಸಾಧ್ಯವಾಗದೆ 25 ಸಾವಿರ ರೂ.ಗೆ ಒಪ್ಪಿಕೊಂಡ ಪ್ರಾಚಾರ್ಯ ಲಂಚದ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಕುರಿತು ನಾಗನಾಥ ಅವರು ಬೀದರ್ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಲೋಕಾಯುಕ್ತ ಎಸ್ಪಿ ಎ.ಆರ್.ಕರ್ನೂಲ್ ಅವರ ಮಾರ್ಗದರ್ಶನದಲ್ಲಿ ಗುರುವಾರ ಬೀದರ್ ಲೋಕಾಯುಕ್ತ ಡಿಎಸ್ಪಿ ಎನ್.ಎಂ.ಓಲೇಕಾರ ಅವರ ನೇತೃತ್ವದಲ್ಲಿ ಪಿಐಗಳಾದ ವಾಹೇದ್ ಹುಸೇನ ಕೋತ್ವಾಲ್, ಪ್ರದೀಪ ಕೊಳ್ಳಾ, ಬಾಬಾಸಾಹೇಬ ಪಾಟೀಲ್, ಸಂತೋಷ ರಾಠೋಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನಾಗನಾಥರಿಂದ ಹಣ ಪಡೆಯುತ್ತಿದ್ದ ಪ್ರಾಚಾರ್ಯ ಶಂಕರ ಅವರನ್ನು 25 ಸಾವಿರ ರೂ. ಲಂಚದ ಹಣದೊಂದಿಗೆ ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)
ವಿಭಾಗ