Bidar Crime: ಬೀದರ್ ಜಿಲ್ಲೆಯಲ್ಲಿ 17 ಲಕ್ಷ ರೂ ಮೌಲ್ಯದ 17 ಕಿಲೋ ಮಾದಕ ವಸ್ತು ಜಪ್ತಿ; ಪತಿಯನ್ನೇ ಕೊಲೆ ಮಾಡಿದ ಪತ್ನಿ, ಪ್ರಿಯಕರನ ಬಂಧನ
Jan 02, 2024 11:36 AM IST
ಬಸವಕಲ್ಯಾಣದ ಮನ್ನಳ್ಳಿ ಗಡಿಯಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಲಾರಿಯನ್ನು ವಶ ಪಡಿಸಿಕೊಂಡ ಅಧಿಕಾರಿಗಳು
ಬಸವಕಲ್ಯಾಣ ತಾಲೂಕಿನಲ್ಲಿ 17.5 ಲಕ್ಷ ರೂಪಾಯಿ ಮೌಲ್ಯದ ಮಾದಕವಸ್ತುವನ್ನು ಪೊಲೀಸರ ವಶಪಡಿಸಿಕೊಂಡಿದ್ದು, ಒಬ್ಬನನ್ನು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಪತಿಯನ್ನೇ ಕೊಂದ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಬೀದರ್: ಬಸವಕಲ್ಯಾಣ ತಾಲೂಕಿನಲ್ಲಿ 17.5 ಲಕ್ಷ ರೂಪಾಯಿ ಮೌಲ್ಯದ 17 ಕಿಲೋ ಮಾದಕವಸ್ತುವನ್ನು ಪೊಲೀಸರ ವಶಪಡಿಸಿಕೊಂಡಿದ್ದು, ಒಬ್ಬನನ್ನು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಪತಿಯನ್ನೇ ಕೊಂದ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮನ್ನಳ್ಳಿ ಗಡಿಯಲ್ಲಿ ಮಾದಕ ವಸ್ತು ವಶ: ಮಾದಕ ವಸ್ತು ಸಾಗಿಸುತಿದ್ದ ವಾಹನದ ಮೇಲೆ ದಾಳಿ ನಡೆಸಿದ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಠಾಣೆ ಪೊಲೀಸರ ತಂಡ ಓರ್ವ ಆರೋಪಿಯನ್ನು ಬಂಧಿಸಿ, 17.50 ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಪಡಿಕೊಂಡ ಘಟನೆ ಬಸವಕಲ್ಯಾಣ ತಾಲೂಕಿನ ಮನ್ನಳ್ಳಿ ಗಡಿಯಲ್ಲಿ ನಡೆದಿದೆ.
ರಾಜಸ್ಥಾನದ ಬಾರಮೇರ್ ಜಿಲ್ಲೆಯ ಮೂಲದ ಸಾವಾಯಿ ರಾಮ್ (40) ಬಂಧಿತ ಆರೋಪಿ. ರಾಷ್ಟ್ರೀಯ ಹೆದ್ದಾರಿ 65ರ ಮಾರ್ಗವಾಗಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹುಮನಾಬಾದ್ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ನೇತೃತ್ವದಲ್ಲಿ ಮಂಠಾಳ ಸಿಪಿಐ ಕೃಷ್ಣಕುಮಾರ ಪಾಟೀಲ್ ಹಾಗೂ ಸಿಬ್ಬಂದಿಗಳ ತಂಡ ಮಹಾರಾಷ್ಟ್ರದಿಂದ ತಮಿಳುನಾಡಿನ ಚೆನ್ನೈಗೆ ಮಾದಕ ವಸ್ತು ಸಾಗಿಸುತಿದ್ದ ಕಂಟೇನರ್ ಲಾರಿ ಮೇಲೆ ದಾಳಿ ನಡೆಸಿ, 17.50 ಲಕ್ಷ ರೂ. ಮೌಲ್ಯದ 17 ಕೆ.ಜಿ ಅಫೀಮು ಪೊಪಿಸ್ಟ್ರಾ ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದ ಪತ್ನಿ, ಪ್ರಿಯಕರ ಸೇರಿ 5 ಆರೋಪಿಗಳ ಬಂಧನ
ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದಲ್ಲದೆ, ಕೊಲೆಯನ್ನು ಅಪಘಾತವೆಂದು ಬಿಂಬಿಸಿ ತಲೆ ಮರೆಸಿಕೊಂಡಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಒಟ್ಟು ಐದು ಜನರನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ್ದಕ್ಕೆ ಸಂಚು ರೂಪಿಸಿದ ಪತ್ನಿ ಹಾಗೂ ಪ್ರಿಯಕರ ಸೇರಿ ಪತಿಯನ್ನೇ ಕೊಲೆ ಮಾಡಿದ ಪ್ರಕರಣವನ್ನು ಕೊನೆಗೂ ಬೀದರ್ ಪೊಲೀಸರು ಬೇಧಿಸಿದ್ದಾರೆ.
ಅಮಿತ್ ಎಂಬಾತನನ್ನು ಆತನ ಪತ್ನಿ ಚೈತ್ರಾ ಮತ್ತು ಆಕೆಯ ಪ್ರಿಯಕರ ರವಿ ಪಾಟೀಲ್ ಕೊಲೆ ಮಾಡಿದ್ದು, ಈ ಕೃತ್ಯಕ್ಕೆ ಸಹಕಾರ ನೀಡಿದ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ಬಂಧಿಸಿದ್ದಾರೆ.
ಕಳೆದ ನವೆಂಬರ್ 11 ರಂದು ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಬಳಿ ಅಮಿತ್ ಶವ ಪತ್ತೆಯಾಗಿತ್ತು. ಇದನ್ನು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಮೃತದೇಹ ನೋಡಿದಾಗ ಪೊಲೀಸರಿಗೆ ಕೊಲೆ ಎಂಬ ಶಂಕೆ ಮೂಡಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿ ಶವ ಪತ್ತೆಯಾದ ಜಾಗದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ನಂಬರ್ ಪತ್ತೆ ಹಚ್ಚಿದ್ದಾರೆ. ಬಳಿಕ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರವಿ ಪಾಟೀಲ್ ಅವರಿಗೆ ಮುಂಗಡವಾಗಿ ಹಣ ನೀಡಿ ಕೃತ್ಯ ನಡೆಸಿ ವಿಚಾರಣೆಯನ್ನು ಬಾಯಿಬಿಟ್ಟಿದ್ದಾರೆ.
ನಂತರ ರವಿ ಪಾಟೀಲ್ ವಿಚಾರಣೆ ವೇಳೆ ಚೈತ್ರಾ ಪಾತ್ರ ಬಹಿರಂಗವಾಗಿದೆ. ವಿಚಾರಣೆ ವೇಳೆ ನಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಚೈತ್ರಾ ತಿಳಿಸಿದ್ದಾಳೆ.
ಪೊಲೀಸರು ಈಗ ಕೃತ್ಯಕ್ಕೆ ಬಳಸಿದ ರಾಡ್, ಮೊಬೈಲ್ ಹಾಗೂ ಕೊಲೆ ಮಾಡಲು ಸಹಚರರಿಗೆ ನೀಡಿದ ಮುಂಗಡ ಹಣವನ್ನು ಜಪ್ತಿ ಮಾಡಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲುಬರಗಿ)