Bidar News: ನಕಲಿ ಪತ್ರಕರ್ತರ ಹಾವಳಿ; ಹಣದ ಬೇಡಿಕೆ ಇಟ್ಟಿದ್ದ ಒಬ್ಬನ ಬಂಧನ
Aug 21, 2023 06:14 PM IST
Bidar News: ನಕಲಿ ಪತ್ರಕರ್ತರ ಹಾವಳಿ; ಹಣದ ಬೇಡಿಕೆ ಇಟ್ಟಿದ್ದ ಒಬ್ಬನ ಬಂಧನ
- ಬೀದರ್‌ನಲ್ಲಿ ಟಿವಿ 19 ಚಾನಲ್ ಪತ್ರಕರ್ತರೆಂದು ಹೇಳಿಕೊಂಡು ನಗರದ ಖಾಸಗಿ ಆಸ್ಪತ್ರೆಯೊಳಗೆ ನುಗ್ಗಿ ಧಮ್ಕಿ ಹಾಕಿ, ಪರೋಕ್ಷವಾಗಿ ಹಣದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಪೊಲೀಸರು ಮೂವರ ಪೈಕಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೀದರ್: ಎಲ್ಲಡೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಸೋಸಿಯಲ್ ಮೀಡಿಯಾಗಳು ಮತ್ತು ಯೂಟ್ಯೂಬ್ ಚಾನಲ್‌ಗಳ ಹೆಸರಿನಲ್ಲಿ ಕೆಲವರು ಹಣದ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುವ ದಂಧೆಗೆ ಇಳಿದಿದ್ದಾರೆ. ಬೀದರ್‌ನಲ್ಲಿ ಟಿವಿ 19 ಚಾನಲ್ ಪತ್ರಕರ್ತರೆಂದು ಹೇಳಿಕೊಂಡು ನಗರದ ಖಾಸಗಿ ಆಸ್ಪತ್ರೆಯೊಳಗೆ ನುಗ್ಗಿ ಧಮ್ಕಿ ಹಾಕಿ, ಪರೋಕ್ಷವಾಗಿ ಹಣದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಪೊಲೀಸರು ಮೂವರ ಪೈಕಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಾಲಿದ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಅಶ್ವಿನ್ ಮತ್ತು ಇನ್ನೊಬ್ಬನ ವ್ಯಕ್ತಿಯ ಶೋಧನಾ ಕಾರ್ಯ ಪೊಲೀಸರು ಮುಂದುವರಿಸಿದ್ದಾರೆ. ಬಂಧಿತ ಆರೋಪಿ ಖಾಲಿದ್ ರೌಡಿ ಶೀಟರ್‌ಯಾಗಿದ್ದನು ಎನ್ನಲಾಗುತ್ತಿದೆ.
ರಸ್ತೆ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದರು. ಈ ಪೈಕಿ ಒಬ್ಬರು ಸಾವಿಗೀಡಾಗಿದ್ದರು. ಗಾಯಗೊಂಡ ವ್ಯಕ್ತಿಯೊಬ್ಬನನ್ನು ನಗರದ ಖಾಸಗಿ ಗದುಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಖಾಲಿದ್ ಸೇರಿ ಮೂವರು ಟಿವಿ 19 ಚಾನಲ್‌ನವರು ಎಂದು ಹೇಳಿಕೊಂಡು ಅನುಮತಿ ಪಡೆಯದೆ ಆಸ್ಪತ್ರೆಯೊಳಗೆ ನುಗ್ಗಿ ಛಾಯಾಚಿತ್ರ ಮತ್ತು ವಿಡಿಯೋ ತೆಗೆದುಕೊಂಡಿದ್ದಾರೆ. ಅಪಘಾತಗೊಳಗಾದ ಗಾಯಾಳುವಿಗೆ ಇಲ್ಲೇಕೆ ಚಿಕಿತ್ಸೆ ನೀಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ ಮತ್ತು ಇಲ್ಲಿ ಚಿತ್ರೀಕರಿಸಿರುವ ವಿಡಿಯೋ ಎಲ್ಲಡೆ ವೈರಲ್ ಮಾಡುವುದಾಗಿ ಧಮ್ಕಿ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ ಜೊತೆಗೆ ಪರೋಕ್ಷವಾಗಿ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗದುಗೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಖಾನ್ ಹಾಜರ್ ಖಾತೂರ್ ನೂತನ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಯೂಟ್ಯೂಬ್ ಚಾನಲ್‌ಗಳ ಹಾವಳಿ ಹೆಚ್ಚಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹಾಗೂ ಬೀದರ್ ಜಿಲ್ಲಾ ಎಲೆಕ್ಟ್ರಾನಿಕ್ಸ್ ಮೀಡಿಯಾ ಸಂಘದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣನವರಿಗೆ ಭೇಟಿಯಾಗಿ ಮನವಿ ಮಾಡಿದ್ದಾರೆ.