Bidar News: ಭಾರಿ ಮಳೆ ಹಿನ್ನೆಲೆ ಬೀದರ್ ಜಿಲ್ಲೆಯಲ್ಲಿ ರೆಡ್ ಆಲರ್ಟ್ ಘೋಷಣೆ; ಜುಲೈ 27ರಂದು ಶಾಲಾ ಕಾಲೇಜುಗಳಿಗೆ ರಜೆ
Jul 26, 2023 07:38 PM IST
ಬೀದರ್‌ನಲ್ಲ ಶಾಲೆ ಕಾಲೇಜುಗಳಿಗೆ ರಜೆ
- Karnataka Rains: ಜುಲೈ 27ರ ಗುರುವಾರದಂದು ಬೀದರ್ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ.
ಬೀದರ್: ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು, ಜುಲೈ 27ರಂದು 100ರಿಂದ 150 ಎಂಎಂ ಮಳೆ ಬಿಳುವ ಮುನ್ಸೂಚನೆಗಳಿದೆ. ಹೀಗಾಗಿ ಹವಾಮಾನ ಇಲಾಖೆಯು ಬೀದರ್ ಜಿಲ್ಲೆಗೆ ರೆಡ್ ಆಲರ್ಟ್ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಜುಲೈ 27ರಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಗುರುವಾರ ರೆಡ್ ಅಲರ್ಟ್ ಇರುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಒ ಮತ್ತು ಗ್ರಾಮಗಳಲ್ಲಿ ಗ್ರಾಮ ಸೇವಕರು ಡಂಗೂರ ಹಾಕಿಸಿ ಜನರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರದಂತೆ ಮತ್ತು ನದಿ, ಕೆರೆ ಮತ್ತು ಹಳ್ಳಗಳ ಕಡೆ ಹೋಗದಂತೆ ಎಚ್ಚರಿಕೆ ನೀಡಬೇಕು. ಮಣ್ಣಿನ ಮನೆಗಳಾಗಿದ್ದರೆ ತಾತ್ಕಾಲಿಕವಾಗಿ ತಮ್ಮ ಅಕ್ಕಪಕ್ಕದ ಅಥವಾ ಸಂಬಂಧಿಕರ ಮನೆಯಲ್ಲಿ ಇರುವಂತೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಬೇಕು ಎಂದು ಸೂಚಿಸಿದ್ದಾರೆ.
ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕಾರಂಜಾ ಡ್ಯಾಂನಿಂದ ನೀರು ಬಿಡುತ್ತಿದ್ದು, ಡ್ಯಾಮ್‌ನ ಕೆಳಭಾಗದ ಹಳ್ಳಿಯ ಜನರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದ್ದಾರೆ.
ನಗರದಲ್ಲಿರುವ ಓಪನ್ ಡ್ರೆನೆಜ್‌ಗಳನ್ನು ಜೆಸಿಬಿ ಮೂಲಕ ಸ್ವಚ್ಚಗೊಳಿಸಬೇಕು. ಮುಂಚಿತವಾಗಿ ತಮ್ಮ ನಗರಸಭೆಗಳಲ್ಲಿ ಹೆಚ್ಚುವರಿ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು. ಕರೆಂಟ್ ಹೋದರೆ ಸಮಸ್ಯೆಯಾಗುತ್ತದೆ. ಹೀಗಾಗಿ ಮುಂಚಿತವಾಗಿ ಓಟಿಎಚ್ ನೀರಿನ ಟ್ಯಾಂಕ್‌ಗಳನ್ನು ತುಂಬಿಸಬೇಕು. ಯಾವುದೇ ಕರೆ ಬಂದ ತಕ್ಷಣ ತಹಶೀಲ್ದಾರ್, ಇಒ, ಅಗ್ನಿಶಾಮಕ ದಳ, ಜೆಸ್ಕಾಂ, ಆರೋಗ್ಯ ಇಲಾಖೆ ಹಾಗೂ ಇತರೆ ಸಂಬಂಧಿಸಿದ ಅಧಿಕಾರಿಗಳು ತಂಡವಾಗಿ ಕೆಲಸ ಮಾಡಬೇಕು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳಿಗೆ ಸೂಚನೆ
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸಬೇಕು. ಯಾರೂ ರಜೆಯ ಮೇಲೆ ಹೋಗುವ ಹಾಗಿಲ್ಲ. ತಮ್ಮ ಎಲ್ಲಾ ರಜೆಗಳನ್ನು ರದ್ದುಗೊಳಿಸಲಾಗಿದೆ ಹಾಗೂ ಎಲ್ಲರೂ ಮೊಬೈಲ್ ಕರೆಗಳನ್ನು ಸ್ವೀಕರಿಸಬೇಕು ಯಾರು ಯಾವುದೇ ನೆಪ ಹೇಳುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜುಲೈ 27 ರಂದು ಬೀದರ್ ಜಿಲ್ಲಾದ್ಯಂತ ರೆಡ್ ಅಲರ್ಟ್ ಘೋಷಣೆ
ಜಿಲ್ಲಾದ್ಯಂತ ಜುಲೈ 27 ರಂದು ರೆಡ್ ಅಲರ್ಟ್ ಘೋಷಣೆಯಾಗಿದ್ದು, 100 ರಿಂದ 130 ಮಿಲಿ ಮೀಟರ್ ಮಳೆಯಾಗಲಿದ್ದು, ಸಾರ್ವಜನಿಕರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಹೋಗಬಾರದು ಮತ್ತು ಜನ, ಜಾನುವಾರುಗಳು ನದಿ, ಕೆರೆ ಮತ್ತು ಹಳ್ಳಗಳ ಕಡೆಗೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದ್ದಾರೆ.
ಬ್ರಿಜ್ ಮೇಲೆ ನೀರು ಬಂದು ಮತ್ತು ಕೆಳ ಹಂತದ ಬ್ರಿಜ್‌ಗಳಲ್ಲಿ ನೀರು ಹೆಚ್ಚು ಹರಿದು ಜಿಲ್ಲೆಯಲ್ಲಿ ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ವಿವಿಧ ತಾಲೂಕಿನ ಯಾವ ಯಾವ ಬ್ರಿಜ್‌ಗಳಲ್ಲಿ ಹೆಚ್ಚಿನ ನೀರು ಬರುತ್ತದೆ ಎಂಬ ಮಾಹಿತಿಯನ್ನು ಪಿಡಬ್ಲೂಡಿ ಹಾಗೂ ಪಿಆರ್‌ಇಡಿ ಅಧಿಕಾರಿಗಳು ಸಂಬಂಧಿಸಿದ ಆಯಾ ತಾಲೂಕಿನ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಬೇಕು. ಅಂತಹ ಬ್ರಿಜ್‌ಗಳಲ್ಲಿ ಅವರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಾರೆ ಎಂದು ಹೇಳಿದ್ದಾರೆ.